ಇಂಡಿಯಾ @75ನಲ್ಲಿ ಇಂಡಿಯನ್ @70

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ಹಳ್ಳಿಯಲ್ಲಿರುವ ತುಂಬಾ ವಯಸ್ಸಾದವರಲ್ಲಿ ನಿಮಗೆ ಎಷ್ಟು ಮಕ್ಕಳು ಎಂದು ಕೇಳಿದರೆ ಸಹಜವಾಗಿ ಎಂಟೋ, ಹತ್ತೋ ಎಂದು ಹೇಳುತ್ತಾರೆ. ಮುಂದುವರೆದು ಅವರಲ್ಲಿ ಅರ್ಧದಷ್ಟು ಸಂಖ್ಯೆಯ ಮಕ್ಕಳು ಬಹಳ ಮೊದಲೇ ಮರಣ ಹೊಂದಿರುತ್ತಾರೆ ಎಂದೂ ತಿಳಿಸುವರು. ಸಾಮಾನ್ಯವಾಗಿ ಅನಾರೋಗ್ಯದಿಂದ ಬಹುಪ್ರಮಾಣದ ಜನರು ಅಂದಿನ ಕಾಲದಲ್ಲಿ ಮರಣ ಹೊಂದುತ್ತಿದ್ದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ನಂತರ 1950 ರಲ್ಲಿ ಅಂದಿನ ಜನರ ಜೀವಿತಾವಧಿಯ ವಯಸ್ಸು ಕೇವಲ 35.21 ವರ್ಷವಾಗಿತ್ತು. ಅಂದರೆ ಅಂದು ಬಹುಪ್ರಮಾಣದ ಜನರು 39 ವರ್ಷದೊಳಗೆ ಸಾಯುತ್ತಿದ್ದರು.
ಒಂದು ದೇಶದಲ್ಲಿ ಸಾಮಾನ್ಯ ಜನರ ಸರಾಸರಿ ಆಯಸ್ಸನ್ನು ದೇಶದ ಜನರ ಸರಾಸರಿ ಜೀವಿತಾವಧಿ ಎನ್ನುವ ಮಾನದಂಡದ ಮೂಲಕ ಅಳೆಯಲಾಗುವುದು. ಒಂದು ದೇಶದ ಜನರ ಜೀವಿತಾವಧಿಯನ್ನು ಹೆಚ್ಚಿಸುವ ಪ್ರಮುಖ ಅಂಶಗಳೆoದರೆ ಅಲ್ಲಿಯ ಜನರಿಗೆ ಲಭ್ಯತೆ ಇರುವ ಗುಣಮಟ್ಟದ ಆಹಾರ, ವೈದ್ಯಕೀಯ ವ್ಯವಸ್ಥೆ, ಔಷಧಿಗಳ ಲಭ್ಯತೆ, ಭೀಕರ ಕ್ಷಾಮ ನಿರ್ವಹಣೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸ್ವಚ್ಛತೆ, ಸಾಮಾಜಿಕ ಶಾಂತಿ ಇತ್ಯಾದಿಗಳಾಗಿದೆ. ದೇಶದ ಜನರ ಜೀವಿತಾವಧಿಯು ಆ ದೇಶದ ಪ್ರಗತಿಯ ಮಾನದಂಡವೂ ಆಗಿದೆ

1950ರಲ್ಲಿ ಇದ್ದ ಸರಾಸರಿ ಜೀವಿತಾವಧಿ 35 ವರ್ಷಗಳು. 50ವರ್ಷಗಳ ಬಳಿಕ ಅಂದರೆ 2000 ನೇ ಇಸವಿಯಲ್ಲಿ 62ಕ್ಕೆ ಏರಿತು. ಸ್ವಾತಂತ್ರ್ಯದ ಅಮೃತಮಹೋತ್ಸವದ ಈ 2022ಕ್ಕೆ ಇದು 70 ಕ್ಕೆರಿದೆ. 1950 ರಲ್ಲಿ ಇದ್ದ ಭಾರತೀಯರ ಸರಾಸರಿ ಆಯಸ್ಸು ಇಂದಿಗೆ ದುಪ್ಪಟ್ಟಾಗಿದೆ. ಇದು ನಮ್ಮ ದೇಶದ ಅಭಿವೃದ್ಧಿಯ ಸಂಕೇತವೂ ಆಗಿದೆ. ವಿಶ್ವದ ಎರಡನೇ ಅತೀ ದೊಡ್ಡ ಜನಸಂಖ್ಯೆ ಹೊಂದಿದ ದೇಶದಲ್ಲಿ ಸರಾಸರಿ ಜೀವಿತಾವಧಿಯ ವರ್ಷ 70.26 ಅನ್ನು ತಲುಪುವುದು ಒಂದು ಸಾಧನೆಯೇ ಆಗಿದೆ.
ಕೆಲವು ವರದಿಗಳ ಪ್ರಕಾರ ನಮ್ಮ ದೇಶ ಇತ್ತೀಚೆಗೆ ಹೊಂದುತ್ತಿರುವ ಸರ್ವಾಂಗೀಣ ಅಭಿವೃದ್ಧಿ, ಭೌಗೋಳಿಕ ಅಂಶಗಳು ಹಾಗೂ ವೈದ್ಯಕೀಯ ಕ್ಷೇತ್ರದ ಆಮೂಲಾಗ್ರ ಅಭಿವೃದ್ಧಿಗಳಿಂದಾಗಿ ಮುಂದಿನ ದಿನಗಳಲ್ಲಿ ಭಾರತೀಯರು ಸಹಜವಾಗಿಯೇ ಶತಾಯುಷಿಗಳಾಗಬಹುದು. ಭಾರತೀಯರು ಸ್ವಾಭಾವಿಕವಾಗಿ ಸದೃಢರು ಹಾಗೂ ಆರೋಗ್ಯವಂತರಾಗಿರುತ್ತಾರೆ. ಸೂಕ್ತ ಔಷಧೋಪಚಾರದ ಕೊರತೆ ಹಾಗೂ ಇತರ ವ್ಯವಸ್ಥೆಗಳ ಕೊರತೆಗಳಿಂದಾಗಿ ನಮ್ಮ ದೇಶದ ಜನರ ಜೀವಿತಾವಧಿ ಅಂದು ಅತ್ಯಂತ ಕನಿಷ್ಠವಾಗಿತ್ತು. ಹಾಂಕಾoಗ್, ಜಪಾನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂದಿನ ಸರಾಸರಿ ಜೀವಿತಾವಧಿ 85 ವರ್ಷಗಳಾಗಿವೆ. ಈ ದೇಶಗಳಲ್ಲಿ ಶತಾಯುಷಿಗಳನ್ನು ಕಾಣುವುದು ಸರ್ವೆ ಸಾಮಾನ್ಯ. ಸ್ವಾಭಾವಿಕವಾಗಿ ಅವರು ಭಾರತೀಯರಷ್ಟು ಸದೃಢಕಾಯರಾಗಿಲ್ಲದಿದ್ದರೂ ಕೂಡ ಉತ್ತಮ ಆಹಾರ ಹಾಗೂ ವೈದ್ಯಕೀಯ ವ್ಯವಸ್ಥೆಯಿಂದ ಸಹಜವಾಗಿ ಶತಾಯುಷಿಗಳಾಗಿರುತ್ತಾರೆ. ಅಲ್ಲಿರುವ ವ್ಯವಸ್ಥೆಗಳು ನಮ್ಮ ದೇಶದಲ್ಲೇನಾದರೂ ಇದ್ದಲ್ಲಿ, ನಮ್ಮ ದೇಶದ ಸರಾಸರಿ ಜೀವಿತಾವಧಿ 90 ವರ್ಷಗಳಿಕ್ಕಿಂತಲೂ ಜಾಸ್ತಿಯಾಗಬಹುದೇನೊ. ಸ್ವಲ್ಪ ಜಾಗೃತೆವಹಿಸಿ ಉತ್ತಮ ಜೀವನ ಶೈಲಿ, ಹಿತಮಿತ ಆಹಾರ, ಆರೋಗ್ಯದ ಬಗ್ಗೆ ಸಾಮಾನ್ಯ ಕಾಳಜಿ ವಹಿಸಿದಲ್ಲಿ ನಿರಾಯಾಸವಾಗಿ ಭಾರತೀಯರು ಶತಾಯುಷಿಗಳಾಗಬಹುದು. ಪ್ರಸ್ತುತ ದೇಶದ ಅಭಿವೃದ್ಧಿಯ ವೇಗವನ್ನು ಗಮನಿಸಿದರೆ ಆ ದಿನಗಳು ಬಹಳ ದೂರವಿಲ್ಲ ಎಂದೆನಿಸುತ್ತದೆ.
ದೇಶದ ಜನರ ಸರಾಸರಿ ಜೀವಿತಾವಧಿಯಲ್ಲಿ ಆರೋಗ್ಯ ವಿಮೆ ಪ್ರಮುಖ ಪಾತ್ರವಹಿಸುತ್ತದೆ. ಯಾವ ದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಸಾಕಷ್ಟು ಆರೋಗ್ಯ ವಿಮೆಯನ್ನು ಹೊಂದಿರುತ್ತಾರೊ, ಆ ದೇಶದ ಜೀವಿತಾವಧಿಯ ಸರಾಸರಿ ವರ್ಷ ಸಹಜವಾಗಿ ಏರಿಕೆಯಾಗಿರುವುದು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆಗಳು ದೊರಕುವಾಗ ಸಹಜವಾಗಿಯೇ ಜನರ ಆಯಸ್ಸು ಹೆಚ್ಚುತ್ತಾ ಹೋಗುತ್ತದೆ.
ಪೂಜ್ಯ ಶ್ರೀ ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ಯೋಜನೆಯ ಮೂಲಕ ಕರ್ನಾಟಕ ರಾಜ್ಯದಲ್ಲಿ ಒಂದು ಆರೋಗ್ಯ ವಿಮಾ ಕ್ರಾಂತಿಯಾಗಿದೆ. ಗ್ರಾಮೀಣ ಜನತೆಯು ಸಾಮಾನ್ಯವಾಗಿ ಆರೋಗ್ಯ ವಿಮಾ ವ್ಯವಸ್ಥೆಯಿಂದ ಹೊರಗುಳಿಯುತ್ತಾರೆ. ಆದರೆ ನಮ್ಮ ಯೋಜನೆ ಮೂಲಕ ದೇಶದ ಉನ್ನತ ವಿಮಾ ಕಂಪನಿಗಳ ಜೊತೆಗಿನ ಒಡಂಬಡಿಕೆಯಿoದಾಗಿ ಗ್ರಾಮೀಣ ಜನತೆಗೆ ಅದರಲ್ಲೂ ಕಡುಬಡವರಿಗೂ ಕೂಡ ಕೈಗೆಟುಕುವ ಪ್ರೀಮಿಯಂ ದರದಲ್ಲಿ ಆರೋಗ್ಯ ವಿಮಾ ಸೌಲಭ್ಯ ಸಿಗುವಂತೆ ಆಗಿದೆ. ಕೇವಲ ವ್ಯಕ್ತಿಗಷ್ಟೆ ಅಲ್ಲ ಅವರ ಕುಟುಂಬಕ್ಕೆ ಕೂಡ ಈ ಆರೋಗ್ಯ ವಿಮಾ ಸೌಲಭ್ಯ ಇದೆ. ಯೋಜನೆಯಿಂದ ಪ್ರಾರಂಭಿಸಲ್ಪಟ್ಟ ‘ಸಂಪೂರ್ಣ ಸುರಕ್ಷಾ’ ಹಾಗೂ ‘ಆರೋಗ್ಯ ರಕ್ಷಾ’ ಎಂಬ ವಿನೂತನ ಆರೋಗ್ಯ ವಿಮಾ ಕಾರ್ಯಕ್ರಮಗಳಿಂದಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಸುಮಾರು 57 ಲಕ್ಷ ಜನರು ಆರೋಗ್ಯ ವಿಮೆಯನ್ನು ಹೊಂದಿದ್ದಾರೆ. ಸುಮಾರು 487 ಆಸ್ಪತ್ರೆಗಳಲ್ಲಿ ಯೋಜನೆಯು ನಗದುರಹಿತ ಚಿಕಿತ್ಸೆಗೆ ಒಪ್ಪಂದ ಮಾಡಿಕೊಂಡಿದ್ದು, ಯಾವುದೇ ಹಣ ಪಾವತಿಸದೇ ಈ ವಿಮಾದಾರರು ಅರ್ಹತಾನುಸಾರ ಚಿಕಿತ್ಸೆಯನ್ನು ಪಡೆಯಬಹುದು. ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ವಿಮಾ ಕಂಪನಿಯಲ್ಲಿ ಅರ್ಹ ಕ್ಲೆಮ್ ಮಾಡಿಕೊಳ್ಳಬಹುದು. ಸುಮಾರು 198 ವಿವಿಧ ಖಾಯಿಲೆಗಳಿಗೆ ವಿಮಾ ಕಾರ್ಯಕ್ರಮದಡಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಇಲ್ಲಿಯವರೆಗೆ ಸುಮಾರು 10 ಲಕ್ಷ ಜನರು ಈ ಕಾರ್ಯಕ್ರಮದ ಸದ್ವಿನಿಯೋಗ ಪಡೆದಿದ್ದಾರೆ.
ಮಾತೃಶ್ರೀ ಹೇಮಾವತಿ ಅಮ್ಮನವರ ಪರಿಕಲ್ಪನೆಯ ‘ಜ್ಞಾನವಿಕಾಸ ಕಾರ್ಯಕ್ರಮ’ದಡಿಯಲ್ಲಿ ಲಕ್ಷಾಂತರ ಗ್ರಾಮೀಣ ಮಹಿಳೆಯರಿಗೆ ಸ್ವಚ್ಛತೆ, ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ತಜ್ಞರಿಂದ ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವುದಲ್ಲದೆ, ಅನೇಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನೂ ಆಯೋಜಿಸಲಾಗುತ್ತಿದೆ. ಹೀಗೆ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಜನತೆಯ ಆರೋಗ್ಯ ಸುರಕ್ಷತೆಯ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುತ್ತಾ ರಾಜ್ಯದ ಜನತೆಯ ಸರಾಸರಿ ಜೀವಿತಾವಧಿಯ ಏರಿಕೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *