ಮನೆ ಕಟ್ಟಿ ನೋಡು

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಮಾನವರ ಪ್ರಾಥಮಿಕ ಅಗತ್ಯತೆಗಳಲ್ಲಿ ಆಹಾರ, ಉಡುಪು ಮತ್ತು ವಸತಿ (ರೋಟಿ, ಕಪಡಾ ಔರ್ ಮಕಾನ್) ಇವು ಮೂರು ಪ್ರಮುಖವಾದದ್ದು. ಕಡು ಬಡತನದಲ್ಲಿರುವವರಿಗೆ ದಿನನಿತ್ಯದ ಆಹಾರದ ಚಿಂತೆಯಾದರೆ, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೊಡನೆಯೇ ಹೊರ ಪ್ರಪಂಚಕ್ಕೆ ಉತ್ತಮರಂತೆ ಕಾಣುವ ಅಭಿಲಾಷೆ ಮೂಡುತ್ತದೆ. ಇದಕ್ಕಾಗಿ ಸುಂದರವಾದ ಉಡುಪು, ಆಭರಣಗಳನ್ನು ಅಪೇಕ್ಷಿಸುತ್ತೇವೆ. ಇದಾದ ನಂತರ ಸ್ವಂತಕ್ಕೊ0ದು ಸೂರಿನ ಆಸೆ ಮೂಡುತ್ತದೆ. ಮನೆ ಕಟ್ಟಿಕೊಳ್ಳುವುದೆಂದರೆ ಕ್ಷಣ ಮಾತ್ರದ ನಿರ್ಧಾರವಲ್ಲ. ಜೀವಮಾನ ಕಾಲ ದೊರೆತ ಹಣ ಮತ್ತು ಭವಿಷ್ಯದಲ್ಲಿ ಸಂಪಾದಿಸಬಹುದಾದ ಮೊತ್ತವೆಲ್ಲವನ್ನು ಮನೆ ಕಟ್ಟಲು ವಿನಿಯೋಗಿಸಿಕೊಳ್ಳಬೇಕಾಗಬಹುದು.
ಇದೀಗ ಯೋಜನೆಯ ಕಾರ್ಯಕರ್ತರು ಮತ್ತು ಫಲಾನುಭವಿಗಳು ತಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಸಾಧನೆ ಮಾಡಿದ ನಂತರ ಮನೆ ಕಟ್ಟಲು ಬಯಸುತ್ತಿರುವುದನ್ನು ಹೆಚ್ಚುಹೆಚ್ಚಾಗಿ ಕಾಣುತ್ತೇವೆ. ಮನೆ ಕಟ್ಟಲು ಹೊರಟಾಗ ಪೂರ್ವಾಲೋಚನೆ, ಖರ್ಚಿನಲ್ಲಿ ಜಾಗೃತಿ ಮತ್ತು ಮನೆಯ ಉಪಯುಕ್ತತೆಯ ಕುರಿತಂತೆ ಚಿಂತನೆ ಮಾಡುವುದರಿಂದ ನಮ್ಮ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳುವುದಲ್ಲದೇ, ಮನೆ ಕಟ್ಟುವ ನೆಮ್ಮದಿಯನ್ನೂ ಪಡೆಯಬಹುದು.
ಸಮಾಜ ಶಾಸ್ತçಜ್ಞರು ಹೇಳುವಂತೆ, ಒಂದು ಮನೆಯ ಸಾಮಾಜಿಕ ಆಯಸ್ಸು ಸುಮಾರು ಐವತ್ತು ವರ್ಷಗಳು ಮಾತ್ರ. ಇಷ್ಟರೊಳಗೆ ಪ್ರಪಂಚ ಬದಲಾಗಿ ನಾವು ನಿರ್ಮಿಸಿರುವ ಮನೆ ಮತ್ತು ಅದರೊಳಗಿರುವ ಸಾಮಾನುಗಳು ಹಳತಾಗಿ ಇದನ್ನು ಬದಲಾಯಿಸಬೇಕೆಂಬ ಆಸೆ ಐವತ್ತು ವರ್ಷಗಳ ನಂತರದ ಪೀಳಿಗೆಯವರಿಗೆ ಆಗುತ್ತದೆ. ಆದುದರಿಂದ ನಾವು ಕಟ್ಟುವ ಮನೆ ಶಾಶ್ವತ ಎಂಬ ಅಭಿಪ್ರಾಯವನ್ನು ಬಿಟ್ಟು ನಾವು ಬದುಕಿರುವವರೆಗೆ ಈ ಮನೆ ನಮಗೆ ಉಪಯುಕ್ತ ಎಂಬ ಭಾವನೆಯನ್ನು ತಳೆದಲ್ಲಿ, ಅತಿಯಾದ ವ್ಯಾಮೋಹದಿಂದ ಮನೆಗೆ ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಬಹುದಾಗಿದೆ.
ಮನೆ ಕಟ್ಟಲು ನಾವು ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ. ನಾವು ಕಟ್ಟಿದ ನಂತರ ಒಂದು ವೇಳೆ ನಮಗೆ ವಾಸಿಸಲು ಸಾಧ್ಯವಾಗದೇ ಹೋದಲ್ಲಿ ಅದನ್ನು ಬಾಡಿಗೆಗೆ ಕೊಡಲು ಸಾಧ್ಯವಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವುದು ಒಳ್ಳೆಯದು.
ಮನೆ ನಿವೇಶನದ ದಾಖಲಾತಿಗಳು ಕಾನೂನುಬದ್ಧವಾಗಿದ್ದಲ್ಲಿ ಗೃಹ ನಿರ್ಮಿಸಲು ನಮಗೆ ಸರಕಾರದಿಂದ ಸಬ್ಸಿಡಿ ಮತ್ತು ಬ್ಯಾಂಕ್ ಸಾಲ ಸಿಗುವ ಸಾಧ್ಯತೆಗಳಿವೆ. ಈಗಂತೂ ಶೇ.6.5ರ ಬಡ್ಡಿದರದಲ್ಲಿ ಗೃಹ ನಿರ್ಮಾಣ ಸಾಲಗಳು ಲಭ್ಯವಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಬಡ್ಡಿದರ ರಿಯಾಯಿತಿಯೂ ಮತ್ತು ಸಬ್ಸಿಡಿಯೂ ಸಿಗಬಹುದಾಗಿದೆ. ಗೃಹ ನಿರ್ಮಾಣಕ್ಕೆಂದು ಪಡೆದ ಸಾಲದಲ್ಲಿ ಆದಾಯ ತೆರಿಗೆ ರಿಯಾಯಿತಿಯೂ ಲಭ್ಯವಿದೆ. ಹೀಗಾಗಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಲು ಬ್ಯಾಂಕಿನಿ0ದ ಗೃಹ ನಿರ್ಮಾಣಕ್ಕೆಂದೇ ಸಾಲ ಪಡೆಯುವುದು ಉತ್ತಮ. ಅನೇಕರು ಈ ನಿಟ್ಟಿನಲ್ಲಿ ಆಲೋಚನೆ ಮಾಡದೆ ಬ್ಯಾಂಕಿನಿ0ದ ಅಥವಾ ಬೇರೆ ಬೇರೆ ಕಡೆಗಳಿಂದ ಅಧಿಕ ಬಡ್ಡಿಯಲ್ಲಿ ಸಾಲ ಪಡೆದು ಮನೆ ಕಟ್ಟಿ ಕಷ್ಟಪಡುತ್ತಾರೆ. ಇದರ ಬದಲಿಗೆ ನಿವೇಶನ ದಾಖಲೆಯನ್ನು ಸರಿಪಡಿಸಿ, ಅಧಿಕೃತಗೊಳಿಸಿ ಬ್ಯಾಂಕಿನಿ0ದ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ಮನೆ ಕಟ್ಟಿದರೆ ಉತ್ತಮ.
ಆದುದರಿಂದ ನಾವು ಮನೆ ಕಟ್ಟುವಾಗ ಜಾಗ್ರತೆ ವಹಿಸಿಕೊಂಡು, ದಾಖಲೆ ಇರುವ ಸ್ಥಳದಲ್ಲಿ ನಮ್ಮ ಬಜೆಟ್‌ಗೆ ಸರಿಹೊಂದುವ0ತಹ ವಿನ್ಯಾಸವನ್ನು ಹೊಂದಿಸಿಕೊ0ಡು, ಸರಕಾರ ಮತ್ತು ಬ್ಯಾಂಕಿನಿ0ದ ದೊರೆಯುವ ಸೌಲಭ್ಯವನ್ನು ಪಡೆದುಕೊಂಡು ಸುಂದರವಾದ ಮನೆಯನ್ನು ನಿರ್ಮಿಸಿಕೊಳ್ಳೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *