ಭಾರತದಲ್ಲಿ ಬಾಹ್ಯಾಕಾಶ ಉದ್ದಿಮೆ ಆಕಾಶದಷ್ಟು ಅವಕಾಶ

ಭವ್ಯಶ್ರೀ ಎಂ. ಎ.

ಯುರೋಪ್ ಖಂಡದ ಕೆಲ ದೇಶಗಳು, ಅಮೆರಿಕ ಸಂಯುಕ್ತ ಸಂಸ್ಥಾನ ಹೀಗೆ ಕೆಲವೇ ದೇಶಗಳ ಸ್ವತ್ತಾಗಿದ್ದ ‘ಬಾಹ್ಯಾಕಾಶ ಉದ್ದಿಮೆ’ ಎಂಬ ಸಂಕೀರ್ಣ ಉದ್ಯಮ ರಂಗದಲ್ಲಿ ಭಾರತ ತನ್ನ ಛಾಪನ್ನು ಮೂಡಿಸಲು ಪ್ರಾರಂಭಿಸಿದೆ.
ದೀಪಾವಳಿ ಹಬ್ಬ ಪ್ರಾರಂಭದ ಹಿಂದಿನ ದಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಂದು ಸಾವಿರ ಕೋಟಿ ರೂಪಾಯಿ ಶುಲ್ಕ ಪಡೆದು ಇಂಗ್ಲೆoಡ್ ಮೂಲದ ‘ಒನ್ ವೆಬ್’ ಸಂಸ್ಥೆಯ 36 ಉಪಗ್ರಹಗಳನ್ನು ಕಕ್ಷೆಗೆ ಸುರಕ್ಷಿತವಾಗಿ ತಲುಪಿಸಿದೆ. ಇಸ್ರೋ ಈ ಮೊದಲು ವಿದೇಶಿ ಉಪಗ್ರಹಗಳನ್ನು ಹಾರಿಸಿದ್ದ ಉದಾಹರಣೆ ಇದ್ದರೂ ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರಕ್ಕೆ ಕೈ ಹಾಕಿದ್ದು ಇದೇ ಮೊದಲು. ಇದರೊಂದಿಗೆ ಇಸ್ರೋ ಭಾರತದಲ್ಲಿ ಬಾಹ್ಯಾಕಾಶ ಉದ್ದಿಮೆ ಚಿಗಿತುಕೊಳ್ಳಲು ಸ್ಫೂರ್ತಿ ನೀಡಿದೆ.
ಖಗೋಲಕ್ಕೂ ಭಾರತಕ್ಕೂ ಪ್ರಾಚೀನ ಕಾಲದಿಂದಲೂ ನಿಕಟ ಸಂಬoಧವಿದೆ. ದೂರದರ್ಶಕ, ಉಪಗ್ರಹಗಳ ಪರಿಕಲ್ಪನೆಯೇ ಇಲ್ಲದ ಕಾಲದಲ್ಲೂ ನಕ್ಷತ್ರ, ಗ್ರಹಗಳ ಚಲನೆಯ ಬಗ್ಗೆ ನಿಕಟ ಅರಿವು ಹೊಂದಿದ್ದ ನಿಸ್ಸೀಮರು ನಮ್ಮ ಪೂರ್ವಜರು. ಈ ಪರಂಪರೆಯನ್ನು 1969ರಲ್ಲಿ ಪ್ರಾರಂಭಗೊoಡ ‘ಇಸ್ರೋ’ ಇನ್ನೊಂದು ಮಜಲಿಗೆ ಕೊಂಡೊಯ್ದಿದೆ. ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುತೇಕ ಸ್ವಾವಲಂಬಿ ಆಗಿದೆ. ಇದೀಗ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ರೂಪುಗೊಳ್ಳುವ ಹಂತದಲ್ಲಿರುವ ಇಸ್ರೋ ತನ್ನ ಸಾಮರ್ಥ್ಯವನ್ನು ಬಳಸಿ ಆದಾಯ ಕಂಡುಕೊಳ್ಳಲು ಮುಂದಾಗಿದೆ. ಇದಕ್ಕಾಗಿ 2019ರಲ್ಲಿ ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಇಸ್ರೋವನ್ನು ಆರ್ಥಿಕವಾಗಿ ಸದೃಢಗೊಳಿಸುವುದರ ಜೊತೆಗೆ ಭಾರತದಲ್ಲಿ ಬಾಹ್ಯಾಕಾಶ ಸಂಬoಧಿ ಉದ್ದಿಮೆಗಳ ಅಭಿವೃದ್ಧಿಗೆ ಪೂರಕವಾಗಲಿದೆ.
ಕಳೆದ ಶತಮಾನದ ಮಧ್ಯಭಾಗದಿಂದ ಉಪಗ್ರಹ ಉಡಾವಣೆ ಪ್ರಕ್ರಿಯೆ ಮುನ್ನೆಲೆಗೆ ಬಂದಿತ್ತು. ಆದರೆ ಆಗ ಈ ಕ್ಷೇತ್ರ ಸಂಪೂರ್ಣವಾಗಿ ಆಯಾ ದೇಶಗಳ ಸರ್ಕಾರದ ವಶದಲ್ಲಿತ್ತು. ಅದರಲ್ಲೂ ಯು.ಎಸ್.ಎಸ್.ಆರ್. (ಆಗಿನ ರಷ್ಯಾ) ಮತ್ತು ಅಮೆರಿಕದ್ದೆ ಪಾರುಪತ್ಯವಿತ್ತು. ೧೯೭೫ರಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ರಂಗ ಪ್ರವೇಶಿಸಿತು. ಆದರೆ 1990ರ ಬಳಿಕ ಅದರಲ್ಲೂ ಸಂಪರ್ಕ ಕ್ರಾಂತಿ ಘಟಿಸುತ್ತಿದ್ದಂತೆ ಸಂವಹನ ಉಪಕರಣಗಳಿಗೆ ಭಾರಿ ಬೇಡಿಕೆ ಕುದುರಿತು. ಈ ಹಂತದಲ್ಲಿ ಸಂವಹನ, ಮಿಲಿಟರಿ, ಹವಾಮಾನ ಅಧ್ಯಯನ, ಗೂಢಚರ್ಯೆ ಉಪಗ್ರಹಗಳು ದೊಡ್ಡ ಸಂಖ್ಯೆಯಲ್ಲಿ ಭೂ ಕಕ್ಷೆಯನ್ನು ಸೇರಿಕೊಂಡವು. ಸಾಂಪ್ರದಾಯಿಕ ಉಡಾವಣಾ ಶಕ್ತಿಗಳಾಗಿದ್ದ ರಷ್ಯಾ, ಅಮೆರಿಕ, ಯುರೋಪ್ ದೇಶಗಳ ಜೊತೆಗೆ ಚೀನಾ ಮತ್ತು ಭಾರತ ಕೂಡ ಈ ಕ್ಷೇತ್ರದಲ್ಲಿ ಬಲವಾದ ಹೆಜ್ಜೆಯನ್ನು ಈ ಅವಧಿಯಲ್ಲಿ ಮೂಡಿಸಲು ಪ್ರಾರಂಭಿಸಿದವು.
೨೦೦೦ನೇ ಇಸವಿಯ ಬಳಿಕ ಖಾಸಗಿ ಸಂಸ್ಥೆಗಳು ವಾಣಿಜ್ಯ ಬಳಕೆಗಾಗಿ ಉಪಗ್ರಹ (ಸೆಟಲೈಟ್)ಗಳನ್ನು ಹಾರಿ ಬಿಡಲು ಉತ್ಸಾಹ ತೋರಲು ಪ್ರಾರಂಭಿಸಿದವು. ಈ ಅವಕಾಶವನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗಿ ಉಪಗ್ರಹಗಳನ್ನು ಹಾರಿ ಬಿಡಲು ೨೦೧೦ರ ಹೊತ್ತಿಗೆ ಮುಂದೆ ಬಂದವು.
ಕೆಲ ದಶಕಗಳ ಹಿಂದೆ ತನ್ನ ಉಪಗ್ರಹಗಳನ್ನು ಹಾರಿಸಲು ಭಾರತ ವಿದೇಶಿ ಏಜೆನ್ಸಿಗಳನ್ನು ಅವಲಂಬಿಸಿದ್ದರೆ ಇದೀಗ ಕಾಲಚಕ್ರ ಬದಲಾಗಿ ಸದ್ಯ ಭಾರತವೇ ಹಲವು ದೇಶಗಳ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುತ್ತಿದೆ. ಆದರಲ್ಲೂ ಭಾರತದ ರಾಕೆಟ್‌ಗಳ ಯಶಸ್ಸಿನ ದರ ಅತ್ಯಧಿಕವಾಗಿದೆ. ಹಾಗೆಯೇ ಉಡಾವಣಾ ವೆಚ್ಚವೂ ಕಡಿಮೆ ಇದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾಗಿರುವ ಈ ಎರಡು ಮಾನದಂಡಗಳಲ್ಲಿ ಇಸ್ರೋದ ಸಾಧನೆಯನ್ನು ಪರಿಗಣಿಸಿ ವಿದೇಶಿ ಸಂಸ್ಥೆಗಳು ತಮ್ಮ ಉಪಗ್ರಹವನ್ನು ಹಾರಿ ಬಿಡುವಂತೆ ಇಸ್ರೋವನ್ನು ಕೇಳಿಕೊಳ್ಳುತ್ತಿವೆ.
ಫೋರ್ಚುನ್ ಬ್ಯುಸಿನೆಸ್ ಇನ್‌ಸೈಟ್ಸ್ರ ಪ್ರಕಾರ 2021ರಲ್ಲಿ ಜಾಗತಿಕ ಬಾಹ್ಯಾಕಾಶ ಉಡಾವಣೆ ಮಾರುಕಟ್ಟೆಯ ಮೌಲ್ಯ 12.67 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು.2029ಕ್ಕೆ ಇದು 31.90 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ಸಂಭವವಿದೆ. ನಕ್ಷೆ, ಖನಿಜ ಅನ್ವೇಷಣೆ, ಭೂ ಬಳಕೆಯ ಯೋಜನೆ, ಅನ್ಯಗ್ರಹಗಳಲ್ಲಿ ಸಂಶೋಧನೆ, ಖಗೋಲ ಅಧ್ಯಯನ ಮುಂತಾದ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಪಗ್ರಹಗಳು ಉಡಾವಣೆಗೊಳ್ಳಲಿವೆ.
ದೇಶಕ್ಕೇನು ಲಾಭ
ಸುಮಾರು ೯೦ ದೇಶಗಳು ಬಾಹ್ಯಾಕಾಶ ರಂಗದಲ್ಲಿ ಸಕ್ರಿಯವಾಗಿದ್ದು ಹತ್ತು ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ಬಾಹ್ಯಾಕಾಶ ಸಂಬAಧಿ ಕ್ಷೇತ್ರದಲ್ಲಿವೆ. ಇದೆಲ್ಲದರ ಮಧ್ಯೆ ನಮ್ಮ ಇಸ್ರೋ ಸಂಸ್ಥೆಗೆ ಉತ್ತಮ ಹೆಸರಿದೆ. ಇದರಿಂದಾಗಿ ಹಲವು ಸಂಸ್ಥೆಗಳು ಇಸ್ರೋದ ರಾಕೆಟ್ ಮೂಲಕ ತಮ್ಮ ಉಪಗ್ರಹಗಳನ್ನು ಹಾರಿಸುವಂತೆ ಕೋರಲಿವೆ. ಇದರಿಂದಾಗಿ ದೇಶಕ್ಕೆ ಆರ್ಥಿಕವಾಗಿ ಪ್ರಯೋಜನವಾಗಲಿದ್ದು ಬಾಹ್ಯಾಕಾಶ ರಂಗದ ಸಂಶೋಧನೆಗಳಿಗೆ ಒತ್ತು ಸಿಗಲಿದೆ. ಅದೇ ರೀತಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬoಧಿಸಿದ ಉದ್ದಿಮೆಗಳು ಚಿಗಿತುಕೊಳ್ಳಲಿವೆ. ಬಾಹ್ಯಾಕಾಶಕ್ಕೆ ಒಯ್ಯುವ ಉಪಕರಣಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಲಿದೆ. ಇದೆಲ್ಲದರ ಪರಿಣಾಮವಾಗಿ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿದೆ.
ಕೇಂದ್ರ ಸರ್ಕಾರ ಕಳೆದ ಮುಂಗಾರು ಅಧಿವೇಶನದಲ್ಲಿ ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ 279 ಮಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯವನ್ನು ಇಸ್ರೋ ತನ್ನ ರಾಕೆಟ್ ಉಡಾವಣೆಯ ವಾಣಿಜ್ಯ ಚಟುವಟಿಕೆಯಿಂದ ಗಳಿಸಿದೆ.
ನಮಗೇನು ಪ್ರಯೋಜನ
ವಿಶ್ವದಲ್ಲೇ ಅಮೆರಿಕ, ಚೀನಾ ಮತ್ತು ಬ್ರಿಟನ್ ಬಳಿಕ ಅತಿ ಹೆಚ್ಚು ಬಂಡವಾಳವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿರುವ ದೇಶ ಭಾರತ. ಆದ್ದರಿಂದ ಈ ಕ್ಷೇತ್ರದಲ್ಲಿನ ಬೆಳವಣಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಮ್ಮ ಜನಜೀವನವನ್ನು ಪ್ರಭಾವಿಸಬಲ್ಲದು. ಡಿಜಿಟಲ್ ತಂತ್ರಜ್ಞಾನದಿoದ ಹವಾಮಾನ ಬದಲಾವಣೆಯ ಅರಿವಿನ ತನಕ ಉಪಗ್ರಹಗಳ ಹರವಿದೆ. ಆದ್ದರಿಂದ ಹವಾಮಾನ, ಇಂಧನ, ಸಂವಹನ, ವಿಮೆ, ನಗರ ಯೋಜನೆ, ಸಾರಿಗೆ, ಸಾಗರ ಸಂಬoಧಿ ವಿದ್ಯಮಾನ, ಕೃಷಿ, ವಿಮಾನಯಾನ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುವುದು ನಿಶ್ಚಿತ.
ಹಾಗೆಯೇ 2000ನೇ ಇಸವಿಯ ಆಸುಪಾಸಿನಲ್ಲಿ ಪ್ರಾರಂಭಗೊoಡ ಐಟಿ ಕ್ಷೇತ್ರ ಹೇಗೆ ಉದ್ಯೋಗ ಸೃಷ್ಟಿಸಿತ್ತೋ ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ರಂಗದಲ್ಲೂ ಅವಕಾಶಗಳು ಸೃಜಿಸಬಹುದು. 2019ರ ಜೂನ್‌ವರೆಗಿನ ಮಾಹಿತಿ ಪ್ರಕಾರ ಭಾರತ 33 ದೇಶಗಳ 320ಕ್ಕೂ ಹೆಚ್ಚು ಉಪಗ್ರಹಗಳನ್ನು ಪಿ.ಎಸ್.ಎಲ್.ವಿ. (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮೂಲಕ ಹಾರಿಸಿದೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಇದರಿಂದಾಗಿ ಬಾಹ್ಯಾಕಾಶ ಸಂಬoಧಿ ಸಂಶೋಧನೆ, ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ, ಬಾಹ್ಯಾಕಾಶ ಸಂಬoಧಿ ಉದ್ದಿಮೆಯಲ್ಲಿ ತೊಡಗಿರುವ ನವೋದ್ಯಮಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ.

ಯುರೋಪ್‌ನ ಅರಿಯಾನ್ ೫, ವೇಗಾ, ರಷ್ಯಾದ ಪ್ರೊಟೋನ್ ಎಂ, ಸೂಯೊಜ್ 2, ಭಾರತದ ಪಿ.ಎಸ್.ಎಲ್.ವಿ., ಅಮೆರಿಕದ ಫಾಲ್ಕನ್ 9, ಎಲೆಕ್ಟ್ರಾನ್, ಚೀನಾದ ಕೂಯ್ಜೋ 1ಎ ಮುಂತಾದ ರಾಕೆಟ್‌ಗಳು ವಾಣಿಜ್ಯ ಬಳಕೆಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಸಮರ್ಥವಾಗಿವೆ. ಭಾರತವು ಎಲ್.ವಿ.ಎಂ. 3 – ಎಂ. 2 ಎಂಬ ಉಪಗ್ರಹವನ್ನು ರಾಕೆಟ್ ಬಳಸಿ ಇತ್ತೀಚೆಗೆ ಉಡಾವಣೆಗೊಳಿಸಿತ್ತು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates