“ಆಯುಷ್ಮಾನ್ ಭಾರತ”

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

‘ರಂಗವ್ವ…ರoಗವ್ವ…ನಮ್ ಯೋಜ್ನೇಯಾ ಸಿ.ಎಸ್.ಸಿ. ಕೇಂದ್ರದಾಗೆ ಅದ್ಯಾನೋ ‘ಆಯುಸ್ಮಾನ್ ಕಾರ್ಡ’ ಪ್ರ‍್ರೀ ಆಗಿ ಕೋಡ್ತೌರಂತೆ ಹೋಗಿ ವಸಿ ಈಸ್ಕಂಡ್ ಬರಾನ ಬಾರವ್ವ ಎಂದು ನಿಂಗವ್ವ ಕರೆದಾಗ ಕಿತ್ತು ತಿನ್ನುವ ಬಡತನದಿಂದ ಬಳಲುತ್ತಿದ್ದ ರಂಗವ್ವಗೆ ಏನಾದರೂ ಸರ್ಕಾರದಿಂದ ಸಿಕ್ಕರೆ ಸಿಗಲಿ ಅಂತ ತಮ್ಮ ಹಳ್ಳಿಯಲ್ಲಿ ಇದ್ದ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರಕ್ಕೆ ಹೊರಟಳು. ಕೇವಲ ಬೆರಳಚ್ಚನ್ನು ಪಡೆದು ಆಯುಷ್ಮಾನ್ ಭಾರತ ಯೋಜನೆಗೆ ನೋಂದಾವಣೆ ಮಾಡಿ, ನಂತರ ಬಂದ ಆಯುಷ್ಮಾನ್ ಕಾರ್ಡ್ನ್ನು ರಂಗವ್ವನ ಕೈಗೆ ಇಟ್ಟು ಸಿ.ಎಸ್.ಸಿ. ಸಿಬ್ಬಂದಿ ‘ನೋಡಮ್ಮ ನಿಮ್ಮ ಆಯಸ್ಸನ್ನು ಹೆಚ್ಚಿಸುವ ಶಕ್ತಿ ಈ ಕಾರ್ಡ್ಗಿದೆ. ನಿಮಗಾಗಲಿ, ನಿಮ್ಮ ಮನೆಯಲ್ಲಿ ಇರೊ ಯಾರಿಗಾದರೂ ಆರೋಗ್ಯದ ಸಮಸ್ಯೆ ಬಂದರೆ ಈ ಕಾರ್ಡ್ ನಿಮ್ಮನ್ನು ಕಾಪಾಡುತ್ತೆ. 5 ಲಕ್ಷ ಮೌಲ್ಯದ ಚಿಕಿತ್ಸೆಯ ಸೌಲಭ್ಯ ಈ ಕಾರ್ಡ್ನಿಂದ ಪ್ರತಿ ವರ್ಷ ನಿಮ್ಮ ಕುಟುಂಬಕ್ಕಿರುತ್ತೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದೇ ಇರೊ ದೊಡ್ಡ ಚಿಕಿತ್ಸೆಗಳನ್ನು ಸಂಬoಧಪಟ್ಟ ಖಾಸಗಿ ಆಸ್ಪತ್ರೆಲೂ ಪಡೆಯಬಹುದು. ಕುಟುಂಬದ ಯಾವುದೇ ಸದಸ್ಯ ಬೇಕಾದರೂ ರೂ. 5 ಲಕ್ಷ ಮೊತ್ತದ ಚಿಕಿತ್ಸೆಯನ್ನು ಒಂದೇ ವರ್ಷದಲ್ಲಿ ಪಡೆಯಬಹುದು. ಇವತ್ತಿನಿಂದ ಪ್ರತಿ ವರ್ಷ ನಿಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿಯ ಆರೋಗ್ಯ ಚಿಕಿತ್ಸಾ ಸೌಲಭ್ಯಕ್ಕೆ ವಿಮಾ ರಕ್ಷೆ ಸಿಕ್ಕಿದೆಯಮ್ಮ. ನಿಮ್ಮಂತಹ ಬಡವರಿಗಾಗಿಯೇ ಈ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಪೂಜ್ಯ ಶ್ರೀ ಹೆಗ್ಗಡೆಯವರ ಆಶಯದಂತೆ ನಿಮಗೆಲ್ಲರಿಗೂ ಉಚಿತವಾಗಿ ಈ ಕಾರ್ಡ್ ತಲುಪಿಸುವ ಸೇವೆಯನ್ನು ನಮ್ಮ ಸಿ.ಎಸ್.ಸಿ. ಕೇಂದ್ರಗಳು ಮಾಡುತ್ತಿವೆ. ನಿಮ್ಮ ಅಕ್ಕಪಕ್ಕದವರನ್ನು ಇಲ್ಲಿಗೆ ಕಳುಹಿಸಿ ಆಯ್ತಾ’ ಎಂದು ತಿಳಿಸಿದರು. ಕೈಯ್ಯಲಿದ್ದ ಆಯುಷ್ಮಾನ್ ಕಾರ್ಡ್ ಅನ್ನು ದಿಟ್ಟಿಸಿ ನೋಡಿದ ರಂಗವ್ವನಿಗೆ ತಾನು ಕಳೆದುಕೊಂಡ ತನ್ನ ಪ್ರೀತಿಯ ಗಂಡನ ಮುಖ ಆ ಕಾರ್ಡ್ನಲ್ಲಿ ಗೋಚರಿಸಿಕೊಂಡ0ತಾಯಿತು. ಕಣ್ಣಂಚಿನಿoದ ಬಂದ ನೀರು ಕಾರ್ಡ್ ಮೇಲೆ ಬಿದ್ದಾಗಲೇ ವಾಸ್ತವ ಲೋಕಕ್ಕೆ ಬಂದರು. ಮನೆಗೆ ಬಂದು ತನ್ನ ಗಂಡನ ಭಾವಚಿತ್ರ ನೋಡಿದಾಗ ವೇದನೆ ತೀವ್ರವಾಯಿತು. ಈ ಕಾರ್ಡ್ 5 ವರ್ಷಗಳ ಹಿಂದೆ ನಮ್ಮ ಕೈ ಸೇರಿದ್ದರೆ, ಭಾವಚಿತ್ರದಲ್ಲಿದ್ದ ತನ್ನ ಗಂಡ ಈಗ ತನ್ನ ಎದುರಿಗಿರುತ್ತಿದ್ದರು ಎಂದು ಗದ್ಗದಿಸುತ್ತಾ 5 ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡ ಆ ಕರಾಳ ದಿನಗಳನ್ನು ನೆನಪಿಸಿಕೊಂಡರು.
ರoಗವ್ವನ ಗಂಡ ತಮ್ಮಯ್ಯ ಪ್ರಾಮಾಣಿಕ ಶ್ರಮಜೀವಿಯಾಗಿದ್ದ. ಕೂಲಿಯಿಂದ ಬಂದ ಆದಾಯದಿಂದ ತನ್ನ ಪುಟ್ಟ ಸಂಸಾರವನ್ನು ಸಾಗಿಸುತ್ತಿದ್ದ. ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಒಳಗೊಂಡ ನಾಲ್ಕು ಜನ ಇರುವ ಕುಟುಂಬದಲ್ಲಿ ತನ್ನ ಕೇವಲ ಕೂಲಿ ಆದಾಯದಿಂದ ಮಾತ್ರ ನೋಡಿಕೊಳ್ಳುತ್ತಿದ್ದರಿಂದ ಉಳಿತಾಯ ಸಾಧ್ಯವಾಗುತ್ತಿರಲಿಲ್ಲ. ಆದರೂ ಯಾವುದೇ ದುರಭ್ಯಾಸ ಇಲ್ಲದ ತಮ್ಮಯ್ಯ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಾ ಹೇಗೋ ಸಂಸಾರವನ್ನು ಸಾಗಿಸುತ್ತಿದ್ದ. ಯಾವ ದುರಾದೃಷ್ಟವೋ ಏನೋ ಒಂದು ಬೆಳಿಗ್ಗೆ ಕೂಲಿಗೆ ಹೊರಟಾಗ ತೀವ್ರ ಎದೆ ನೋವು ಕಾಣಿಸಿತು. ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೆಂಡತಿ ಹೇಗೊ ಕರೆದುಕೊಂಡು ಹೋಗಿ ತೋರಿಸಿದಾಗ ವೈದ್ಯರು ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಶಿಫಾರಸ್ಸನ್ನು ಮಾಡಿದರು. ಅಲ್ಲಿ ಹೋದಾಗ ತೀವ್ರ ಹೃದಯ ಸಂಬoಧಿ ಖಾಯಿಲೆಯನ್ನು ಪತ್ತೆ ಹಚ್ಚಿ, ಕೂಡಲೇ ದೊಡ್ಡ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದರು. ಅಲ್ಲದೆ ಜಿಲ್ಲಾ ಆಸ್ಪತ್ರೆಯಲ್ಲಿ ಅಷ್ಟು ಸೌಕರ್ಯಗಳಿಲ್ಲದಿರುವುದರಿಂದ ಕೂಡಲೇ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಸೇರಲು ಶಿಫಾರಸ್ಸು ಮಾಡಿದರು. ಹೇಗೋ ಕಷ್ಟಪಟ್ಟು ಅಲ್ಲಿಗೆ ತಲುಪಿದ ಈ ಬಡಜೀವವನ್ನು ಪರಿಶೀಲಿಸಿದ ವೈದ್ಯರು ಕೂಡಲೇ ಕೆಲವು ಪ್ರಾಥಮಿಕ ಚಿಕಿತ್ಸೆಯನ್ನು ಮಾಡಿ ಇನ್ನೂ ಮರ‍್ನಾಲ್ಕು ದಿನಗಳೊಳಗೆ ದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದರು. ಈ ಶಸ್ತ್ರಚಿಕಿತ್ಸೆಗೆ ಸುಮಾರು ರೂ. 4 ರಿಂದ 5 ಲಕ್ಷ ವೆಚ್ಚ ಆಗುವುದರಿಂದ ತಕ್ಷಣ ಮೊತ್ತವನ್ನು ಹೊಂದಿಸಬೇಕೆoದು ಸೂಚಿಸಿದರು. ಲಕ್ಷದ ಹೆಸರೇ ಕೆಳದ ರಂಗವ್ವನಿಗೆ ದಿಕ್ಕೇ ತೋಚದಂತಾಯಿತು. ಕೈಯ್ಯಲಿದ್ದ ಮರ‍್ನಾಲ್ಕು ಸಾವಿರ ರೂಪಾಯಿಯೂ ಈಗಾಗಲೇ ಖರ್ಚಾಗಿದ್ದು, ಗುಡಿಸಲಿನಲ್ಲಿ ಪುಡಿಕಾಸು ಉಳಿದಿರಲಿಲ್ಲ. ಕೆಲವೇ ಸಾವಿರ ಬೆಲೆಬಾಳುವ ಮಾಂಗಲ್ಯಸೂತ್ರ ಬಿಟ್ಟು ಮಾರಲು ಬೇರೆ ಏನು ಉಳಿದಿರಲ್ಲಿಲ್ಲ. ಇದ್ದ ಗುಡಿಸಲಿನ ಜಾಗಕ್ಕೆ ದಾಖಲೆಗಳಿಲ್ಲದಿದ್ದರಿಂದ ಅದಕ್ಕೆ ಕಿಂಚಿತ್ತು ಬೆಲೆಯೂ ಇರಲಿಲ್ಲ. ತಮ್ಮಯ್ಯನ ಬಂಧುಗಳು ಕೂಡ ಇವರಂತೆಯೇ ಕೂಲಿಯಿಂದ ಬದುಕುವರಾಗಿದ್ದರಿಂದ ಅಲ್ಲಿಯೂ ಯಾವ ನಿರೀಕ್ಷೆ ಇರಲಿಲ್ಲ. ಎಷ್ಟು ಹೋರಾಡಿದರೂ ನಾಲ್ಕೆದು ಲಕ್ಷದವರೆಗೆ ಹೊಂದಿಸುವುದು ಕನಸಿನ ಮಾತಾಗಿತ್ತು. ತನ್ನ ವಾಸ್ತವ ಪರಿಸ್ಥಿತಿಯನ್ನು ವೈದ್ಯರಲ್ಲಿ ಹೇಳಿಕೊಂಡಾಗ ಯಾವ ಪ್ರಯೋಜನವು ಆಗಲಿಲ್ಲ. ಏಕೆಂದರೆ ಅದು ಖಾಸಗಿ ಆಸ್ಪತ್ರೆಯಾಗಿತ್ತು, ಹಣವಿಲ್ಲದೆ ಅಲ್ಲಿರುವಂತಿರಲಿಲ್ಲ. ಅಸಾಯಕರಾಗಿ ಆ ಬಡಜೀವಗಳು ತಮ್ಮ ಗುಡಿಸಲಿಗೆ ಹಾಗೆಯೇ ಹಿಂದಿರುಗಬೇಕಾಯಿತು.
ತಮ್ಮಯ್ಯರ ಅಸಾಧ್ಯವಾದ ಎದೆನೋವು ಒಂದೆರಡು ದಿನಗಳಲ್ಲಿ ತೀವ್ರವಾಗುತ್ತಾ ಹೋಯಿತು. ಆ ನೋವನ್ನು ಕಣ್ಣೆದುರೇ ನೋಡುತ್ತಿದ್ದ ಆತನ ಹೆಂಡತಿ ಮಕ್ಕಳ ನೋವು ಆತನ ನೋವಿಕ್ಕಿಂತಲೂ ನೂರು ಪಟ್ಟು ತೀವ್ರವಾಗಿತ್ತು. ಬದುಕಿಸುವ ಅವಕಾಶಗಳು ಇದ್ದರೂ ಚಿಕಿತ್ಸೆಗೆ ಬೇಕಾದ ಹಣಕಾಸನ್ನು ಒದಗಿಸಲಾಗದೇ ತನ್ನ ಪ್ರೀತಿಯ ಕುಟುಂಬ ಸದಸ್ಯರನ್ನು ಕಣ್ಣೆದುರೇ ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಅದೇ ವಾರದ ಅಂತ್ಯದೊಳಗೆ ಆ ಬಡ ಕುಟುಂಬದ ಆಧಾರ ಸ್ಥಂಭವೇ ಕಳಚಿಯೇ ಬಿದ್ದಿತು. ಇಂತಹ ಎಷ್ಟೋ ದುರಂತಗಳು ನಮ್ಮ ದೇಶದ ಬಡ ಜನರ ಕುಟುಂಬದಲ್ಲಿ ನಡೆದು ಹೋಗಿದೆ. ಆದರೆ ಇಂದು ವಿಶ್ವದ ಅತೀ ದೊಡ್ಡ ಆರೋಗ್ಯ ವಿಮಾ ಕಾರ್ಯಕ್ರಮವಾದ “ಆಯುಷ್ಮಾನ್ ಭಾರತ” ಇತಂಹ ಎಲ್ಲಾ ದುರಂತಗಳಿಗೆ ಇತಿಶ್ರೀ ಹಾಡುತ್ತಿದೆ. ನಮ್ಮ ದೇಶದ ಜನ ಸಾಮಾನ್ಯರ ಆಯುಸ್ಸನ್ನು ಹೆಚ್ಚಿಸುವ ಈ ಯೋಜನೆ ಹೆಸರಿಗೆ ಅರ್ಥ ಕೊಡುವಂತೆ ಭಾರತೀಯರ “ಆಯುಷ್ಮಾನ್ ಭವ” ಆಗಿದೆ.
ಪೂಜ್ಯ ಶ್ರೀ ಹೆಗ್ಗಡೆಯವರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆ 6,000 ಸಿ.ಎಸ್.ಸಿ. ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ “ಆಯುಷ್ಮಾನ್ ಭಾರತ” ಕಾರ್ಡ್ ನೋಂದಾವಣೆ ಕಾರ್ಯವನ್ನು ಪ್ರಾರಂಭಿಸಿ ಕಾರ್ಡ್ಗಳನ್ನು ನೀಡಲಾಗುತ್ತಿದೆ. ರಾಜ್ಯದ ಜನತೆ ಈ ನೋಂದಾವಣೆ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಕಾರ್ಡ್ಗಳನ್ನು ಪಡೆಯಬೇಕಾಗಿ ವಿನಂತಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates