ಡಾ| ಎಲ್.ಎಚ್. ಮಂಜುನಾಥ್
‘ಜೂಜಾಟ’ ಮಾನವ ಜನ್ಮದೊಂದಿಗೆ ಬೆಳೆದು ಬಂದ ಹವ್ಯಾಸವಾಗಿದೆ. ಪುರಾಣಗಳಲ್ಲಿ ಧರ್ಮರಾಯ ಜೂಜಾಡಿ ಎಲ್ಲವನ್ನೂ ಕಳೆದುಕೊಂಡ ಕಥೆ ನಮಗೆಲ್ಲರಿಗೂ ಗೊತ್ತಿದೆ. ಕೋಳಿ ಅಂಕ, ಕಂಬಳ ಮುಂತಾದ ಕಾರ್ಯಕ್ರಮಗಳಲ್ಲಿ ಇಂದಿಗೂ ಬೆಟ್ಟಿಂಗ್ ದಂಧೆ ನಡೆಯುತ್ತದೆ. ಬಯಲುಸೀಮೆಯಲ್ಲಿ ಯುಗಾದಿ, ದೀಪಾವಳಿ ಮುಂತಾದ ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಜೂಜಾಟಗಳು, ಅಂದರ್ ಬಾಹರ್, ಇಸ್ಪೀಟ್ ಆಟ ಮುಂತಾದವುಗಳು ಸರ್ವೇ ಸಾಮಾನ್ಯ. ಪುರಾತನ ಕಾಲದಲ್ಲಿ ಇಂತಹ ಜೂಜಾಟಗಳು ಅಲ್ಲಲ್ಲಿ ಇದ್ದರೂ ಮನೆ ಮಠವನ್ನು ಕಳೆದುಕೊಂಡ ಉದಾಹರಣೆ ಧರ್ಮರಾಯನಿಗೆ ಮಾತ್ರ ಮೀಸಲು. ಬೇರೆ ಯಾರೂ ಕಳೆದುಕೊಂಡ ಉದಾಹರಣೆಗಳಿಲ್ಲ. ಬಯಲುಸೀಮೆಯಲ್ಲಿ ಇಸ್ಪೀಟ್ ಆಟದಿಂದ ಹಣ ಕಳೆದುಕೊಳ್ಳುತ್ತಾರೆ ಎಂದು ನಾವು ಕೇಳಿರುತ್ತೇವೆ.
ಜೂಜಾಡುವ ಮನುಷ್ಯನ ದೌರ್ಬಲ್ಯಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಮೊಬೈಲ್ ರಮ್ಮಿ, ಐ.ಪಿ.ಎಲ್. ಬೆಟ್ಟಿಂಗ್, ಎಲೆಕ್ಷೆನ್ ಬೆಟ್ಟಿಂಗ್ ಮುಂತಾದ ಕ್ರೀ(ಪೀ)ಡೆಗಳು. ಏಕಾಂತದಲ್ಲಿ ಲಭ್ಯವಿರುವ ಮೊಬೈಲ್‌ನ ಸಹಕಾರದೊಂದಿಗೆ ಆಡುವ ಈ ಆಟಗಳು ಯುವಜನತೆಯನ್ನು ಬಹಳಷ್ಟು ದಾರಿ ತಪ್ಪಿಸಿವೆ. ಇದರ ಜೊತೆಯಲ್ಲಿಯೇ ಐ.ಪಿ.ಎಲ್. ನಂತಹ ಕ್ರೀಡೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಮಾಡಿ ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಹೊರಬರುತ್ತಿದ್ದು ನವ ನಾಗರಿಕತೆಯಲ್ಲಿ ಯುವಕರ ದೌರ್ಬಲ್ಯ ಎದ್ದು ಕಾಣತೊಡಗಿದೆ. ಮೊದಲಿಗೆ ತಮಾಷೆಗೆಂದು ಪ್ರಾರಂಭವಾಗುವ ಈ ಚಟುವಟಿಕೆ ಕೆಲವೇ ಸಮಯದಲ್ಲಿ ಚಟವಾಗಿ ಬಿಟ್ಟುಬರಲಾಗದ, ಬಿಟ್ಟು ಬದುಕಲಾಗದ ಮನೋರೋಗವಾಗಿ ಪರಿಣಮಿಸುತ್ತದೆ. ಅಪರೂಪಕ್ಕೊಮ್ಮೆ ಲಾಭ ಬಂದರೂ ಇದರಿಂದ ಕಳೆದುಕೊಳ್ಳುವುದೇ ಹೆಚ್ಚು. ಇದಕ್ಕಿಂತ ಮಿಗಿಲಾಗಿ ಈ ಕ್ರೀಡೆಗಳು ಮನೋರೋಗವಾಗಿ, ಮೂರು ಹೊತ್ತು ಇದರದ್ದೇ ಚಿಂತೆಯಾಗಿ ಮನುಷ್ಯ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ.
ಇತ್ತೀಚೆಗಂತೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಆಟಗಾರರ ಪಟ್ಟಿ ಮಾಡಿಕೊಂಡು ಅವರ ಸಾಧನೆಯ ಮೇಲೆ ಬೆಟ್ಟಿಂಗ್ ಮಾಡುವ ‘ಮೊಬೈಲ್ ಆ್ಯಪ್’ಗಳು ಹೇರಳವಾಗಿವೆ. ಈ ಮೊಬೈಲ್ ಆ್ಯಪ್‌ಗಳನ್ನು ಪ್ರಾಯೋಜಿಸುವ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಜಾಹೀರಾತನ್ನು ನೀಡುತ್ತಿದ್ದಾರೆ ಎಂದರೆ ಅವರಿಗೆ ಎಷ್ಟು ಲಾಭ ಬರುತ್ತಿದೆ ಎಂದು ನಾವು ಊಹಿಸಿಕೊಳ್ಳಬಹುದಾಗಿದೆ. ಯೋಜನೆಯ ಫಲಾನುಭವಿಗಳು ಮತ್ತು ಕಾರ್ಯಕರ್ತರು ಈ ದಂಧೆಗೆ ಬಲಿಬೀಳುತ್ತಿರುವುದನ್ನು ಗಮನಿಸಿದಾಗ ಬಹಳಷ್ಟು ಬೇಸರವಾಗುತ್ತದೆ. ನಾವು ಕಷ್ಟಪಟ್ಟು ದುಡಿದ ಹಣ ನಮಗೆ ಗುರುತಿಲ್ಲದ ಯಾರೋ ಒಬ್ಬನ ಕೈಗೆ ಕೊಟ್ಟು ನಮಗೆ ಗೊತ್ತಿಲ್ಲದ ಯಾವುದೋ ಕ್ರೀಡೆಗೆ ಬೆಟ್ಟಿಂಗ್ ಮಾಡಿ ಇದರಿಂದ ಲಾಭ ಬರುತ್ತದೆ ಎಂದು ನಿರೀಕ್ಷೆ ಮಾಡುವುದು ಮೂರ್ಖತನವೇ ಸರಿ.
ಇತ್ತೀಚೆಗೆ ಕನ್ನಡದ ವಾರಪತ್ರಿಕೆಯೊಂದು ಲಾಟರಿ ಮುಂತಾದವುಗಳಿoದ ಅನಿರೀಕ್ಷಿತ ಧನಲಾಭವಾದ ಜನರ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿತ್ತು. ಈ ಲೇಖನದಲ್ಲಿ ಅದೃಷ್ಟದಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿದವರ ಬದುಕಿನ ಸಾಧನೆಯನ್ನು ವಿಶ್ಲೇಷಿಸಿತ್ತು. ಇವರಲ್ಲಿ ಹೆಚ್ಚಿನವರು ತಮಗೆ ಬಂದ ಹಣವನ್ನು ಐದು ವರ್ಷದೊಳಗೆ ಕಳೆದುಕೊಂಡಿದ್ದರು. ಮುಖ್ಯವಾಗಿ ತಮಗೆ ಬಂದ ಹಣದ ಬಳಕೆಯ ಬಗ್ಗೆ ಗೊತ್ತಿಲ್ಲದೆ ದುಂದುವೆಚ್ಚಗಳಿಗೆ ಬಳಕೆಯಾಗಿ ಬಂದ ಅಷ್ಟೂ ಹಣವನ್ನು ಕಳೆದುಕೊಂಡು ಬಡವರಾದವರ ಸಂಖ್ಯೆಯೇ ಹೆಚ್ಚು.
ನಮ್ಮ ನಿತ್ಯ ಜೀವನದಲ್ಲಿ ಕಂಡು ಬರುವ ಬೆಟ್ಟಿಂಗ್ ವ್ಯವಹಾರ ಸಾಮಾನ್ಯರ ಬದುಕಿಗೆ ಮಾರಕ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಇದು ಮದ್ಯವ್ಯಸನಾದಿ ಚಟಗಳಿಗಿಂತಲೂ ಹೆಚ್ಚು ಭಯಭೀತವಾಗಿದೆ. ಒಮ್ಮೆ ಜಾರಿದರೆ ಸಾಮಾನ್ಯರು ಇದರಲ್ಲಿ ಕಣ್ಮರೆಯಾಗುವುದರಲ್ಲಿ ಸಂಶಯವೇ ಇಲ್ಲ.
ಆದುದರಿಂದ ಯಾರಾದರೂ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರೆ ತತಕ್ಷಣವೇ ಅದಕ್ಕೆ ಮಂಗಳ ಹಾಡಿ. ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ದೇವಸ್ಥಾನಗಳಿಗೆ ಹೋಗಿ ಬನ್ನಿ, ಸ್ನೇಹಿತರಲ್ಲಿ ಮಾತನಾಡಿ, ಹಾಡು ಕೇಳಿ, ಹಾಸ್ಯ ಸಿನಿಮಾ ನೋಡಿ. ಯಾವುದೇ ಕಾರಣಕ್ಕೂ ಬೆಟ್ಟಿಂಗ್‌ಗೆ ಕೈ ಹಾಕಬೇಡಿ.