ಅಪಘಾತಗಳ ಸಂಖ್ಯೆ ತಗ್ಗಲಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು

ಪ್ರತಿವರ್ಷ ನಮ್ಮ ರಾಜ್ಯದಲ್ಲಿ ಸುಮಾರು 10 ಸಾವಿರ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಗಾಯಾಳುಗಳಾಗುತ್ತಿದ್ದಾರೆ ಎಂಬ ಅಂಕಿಅoಶವನ್ನು ಗಮನಿಸಿದಾಗ ಎಂಥವರಿಗೂ ದಿಗ್ಭ್ರಮೆಯಾಗದಿರದು. ರಸ್ತೆ ಅಪಘಾತಗಳು ಸಂಭವಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಹಾಗಾದರೆ ಅಪಘಾತ ತಡೆಯಲು ನಾವೇನು ಮಾಡಬಹುದು ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ.
ಸoಚಾರ ನಿಯಮ ಪಾಲಿಸದಿರುವುದು ಅಪಘಾತಕ್ಕೆ ಮೂಲ ಕಾರಣ ಎಂಬುದು ಗೊತ್ತಿರುವಂಥದ್ದೇ. ಆದರೂ ತಮಗೇನೂ ಆಗದೆಂಬ ಹುಂಬ ಧೈರ್ಯ ಪ್ರಾಣಕ್ಕೆ ಕುತ್ತಾಗುತ್ತಿದೆ. ನಿಯಮ ಮೀರಿದ ಸಂದರ್ಭಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಕ್ಕೀಡಾಗುವವರ ಸಂಖ್ಯೆಯೂ ಅಧಿಕವಾಗಿದೆ.
ಎರಡು ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಒಂದು ವಾಹನ ರಸ್ತೆ ವಿಭಾಜಕವನ್ನು ಹಾರಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಕ್ಕೆ ಆರು ಜನರ ಅಪಮೃತ್ಯುವಾಯಿತು ಎಂಬ ವರದಿಯೊಂದು ಪತ್ರಿಕೆಯಲ್ಲಿ ಬಂದಿತ್ತು. ಇಂತಹ ಘಟನೆಗಳನ್ನು ಓದಿದಾಗ ಬೇಸರವಾಗುತ್ತದೆ. ಅಲ್ಲದೆ ‘ಪಾಪ, ಅವರಿಗೇನೋ ಗ್ರಹಚಾರ ಸರಿ ಇರಲಿಲ್ಲ, ಕೆಟ್ಟ ಘಳಿಗೆ ಹಾಗಾಗಿ ಅಪಮೃತ್ಯು ಬಂತು’ ಎಂದು ಹೇಳುತ್ತೇವೆ.
ಅಪಘಾತದಿಂದ ಅಕಾಲಿಕ ಮರಣಗಳಾದಾಗ ಹೀಗೇಕಾಯಿತೆಂದು ಕಾರಣ ಹುಡುಕುವ ಪದ್ಧತಿ ಕಾನೂನಿನಲ್ಲಿದೆ. ಸುಮಾರು 40-50 ವರ್ಷಗಳ ಹಿಂದೆ ಒಂದೊಮ್ಮೆ ಅಪಘಾತವಾದರೆ, ಸಂಬoಧಿತ ವಾಹನಗಳನ್ನು ಅದೇ ಸ್ಥಳದಲ್ಲೇ ನಿಲ್ಲಿಸಬೇಕಾಗಿತ್ತು. ನಂತರ ಸಾರಿಗೆ ಇಲಾಖೆಯಿಂದ ‘ಬ್ರೇಕ್ ಇನ್‌ಸ್ಪೆಕ್ಟರ್’ ಬಂದು ಅಪಘಾತದ ವಿವರಗಳನ್ನು ಪರಿಶೀಲಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ಅಪಘಾತದ ಸ್ಥಳದಲ್ಲಿ ಗುರುತುಗಳನ್ನು ಹಾಕುತ್ತಿದ್ದರು. ಬ್ರೇಕ್ ಇನ್‌ಸ್ಪೆಕ್ಟರ್ ವಾಹನದ ತಾಂತ್ರಿಕ ಅಂಶಗಳನ್ನು, ಅಂದರೆ ವಾಹನದ ಸುಸ್ಥಿತಿ, ಬ್ರೇಕ್, ಗೇರ್ ಇತ್ಯಾದಿಗಳನ್ನೂ, ಪೊಲೀಸರು ಅಪಘಾತದ ಕಾರಣಗಳನ್ನು ಪರಿಶೀಲಿಸುತ್ತಿದ್ದರು. ಯಾರು ರಸ್ತೆ ನಿಯಮವನ್ನು ಮೀರಿ ವಾಹನ ಚಲಾಯಿಸುತ್ತಿದ್ದರು? ಅಥವಾ ಚಾಲಕನ ತಪ್ಪಿನಿಂದ ಅಪಘಾತವಾಗಿದೆಯೇ? ಅಥವಾ ಯಾವುದಾದರೂ ಅನಿರೀಕ್ಷಿತ ಸಂದರ್ಭ ಎದುರಾಗಿ ಅಪಘಾತವಾಯಿತೇ? ಚಾಲಕ ಅಮಲು ಪದಾರ್ಥವನ್ನು ಸೇವಿಸಿದ್ದನೇ? ನಿದ್ದೆಗಣ್ಣಲ್ಲಿದ್ದನೆ? ಇತ್ಯಾದಿ ಅಂಶಗಳನ್ನು ಪರಿಶೀಲಿಸುತ್ತಿದ್ದರು. ಅಂತಹ ವರದಿಯ ಆಧಾರದಲ್ಲಿ ವಾಹನ ವಿಮೆ, ಪರಿಹಾರ ಸಿಗುತ್ತಿತ್ತು. ಆದರೆ ಇಂದು ದಿನನಿತ್ಯ ನಡೆಯುವ ಅಪಘಾತಗಳಲ್ಲಿ ಪೊಲೀಸ್ ಇಲಾಖೆಯಲ್ಲಿನ ಕಾರ್ಯದ ಒತ್ತಡ ಅಥವಾ ಅಸಹಾಯಕತೆಯಿಂದಾಗಿ ಗಂಭೀರವಾಗಿ ವಿಮರ್ಶೆಗಳು ನಡೆಯುವುದಿಲ್ಲ. ನನ್ನ ಪ್ರಕಾರ ಪ್ರತಿಯೊಂದು ಅಪಘಾತದಲ್ಲೂ ಅದರ ಹಿನ್ನೆಲೆಯನ್ನು ವಿಮರ್ಶಿಸಬೇಕು. ಒಬ್ಬ ಚಾಲಕ ಮಾಡಿದ ತಪ್ಪನ್ನು ಉಳಿದ ಚಾಲಕರಾರೂ ಮಾಡಬಾರದು. ಆ ರೀತಿಯಲ್ಲಿ ಅಪಘಾತಗಳನ್ನು ವಿಮರ್ಶಿಸಬೇಕು. ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು. ಶಿಕ್ಷೆಯ ಭಯವಿರಬೇಕು.
ನಾನು ಕಳೆದ 50 ವರ್ಷಗಳಿಂದ ವಾಹನಗಳನ್ನು ಬಳಸುತ್ತಿದ್ದೇನೆ. ಸ್ವತಃ ಚಲಾಯಿಸಿದ್ದೇನೆ. ವಾಹನ ಸಂಗ್ರಾಹಕನೂ ಆಗಿದ್ದೇನೆ. ಕಳೆದ ೫೦ ವರ್ಷಗಳಲ್ಲಿ ತಾಂತ್ರಿಕತೆ ತುಂಬ ಬದಲಾಗಿದೆ. ಇಂದಿನ ವಾಹನಗಳು ವೇಗವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ. ವೇಗ, ವೇಗಕ್ಕೆ ತಕ್ಕುದಾದ ಬ್ರೇಕ್ ವ್ಯವಸ್ಥೆ ಮತ್ತು ಅದಕ್ಕನುಗುಣವಾದ ಆಧುನಿಕತೆ ಕಾರಿನಲ್ಲಿ ಬಂದಿದೆ. ನಾನು ತಿಳಿದಂತೆ ಕಳೆದ ೩೫ ವರ್ಷಗಳಿಗಿಂತ ಹಿಂದೆ ಮರ್ಸಿಡಿಸ್ ಕಂಪೆನಿಯವರು ವಾಹನದ ಬ್ರೇಕ್ ಬಗ್ಗೆಯೇ ಸಂಶೋಧನೆ ಮಾಡಿದ್ದರು. ಆ ಕಾಲದಲ್ಲಿ ಬ್ರೇಕ್ ಒತ್ತಿದರೆ ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನ ನಾಲ್ಕು ಚಕ್ರಗಳನ್ನು ಎಳೆದುಕೊಂಡು ಸ್ವಲ್ಪ ದೂರ ಚಲಿಸುತ್ತಿತ್ತು. ಆ ವಾಹನದ ಚಕ್ರದಲ್ಲಿ ಒಂದು ತರಹದ ಕೀಚು ಸ್ವರ ಬರುತ್ತಿತ್ತು. ಜರ್ಮನಿಯ ಮರ್ಸಿಡಿಸ್ ಕಂಪನಿಯವರು ವಿಶೇಷ ಸಂಶೋಧನೆ ಮತ್ತು ಪ್ರಯತ್ನದೊಂದಿಗೆ ಹೊಸ ಆವಿಷ್ಕಾರಗಳನ್ನು ತಂದರು. ಬ್ರೇಕ್ ಹಾಕಿದಾಗ ಚಕ್ರಗಳು ಹಿಡಿದುಕೊಳ್ಳದೇ ರಸ್ತೆಯಲ್ಲಿ ಸ್ವಲ್ಪ ಜಾರಿ ನಿಲ್ಲುವಂತೆ ಮಾಡಿದರು. ಅದು ಸುಮಾರು ಒಂದೂವರೆ, ಎರಡು ಅಡಿಯಷ್ಟು ಜಾರಿ ನಿಲ್ಲುತ್ತಿತ್ತು. ABS (Anti Lock Braking System) ಎಂಬ ವ್ಯವಸ್ಥೆ ಕಂಡುಹಿಡಿದರು. ವಾಹನಕ್ಕೆ ಬ್ರೇಕ್ ಹಾಕಿದಾಗ ಮೊದಲು ಕನಿಷ್ಠ 3 ರಿಂದ 6ಅಡಿ ಎಳೆದುಕೊಂಡು ಹೋಗುತ್ತಿದ್ದುದು ಈಗ 2 ಅಡಿಯಲ್ಲೇ ನಿಲ್ಲುತ್ತದೆ. ಮೊದಲಿನ ಬ್ರೇಕ್ ವ್ಯವಸ್ಥೆಗಿಂತ ಈ ಹೊಸ ಸಂಶೋಧನೆ ಸುರಕ್ಷಿತವಾಗಿದೆ. ಈಗಂತೂ ಎಲ್ಲ ವಾಹನಗಳೂ ABS ಪದ್ಧತಿಯನ್ನು ಅಳವಡಿಸಿಕೊಂಡಿದೆ. ಇಂತಹ ಸಂಶೋಧನೆಗಳಿAದಾಗಿ ವಾಹನಕ್ಕೆ ಹೊಸ ಸ್ವರೂಪ ಬಂದಿದೆ. ಇದರಿಂದಾಗಿ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಇಂದು ವಾಹನದ ಹತೋಟಿಗೆ ಬೇಕಾದ ಹತ್ತಾರು ವಿನೂತನ ತಂತ್ರಗಾರಿಕೆಗಳು ಬಂದಿವೆ. ಅಟೋಮ್ಯಾಟಿಕ್ ಗೇರ್‌ಗಳು ಬಂದಿವೆ. ಲೈಟ್‌ಗಳ ಮೇಲೆ ನಿಯಂತ್ರಣ ಬಂದಿದೆ. ಸ್ಪಷ್ಟವಾಗಿ ಕಾಣುವ ಕನ್ನಡಿಗಳಿವೆ. ಬಸ್, ಲಾರಿಗಳಂತಹ ದೊಡ್ಡ ವಾಹನಗಳಿರಬಹುದು ಇವೆಲ್ಲವೂ ಅನೇಕ ವರ್ಷಗಳ ಸಂಶೋಧನೆಗಳ ಮೂಲಕ ಪರಿಷ್ಕರಿಸಲ್ಪಟ್ಟಿವೆ. ಕೃತಕವಾಗಿ ಅಪಘಾತಗಳನ್ನು ಮಾಡಿ, ಸಂಶೋಧಿಸಿ ವಾಹನವನ್ನು ಸಿದ್ಧಪಡಿಸುತ್ತಾರೆ. ಕಾರಿನೊಳಗೆ ಗೊಂಬೆಯೊoದನ್ನು ಇಟ್ಟು ಆ ಗೊಂಬೆಗೆ ಮಾನವನಂತೆ ಬೇಕಾದ ಅಂಗಾಗಗಳನ್ನು ಜೋಡಿಸಿ, ಕಾರನ್ನು ಅತಿವೇಗವಾಗಿ ಓಡಿಸಿ, ಒಂದು ಗೋಡೆಗೆ ಅಪ್ಪಳಿಸುವಂತೆ ಮಾಡುತ್ತಾರೆ. ಹಾಗೆ ಅಪ್ಪಳಿಸಿದಾಗ ಒಳಗಿದ್ದ ಮಾನವಾಕೃತಿಗೆ ಏನೇನು ಪರಿಣಾಮಗಳಾಗಿವೆ ಎಂಬುದನ್ನು ಗಮನಿಸಿ ಏರ್‌ಬ್ಯಾಗ್‌ಗಳನ್ನು ಕಂಡುಹಿಡಿದರು. ಈಗ ಎಲ್ಲ ಬಗೆಯ ವಾಹನಗಳಲ್ಲಿ ಏರ್‌ಬ್ಯಾಗ್‌ಗಳಿವೆ. ಅಪಘಾತಗಳಾದಾಗ ಬಲೂನ್ ತರಹ ಈ ಏರ್‌ಬ್ಯಾಗ್‌ಗಳು ಊದಿಕೊಂಡು ವಾಹನದಲ್ಲಿರುವವರಿಗೆ ರಕ್ಷಣೆ ನೀಡುತ್ತವೆ. ಏರ್‌ಬ್ಯಾಗ್ ಅಳವಡಿಕೆಯಿಂದ ಸಾವಿರಾರು ಜನರು ಅಪಘಾತವಾದರೂ ಬದುಕುಳಿದಿದ್ದಾರೆ. ವಾಹನಗಳು ಬಾಹ್ಯ ಅಲಂಕಾರಗಳನ್ನು ಆಕರ್ಷಕವಾಗಿ ಮಾಡಿಕೊಳ್ಳುವುದರ ಜೊತೆಗೆ ತಾಂತ್ರಿಕ ಪ್ರಗತಿಯನ್ನು ಸಾಧಿಸಿವೆ. ಈ ಬೆಳವಣಿಗೆಗಳನ್ನು ಪ್ರತಿಯೊಬ್ಬ ಚಾಲಕನೂ ತಿಳಿದುಕೊಳ್ಳಬೇಕು. ತನ್ನ ವಾಹನ ಎಷ್ಟು ಸಾಮರ್ಥ್ಯ (ಸಿ.ಸಿ.) ಹೊಂದಿದೆ ಎಂದು ತಿಳಿದಿರಬೇಕು. ವಾಹನ ಚಾಲನೆ ಮಾಡುವಾಗ ಬ್ರೇಕನ್ನು ಪರಿಶೀಲಿಸಿ, ವಾಹನ ತನ್ನ ಹತೋಟಿಗೆ ಹೇಗೆ ಬರುತ್ತದೆ ಎಂಬುದನ್ನು ಅರಿತಿರಬೇಕು. ಇದರೊಂದಿಗೆ ತನ್ನ ಜೀವ ಎಷ್ಟು ಮುಖ್ಯವೋ ಹಾಗೆಯೇ ಸಹ ಪ್ರಯಾಣಿಕರ ಜೀವವೂ ಅಷ್ಟೇ ಅಮೂಲ್ಯವಾದುದೆಂದು ಮನವರಿಕೆ ಮಾಡಿಕೊಂಡಿರಬೇಕು.
ಈಗಿನ ಕೆಲವು ವಾಹನ ಚಾಲಕರ ಮನಃಸ್ಥಿತಿಯನ್ನು ಗಮನಿಸಿದ್ದೇನೆ. ತಮ್ಮ ತಪ್ಪಿದ್ದರೂ ವಾಹನದಿಂದ ಕೆಳಗೂ ಇಳಿಯದೆ, ಕ್ಷಮೆ ಕೇಳುವ/ಪಶ್ವಾತ್ತಾಪ ಪಡುವ ಅಗತ್ಯವಿಲ್ಲ ಎಂಬoತೆ ವರ್ತಿಸುತ್ತಾರೆ. ಇದು ಸರಿಯಲ್ಲ. ಕಾನೂನನ್ನು ಮುರಿಯದೆ ಕಾನೂನನ್ನು ಗೌರವಿಸಿ, ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡುವ ಮೂಲಕ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates