ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ನನ್ನ ಕೋಣೆಯ ಕಿಟಕಿಯಿಂದ ನೋಡಿದರೆ ಕಾಣುವ ಅನೇಕ ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷವೂ ಒಂದು. ಈ ವೃಕ್ಷವು ಬೃಹದಾಕಾರವಾಗಿ ಸದಾ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ರಾತ್ರಿ ಆದೊಡನೆ ಈ ವೃಕ್ಷ ಸಾವಿರಾರು ಹಕ್ಕಿಗಳಿಗೆ ತಂಗಲು ಆಸರೆಯಾಗುತ್ತದೆ. ಬೆಳಗ್ಗಿನ ಜಾವ ನೋಡಿದರೆ ಐದಾರು ಮಂದಿಯಾದರೂ ವೃಕ್ಷಕ್ಕೆ ಭಕ್ತಿಯಿಂದ ಸುತ್ತು ಬರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಂತೂ ಮರ ಎಲೆಗಳನ್ನು ಹೊದ್ದುಕೊಂಡು ಹಸಿರಾಗಿ ಕಂಗೊಳಿಸುವುದನ್ನು ನೋಡುವುದೇ ಒಂದು ರೀತಿಯ ಆನಂದ. ಆದರೆ ಚಳಿಗಾಲ ಬಂದೊಡನೆ ಒಂದೊoದೆ ಎಲೆಗಳನ್ನು ಕಳಚಿಕೊಂಡು ಮರ ದಿನೇ ದಿನೇ ಬೋಳಾಗುತ್ತಿರುವುದನ್ನು ಕಂಡಾಗ ಒಂದು ರೀತಿಯಲ್ಲಿ ಬದುಕಿನ ನಶ್ವರತೆಯ, ವೈರಾಗ್ಯದ ಭಾವ ಮನಸ್ಸಿನಲ್ಲಿ ಮೂಡುವುದು ಸುಳ್ಳಲ್ಲ. ಆದರೆ ಚಳಿಗಾಲದಲ್ಲಿ ಮರ ಒಣಗಿದ್ದರೂ ಅದರ ಸತ್ವ ಒಣಗಿಲ್ಲವೆಂಬ ಸತ್ಯ ಭಕ್ತರಿಗೆ ಗೊತ್ತು. ಅದ್ದರಿಂದ ಅವರು ಮರಕ್ಕೆ ತಮ್ಮ ಭಕ್ತಿಯನ್ನು ತೋರ್ಪಡಿಸುವುದನ್ನು ನಿಲ್ಲಿಸುವುದಿಲ್ಲ.
‘ಚಳಿಗಾಲದ ಬಿಸಿಲಿಗೆ ಆನೆಯ ಚರ್ಮವೂ ಒಡೆಯುತ್ತದೆ’ ಎಂಬ ಮಾತಿದೆ. ಚಳಿಗಾಲದ ಸಮಯದಲ್ಲಿ ಮನುಷ್ಯನ ಚರ್ಮದ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಸುಕ್ಕುಗಟ್ಟಿದ ಮೈಯ ಚರ್ಮದ ರಕ್ಷಣೆಗಾಗಿ ಎಣ್ಣೆ, ಕ್ರೀಮ್‌ಗಳನ್ನು ಎಷ್ಟೇ ಹಚ್ಚಿ ಉಜ್ಜಿದರೂ, ಮೈಯನ್ನು ಸ್ವಲ್ಪ ಕೆರೆದುಕೊಂಡರೆ ಅಲ್ಲೆಲ್ಲಾ ಉರಿ ಬರುತ್ತದೆ. ಚಳಿಗಾಲದಲ್ಲಿ ಕಾಲಿನ ಹಿಮ್ಮಡಿ ಒಡೆತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾನಾ ರೀತಿಯ ಮುಲಾಮುಗಳು ಮಾರುಕಟ್ಟೆಗೆ ಬಂದಿವೆ. ಕಾಲು ಒಡೆಯುವುದೆಂದರೆ ಅದೊಂದು ದೊಡ್ಡ ತಪ್ಪು ಎಂಬoತೆ ಬಿಂಬಿಸುವ ಮುಲಾಮುಗಳ ವಿಶೇಷ ಜಾಹೀರಾತು ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುತ್ತದೆ.
ಗಿಡದ ಎಲೆ, ಹೂವುಗಳಂತೂ ಸೂರ್ಯ ಉದಯಿಸಿದ ಮೇಲೂ ಇನ್ನೂ ಚಳಿ ಬಿಟ್ಟಿಲ್ಲವೆಂಬoತೆ ಪೂರ್ತಿ ಅರಳಿರುವುದಿಲ್ಲ ಮುದುಡಿಕೊಂಡಿರುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಚಳಿಯ ಕಾಟ ಅಷ್ಟಿಲ್ಲ. ಇತ್ತಾದರೂ ಇಲ್ಲಿ ಇತ್ತೀಚೆಗೆ ಚಳಿಗಾಲ ಕಡಿಮೆಯಾಗಿ ಈಗ ಬೇಸಿಗೆ, ಮಳೆಗಾಲ ಎರಡೇ ಅನ್ನುವಂತಾಗಿದೆ. ಆದರೆ ಧಾರವಾಡ, ಕುದುರೆಮುಖ, ಸಂಸೆ ಕಡೆ ಹೋದರೆ ಅಲ್ಲಿಯ ಜನ ‘ಅಬ್ಬಾ ಇಲ್ಲಿ ಎಂಥಾ ಚಳಿ’ ಎಂದು ಚಳಿಯನ್ನು ಉಲ್ಲೇಖಿಸುತ್ತಲೆ ಮಾತು ಆರಂಭಿಸುತ್ತಾರೆ. ಕುದುರೆಮುಖ ಪ್ರಾಜೆಕ್ಟ್ ಆಗುವ ಮೊದಲಂತೂ ಹೊರನಾಡು, ಸಂಸೆ, ಕಳಸದ ಚಳಿಯನ್ನು ಊಹಿಸಲು ಸಾಧ್ಯವಿಲ್ಲ. ಅಲ್ಲಿ ಎಷ್ಟು ಕಂಬಳಿ ಚಳಿ? ಎನ್ನುವುದರ ಮೇಲೆ ಚಳಿಯ ಲೆಕ್ಕಾಚಾರ ಶುರುವಾಗುತ್ತಿತ್ತು. ಚಳಿಗಾಲದಲ್ಲಿ ಎಲ್ಲಾ ಮನೆಗಳಲ್ಲೂ ಕಾಫಿ ಒಲೆ ಮೇಲೆ ಸದಾ ಕುದಿಯುತ್ತಿರುತ್ತಿತ್ತು. ಈ ಊರು ಹೇಗೂ ಕಾಫಿ ಬೆಳೆಯುವ ಪ್ರದೇಶ, ಅಲ್ಲಿ ಬಿಸಿ ಬಿಸಿ ಕಾಫಿಯನ್ನು ಕುಡಿಯುವುದರ ಮಜಾವೇ ಬೇರೆ. ಜನರೆಲ್ಲಾ ಕಂಬಳಿಯನ್ನು ತಲೆಗೂ, ಮೈಗೂ ಹೊದ್ದುಕೊಂಡು ಓಡಾಡುತ್ತಿರುತ್ತಿದ್ದರು. ಮಾತ್ರವಲ್ಲ ಹೆಚ್ಚಿನ ಮನೆಗಳಲ್ಲಿ ತುಪ್ಪ ಹಾಕಿ ಮಾಡಿದ ಮೆಂತ್ಯೆ ಅಡುಗೆ, ಕಾಯಿಸಿದ ಅಪ್ಪ, ಚಕ್ಕುಲಿ ಇದ್ದೇ ಇರುತ್ತಿತ್ತು. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಇಂದಿಗೂ ಆ ಊರುಗಳಲ್ಲಿ ಚಳಿಯ ಪ್ರಮಾಣ ಜಾಸ್ತಿಯೇ ಇದೆ. ಬೆಂಗಳೂರಿನಲ್ಲೂ ಒಂದು ಕಾಲದಲ್ಲಿ ಎಷ್ಟು ಚಳಿ ಇತ್ತು ಎಂದರೆ ಬೆಂಗಳೂರಿಗೆ ಹೋದರೆ ಕಾಲಿಗೆ, ಕೈಗೆ ಸಾಕ್ಸ್ ಹಾಕದೆ, ಶಾಲು ಹೊದ್ದುಕೊಳ್ಳದೆ ಹೊರಗೆ ಬರುವಂತಿರಲಿಲ್ಲ. ಈಗ ಅದೆಲ್ಲ ಮಾಯವಾಗಿದೆ.
ಎಲ್ಲೋ ಮರೆಯಾಗಿದ್ದ ಗಂಟುನೋವು, ಬೆನ್ನುನೋವು, ಸೆಳೆತಗಳಿಗೆಲ್ಲಾ ಚಳಿಗಾಲದ ನಂಟು ಇದೆ. ಪರಸ್ಪರ ಹಿರಿಯರ ಭೇಟಿ ಆದಾಗ ಅವರ ಮಾತುಕತೆ ಆರಂಭ ಆಗುವುದೇ ನೋವಿನ ಸರಮಾಲೆಗಳೊಂದಿಗೆ. ಇನ್ನು ನೋವು ಅಂದ ತಕ್ಷಣ ಹಾಗೇ ಬಿಡುವುದುಂಟೇ. ಬೇರೆ ಬೇರೆ ಕಂಪನಿಗಳ ಬೇರೆ ಬೇರೆ ಹೆಸರಿನ ಎಣ್ಣೆಗಳನ್ನು ಒಮ್ಮೆ ಹಚ್ಚಿ ನೋಡಿ, ತುಂಬಾ ಒಳ್ಳೆಯದಾಗುತ್ತದೆ ಎಂಬ ಉಚಿತವಾದ ಸಲಹೆಯನ್ನು ಕೊಟ್ಟೇ ಕೊಡುತ್ತಾರೆ. ಇವುಗಳಿಂದ ಮೊದಲೇ ಬೀರು ತುಂಬಾ ತುಂಬಿಕೊoಡಿರುವ ಎಣ್ಣೆ, ಮುಲಾಮುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಆಗುತ್ತದೆ ಅಲ್ಲದೇ ನೋವು ಮಾತ್ರ ಕಡಿಮೆ ಆಗುವುದು ಅಪರೂಪ.
ಹಾಗಂತ ಚಳಿಗಾಲದಲ್ಲಿ ಅದರದ್ದೇ ಆದ ಅನುಕೂಲಗಳು ಬಹಳಷ್ಟಿವೆ. ಬೆಳಗ್ಗಿನ ಚಳಿಗೆ ಕಂಬಳಿ ಹೊದ್ದು ಮಲಗುವ ಖುಷಿಯೇ ಬೇರೆ. ತಡವಾಗಿ ಎದ್ದರೂ ಹಿತವಾದ ಬಿಸಿಲಿಗೆ ಮೈಯೊಡ್ಡಿ ಅಥವಾ ಹಿಂದಿನ ಕಾಲದಲ್ಲಾಗಿದ್ದರೆ ಬಚ್ಚಲು ಮನೆ ಒಲೆಯ ಎದುರು ಮೈ ಕಾಯಿಸಿಕೊಳ್ಳುತ್ತಾ ಹರಟುವ ಸುಖವೇ ಭಿನ್ನವಾದುದು. ಮಹಿಳೆಯರಿಗಂತೂ ಸಾಮಾನ್ಯವಾಗಿ ಇತರ ಋತುಗಳಲ್ಲಿ ಅಡುಗೆ ಮನೆಯಲ್ಲಿ ಬೆಂಕಿಯ ಸೆಖೆಗೆ ಬೆವರು ಸುರಿಯುವ ಅನುಭವವಾದರೆ ಚಳಿಗಾಲದಲ್ಲಿ ಮಾತ್ರ ಅಡುಗೆ ಒಲೆ ಎದುರು ನಿಂತು ಅಡುಗೆ ಮಾಡುವುದೇ ಒಂದು ಹಿತಕರ ಅನುಭವ. ಇನ್ನು ಚಳಿಗಾಲದಲ್ಲಂತೂ ಸಾಮಾನ್ಯವಾಗಿ ಸಂಜೆಯಾಗುತ್ತಿದ್ದoತೆ ಚಳಿ ಆರಂಭವಾಗಿ ಬಿಡುತ್ತದೆ. ಈ ಸಮಯದಲ್ಲಿ ಸಾಯಂಕಾಲ ಬಿಸಿ ಕಾಫಿಯ ಜೊತೆಗೆ ಏನಾದರೂ ಕುರುಕಲು ತಿಂಡಿ, ಹಪ್ಪಳ ಸವಿಯುವುದು ಎಂದರೆ ಯಾರಿಗೆ ಹಿತವಾಗಲ್ಲ ಹೇಳಿ! ಅಲ್ಲದೆ ಚಳಿಗಾಲದಲ್ಲಿ ಮೈಯಲ್ಲಿ ಎಣ್ಣೆಯ ಪಸೆ ಕಡಿಮೆ ಆಗುವುದರಿಂದ ಎಣ್ಣೆ, ತುಪ್ಪವನ್ನು ಧಾರಾಳವಾಗಿ ಬಳಸಿದರೆ ಮೈಗೂ ಹಿತ ಅನ್ನೋದು ಚಳಿ ಪ್ರದೇಶದವರ ಅಂಬೋಣ.
ನದಿ, ತೊರೆಗಳು ಬೇಸಿಗೆಯಲ್ಲಿ ಬತ್ತಿ ಮತ್ತೆ ಮಳೆಗಾಲದಲ್ಲಿ ಮೈ ತುಂಬಿಕೊಳ್ಳುವoತೆ ಚಳಿಗಾಲಕ್ಕೆ ಮೈ ಮೇಲಿನ ಎಲ್ಲಾ ಪರಿಗ್ರಹಗಳನ್ನು ತೊರೆದು ಧ್ಯಾನಸ್ಥ ಸ್ಥಿತಿಯಲ್ಲಿ ಬೋಳಾಗಿ ನಿಂತ ಮರ-ಗಿಡಗಳ ಒಳಗೆ ಮುಂದೆ ಬರುವ ಬೇಸಿಗೆಗೆ ಹೂ, ಹಣ್ಣು, ನೆರಳು ಆಶ್ರಯ ನೀಡಬೇಕೆಂಬ ಬೃಹತ್ ಸಂಕಲ್ಪ ಇರುತ್ತದೆ. ಅದಕ್ಕಾಗಿ ಮರದ ಸತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ತ್ಯಾಗ. ಓರ್ವ ಹೆಣ್ಣು ಮಗಳೂ ಬಸುರಿಯಾದ 3 – 4 ತಿಂಗಳು ನಾನಾ ರೀತಿಯಲ್ಲಿ ಸಂಕಟ ಪಡುತ್ತಿರುತ್ತಾಳೆ. ವಾಂತಿ, ಊಟ ಸೇರಲ್ಲ, ವಾಸನೆ ಆಗಲ್ಲ ಹೀಗೆಲ್ಲಾ ಒಬ್ಬೊಬ್ಬರದ್ದು ಒಂದೊoದು ರೀತಿ. ಆಗ ಮನೆಯ ಹಿರಿಯರು ಈ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳುವುದಿಲ್ಲ. ಇದೆಲ್ಲಾ ಇದ್ದದ್ದೇ ಮುಂದೆ ಸರಿ ಆಗುತ್ತೆ. ಸುಮ್ನೆ ರೆಸ್ಟ್ ತಗೋ ಅಂತಿರ್ತಾರೆ. ಆದರೆ ಯಾವಾಗ ಈ ಬಸುರಿನ ಸಂಕಟಗಳೆಲ್ಲಾ ಮಾಯವಾಗುತ್ತವೆಯೂ ಆಗ ಆಕೆಗೆ ಬೇಕಾದಂತೆ ಬಾಯಿಗೊಪ್ಪುವ ತಿಂಡಿ ತಿನಸು ಪೌಷ್ಟಿಕ ಆಹಾರಗಳನ್ನು ಕೊಟ್ಟು ಆರೈಕೆ ಮಾಡುತ್ತಾರೆ.
ಚಳಿ ಇರಲಿ, ಮಳೆ ಇರಲಿ, ಬೇಸಿಗೆಯೇ ಇರಲಿ ಎಲ್ಲ ಕಾಲದಲ್ಲೂ ಮನುಷ್ಯರ ಗೊಣಗಾಟವಂತೂ ಇದ್ದೇ ಇರುತ್ತದೆ. ಆದರೆ ಈ ಹವಾಮಾನ ಬದಲಾವಣೆಯೇ ಸಕಲ ಜೀವ ಜಂತು, ಗಿಡ-ಮರಗಳಿಗೆ ಪ್ರೇರಣೆ, ಪೋಷಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಆಯಾ ಕಾಲದ ಅನುಕೂಲತೆಗಳಿಗಾಗಿ ಖುಷಿಪಡುತ್ತಾ ಅನಾನುಕೂಲಗಳ ಬಗ್ಗೆ ಚಿಂತಿಸದೆ ‘ಇದು ಕಳೆದು ಬಿಡುತ್ತದೆ’ ಎಂಬ ದಿವ್ಯ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡು ಗೊಣಗದೆ ಅಂದoದಿನ ದಿನಗಳಿಗೆ ಹೊಂದಿಕೊಳ್ಳೋಣ. ಎಲ್ಲ ಋತುಗಳ ಸವಿಯನ್ನು ಸವಿಯೋಣ.