ನಮ್ಮ ನಡಿಗೆ ವಾರದ ಸಭೆಯ ಕಡೆಗೆ

ಡಾ| ಎಲ್. ಎಚ್. ಮಂಜುನಾಥ್

ಕಳೆದ ಎರಡು ವರ್ಷಗಳ ಕೊರೊನಾ ಸಮಸ್ಯೆ ನಮ್ಮ ಸ್ವಸಹಾಯ ಸಂಘಗಳ ವಾರದ ಸಭೆಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ವಾರದ ಸಭೆಗಳು ನಡೆಸಲು ಸಾಧ್ಯವಿಲ್ಲದೆ ಇರುವಾಗ ವಾರದ ಕಂತು ಮರುಪಾವತಿಯ ಬಗ್ಗೆ ನಮ್ಮ ಕಾರ್ಯಕರ್ತರು ವಿಶೇಷ ಅಭಿಯಾನಗಳನ್ನು ಮಾಡಿ ವಾರದ ಕಂತುಗಳ ಮರುಪಾವತಿಯ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರಿoದ ಆರ್ಥಿಕ ನಿರ್ವಹಣೆಯು ಉತ್ತಮವಾಗಿದ್ದರೂ, ಸಂಘಗಳ ವಾರದ ಸಭೆಯ ಕೊರತೆಯಿಂದಾಗಿ ಸಾಮಾಜಿಕ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ನಾವು ಇಂದು ಎದುರಿಸುತ್ತಿದ್ದೇವೆ.
ಸ್ವಸಹಾಯ ಸಂಘದಲ್ಲಿರುವ ಸಾಮಾನ್ಯ ಜನರಿಗೆ ವಾರದ ಸಭೆಯು ಬಹಳ ಪ್ರಮುಖವಾಗುತ್ತದೆ. ಕ್ರಮಬದ್ದವಾಗಿ ನಡೆಯುವ ವಾರದ ಸಭೆಯು ಸದಸ್ಯರಲ್ಲಿ ಶಿಸ್ತಿನ ಪಾಠವನ್ನು ಕಲಿಸುವುದಲ್ಲದೆ ತಮ್ಮ ಸ್ವಸಹಾಯ ಸಂಘದ ಸದಸ್ಯರೊಡನೆ ಸಮಯ ಕಳೆಯಲು, ಮನರಂಜನೆ ಪಡೆಯಲು ಮತ್ತು ಸಮಸ್ಯೆಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯಾಗಿಯೂ ಕೆಲಸ ಮಾಡುತ್ತದೆ. ಜೊತೆಯಲ್ಲಿ ಯೋಜನೆಯ ಕಾರ್ಯಕ್ರಮಗಳ ಕುರಿತಂತೆ ಪರಿಚಯ ಮಾಡಿಕೊಳ್ಳಲು, ಯೋಜನೆಯ ನಿಯಮಾವಳಿಗಳನ್ನು ಅರಿತುಕೊಳ್ಳಲು ಮತ್ತು ಬ್ಯಾಂಕಿನ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ವಾರದ ಸಭೆಗಳು ಸಹಕಾರಿಯಾಗಿವೆ. ವಾರದ ಸಭೆಯನ್ನು ನಡೆಸದೇ ಕೇವಲ ಹಣ ಕಟ್ಟುವುದರಿಂದ ದೀರ್ಘಕಾಲ ಚಟುವಟಿಕೆಯನ್ನು ಆಸಕ್ತಿಯುತವಾಗಿ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡು ಕೊರೊನಾ ನಂತರದ ಸಂದರ್ಭದಲ್ಲಿ ವಾರದ ಸಭೆಗೆ ವಿಶೇಷ ಒತ್ತನ್ನು ಕೊಡಬೇಕೆಂದು ತೀರ್ಮಾನಿಸಿ, ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ‘ಸ್ವಸಹಾಯ ಸಂಘ ಸಮರ್ಪಕತಾ ಬೃಹತ್ ಅಭಿಯಾನ’ವನ್ನು ಕೈಗೊಳ್ಳಲಾಯಿತು. ಈ ಅಭಿಯಾನದಲ್ಲಿ ಕಂಡುಕೊoಡದ್ದೇನೆoದರೆ ಯೋಜನೆಯಲ್ಲಿರುವ 1812 ವಲಯಗಳ ಪೈಕಿ, ಸುಮಾರು 730 ವಲಯಗಳಲ್ಲಿ ವಾರದ ಸಭೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇತರ ಪ್ರದೇಶಗಳಲ್ಲಿಯೂ ಕೂಡಾ ವಾರದ ಸಭೆಯು ಕೇವಲ ಹಣ ಪಾವತಿಗೆ ಸೀಮಿತವಾಗಿವೆ. ವಾರದ ಸಭೆಗೆ ಸೇವಾಪ್ರತಿನಿಧಿಗಳಾಗಲಿ, ಮೇಲ್ವಿಚಾರಕರಾಗಲಿ ಹೋಗುವುದು ಕಡಿಮೆಯಾಗಿದೆ ಎಂಬ ಆತಂಕಕಾರಿ ಅಭಿಪ್ರಾಯ ವ್ಯಕ್ತಗೊಂಡಿದೆ. ಇದಕ್ಕಾಗಿಯೇ ಸೆಪ್ಟೆಂಬರ್ ತಿಂಗಳ ‘ನಿರಂತರ ಪತ್ರ‍್ರಿಕೆ’ಯಲ್ಲಿ ‘ಸ್ವಸಹಾಯ ಸಂಘಗಳ ಸಮರ್ಪಕತೆ’ಯ ಕುರಿತಂತೆ ವಿಶೇಷ ಲೇಖನವೊಂದನ್ನು ಪ್ರಕಟಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ನನ್ನ ಪ್ರವಾಸದ ಅವಧಿಯಲ್ಲಿ ನಾನು ಗಮನಿಸಿದಂತೆ ಈ ಲೇಖನವನ್ನೂ ನಮ್ಮ ಸೇವಾಪ್ರತಿನಿಧಿಗಳು ಮತ್ತು ಮೇಲ್ವಿಚಾರಕರು ಓದಿಕೊಳ್ಳದೆ ಇರುವುದು ಅತ್ಯಂತ ಖೇದಕರವಾಗಿದೆ. ಇದೀಗ ವಾರದ ಸಭೆಗಳು ಸಮರ್ಪಕವಾಗದೆ ಇರುವ ವಲಯಗಳಲ್ಲಿ ಮಾರ್ಚ್ 2023ರೊಳಗಾಗಿ ಎಲ್ಲವನ್ನೂ ಸಮರ್ಪಕಗೊಳಿಸುವ ಬೃಹತ್ ಜವಾಬ್ದಾರಿಯನ್ನು ಮೇಲ್ವಿಚಾರಕ ಮತ್ತು ತತ್ಸಮಾನ ಹುದ್ದೆಯ ಎಲ್ಲಾ ಕಾರ್ಯಕರ್ತರಿಗೆ ವಹಿಸಲಾಗಿದೆ. ವಾರದ ಸಭೆಗಳು ಆಕರ್ಷಕವಾಗಿದ್ದಷ್ಟೂ ಯೋಜನೆ ಕಾರ್ಯಕ್ರಮಗಳ ಮಹತ್ವವು ಹೆಚ್ಚುತ್ತದೆ. ಮಾತ್ರವಲ್ಲದೆ, ಕಾರ್ಯಕ್ರಮಗಳ ನಿರ್ವಹಣೆಯೂ ಸುಸೂತ್ರವಾಗುತ್ತದೆ ಎಂಬ ಮಾತನ್ನು ನಾವು ಅರಿಯಬೇಕಾಗಿದೆ.
ಮೇಲ್ವಿಚಾರಕರು ತಿಂಗಳಲ್ಲಿ 150 ವಿವಿಧ ಸ್ವಸಹಾಯ ಸಂಘಗಳ ಭೇಟಿಯನ್ನು ಮಾಡಬೇಕೆಂದು ನಾನು ಒತ್ತು ನೀಡುತ್ತಾ ಬಂದಿದ್ದೇನೆ. ಒಂದು ಸ್ವಸಹಾಯ ಸಂಘದ ವಾರದ ಸಭೆಗೆ ಅರ್ಧ ಗಂಟೆ ಹಿಡಿಯುತ್ತದೆ ಎಂದು ಇಟ್ಟುಕೊಂಡರೆ ಒಂದು ದಿನದಲ್ಲಿ ಹತ್ತು ಸಂಘಗಳ ಭೇಟಿಯನ್ನು ಮೇಲ್ವಿಚಾರಕರು ಮಾಡಬಹುದಾಗಿದೆ. ತಿಂಗಳ 15 ದಿವಸಗಳಲ್ಲಿ 150 ಸಂಘಗಳ ಭೇಟಿಯನ್ನು ಮಾಡಿದರೂ, ಅವರಿಗೆ ಉಳಿದ 15 ದಿನಗಳು ಇತರ ಕಾರ್ಯಕ್ರಮಗಳನ್ನು ಮತ್ತು ರಜೆಗಳನ್ನು ಅನುಭವಿಸಲು ಲಭ್ಯವಾಗಿರುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕಾಗಿದೆ. ವಾರದ ಸಭೆಗೆ ಹೋಗಬೇಕೆಂದಾದರೆ ಪ್ರತಿಯೊಂದು ಗ್ರಾಮದಲ್ಲಿಯೂ ಸ್ವಸಹಾಯ ಸಂಘಗಳ ಸಭೆಗಳು ವಿವಿಧ ಅವಧಿಯಲ್ಲಿ, ವಿವಿಧ ದಿನಗಳಂದು ನಡೆಯಬೇಕಾದದ್ದು ಬಹಳ ಅಗತ್ಯವಾಗಿದೆ. ಕೆಲವು ಕಡೆ ವಾರದ ಯಾವುದೋ ಒಂದು ದಿನದಂದು ಎಲ್ಲಾ ಸಂಘಗಳು ವಾರದ ಸಭೆಯನ್ನು ನಡೆಸಿದ್ದಲ್ಲಿ ಈ ಸಭೆಗಳಿಗೆ ಹೋಗಲು ಕಾರ್ಯಕರ್ತರಿಗೆ ಕೂಡಾ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಮೊದಲಾಗಿ ಸ್ವಸಹಾಯ ಸಂಘಗಳು ಸೇವಾಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ತಮ್ಮ ವಾರದ ಸಭೆಯನ್ನು ತಮಗೆ ಅನುಕೂಲವಾಗುವ ಸಮಯ ಮತ್ತು ದಿನವನ್ನು ನೋಡಿಟ್ಟುಕೊಂಡು ನಿರ್ಧರಿಸಿಕೊಳ್ಳಬೇಕು. ಇದಕ್ಕೆ ಸೇವಾಪ್ರತಿನಿಧಿಗಳ ಒಪ್ಪಿಗೆಯನ್ನು ಪಡೆಯುವುದು ಅವಶ್ಯಕವಾಗಿರುತ್ತದೆ. ಸೇವಾಪ್ರತಿನಿಧಿಗಳಿಗೆ ಈ ವಾರದ ಸಭೆಗೆ ಹೋಗಲು ಅನುಕೂಲವಿಲ್ಲದಿದ್ದಲ್ಲಿ ಅನಿವಾರ್ಯವಾಗಿ ಸಂಘವು ತಮ್ಮ ಸಮಯವನ್ನು ಬದಲಾಯಿಸಿಕೊಳ್ಳಲೇಬೇಕಾಗುತ್ತದೆ. ಹೀಗೆ ಒಂದು ಗ್ರಾಮದಲ್ಲಿ ಒಬ್ಬ ಸೇವಾಪ್ರತಿನಿಧಿಗೆ ಒಂದು ದಿನಕ್ಕೆ 10 ರಂತೆ ವಾರದ ಸಭೆ ನಡೆಸಿದಲ್ಲಿ ವಾರದ 5 ದಿನಗಳ ಕಾಲ 50 ಸಂಘಗಳ ವಾರದ ಸಭೆಯನ್ನು ನಡೆಸುವಂತೆ ಆದಲ್ಲಿ ಸೇವಾಪ್ರತಿನಿಧಿಯು ಕ್ರಮಬದ್ಧವಾಗಿ ಎಲ್ಲಾ ಸಂಘಗಳಿಗೂ ಭೇಟಿ ನೀಡಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ಮೇಲ್ವಿಚಾರಕರಿಗೂ ತಮ್ಮ ಯೋಜಿತವನ್ನು ಮಾಡಿಕೊಂಡು ಸಂಘಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ಮೇಲ್ವಿಚಾರಕರಿಗೂ ತಮ್ಮ ಯೋಜಿತವನ್ನು ಮಾಡಿಕೊಂಡು ಸಂಘಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಇದಕ್ಕಾಗಿಯೇ ‘ಗ್ರೂಪ್ ಮಾಸ್ಟರ್’ಅನ್ನು ಸರಿಯಾಗಿ, ಸಮರ್ಪಕವಾಗಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಂದು ನಮಗೆ ಬಂದಿದೆ. ಇದರ ಜೊತೆಯಲ್ಲಿ ಸೇವಾಪ್ರತಿನಿಧಿಗಳು ವಾರದ ಎಲ್ಲಾ ಸಭೆಗಳಿಗೂ ಹಾಜರಾಗುವುದು ಅನಿವಾರ್ಯವಾಗಿದೆ. ಅವರು ವಾರದ ಸಭೆಗೆ ಹೋಗದಿದ್ದಲ್ಲಿ ಸಂಘದವರಿಗೆ ವಾರದ ಸಭೆಯನ್ನು ಮಾಡಲು ಆಸಕ್ತಿ ಇರುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಮಾತ್ರವಲ್ಲದೆ, ಮೇಲ್ವಿಚಾರಕರು ತಿಂಗಳಿಗೆ150 ಸಂಘಗಳ ವಾರದ ಸಭೆಗಳಿಗೆ ಭೇಟಿ ನೀಡಿದಲ್ಲಿ, ಎರಡು ತಿಂಗಳಲ್ಲಿ ಎಲ್ಲಾ ಸಂಘಗಳಿಗೂ ಭೇಟಿ ನೀಡುವುದಲ್ಲದೆ ಅವರ ಅಗತ್ಯತೆಗಳನ್ನು ಪೂರೈಸಲು ಇವರಿಗೆ ಸಾಧ್ಯವಾಗುತ್ತದೆ.
ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದಾಗಿಯೂ, ಸ್ವಸಹಾಯ ಸಂಘಗಳು ಮತ್ತು ಕಾರ್ಯಕರ್ತರು ಇದಕ್ಕೆ ಬೇಕಾದಷ್ಟೂ ಮಹತ್ವವನ್ನು ಇನ್ನೂ ನೀಡಬೇಕಾಗಿದೆ. ಈ ಕುರಿತಂತೆ ಯೋಜನಾಧಿಕಾರಿಗಳು, ನಿರ್ದೇಶಕರು ಮತ್ತು ಪ್ರಾದೇಶಿಕ ನಿರ್ದೇಶಕರು ಮಹತ್ತರವಾದ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಯಾವುದೇ ಕಾರಣಕ್ಕೂ ವಾರದ ಸಭೆಯನ್ನು ಉಪೇಕ್ಷೆ ಮಾಡಬಾರದೆಂದು ಎಲ್ಲರಿಗೂ ತಿಳಿಸಬೇಕಾದ ಅಗತ್ಯ ಬಂದಿದೆ. ವಾರದ ಸಭೆಯು ಯಶಸ್ವಿಯಾಗಿ ನಡೆದಾಗ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಸಮರ್ಪಕವಾಗಿ ಅನುಷ್ಠಾನವಾಗುವವು. ಎಲ್ಲಾ ವಾರದ ಸಭೆಗಳಿಗೂ ಹೋಗುವಂತೆ ಮೇಲ್ವಿಚಾರಕರು ತಮ್ಮ ‘ಗ್ರಾಮ ಭೇಟಿ’ ಕಾರ್ಯಕ್ರಮವನ್ನು ಕೂಡಾ ವಾರದ ಯೋಜಿತಕ್ಕೆ ಹೊಂದಿಸಿಕೊಳ್ಳಬೇಕಾಗಿದೆ. ಉದಾಹರಣೆಗೆ, ತಿಂಗಳ ಮೊದಲ ವಾರ ಸೋಮವಾರದಿಂದ ಶುಕ್ರವಾರದವರೆಗೆ 5 ದಿನ ಗ್ರಾಮ ಭೇಟಿ ಮಾಡಿದರೆ, ಎರಡನೇ ವಾರ ಮಂಗಳವಾರದಿoದ ಶನಿವಾರದವರೆಗೆ, 3ನೇ ವಾರ ಬುಧವಾರದಿಂದ ಭಾನುವಾರದವರೆಗೆ, ನಾಲ್ಕನೇ ವಾರ ಗುರುವಾರದಿಂದ ಸೋಮವಾರದವರೆಗೆ ಹೀಗೆ ವಾರ ಭೇಟಿಗಳನ್ನು ಪ್ರತ್ಯೇಕ ಪ್ರತ್ಯೇಕವಾದ ದಿನಗಳಲ್ಲಿ ಹೋಗುವಂತೆ, ಪ್ರತೀ ವಾರ ಹೊಂದಿಸಿಕೊoಡಲ್ಲಿ ಮೇಲ್ವಿಚಾರಕರಿಗೆ ಮತ್ತು ತತ್ಸಮಾನ ಸಿಬ್ಬಂದಿಗಳಿಗೆ ಎಲ್ಲಾ ಸಂಘಗಳನ್ನು ಖುದ್ದಾಗಿ ಭೇಟಿ ನೀಡಿ ಗಮನಿಸಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಎಲ್ಲಾ ಆಡಳಿತ ತಜ್ಞರುಗಳು ಮತ್ತು ಕಾರ್ಯಕರ್ತರುಗಳು ತುರ್ತಾಗಿ ಗಮನಹರಿಸುವರೆಂದು ನಾನು ಆಶಿಸುತ್ತೇನೆ. ಜೈ ಗ್ರಾಮಾಭಿವೃದ್ಧಿ ಯೋಜನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *