20 ವರ್ಷಗಳಿಂದ ನಿರಂತರ ಓದುವ 84ರ ಹಿರಿಯ

ಗ್ರಾಮೀಣ ಭಾಗಕ್ಕೆ ಪತ್ರಿಕೆಗಳೆ ತಲುಪದ ಆ ದಿನಗಳಲ್ಲಿ ಶ್ರೀ ಹೆಗ್ಗಡೆ ದಂಪತಿಗಳು ಶ್ರೀಕ್ಷೇತ್ರದ ವಿದ್ಯಾದಾನದ ಪರಂಪರೆಯ ಒಂದು ಭಾಗವಾಗಿ ಆರಂಭಿಸಿದ ‘ನಿರಂತರ ಪ್ರಗತಿ’ ಮಾಸ ಪತ್ರಿಕೆ ಇದೀಗ 21ರ ಯುವಕ. ಸಮಾಜದ ಪ್ರಗತಿಗೆ ಪತ್ರಿಕೆ ನೀಡಿದ, ನೀಡುತ್ತಿರುವ ಕೊಡುಗೆ ಅಪೂರ್ವ. ‘ನಿರಂತರ’ ಪತ್ರಿಕೆಯ ಮೂಲಕ ಓದುವ ಹವ್ಯಾಸವನ್ನು ಆರಂಭಿಸಿದ, ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡ ಸಾವಿರಾರು ಮಂದಿ ನಮ್ಮೊಂದಿಗಿದ್ದಾರೆ. ಕಳೆದ ವರ್ಷ ಪತ್ರಿಕೆಯ ಆರಂಭದಿಂದ ಅಂದರೆ 2003ರಿಂದ ಇದುವರೆಗಿನ ನಿರಂತರದ ಎಲ್ಲಾ ಪ್ರತಿಗಳು ಓದುಗರ ಬಳಿ ಇದ್ದರೆ ಅವುಗಳೊಂದಿಗೆ ಸೆಲ್ಫಿ ತೆಗೆದು ಕಳುಹಿಸುವಂತೆ, ಆಯ್ದ ಚಿತ್ರಗಳನ್ನು ನಿರಂತರದಲ್ಲಿ ಪ್ರಕಟಿಸುವುದಾಗಿ ‘ನಿರಂತರ’ದಿಂದ ಕೇಳಿಕೊಂಡಿದ್ದೆವು. ಎರಡೇ ತಿಂಗಳಲ್ಲಿ ಸಾವಿರಾರು ಮಂದಿ ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟರು. ಇದು ಪತ್ರಿಕೆಯ ಮೇಲೆ ಓದುಗರಿಗಿರುವ ಅಭಿಮಾನಕ್ಕೆ ಒಂದು ಉತ್ತಮ ಉದಾಹರಣೆ.
ಗದಗ ತಾಲೂಕಿನ ನೀರಳಗೆಯ ಚಂದ್ರಶೇಖರಯ್ಯ ಹಿರೇಮಠ್‍ರವರಿಗೆ ಇದೀಗ 84 ವಯಸ್ಸು. ಕಳೆದ ಇಪ್ಪತ್ತು ವರ್ಷಗಳಿಂದ ಇವರು ಓರ್ವ ನಿರಂತರ ಪತ್ರಿಕೆಯ ಅಭಿಮಾನಿ. ಇತ್ತೀಚೆಗೆ ಪತ್ರಿಕಾ ಕಚೇರಿಗೆ ಭೇಟಿ ನೀಡಿದ ಅವರು ತಾನು ಯಾಕೆ ನಿರಂತರವನ್ನು ಓದುತ್ತೇನೆ ಎಂಬುವುದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಓದುವ ಹವ್ಯಾಸವನ್ನು ಹುಟ್ಟಿಸಿದ ಪತ್ರಿಕೆ : ಎರಡು ದಶಕಗಳ ಹಿಂದೆ ಹಳ್ಳಿಗಳಿಗೆ ಯಾವ ಪತ್ರಿಕೆಗಳು ತಲುಪುತ್ತಿರಲಿಲ್ಲ. ಇನ್ನು ನಿತ್ಯ ಹಾಲು ತರಲು ಜನ ಆರ್ಥಿಕವಾಗಿ ಕಷ್ಟಪಡುತ್ತಿದ್ದರು. ಆ ದಿನಗಳಲ್ಲಿ ಅತೀ ಕಡಿಮೆ ಬೆಲೆಗೆ ನಿರಂತರ ಹಳ್ಳಿಗಳಿಗೆ ಕಾಲಿರಿಸಿತು. ನಾನು ಪತ್ರಿಕೆಯನ್ನು ಖರೀದಿಸಿದೆ. ಪತ್ರಿಕೆ ನನ್ನಲ್ಲಿ ಓದುವ ಹವ್ಯಾಸವನ್ನು ಬೆಳೆಸಿತು. ಇಂದಿಗೂ ಪ್ರತಿ ತಿಂಗಳು ಪತ್ರಿಕೆಯ ಬರುವಿಕೆಯನ್ನೆ ಕಾಯುತ್ತಿರುತ್ತೇನೆ. ನಿರಂತರ ಆರಂಭವಾದಾಗಿನಿಂದ ಅಂಚೆ ಮೂಲಕ ಪತ್ರಿಕೆಯ ಚಂದಾದಾರರಾಗಿದ್ದೇನೆ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ‘ನಿರಂತರ’ ಕೈ ಸೇರುತ್ತಿದೆ. ಒಂದೇ ದಿನದಲ್ಲಿ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿ ಬಿಡುತ್ತೇನೆ.
ಇತರ ಪತ್ರಿಕೆಗಿಂತ ಭಿನ್ನ : ನಾನು ಇತರ ಪತ್ರಿಕೆಗಳನ್ನು ಖರೀದಿಸಿ ಒಂದಷ್ಟು ದಿನಗಳ ಕಾಲ ಓದಿದೆ. ಅದರಲ್ಲಿ ನನ್ನ ನಿತ್ಯ ಬದುಕಿಗೆ ಉಪಯೋಗವಾಗುವ ಯಾವ ಮಾಹಿತಿಗಳು ದೊರೆಯಲಿಲ್ಲ. ನಂತರ ಅವುಗಳನ್ನು ಓದುವುದನ್ನೇ ನಿಲ್ಲಿಸಿದೆ. ಇದೀಗ ‘ನಿರಂತರ’ ಬಿಟ್ಟು ಬೇರೆ ಯಾವ ಪತ್ರಿಕೆಯನ್ನು ನಾನು ಓದುವುದಿಲ್ಲ.
ಕ್ಷೇತ್ರದೊಂದಿಗೆ ಸಂಬಂಧ ಬೆಸೆಯುವ ಕೆಲಸ : ಪ್ರತಿ ಸಂಚಿಕೆಯನ್ನು ಓದುತ್ತಿರುವುದರಿಂದ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು, ಯೋಜನೆಯ ಮೂಲಕ ನಡೆಯುವ ಎಲ್ಲಾ ಸಮಾಜಮುಖಿ ಕೆಲಸಗಳ ಪರಿಚಯವು ನನಗಿದೆ. ಪತ್ರಿಕೆ ಓದುವಿಕೆಯಿಂದ ನಾನು ಸದಾ ಶ್ರೀಕ್ಷೇತ್ರದಲ್ಲಿ ಇರುವಂತೆ ಭಾಸವಾಗುತ್ತಿದೆ.
ಪಾಸಿಟಿವ್ ಪತ್ರಿಕೋದ್ಯಮದ ಹರಿಕಾರ : ಇಂದು ಪಾಸಿಟಿವ್ ವಿಷಯಗಳನ್ನೇ ಪ್ರಕಟಿಸುವ ಏಕೈಕ ಪತ್ರಿಕೆ ಅಂದರೆ ಅದು ‘ನಿರಂತರ’. ಇಂದಿನ ದಿನಕ್ಕೆ ಇಂತಹ ಪತ್ರಿಕೆಗಳ ಅಗತ್ಯವಿದೆ. ಪಾಸಿಟಿವ್ ವಿಷಯಗಳನ್ನು, ನಿತ್ಯ ಬದುಕಿಗೆ ಉಪಯುಕ್ತವಾಗುವ, ನೈಜ ಯಶೋಗಾಥೆಗಳನ್ನು ಪತ್ರಿಕೆ ಓದುಗರಿಗೆ ನೀಡುತ್ತಿದೆ.
ಮನಗೆದ್ದ ಪುಟವಿನ್ಯಾಸ : ನಿರಂತರದ ಪುಟಗಳ ಜೋಡಣೆ ಅದ್ಭುತವಾಗಿದೆ. ಛಾಯಾಚಿತ್ರಗಳ ಬಳಕೆಗೆ ವಿಶೇಷ ಗಮನ ನೀಡುತ್ತಾರೆ. ನಾನು ಎಲ್ಲಿಗೆ ಹೋದರು ಪತ್ರಿಕೆಯನ್ನು ಜೊತೆಗೆ ಕೊಂಡೊಯ್ಯುತ್ತೇನೆ. ಪತ್ರಿಕೆಯ ಪುಟವಿನ್ಯಾಸದಿಂದ ಆಕರ್ಷಿತರಾದ ನಮ್ಮ ಮೊಮ್ಮಕ್ಕಳು ಇದೀಗ ನಿರಂತರವನ್ನು ಓದಲು ಆರಂಭಿಸಿದ್ದಾರೆ.
ಒಂದು ವರ್ಷದಲ್ಲಿ ನಿರಂತರದಲ್ಲಿ ಯಾವೆಲ್ಲ ಲೇಖನಗಳು ಪ್ರಕಟಗೊಂಡಿವೆ ಎಂಬ ನೆನಪು ಹಿರೇಮಠ್‍ರವರಿಗಿದೆ. ತಾನು ಓದುವ ಜೊತೆಗೆ ಇತರ ನೂರಾರು ಮಂದಿಗೂ ‘ನಿರಂತರ’ವನ್ನು ಓದುವ ರುಚಿಯನ್ನು ಉಣಬಡಿಸಿದ ಹಿರೇಮಠ್‍ರವರ ಪ್ರಯತ್ನ ಇತರರಿಗೂ ಮಾದರಿಯಾಗಲಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates