ಟೆರೇಸಿನಲ್ಲೊಂದು ಮುಂಜಾನೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಪೇಟೆಯಲ್ಲಿ ಫ್ಲ್ಯಾಟ್ ಗಳೇ ಜಾಸ್ತಿ. ಮರ‍್ನಾಲ್ಕು ಅಂತಸ್ತಿನ ಫ್ಲ್ಯಾಟ್ ಗಳಲ್ಲಿ ವಾಸಿಸುವವರಿಗೆ ಮನೆಯ ಟೆರೇಸ್ ಅನ್ನು ಬಿಟ್ಟರೆ ಭೂಮಿ – ಆಕಾಶದ ಮಧ್ಯೆ ಸಂಪರ್ಕ ಕಲ್ಪಿಸುವ ಬೇರೆ ಸಾಧನ ಇಲ್ಲ ಎನ್ನಬಹುದು. ಬೆಳಿಗ್ಗೆ ಕಾಫಿ – ಟೀ ಹೀರಲೆಂದು ಟೆರೇಸ್‌ಗೆ ಬಂದರೆ ಅಲ್ಲಿ ನಿಂತು ಕೆಳಗೆ ನಡೆಯುವ ಎಲ್ಲಾ ವ್ಯವಹಾರಗಳನ್ನು ಗಮನಿಸುತ್ತಿರಬಹುದು. ಬೆಳಿಗ್ಗೆ ಕಸ ತುಂಬಿದ ಲಾರಿಗಳು ಹೋಗುವುದರಿಂದ ಹಿಡಿದು, ವೃದ್ಧ ದಂಪತಿಗಳ ವಾಕಿಂಗ್, ಸಣ್ಣ ಪ್ರಾಯದವರ ಜಾಗಿಂಗ್, ಶ್ವಾನ ಪ್ರಿಯರು ತಮ್ಮ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದು, ಇದೆಲ್ಲದರ ಜೊತೆ ತರಕಾರಿ ಮಾರುವ ಗಾಡಿಗಳು, ಬೆಳಗ್ಗಿನ ತಿಂಡಿಯ ಆರ್ಡರ್ ಒಯ್ಯುವ ಬೈಕ್‌ಗಳು, ಕಚೇರಿಗೆ ತಡವಾಯಿತೆಂದು ಅವಸರವಸರವಾಗಿ ಹೊರಟು ಹೋಗುವ ಯುವಕ – ಯುವತಿಯರು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಗುಂಗಿನಲ್ಲಿರುವ ಹೆತ್ತವರು, ವ್ಯಾಪಾರ ಮಾಡುವವರು ಹೀಗೆ ಎಲ್ಲರೂ, ಎಲ್ಲವೂ ಕಾಣಸಿಗುತ್ತವೆ. ಕೆಳಗಿನ ಫ್ಲ್ಯಾಟ್ ನವರು ಗಿಡಗಳ ಸಂರಕ್ಷಣೆಗೆ ತೊಡಗಿದರೆ ಎದುರುಫ್ಲ್ಯಾಟ್ ನಲ್ಲಿನ ಯುವತಿ ಯೋಗಾಭ್ಯಾಸದಲ್ಲಿ ನಿರತೆ. ಪಕ್ಕದ ಫ್ಲ್ಯಾಟ್ ನ ಟೆರೇಸ್‌ನಲ್ಲಿ ವೃದ್ಧರೊಬ್ಬರು ಚಳಿ ಕಾಯಿಸಿಕೊಳ್ಳುತ್ತಿದ್ದರೆ, ಮಗದೊಂದು ಕಡೆ ಆರಿಸಿದ ಬಟ್ಟೆ ತೆಗೆಯುತ್ತಿರುವ ಮಹಿಳೆ, ಎದುರು ಮನೆ ಕಿಟಕಿಯಲ್ಲಿ ಶಾಲಾ ವಿದ್ಯಾರ್ಥಿ ಓದು ಮುಗಿಸಿ ಪುಸ್ತಕ ಜೋಡಿಸಿಕೊಂಡು ರೆಡಿಯಾಗುತ್ತಿದ್ದರೆ ಪಕ್ಕದ ಮನೆಯ ಯುವಕ ತನ್ನ ಟೆರೇಸನ್ನೇ ಚಿಕ್ಕ ಜಿಮ್‌ನಂತೆ ಪರಿವರ್ತಿಸಿಕೊಂಡು ಸಿನಿಮಾ ಹೀರೋ ತರಹ ಮೈಕಟ್ಟು ಮಾಡಿಕೊಳ್ಳಬೇಕೆಂಬ ಆತುರದಲ್ಲಿರುತ್ತಾನೆ. ಮತ್ತೊಂದು ಕಿವಿಗೆ ಮೊಬೈಲ್‌ನ ವಯರ್ ಹಾಕಿಕೊಂಡು ಗಂಟೆಗಟ್ಟಲೆ ಚಾಟ್ ಮಾಡುವ ಯುವತಿ, ಸಿಗರೇಟ್ ಎಳೆಯಲೆಂದೇ ಟೆರೇಸ್‌ಗೆ ಬರುವ ಮಧ್ಯ ವಯಸ್ಕ.
ಮೊನ್ನೆ ಎದುರು ಮನೆಗೆ ಮಗಳು ಮತ್ತು ಮೊಮ್ಮಗಳು ಬಂದಾಗ ಆ ಮನೆಯಲ್ಲಿ ಉತ್ಸಾಹ ತುಂಬಿ ಹರಿದಂತೆ ಕಂಡುಬoತು. ಅಜ್ಜ – ಅಜ್ಜಿ ಮಡಚಿಟ್ಟಿದ್ದ ದೊಡ್ಡ ಪ್ಲಾಸ್ಟಿಕ್ ಟಬ್ ಅನ್ನು ತಂದು ಟೆರೇಸ್‌ನಲ್ಲಿ ಬಿಡಿಸಿ ಅದರಲ್ಲಿ ನೀರು ತುಂಬಿಸಿ ಮೊಮ್ಮಗಳನ್ನು ನೀರಲ್ಲಿ ಆಟ ಆಡಿಸುತ್ತಾ ತಾವೂ ಮಕ್ಕಳೇ ಆಗಿದ್ದರು. ದೂರದಲ್ಲಿ ಕಾಣುವ ಮನೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಕರ್ನಲ್ ವಾಸಿಸುತ್ತಾರಂತೆ. ಅದು ಗೊತ್ತಾಗಿದ್ದು ಕಾರ್ಗಿಲ್ ದಿನಾಚರಣೆ ದಿನ. ಬೆಳಿಗ್ಗೆ ರಸ್ತೆಯಲ್ಲಿ ಪೊಲೀಸ್ ಬ್ಯಾಂಡ್ ಜೊತೆ ಪೊಲೀಸ್ ಜೀಪುಗಳಲ್ಲಿ ಬಂದ ಸಮವಸ್ತ್ರಧಾರಿಗಳ ಮೆರವಣಿಗೆ ಕರ್ನಲ್ ಮನೆಗೆ ತೆರಳಿ ಕರ್ನಲ್‌ಗೆ ಶುಭಾಶಯ ಕೋರಿ ಬಂದಾಗಲೇ ಇವರ ಶಿಸ್ತಿನ ಕವಾಯತು ಕಂಡು ಅಕ್ಕಪಕ್ಕದ ಮನೆಯವರು ಅವರನ್ನು ಹಿಂಬಾಲಿಸಿ ಕರ್ನಲ್ ಮನೆಯವರೆಗೆ ಹೋಗಿ ಬಂದದ್ದೂ ಆಯಿತು. ಮನೆಗೆ ಬಂದವರಿಗೆಲ್ಲಾ ಕರ್ನಲ್ ಮನೆ ತೋರಿಸಿ ಹೆಮ್ಮೆಪಡುವ ಸರದಿ ಈಗ ಸುತ್ತಮುತ್ತಲಿನ ಮನೆಯವರದ್ದು.
ಸಿಟಿ ಅಂದರೆ ಮಾಲ್, ಸಿನಿಮಾ, ಹೋಟೆಲ್ ಎಲ್ಲಾ ಕಡೆ ಓಡಾಡಬಹುದಾದ ಜಾಗ. ಆದರೆ ಮನೆಯಿಂದ ಹೊರಬರಲಾರದ ವೃದ್ಧರಿಗೆ ಬೆಳಿಗ್ಗೆ ತರಕಾರಿ, ಹಣ್ಣು, ಹಾಲು, ಪೇಪರ್‌ನವರೇ ಬಂಧುಗಳು. ದಿನಾ ಬಂದು ಮನೆ ಎದುರು ನಿಂತು ಬೇಕಾದ್ದನ್ನು ಒದಗಿಸುವವರು ಅವರೇ.
ಒಂಭತ್ತು ಗಂಟೆ ಆಗುತ್ತಿದ್ದಂತೆ ಕಾರುಗಳ ಓಡಾಟ ಮಿತಿಮೀರುತ್ತದೆ. ಯಾರು ಎಲ್ಲಿಗೆ ಹೋಗುತ್ತಾರೋ, ಯಾರಿಗೇನು ಕೆಲಸವೋ, ಆಫೀಸಿಗೋ, ಆಸ್ಪತ್ರೆಗೋ, ಮದುವೆಗೋ ಯಾರಿಗೆ ಗೊತ್ತು. ಮಧ್ಯೆ ಮಧ್ಯೆ ತುರ್ತು ಅಂಬುಲೆನ್ಸ್ ವಾಹನಗಳ ಸೈರನ್ ಸದ್ದು ಕೇಳಿದಾಗೊಮ್ಮೆ ಎದೆಯಲ್ಲಿ ಕಾಡುವ ಭಯ.
ನೆಲದ ಸ್ಥಿತಿ ಹೀಗಾದರೆ ಅಲ್ಲೆ ಕಾಣುವ ಸಣ್ಣ – ದೊಡ್ಡ ಮರಗಳು, ಮರಗಳ ತುಂಬೆಲ್ಲಾ ಬೆಳಗಾದರೆ ಚಿಲಿಪಿಲಿಗುಟ್ಟುವ ಹಕ್ಕಿಗಳು, ಅವುಗಳ ನಡುವೆ ಕೇಳುವ ಕೋಗಿಲೆ ಹಾಡಿನ ಇಂಪು ಒಂದು ಕ್ಷಣಕ್ಕೆ ಇದೂ ನಮ್ಮ ಹಳ್ಳಿಯೇ ಎಂಬ ಭಾವನೆ ಬರುವಂತೆ ಮಾಡುತ್ತದೆ. ತಲೆ ಎತ್ತಿ ನೋಡಿದರೆ ಆಕಾಶ ತುಂಬೆಲ್ಲಾ ರಾತ್ರಿ ತಂಗಿದ ಮರಗಳನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಚದರಿ ಹಾರುವ ಹಕ್ಕಿಗಳು, ಸಣ್ಣ ದೊಡ್ಡ ಹಕ್ಕಿಗಳಲ್ಲಿ ಕಾಗೆ, ಗಿಳಿಗಳೂ, ಗಿಡಗನೂ ಇದೆ. ಆದರೆ ಗುಬ್ಬಚ್ಚಿಗಳೊಂದೂ ಕಂಡು ಬರುವುದಿಲ್ಲ. ಅವು ಪರಿಸರ ನಾಶದ ಎಚ್ಚರಿಕೆಯನ್ನಿತ್ತು ಮಾಯವಾದಂತಿದೆ. ಕಿಟಕಿಯಲ್ಲಿ ಆಕಾಶ ನೋಡುವುದಕ್ಕಿಂತ ಟೆರೇಸಿಗೆ ಬಂದರೆ ಸ್ವಲ್ಪ ವಿಶಾಲವಾದ ಆಕಾಶವನ್ನೇ ನೋಡಬಹುದು.
ಬೆಂಗಳೂರು ಎಷ್ಟೇ ಸಿಮೆಂಟ್ ಕಾಡಾಗಲಿ ಅದರ ಸೌಂದರ್ಯಕ್ಕೆ ನನ್ನ ಕಿರುಕಾಣಿಗೆ ಸಲ್ಲಿಸಿಯೇ ಸಿದ್ಧ ಎಂಬoತೆ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಹಳದಿ – ನೇರಳೆ ವರ್ಣದ ಮೇ ಫ್ಲವರ್ ಮರಗಳು ಹಿಂದಿನ ಸುಂದರ ಬೆಂಗಳೂರನ್ನು ನೆನಪಿಸುತ್ತವೆ. ಕಷ್ಟ, ಸುಖ, ಒತ್ತಡ, ವ್ಯಾಪಾರ, ಜನಜಂಗುಳಿ, ಪರಿಸರ, ಆಕಾಶದೆತ್ತರಕ್ಕೆ ಬೆಳೆದು ನಿಂತ ಕಟ್ಟಡಗಳು, ಬೃಹತ್ ಕಟ್ಟಡಗಳ ನಿರ್ಮಾಣದ ತರಾತುರಿ, ತರಹೇವಾರಿ ವಾಹನಗಳ ಓಡಾಟ ಹೀಗೆ ಮಹಾನಗರದ ನೈಜ ಬದುಕಿನ ಚಿತ್ರಣವನ್ನು ಕಣ್ತುಂಬಿಕೊಳ್ಳಬೇಕಾದರೆ ಟೆರೇಸಿನ ಮೇಲೆ ಹೋಗಲೇಬೇಕು.
ಒಟ್ಟಿನಲ್ಲಿ ಮಣ್ಣು ಮುಟ್ಟದೇ, ನೆಲವನ್ನು ಸೋಕದೆ ಆಕಾಶ ಭೂಮಿಗಳನ್ನು ಒಂದು ಮಾಡಿ ಎಲ್ಲ ದೃಶ್ಯ, ಘಟನೆಗಳಿಗೆ ಸಾಕ್ಷಿಯಾಗಬಲ್ಲ ನೋಟ ಈ ಟೆರೇಸ್‌ನ ಮೂಲಕ ಸಿಗುವುದೊಂದು ಚೋದ್ಯ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *