ಸಾಗರದಲ್ಲಿನ ಕ್ರಾಂತಿ ‘ವಿಕ್ರಾಂತ್’

ಬರಹ : ರಾಜೀವ ಹೆಗಡೆ

ಭಾರತದ ‘ಆತ್ಮನಿರ್ಭರತೆ’ಯ ಹೊಸ ರೂಪವೇ ಐಎನ್‌ಎಸ್ ವಿಕ್ರಾಂತ್. ದಶಕಗಳ ಕಾಲ ನೌಕಾದಳ ಹಾಗೂ ಭಾರತೀಯರ ಪಾಲಿಗೆ ಗಗನ ಕುಸುಮವಾಗಿದ್ದ ಸ್ವದೇಶಿ ಯುದ್ಧ ನೌಕೆ ನಿರ್ಮಾಣದ ಕನಸನ್ನು ನನಸು ಮಾಡಿದ್ದು ವಿಕ್ರಾಂತ್ ಯುದ್ಧನೌಕೆ. ಕೋಟ್ಯಾಂತರ ಜನರಲ್ಲಿ ‘ಆತ್ಮನಿರ್ಭರತೆ’ಯ ಹೊಸ ಮಂತ್ರವು ಮತ್ತೊಮ್ಮೆ ಮಾರ್ದನಿಸುವಂತೆ ಮಾಡಿದ್ದು ಈ ಸಾಗರ ಸಮರವೀರ ‘ವಿಕ್ರಾಂತ್’. ಸ್ವಾತಂತ್ರದ ಅಮೃತಮಹೋತ್ಸವದ ವರ್ಷದಲ್ಲಿ ರಕ್ಷಣಾ ಪಡೆಗಳಿಗೆ ಸ್ವದೇಶಿ ಅಮೃತದಂತೆ ಐಎನ್‌ಎಸ್ ವಿಕ್ರಾಂತ್ ದೊರೆತಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧನೌಕೆ ಹೊಂದಿದ ಬೆರಳೆಣಿಕೆ ದೇಶಗಳ ಪಟ್ಟಿಗೆ ಭಾರತವು ಸೇರಿಕೊಂಡಿದೆ. ಅಮೆರಿಕ, ಚೀನಾ, ರಷ್ಯಾ, ಇಂಗ್ಲೆoಡ್, ಫ್ರಾನ್ಸ್, ಬ್ರಿಟನ್ ಹಾಗೂ ಇಟಲಿ ಬಳಿಕ ಸ್ವದೇಶಿ ಯುದ್ಧನೌಕೆ ಹೊಂದಿದ ರಾಷ್ಟ್ರಭಾರತವಾಗಿದೆ. ವಿಶ್ವದ ಬಲಿಷ್ಠ ಆರು ರಾಷ್ಟ್ರಗಳ ಪಟ್ಟಿಯಲ್ಲಿ ಇದೀಗ ಭಾರತದ ಹೆಸರಿದೆ. ಇದಕ್ಕೆ ತೆಗೆದುಕೊಂಡಿದ್ದು ಆರು ದಶಕಕ್ಕೂ ಅಧಿಕ ಕಾಲ ಹಾಗೂ ಅಗಣಿತ ಶ್ರಮ.
ಸಾಗರ ಸಮರಕ್ಕೆ ‘ವಿಕ್ರಾಂತ್’ ಬಲ
ಭಾರತವು ಹಿಂದೂ ಮಹಾಸಾಗರದಲ್ಲಿ ಸುಮಾರು 7,516 ಕಿ.ಮೀ. ಜಲ ಗಡಿ ಪ್ರದೇಶಗಳನ್ನು ಹೊಂದಿದೆ. ಹಾಗೆಯೇ ಹಿಂದೂ ಮಹಾಸಾಗರದಲ್ಲಿ 23 ಲಕ್ಷ ಚದರ ಮೈಲುಗಳ ವಿಶೇಷ ಆರ್ಥಿಕ ವಲಯ ಹೊಂದಿದೆ. ಆದರೆ ಐಎನ್‌ಎಸ್ ವಿಕ್ರಾಂತ್ ಆಗಮನದ ಮುನ್ನ ‘ವಿಕ್ರಮಾದಿತ್ಯ’ ಮಾತ್ರ ರಕ್ಷಣೆಗೆ ಲಭ್ಯವಿತ್ತು. ಹಿಂದೂ ಮಹಾಸಾಗರದ ಗಡಿ ದೇಶಗಳಲ್ಲಿ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಪಾಕಿಸ್ಥಾನದ ಗಡಿಯೂ ಬರುತ್ತದೆ. ಹೀಗಿರುವಾಗ ಭಾರತೀಯ ನೌಕಾಸೇನೆಗೆ ಕನಿಷ್ಠ ಎರಡು ಯುದ್ಧ ನೌಕೆಗಳ ಅಗತ್ಯವಿತ್ತು. ಈಗ ಐಎನ್‌ಎಸ್ ವಿಕ್ರಾಂತ್ ಸೇರ್ಪಡೆಯು ನೌಕಾಸೇನೆಗೆ ಆನೆಬಲ ತಂದುಕೊಟ್ಟಿದೆ.
ಅದರಲ್ಲೂ 2012ರಲ್ಲಿ ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು ಕೂಡ ಸೇವೆಯಿಂದ ಸರಕಾರ ಹಿಂಪಡೆದಿತ್ತು. ಇದರಿಂದ ವಿಕ್ರಮಾದಿತ್ಯನು ಏಕಾಂಗಿಯಾಗಿ ನೌಕಾ ಗಸ್ತು ಮಾಡಬೇಕಿತ್ತು. ವಿಕ್ರಾಂತ್ ಶತ್ರುಪಡೆಗಳ ಯುದ್ಧ ನೌಕೆಗಳ ಚಲನೆ ಮೇಲೆ ನಿಗಾ ಇಡಲು ಉತ್ಕೃಷ್ಟ ದರ್ಜೆಯ ರಾಡಾರ್ ವ್ಯವಸ್ಥೆಯನ್ನು ಹೊಂದಿದೆ. ಅರೆಸ್ವ್ ರಿಕವರಿ ಸುಧಾರಿತ ತಂತ್ರಜ್ಞಾನದ ಮೂಲಕ ಯುದ್ಧ ವಿಮಾನಗಳ ಲ್ಯಾಂಡಿoಗ್‌ಗೆ ಅವಕಾಶ ಈ ನೌಕೆಯಲ್ಲಿ ಇರುವುದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ವಿಕ್ರಾಂತ್ ನೆರವಿಗೆ ಬರಲಿದೆ.
13 ವರ್ಷಗಳ ಯೋಜನೆ
1957ರಲ್ಲಿ ಭಾರತವು ಬ್ರಿಟನ್‌ನಿಂದ ಮೊದಲ ಯುದ್ಧನೌಕೆಯನ್ನು ಖರೀದಿಸಿತ್ತು. ನಂತರದ ನಾಲ್ಕೈದು ದಶಕಗಳ ಕಾಲ ಸ್ವದೇಶಿ ಯುದ್ಧ ನೌಕೆಯ ನಿರ್ಮಾಣದ ಬಗ್ಗೆ ಭಾರತವು ತಲೆ ಕೂಡ ಹಾಕಿರಲಿಲ್ಲ. 1999ರಲ್ಲಿ ಮೊದಲ ಬಾರಿಗೆ ವಿಕ್ರಾಂತ್ ನೌಕೆಯ ವಿನ್ಯಾಸ ಕೆಲಸ ಶುರುವಾಯಿತು. ಆದರೆ ಪ್ರಾಯೋಗಿಕವಾಗಿ ಈ ಕೆಲಸ ಆರಂಭವಾಗಿದ್ದು ಮಾತ್ರ 2009ರಲ್ಲಿ. ಸುಮಾರು ಎರಡು ಸಾವಿರ ಎಂಜಿನಿಯರ್‌ಗಳು 12 ವರ್ಷಗಳ ಕಾಲ ಬೆವರಿಳಿಸಿ ವಿಕ್ರಾಂತ್ ನಿರ್ಮಿಸಿದ್ದಾರೆ. ಯುದ್ಧನೌಕೆ ನಿರ್ಮಾಣಕ್ಕೆ ನೂರಕ್ಕೂ ಅಧಿಕ ಸ್ವದೇಶಿ ಕಂಪೆನಿಗಳು ನೆರವಾಗಿದ್ದು, ಶೇ. 76ಕ್ಕೂ ಅಧಿಕ ಉಪಕರಣಗಳು ಸ್ಥಳೀಯವಾಗಿ ನಿರ್ಮಾಣವಾಗಿದ್ದಾಗಿದೆ. ಈ ಯೋಜನೆಗೆ ಸುಮಾರು ರೂ. 23 ಸಾವಿರ ಕೋಟಿ ವ್ಯಯ ಮಾಡಲಾಗಿದೆ. ನೌಕಾಸೇನೆ ವಿನ್ಯಾಸ ನಿರ್ದೇಶನಾಲಯವು ವಿನ್ಯಾಸ ಮಾಡಿದ್ದರೆ, ಸಿಎಸ್‌ಎಲ್ ಇದನ್ನು ನಿರ್ಮಾಣ ಮಾಡಿದೆ.
ಭವಿಷ್ಯದ ‘ವಿಶಾಲ’ ಯೋಜನೆ
2020ರ ವೇಳೆಗೆ ಕೊಚ್ಚಿನ್ ಶಿಪ್ ಯಾರ್ಡ್ ಮೂಲಕವೇ ಭಾರತದ ಎರಡನೇ ಸ್ವದೇಶಿ ನಿರ್ಮಿತ ಯುದ್ಧನೌಕೆ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸುಮಾರು ರೂ. 1.50 ಲಕ್ಷ ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದು 65 ಸಾವಿರ ಟನ್ ತೂಕವನ್ನು ಹೊಂದಿರಲಿದ್ದು, 2,300 ಸಿಬ್ಬಂದಿಯನ್ನು ಹೊತ್ತೊಯ್ಯಲಿದೆ. ಹಾಗೆಯೇ 55 ಯುದ್ಧ ವಿಮಾನಗಳಿಗೆ ಇದರಲ್ಲಿ ಜಾಗ ಇರಲಿದೆ. ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡಿದ್ದು, ನಿವೃತ್ತಿ ದಿನಗಳು ಹತ್ತಿರ ಬಂದಿವೆ. ಹೀಗಾಗಿ ಈ ಹೊಸ ಯುದ್ಧನೌಕೆಗಾಗಿ ನೌಕಾಸೇನೆ ಕಾಯುತ್ತಿದೆ. ಇದಕ್ಕೆ ‘ಐಎನ್‌ಎಸ್ ವಿಶಾಲ್’ ಎಂದು ಹೆಸರಿಡಲಾಗಿದೆ.

ವಿಕ್ರಾಂತ್ ಯುದ್ಧನೌಕೆಯ ವಿಶೇಷತೆ
ರೂ. 23 ಸಾವಿರ ಕೋಟಿ ವ್ಯಯ. 262ಮೀಟರ್ ಉದ್ದ. 62 ಮೀಟರ್ ಅಗಲ. 59 ಮೀಟರ್ ಎತ್ತರ.45 ಸಾವಿರ ಟನ್ ತೂಕ. ಒಂದೇ ಬಾರಿಗೆ 1600 ನೌಕಾ ಸಿಬ್ಬಂದಿ ಮತ್ತು 1750 ಸಿಬ್ಬಂದಿ ನಿಯೋಜನೆ. ಪ್ರತ್ಯೇಕ 2300 ವಿಭಾಗಗಳು. ಮಹಿಳಾ ಸಿಬ್ಬಂದಿಗೂ ಪ್ರತ್ಯೇಕ ವ್ಯವಸ್ಥೆ. ರಾತ್ರಿಯಲ್ಲಿ ವಿಮಾನಗಳ ಲ್ಯಾಂಡಿoಗ್‌ಗೆ 230 ದೀಪಗಳ ನಿಯೋಜನೆ. ಶಸ್ತ್ರಾಸ್ತ್ರ ಹೊರತಾಗಿ 6 ಹೆಲಿಕಾಪ್ಟರ್ ಹಾಗೂ 30 ಯುದ್ಧ ವಿಮಾನಗಳನ್ನು ನಿಲ್ಲಿಸಲು ಅವಕಾಶ. ನೌಕೆಗೆ ತುಕ್ಕು ಹಿಡಿಯದ 30ಸಾವಿರ ಟನ್ ವಿಶೇಷ ಉಕ್ಕು ಬಳಕೆ. 16 ಹಾಸಿಗೆಯ ಆಸ್ಪತ್ರೆ. 250 ಟ್ಯಾಂಕರ್‌ಗಳಷ್ಟು ಇಂಧನ ಸಂಗ್ರಹ ಸಾಮರ್ಥ್ಯ. 2500 ಕಿ.ಮೀ. ಉದ್ದದ ವಿದ್ಯುತ್ ಕೇಬಲ್ ಬಳಕೆ. 4800 ಜನರಿಗೆ ಅಡುಗೆ ಸಿದ್ಧಪಡಿಸುವ ಅತ್ಯಾಧುನಿಕ ವ್ಯವಸ್ಥೆ. ಗಂಟೆಗೆ 28 ನಾಟ್ಸ್ ವೇಗದ ಚಲನೆ. ಒಂದು ಬಾರಿಗೆ 7,500 ನಾಟಿಕಲ್ ಮೈಲು ಕ್ರಮಿಸುವ ಸಾಮರ್ಥ್ಯ. ನೌಕೆಗಳ ಚಲನೆ ಮೇಲೆ ನಿಗಾ ಇಡಲು ಉತ್ಕೃಷ್ಟ ದರ್ಜೆಯ ರಾಡಾರ್ ವ್ಯವಸ್ಥೆ. ಅರೆಸ್ವ್ ರಿಕವರಿ ಸುಧಾರಿತ ತಂತ್ರಜ್ಞಾನದ ಮೂಲಕ ಯುದ್ಧ ವಿಮಾನಗಳ ಲ್ಯಾಂಡಿoಗ್ ವ್ಯವಸ್ಥೆ.

ಆಸಕ್ತಿಕರ ಮಾಹಿತಿ
ಎರಡು ಫುಟ್ಬಾಲ್ ಮೈದಾನದಷ್ಟು ವಿಸ್ತೀರ್ಣ. ರನ್ ವೇಯಲ್ಲಿ ಎರಡು ಒಲಿಂಪಿಕ್ ಈಜುಕೊಳ ನಿರ್ಮಿಸುವಷ್ಟು ಜಾಗ. ಈ ಐಎನ್‌ಎಸ್ ವಿಕ್ರಾಂತ್‌ನಲ್ಲಿ 16 ಬೆಡ್‌ಗಳ ಆಸ್ಪತ್ರೆ ಕೂಡ ಇದೆ. ಸಕಲ ಸೌಲಭ್ಯಗಳೊಂದಿಗೆ ಇದನ್ನು ‘ಚಲಿಸುವ ನಗರ’ ಎಂದೇ ಬಣ್ಣಿಸಲಾಗುತ್ತಿದೆ. ‘ಜಯೇಮ ಸಂ ಯುಧಿ ಸ್ಪೃಧಃ’ ಎಂಬ ವಾಕ್ಯವನ್ನು ನೌಕೆ ಹೊಂದಿದೆ. ‘ಯುದ್ಧದಲ್ಲಿ ಶತ್ರುಗಳ ವಿರುದ್ಧ ಹೋರಾಡಿ ಜಯಿಸೋಣ’ ಎನ್ನುವ ಅರ್ಥ ಹೊಂದಿದೆ. ಐಎನ್‌ಎಸ್ ವಿಕ್ರಾಂತ್‌ನಲ್ಲಿ 30 ಯುದ್ಧ ವಿಮಾನಗಳ ನಿಯೋಜನೆ. 12 ಯುದ್ಧ ವಿಮಾನವನ್ನು ರನ್‌ವೇಯಲ್ಲಿ ಹಾಗೂ ಉಳಿದಿರುವ ೧೮ನ್ನು ನೌಕೆಯೊಳಗಿರುವ ಹ್ಯಾಂಗರ್‌ನಲ್ಲಿ ನಿಯೋಜಿಸಬಹುದು. ಹ್ಯಾಂಗರ್‌ನಿoದ ರನ್‌ವೇಗೆ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತರಲು ಲಿಫ್ಟ್ ವ್ಯವಸ್ಥೆ. ಕ್ಷಿಪಣಿ, ಫಿರಂಗಿ ಗನ್, ಮಲ್ಟಿ ರೋಲರ್ ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳ ಬಲ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *