ಡಾ| ಎಲ್.ಎಚ್. ಮಂಜುನಾಥ್
ಪರರಿಗೆ ಸದಾ ಉಪಕಾರ ಮಾಡುವುದನ್ನು ಜಗತ್ತಿಗೆ ಎಲ್ಲಾ ಧರ್ಮಗಳು ಬೋಧಿಸುತ್ತಿವೆ. ಆದರೆ ಇದನ್ನು ಮನಃಪೂರ್ತಿಯಾಗಿ ಅನುಷ್ಠಾನ ಮಾಡುವವರು ಜಗತ್ತಿನಲ್ಲಿ ಅತಿ ವಿರಳ. ಅದೇ ರೀತಿ ಮಾನವ ಕುಲದಲ್ಲಿ ಯಾವುದಾದರೊಂದು ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ಸಾಧನೆ ಮಾಡುವವರು ಬಹಳಷ್ಟಿರಬಹುದು. ಆದರೆ ಮನುಕುಲದ ಒಳಿತನ್ನೇ ಮನದಲ್ಲಿಟ್ಟುಕೊಂಡು, ಹಲವಾರು ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕನಸು ಕಂಡು ನನಸು ಮಾಡುವವರನ್ನು ದಾರ್ಶನಿಕನೆಂದು (Visionary) ಸಮಾಜ ಗುರುತಿಸುತ್ತದೆ. ಇಂಥoವರನ್ನು ಭಾವನಾಜೀವಿ, ಕಲ್ಪನಾವಿಹಾರಿ ಎಂದೂ ಕರೆಯಬಹುದಾಗಿದೆ.
ಇಂತಹ ದಿವ್ಯ ಚಕ್ಷಗಳನ್ನೊಳಗೊಂಡ ನಮ್ಮೆಲ್ಲರ ಆರಾಧ್ಯಮೂರ್ತಿ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಇದೀಗ 75ರ ಹರೆಯ. ಈ ವಯಸ್ಸಿನಲ್ಲಿ ಹೆಚ್ಚಿನವರು ತಮ್ಮ ಮಕ್ಕಳು, ಮೊಮ್ಮಕ್ಕಳೊಡನೆ ವಿಶ್ರಾಂತ ಜೀವನವನ್ನು ಕಳೆಯಲು ಇಚ್ಛಿಸುತ್ತಾರಾದರೂ, ಹೆಗ್ಗಡೆಯವರು ಇಂತಹ ಆಲೋಚನೆಗಳಿಂದ ಬಹಳ ದೂರ. ಪುರಾಣ ಮತ್ತು ಇತಿಹಾಸ ಪ್ರಸಿದ್ಧವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಒಡೆಯರಾಗಿ ಅವರು ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬಹುದಾಗಿತ್ತು. ಆದರೆ, ತನ್ನ ಬದುಕಿನಲ್ಲಿ ಸರಳತೆ, ನಿರಾಡಂಬರವನ್ನು ಬೆಳೆಸಿಕೊಂಡು, ಸಾಮಾನ್ಯ ಯೋಗಿಯಂತೆ ಬದುಕುತ್ತಿರುವ ಅವರು ನಮ್ಮ ನಡುವಿನ ರಾಜ ಋಷಿಯೇ ಹೌದು. ಧರ್ಮವನ್ನು ದೇವಾಲಯದ ಕಟ್ಟುಕಟ್ಟಳೆಗಳಿಗೆ ಮಾತ್ರ ಸೀಮಿತಗೊಳಿಸದೆ, ತನ್ನ ಸಮಾಜಮುಖಿ ಕಾರ್ಯಕ್ರಮಗಳ ಮುಖೇನ ಧರ್ಮಕ್ಕೆ ಸಾರ್ವಕಾಲಿಕ ಮೌಲ್ಯವನ್ನು ತಂದುಕೊಟ್ಟ ಅಪರೂಪದ ಧಾರ್ಮಿಕ ನಾಯಕರು ಪೂಜ್ಯರು. ಈಗಲೂ ಕಾಲಿಗೆ ಚಕ್ರ ಕಟ್ಟಿಕೊಂಡವರoತೆ, ಬಿರುಸಿನ ಬದುಕನ್ನು ಅವರು ಸಾಗಿಸುತ್ತಿದ್ದಾರೆ. ತಮ್ಮ ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ಎಂದೂ ಸ್ವಾರ್ಥದ ಬಗ್ಗೆ ಚಿಂತಿಸದೆ ಸಮಾಜದ, ದುಃಖಿತರ, ಪೀಡಿತರ ಸಾಂತ್ವನಕ್ಕಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ. ಈ ಮಾತನ್ನು ನಮ್ಮ ಪ್ರಧಾನಮಂತ್ರಿಗಳೇ ಹೇಳಿದ್ದಾರೆಂದ ಮೇಲೆ ಹೆಗ್ಗಡೆಯವರ ಕಾರ್ಯತತ್ಪರತೆಯನ್ನು ನಾವೆಲ್ಲರೂ ಅರಿಯಬಹುದಾಗಿದೆ.
ಹಲವು ಕೆಲಸಗಳನ್ನು ಹಚ್ಚಿಕೊಂಡು ದುಡಿಯುವವರನ್ನು ಮಲ್ಟಿ ಟಾಸ್ಕರ್ (Multi Tasker) ಎನ್ನುತ್ತಾರೆ. ಪೂಜ್ಯ ಹೆಗ್ಗಡೆಯವರು ನಾವು ಕಂಡ ಬಹಳ ದೊಡ್ಡ ಮಲ್ಟಿ ಟಾಸ್ಕರ್ ಎನ್ನಬಹುದು. ಪಾದರಸದಂತೆ ಒಂದರ ನಂತರ ಒಂದು ವಿಷಯಗಳ ಕುರಿತು ಚಿಂತನ ಮಂಥನ ನಡೆಸುತ್ತಾ, ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾ, ಜನಮಾನಸದ ನಡುವೆ ಬೆರೆತುಹೋಗಿರುವ ಅವರ ಕಾರ್ಯವೈಖರಿಯನ್ನು ನೋಡುವುದೇ ಒಂದು ಅದ್ಭುತ. ಅವರಿಗೆ ನಮ್ಮ ಬದುಕಿನಲ್ಲಿರುವ ಎಲ್ಲ ವಿಚಾರಗಳೂ ಆಸಕ್ತಿದಾಯಕ ಮತ್ತು ಆಕರ್ಷಕ. ಮಂಜುನಾಥ ಸ್ವಾಮಿ ದೇವಾಲಯದ ದೇಖರೇಖೆಯೊಂದಿಗೆ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಯುವಜನ ಸೇವೆ, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ವಾಸ್ತುಶಿಲ್ಪ, ಫೋಟೋಗ್ರಫಿ, ಜಾನುವಾರು ಸಾಕಣೆ, ಕೃಷಿ – ಹೀಗೆ ಪೂಜ್ಯರು ಎಲ್ಲ ಕ್ಷೇತ್ರಗಳಲ್ಲಿ ತನ್ನ ಕತೃತ್ವ ಶಕ್ತಿಯನ್ನು ಬಳಸಿದ್ದಾರೆ, ಯಶಸ್ಸನ್ನು ಗಳಿಸಿದ್ದಾರೆ. ಬಡಜನರಿಗೆ ಸ್ವಾವಲಂಬನೆಯ ಬೀಜಮಂತ್ರವನ್ನು ಉಪದೇಶಿಸುವ ಅವರ ಅನೇಕ ಕಾರ್ಯಕ್ರಮಗಳಿಂದಾಗಿ ರಾಷ್ಟಾçದ್ಯಂತ ಬಡತನ ನಿರ್ಮೂಲನೆಯ ಮೌನ ಕ್ರಾಂತಿಯೊoದು ಸದ್ದಿಲ್ಲದೆ ನಡೆಸಿರುವ ಖ್ಯಾತಿ ಹೆಗ್ಗಡೆಯವರದ್ದು.
ವಿಷಯತಜ್ಞರೂ ಕೈಹಾಕಲು ಹಿಂಜರಿಯುವ ಅನೇಕ ಕ್ಷೇತ್ರಗಳಲ್ಲಿ ಪೂಜ್ಯರು ಅನೇಕ ಅದ್ಭುತ ಸಾಧನೆಗಳನ್ನು ಮಾಡಿತೋರಿಸಿದ್ದಾರೆ. ಮದ್ಯವ್ಯಸನ ನಿರ್ಮೂಲನೆ, ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮಗಳು, ವಿಪತ್ತು ನಿರ್ವಹಣೆ, ಔಷಧಿಮುಕ್ತ ಆರೋಗ್ಯ ಜೀವನ, ಸಾವಯವ ಕೃಷಿ, ಅರಣ್ಯೀಕರಣ – ಮುಂತಾದ ಕ್ಷೇತ್ರಗಳಲ್ಲಿ ಅವರು ವಿಶ್ವಕ್ಕೇ ಮಾದರಿಯಾಗುವಂತಹ ಕಾರ್ಯಕ್ರಮಗಳಿಗೆ ಜನ್ಮವಿತ್ತಿದ್ದಾರೆಂದರೆ ತಪ್ಪಾಗಲಾರದು.
ಸಂಕಟ ಬಂದಾಗ ಒಂದಿಷ್ಟೂ ಕುಗ್ಗದೆ, ಸಾಧನೆಗಳ ಸರಮಾಲೆಯಿಂದ ಒಂದಿಷ್ಟೂ ಹಿಗ್ಗದೆ ತನಗೆ ಬರುವ, ತನ್ನಲ್ಲಿರುವ ಎಲ್ಲವನ್ನೂ ಎಲ್ಲರಿಗೂ ಹಂಚುವ ನಿರ್ಲಿಪ್ತ ಸಾಧಕರಿವರು. ನಮ್ಮ ನಾಡು, ನಮ್ಮ ದೇಶ ಕಂಡ ಓರ್ವ ಸಮರ್ಥ ಆಡಳಿತತಜ್ಞ, ದೂರದೃಷ್ಟಿಯ ಕನಸುಗಾರ, ವೈಜ್ಞಾನಿಕ ಚಿಂತಕ, ಧಾರ್ಮಿಕ ನಾಯಕ, ಪರಂಪರೆಯ ಸಂರಕ್ಷಕ, ನಿಜವಾದ ಅರ್ಥವಾದ ಅರ್ಥದಲ್ಲಿ ಆಲ್ ಇನ್ ವನ್ All in one). ಸಮಚಿತ್ತರೂ, ನಿಗರ್ವಿಯೂ ಆಗಿರುವ ಇವರು ಸಮಾಜದಲ್ಲಿ ಒಳಿತನ್ನು ಕಾಣಬಯಸುವ ಎಲ್ಲರಿಗೂ ಪ್ರಿಯ ಮಾರ್ಗದರ್ಶಿಗಳಾಗಿದ್ದಾರೆ. ಇವರನ್ನು ಅನೇಕ ಸಂಘಸoಸ್ಥೆಗಳು, ಸರಕಾರಗಳು ಗೌರವಿಸಿ ಧನ್ಯತೆಯನ್ನು ಅನುಭವಿಸಿವೆ. ಇದೀಗ ರಾಜ್ಯಸಭೆಯ ಸದಸ್ಯರಾಗಿ ತಮ್ಮ ನೇರ ಚಟುವಟಿಕೆಯ ವ್ಯಾಪ್ತಿಯನ್ನು ಶಾಸನಸಭೆಗೆ ವಿಸ್ತರಿಸಿಕೊಂಡಿರುವ ಪೂಜ್ಯರು ಅಲ್ಲಿಯೂ ಗಣನೀಯ ಸಾಧನೆ ಮಾಡುವ ಹಂತದಲ್ಲಿದ್ದಾರೆ. ಇಷ್ಟೆಲ್ಲ ಚಟುವಟಿಕೆಗಳ ನಡುವೆ ಕ್ಷೇತ್ರಕ್ಕೆ ಬರುವ ಭಕ್ತಾಭಿಮಾನಿಗಳ ಕಡೆಗೂ ಅವರು ವಿಶೇಷ ಆದ್ಯತೆಯನ್ನು ನೀಡುತ್ತಾರೆ. ಕಷ್ಟ ಕಾರ್ಪಣ್ಯಗಳಿಂದ ಬಳಲುವ ಜನರಿಗೆ ಸಮಾಧಾನ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಸದಾ ಮಾಡುತ್ತಿದ್ದಾರೆ. ಆದ್ದರಿಂದಲೇ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಇಂತಹ ಪೂಜ್ಯರ ಅವಧಿಯಲ್ಲಿ ಅವರ ಕನಸುಗಳನ್ನು ಕಾರ್ಯರೂಪಕ್ಕೆ ತರುವ ಅವಕಾಶ ದೊರೆತ ನಾವು ನೀವೆಲ್ಲರೂ ಧನ್ಯರೆನ್ನುತ್ತಾ, ಅವರಿಗೆ ದೀರ್ಘಾಯುಷ್ಯವನ್ನು ಕೋರೋಣ. ಅವರ ಆರೋಗ್ಯ ವೃದ್ಧಿಸಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸೋಣ.