ಸ್ವಸಹಾಯ ಸಂಘದಲ್ಲಿ ವ್ಯವಹಾರ ಸರಳ – ಆಕರ್ಷಕ

ಡಾ| ಎಲ್.ಎಚ್. ಮಂಜುನಾಥ್

ಬಂಧುಗಳೇ, ಬೆಳ್ತಂಗಡಿ ತಾಲೂಕಿನಲ್ಲಿ 1991ರಲ್ಲಿ ಪ್ರಾರಂಭಗೊoಡ ‘ಸ್ವಸಹಾಯ ಸಂಘ ಚಳುವಳಿ’ಗೆ ಇದೀಗ ಮೂರು ದಶಕಗಳಾಗಿವೆ. ಈ ಅವಧಿಯಲ್ಲಿ ಅನೇಕ ಸಾಧನೆಗಳನ್ನು ಪಟ್ಟಿ ಮಾಡಬಹುದು. ಬ್ಯಾಂಕ್ ವ್ಯವಹಾರಗಳನ್ನು ಸ್ವಸಹಾಯ ಸಂಘದ ಬಾಗಿಲಿಗೆ ತಂದಿರುವುದು ವಿಶೇಷ ಸಾಧನೆ ಎಂದು ಹೇಳಬಹುದು. ಸಾಮಾನ್ಯ ಜನರಿಗೆ ಬ್ಯಾಂಕಿನ ಖಾತೆಯನ್ನು ತೆರೆಯಿಸಿಕೊಟ್ಟಿದ್ದಲ್ಲದೆ ಸಂಘದಿoದ ಅವರಿಗೆ ದೊರೆಯುವ ಪ್ರಗತಿನಿಧಿ ಮೊತ್ತವನ್ನು ಅವರ ಖಾತೆಗೆ ತಲುಪುವಂತೆ ಮಾಡಿದ್ದು ಈ ಚಳುವಳಿಯ ಹೆಗ್ಗಳಿಕೆ. ಪ್ರಾರಂಭದಲ್ಲಿ ಸಣ್ಣ ಮೊತ್ತದ ಪ್ರಗತಿನಿಧಿ ಸಾಲದಿಂದ ಪ್ರಾರಂಭಗೊoಡ ಯೋಜನೆ, ತಮಗೆ ಬೇಕಾಗುವ ಹಣದ ಮೊತ್ತವನ್ನು ಬ್ಯಾಂಕುಗಳಿoದ ಯಾವಾಗಬೇಕೆಂದರೆ ಆವಾಗ ಕೊಡಿಸುವ ಶಕ್ತಿಯನ್ನು ಬೆಳೆಸಿಕೊಂಡದ್ದು ಕೂಡಾ ಸಂಘಗಳ ಸಾಧನೆಯೆ ಹೌದು. ಇದರ ಜೊತೆಯಲ್ಲಿ ಸಂಘಗಳ ಸದಸ್ಯರು ವ್ಯಾವಹಾರಿಕ ಶಿಸ್ತನ್ನು ಬೆಳೆಸಿಕೊಂಡಿದ್ದಲ್ಲದೆ ಸಾಮಾಜಿಕವಾಗಿ ಹೆಚ್ಚು ಆತ್ಮವಿಶ್ವಾಸದಿಂದ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಆದದ್ದು ಸ್ವಸಹಾಯ ಸಂಘಗಳ ಮಹಿಮೆಯೇ ಸರಿ.
ಇದೀಗ ಎಲ್ಲರ ಕೈಗೂ ಮೊಬೈಲ್ ಬಂದ ನಂತರ ಸಂಘಗಳ ವ್ಯವಹಾರ ನಿರ್ವಹಣೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಂಘದ ಸದಸ್ಯರು ತಮಗೆ ಬೇಕಾಗುವ ಪ್ರಗತಿನಿಧಿ ಬೇಡಿಕೆಯನ್ನು ನೇರವಾಗಿ ಯೋಜನೆಯ ಅಧಿಕಾರಿಗಳಿಗೆ ಮೊಬೈಲ್ ಮುಖಾಂತರ ತಲುಪಿಸಬಹುದಾದ ‘ಮೊಬೈಲ್ ಆ್ಯಪ್’ ಅನ್ನು ಅಭಿವೃದ್ಧಿಪಡಿಸಿದ್ದು ಈ ಆ್ಯಪ್ ಅನ್ನು ಎಲ್ಲ ಸದಸ್ಯರು ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ.
ಫೆಬ್ರವರಿ ತಿಂಗಳ ನಿವೇದನೆಯಲ್ಲಿ ಎಸ್.ಕೆ.21 ಡಿಜಿಟಲೀಕರಣದ ಬಗ್ಗೆ ವಿಸ್ತೃತವಾಗಿ ಉಲ್ಲೇಖಿಸಿರುತ್ತೇನೆ. ಇದರ ಮುಂದುವರಿದ ಭಾಗವಾಗಿ ಇದೀಗ ಸದಸ್ಯರಿಗೆ ಒದಗಿಸಲಾಗುವ ಈ ಆ್ಯಪ್‌ನಿಂದ ಕೇವಲ ಒಂದು ವಾರದ ಒಳಗೆ ಪ್ರಗತಿನಿಧಿಯನ್ನು ಒದಗಿಸುವ ಸರಳ ವ್ಯವಸ್ಥೆಯನ್ನು ಯೋಜನೆಯು ಮಾಡಿಕೊಂಡಿದ್ದು, ಇದೇ ಏಪ್ರಿಲ್ ಒಂದರಿoದ ಎಸ್.ಕೆ.21ರ ಡಿಜಿಟಲೀಕರಣ ಮತ್ತು ಆ್ಯಪ್ ಮುಖಾಂತರ ಪ್ರಗತಿನಿಧಿಗೆ ಅರ್ಜಿ ಸಲ್ಲಿಸುವ ವಿಧಾನವು ಜಾರಿಗೆ ಬರಲಿದೆ. ಇನ್ನು ಮೊಬೈಲ್ ಆ್ಯಪ್ ಅನ್ನು ಹಾಕಿಕೊಳ್ಳಲು ಸಾಧ್ಯವಿಲ್ಲದ ಸದಸ್ಯರು ತಮ್ಮ ಮೊಬೈಲ್‌ನಿಂದ ಯೋಜನೆಯ ಕೇಂದ್ರ ಕಚೇರಿಗೆ ನೇರವಾಗಿ ಕರೆ ಮಾಡಿ ತಮ್ಮ ಪ್ರಗತಿನಿಧಿ ಬೇಡಿಕೆಯನ್ನು ತಿಳಿಸಲು ಅನುಕೂಲವಾಗುವಂತೆ ಒಂದು ‘ಟೋಲ್ ಫ್ರೀ ಫೋನ್’ ವ್ಯವಸ್ಥೆಯನ್ನು ಕೂಡಾ ಏಪ್ರಿಲ್ ಒಂದರೊಳಗಾಗಿ ಮಾಡಲಾಗುವುದು. ಇದಾದ ನಂತರ ಯೋಜನೆಯ ಯಾವುದೇ ಸಂಘದ, ಯಾವುದೇ ಸದಸ್ಯರು ತಮಗೆ ಪ್ರಗತಿನಿಧಿ ಬೇಕೆಂದಕೂಡಲೇ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ, ಕೂಡಲೇ ಯೋಜನೆಯ ಕಾರ್ಯಕರ್ತರು ಬಂದು ಅವರಿಗೆ ಪ್ರಗತಿನಿಧಿ ದೊರಕಿಸುವ ವ್ಯವಸ್ಥೆಯನ್ನು ಮಾಡುವರು. ಇದರಿಂದಾಗಿ ಯೋಜನೆಯ ಸದಸ್ಯರುಗಳಿಗೆ ಇನ್ನಷ್ಟು ಸಹಾಯವಾಗಲಿದ್ದು ತಮ್ಮ ಪ್ರಗತಿನಿಧಿಯನ್ನು ಪಡೆದುಕೊಳ್ಳಲು ಸುಲಭವಾಗುವುದು.
ಮುಂದುವರಿದು ತಮ್ಮ ಸಂಘಗಳಿoದ ರೂ. 25 ಸಾವಿರವರೆಗಿನ ಸಣ್ಣ ಸಾಲಗಳನ್ನು ಪಡೆದುಕೊಳ್ಳಲು ಇನ್ನು ಮುಂದಕ್ಕೆ ಸದಸ್ಯರು ಯೋಜನೆಯ ಕಾರ್ಯಕರ್ತರಿಗಾಗಿ ಕಾಯುವ ಅವಶ್ಯಕತೆ ಇಲ್ಲ. ತಮ್ಮ ವಾರದ ಸಭೆಯಲ್ಲಿ ಸಣ್ಣ ಮೊತ್ತದ ಸಾಲದ ಬೇಡಿಕೆಯ ಬಗ್ಗೆ ನಿರ್ಣಯ ಮಾಡಿ ಆ ನಿರ್ಣಯ ಪುಸ್ತಕವನ್ನು ತಮ್ಮ ಗ್ರಾಮದಲ್ಲಿರುವ ‘ಗ್ರಾಹಕ ಸೇವಾ ಕೇಂದ್ರ’ (ಸಿ.ಎಸ್.ಸಿ.)ಕ್ಕೆ ತೆಗೆದುಕೊಂಡು ಬಂದು ಅದನ್ನು ತೋರಿಸಿ, ಕಂಪ್ಯೂಟರ್‌ನಲ್ಲಿ ದಾಖಲಿಸಿ ಸಾಲವನ್ನು ತಕ್ಷಣವೇ ಪಡೆದುಕೊಂಡು ಹೋಗಬಹುದಾದ ನೂತನ ವ್ಯವಸ್ಥೆಯನ್ನು ಕೂಡಾ ಏಪ್ರಿಲ್‌ನಿಂದ ಜಾರಿಗೆ ತರಲಾಗುವುದು.
ಇನ್ನು ಯೋಜನೆಗೆ ಹೊಸದಾಗಿ ಸೇರ್ಪಡೆಗೊಂಡ ಸಂಘಗಳ ಸದಸ್ಯರಿಗೆ ಪ್ರಥಮ ಸಾಲವಾಗಿ ಇದುವರೆಗೆ ಕಡಿಮೆ ಮೊತ್ತ ಸಿಗುತ್ತಿತ್ತು. ಇಂದಿನ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕುರಿತಂತೆ ಬ್ಯಾಂಕುಗಳು ಬಹಳ ದೊಡ್ಡ ಪರಿಷ್ಕರಣೆಯನ್ನು ಮಾಡಿದ್ದು ಮುಂದಕ್ಕೆ ಸಾಲ ಪಡೆಯಲು ಇಚ್ಛಿಸುವ ಹೊಸ ಸಂಘಗಳ ಸದಸ್ಯರಿಗೆ ಮೊದಲನೇ ಸಾಲವಾಗಿ ಮೂವತ್ತೆoದು ಸಾವಿರ ರೂಪಾಯಿ ಪ್ರಗತಿನಿಧಿಯನ್ನು ದೊರಕಿಸಿಕೊಡಲಾಗುವುದು. ಇದರಿಂದಾಗಿ ಹೊಸದಾಗಿ ಸಂಘಕ್ಕೆ ಸೇರ್ಪಡೆಯಾಗುವ ಸದಸ್ಯರು ತಮ್ಮ ತುರ್ತು ಅಗತ್ಯಗಳನ್ನು ತಕ್ಷಣವೇ ಪಡೆದುಕೊಳ್ಳಲು ಸಾಧ್ಯವಾಗುವುದು.
ಇದರ ಜೊತೆಯಲ್ಲಿಯೇ ಸಿಡ್ಬಿ ಸಂಸ್ಥೆಯಿoದ ಒದಗಿಸಲಾಗುವ ಪ್ರಯಾಸ್ ಸಾಲದ ಪ್ರಯೋಜನವನ್ನು ಪಡೆದುಕೊಂಡು ಸ್ವ ಉದ್ಯೋಗ ಮಾಡಲು ಬಯಸುವ ಸ್ವಸಹಾಯ ಸಂಘಗಳ ಸದಸ್ಯರಿಗೆ ರೂ.5 ಲಕ್ಷದವರೆಗೂ ಶೇ. 11 ರ ಬಡ್ಡಿದರದಲ್ಲಿ ಪ್ರಗತಿನಿಧಿ ಲಭ್ಯವಿದೆ. ಇದಲ್ಲದೆ ಸದಸ್ಯರು ಪಡೆದುಕೊಳ್ಳುವ ಸಾಲಗಳ ರಕ್ಷಣೆಗಾಗಿ ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಸಾಲವನ್ನು ಭದ್ರತೆಗೊಳಿಸುವ ‘ಪ್ರಗತಿರಕ್ಷಾ ಕವಚ’ ಕಾರ್ಯಕ್ರಮದ ಬಗ್ಗೆಯೂ ತಮಗೆಲ್ಲರಿಗೂ ಗೊತ್ತೆ ಇದೆ. ಈ ‘ಪ್ರಗತಿರಕ್ಷಾ ಕವಚ’ ಕಾರ್ಯಕ್ರಮದಲ್ಲಿ ಪ್ರತಿವರ್ಷ ಪ್ರೀಮಿಯಂ ಅನ್ನು ಕಟ್ಟಬೇಕಾಗಿದ್ದು ಇದರಿಂದ ಅನೇಕ ಸದಸ್ಯರುಗಳಿಗೆ ಎಷ್ಟು ಪ್ರೀಮಿಯಂ ಕಟ್ಟಬೇಕೆಂಬ ಗೊಂದಲ ಉಂಟಾಗುತ್ತಿತ್ತು. ಇದನ್ನು ಸಂಪೂರ್ಣವಾಗಿ ನಿವಾರಿಸಿ ಹೊಸದಾಗಿ ಸಾಲ ಪಡೆಯುವ ಸದಸ್ಯರಿಗೆ ಅವರು ಸಾಲ ಪಡೆಯುವ ಪೂರ್ಣಾವಧಿಗೆ ಅಗತ್ಯವಿರುವ ಪ್ರಗತಿರಕ್ಷಾ ಕವಚ ಪ್ರೀಮಿಯಂ ಮೊತ್ತವನ್ನು ಪಡೆದುಕೊಳ್ಳುವ ವ್ಯವಸ್ಥೆಯೂ ಕೂಡಾ ಏಪ್ರಿಲ್ ಒಂದರಿoದ ಜಾರಿಗೆ ಬರಲಿದೆ.
ಹೀಗೆ ಹೊಸ ವರ್ಷದಲ್ಲಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ತಮ್ಮ ಆರ್ಥಿಕ ವ್ಯವಹಾರವನ್ನು ಸರಳವಾಗಿ ಮಾಡುವುದಲ್ಲದೆ, ಇವುಗಳನ್ನು ಹೆಚ್ಚು ಆಕರ್ಷಣೀಯವಾಗಿ ಮಾಡುವ ವ್ಯವಸ್ಥೆಯನ್ನು ಯೋಜನೆಯು ಜಾರಿಗೆಗೊಳಿಸಲಿದೆ. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಕಾಲಕಾಲಕ್ಕೆ ನಿಮ್ಮ ‘ನಿರಂತರ’ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ನಿರಂತರದ ಕೊನೆಯ ಪುಟವನ್ನು ಇದಕ್ಕಾಗಿಯೇ ಮೀಸಲಿಡಲಾಗಿದೆ. ದಯವಿಟ್ಟು ಇದನ್ನು ಓದಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಕಾರ್ಯಕರ್ತರನ್ನು ಸಂಪರ್ಕಿಸಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *