ನೀರಿಗೆ ನೀರೆ ಸಾಟಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

‘ಮಾನವ ಮೂಳೆ ಮಾಂಸದ ತಡಿಕೆ’ ಎಂಬ ಹಾಡು ಎಲ್ಲರಿಗೂ ಗೊತ್ತಿದೆ. ಮನುಷ್ಯನ ದೇಹ ಅಂದರೆ ಮೂಳೆ, ಮಾಂಸ, ಚರ್ಮ, ರಕ್ತ ಜೊತೆಗೆ ಇನ್ನೂ ಕೆಲವಾರು ಅಂಗಾoಗಗಳ ಗೂಡು. ದೇಹದ ಎಲ್ಲಾ ಅಂಗಾoಗಗಳು ಸುಸ್ಥಿರವಾಗಿರಬೇಕಾದರೆ ಒಳ್ಳೆಯ ಆಹಾರ ಅನಿವಾರ್ಯ. ಮನುಷ್ಯ ಮತ್ತು ಪ್ರಾಣಿಗಳು ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವುದಿಲ್ಲ. ಆದ್ದರಿಂದ ಆಹಾರಕ್ಕಾಗಿ ನಾವು ಸಸ್ಯ ಮತ್ತು ಪ್ರಾಣಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಆದರೆ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಆಹಾರದಲ್ಲಿ ಹತ್ತು ಹಲವು ಅಂಶಗಳಿರಬಹುದು ಆದರೆ, ಎಲ್ಲಾ ರೀತಿಯ ಆಹಾರಗಳಿಗಿಂತಲೂ ಅತೀ ಅಗತ್ಯವಾದ ಆಹಾರಾಂಶ ನೀರು. ಅದು ನಮಗೆ ಧಾರಾಳವಾಗಿ ಸಿಗುವುದರಿಂದ ಮತ್ತು ನೇರವಾಗಿ ಕುಡಿಯಬಹುದಾದ್ದರಿಂದ ಯಾರೂ ನೀರನ್ನು ಬಹಳ ಮುಖ್ಯವಾದದ್ದು ಎಂದು ಭಾವಿಸಿಲ್ಲ. ಪ್ರಕೃತಿದತ್ತವಾದ ನೀರನ್ನು ಇತ್ತೀಚೆಗೆ ನಾವೇ ಕಲುಷಿತಗೊಳಿಸಿ ಇಂದು ದೊಡ್ಡ ಕಂಪೆನಿಗಳು ಶುದ್ಧ ನೀರು ಎಂದು ಮಾರಾಟ ಮಾಡುತ್ತಿರುವ ನೀರಿನ ಬಾಟಲಿಗಳನ್ನು ಹಿಡಿದುಕೊಂಡು ತಿರುಗಾಡುತ್ತಿದ್ದೇವೆ. ನಮ್ಮ ದೇಹದಲ್ಲಿ ಶೇಕಡಾ 55 ರಿಂದ 65 ಭಾಗದಷ್ಟು ನೀರೇ ಇದೆ ಅಂದರೆ ನಂಬಲಾಗುವುದಿಲ್ಲ. ಮಕ್ಕಳು ಮತ್ತು ಪುರುಷರ ದೇಹದಲ್ಲಿ ನೀರಿನಂಶ ಹೆಚ್ಚು ಇರುತ್ತದೆ. ದೇಹದಲ್ಲಿರುವ ಪ್ರೋಟಿನ್, ಮೇದಸ್ಸು, ಶರ್ಕರ, ವಿಟಮಿನ್ ಮುಂತಾದುವುಗಳೆಲ್ಲ ಆಹಾರದ ಮೂಲಕ ದೇಹಕ್ಕೆ ಸೇರುತ್ತವೆಯಾದರೂ ಅವನ್ನು ಕರಗಿಸಲು ಮತ್ತು ಒಂದು ಕಡೆಯಿಂದ ಮುಂದಕ್ಕೆ ಸಾಗಿಸಲು ನೀರು ಬೇಕೇ ಬೇಕು. ಶರೀರದೊಳಗೆ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು, ಆಹಾರದ ಸತ್ವವನ್ನು ಶರೀರ ಎಳೆದುಕೊಳ್ಳಲು ಮತ್ತು ಬೇಡವಾದದ್ದನ್ನು ಹೊರಗೆ ಹಾಕಲು ನೀರು ಅಗತ್ಯ. ಆಹಾರ ಮಾತ್ರವಲ್ಲ ರಕ್ತ ಪರಿಚಲನೆಗೂ ನೀರು ಬೇಕು. ಬಿಸಿಲಲ್ಲಿ ದುಡಿಯುವಾಗ, ಮಕ್ಕಳು ಆಟ ಆಡುವಾಗ ಸಾಕಷ್ಟು ನೀರು ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ. ಹೀಗೆ ಬೆವರಿನ ಮೂಲಕ ದೇಹವನ್ನು ತಂಪಾಗಿಡುವ ಪ್ರಯತ್ನವನ್ನು ಮಾಡುವುದು ನೀರೇ. ಹಾಗೇ ಚಳಿಗಾಲದಲ್ಲಿ ಬೆವರದೆ ದೇಹವನ್ನು ಬೆಚ್ಚಗಿರಿಸುವುದೂ ನೀರೇ.
ಇಷ್ಟೆಲ್ಲ ಕೆಲಸಗಳಿಗೆ ನೀರು ಅಗತ್ಯವಾದರೂ ಅನೇಕ ಸಲ ಶರೀರದಲ್ಲಿ ನೀರು ಕಡಿಮೆಯಾಗಿ ತಲೆ ತಿರುಗುವುದೂ ಇದೆ, ಸ್ಮೃತಿ ತಪ್ಪುವುದೂ ಇದೆ. ಮುಖ್ಯವಾಗಿ ವಾಂತಿ-ಬೇಧಿ ಉಂಟಾದಾಗ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹೋಗುತ್ತದೆ. ಆಗ ತಕ್ಷಣ ವೈದ್ಯರು ಬಾಟಲಿಯಲ್ಲಿ ನೀರಿನ ದ್ರಾವಣವನ್ನು ಹಾಕಿ ರಕ್ತದ ಮೂಲಕ ನೀರನ್ನು ಕೊಡುತ್ತಾರೆ. ನೀರು ಮತ್ತು ಲವಣ (ಉಪ್ಪಿನಂಶ) ಎರಡೂ ಹೋಗುವುದರಿಂದ ತಲೆ ನೋವು, ಸ್ಮೃತಿ ತಪ್ಪುವುದಕ್ಕೂ ಕಾರಣವಾಗುತ್ತದೆ.
ಬೇರೆ ಆಹಾರಗಳಿಲ್ಲದೆ ಬದುಕಬಹುದು. ಆದರೆ ನೀರಿಲ್ಲದೆ ಬದುಕುವುದು ಕಷ್ಟ. ದೇಹಕ್ಕೆ ದಿನಕ್ಕೆ ಮೂರು ಲೀಟರ್ ನೀರು ಬೇಕು. ಹಣ್ಣುಗಳು ಸಾರು, ಸೂಪ್, ಮಜ್ಜಿಗೆ ರೂಪದಲ್ಲೂ ನೀರಿನಂಶವನ್ನು ತೆಗೆದುಕೊಳ್ಳಬಹುದು.
ಸಾಮಾನ್ಯವಾಗಿ ಎಲ್ಲರ ಕೈಯಲ್ಲಿ, ಶಾಲಾ ಮಕ್ಕಳಲ್ಲಿ, ಕಾರುಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲ್ಲಿ ನೀರಿಡುವ ರೂಢಿ ಇದೆ. ಆದರೆ ಬಿಸಿಲಿಗೆ ಪ್ಲಾಸ್ಟಿಕ್ ಬಿಸಿ ಆದಾಗ ಅದು ಉತ್ಪತ್ತಿ ಮಾಡುವ ವಿಷ ನೀರಿಗೆ ಸೇರುತ್ತದೆ ಎನ್ನುವುದು ನಿಜ. ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಮುಂಚೆ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಊಟಕ್ಕೆ 30 ನಿಮಿಷ ಮುಂಚೆ ನೀರು ಕುಡಿದರೆ ಒಳ್ಳೆಯದು ಎಂಬ ಮಾತಿದೆ. ಹಾಗೇ ಊಟ ಆದ ಬಳಿಕವೂ ಗಟಗಟನೆ ನೀರು ಕುಡಿಯುವುದಕ್ಕಿಂತ ಅರ್ಧ ಗಂಟೆ ಬಿಟ್ಟು ನೀರು ಕುಡಿದರೆ ಜೀರ್ಣ ರಸಗಳು ಆಹಾರವನ್ನು ಸರಿಯಾಗಿ ಪಚನ ಮಾಡಲು ಸಹಕಾರಿಯಾಗಬಲ್ಲದು.
ಶುದ್ಧ ಕುಡಿಯುವ ನೀರು ಅಂದಾಕ್ಷಣ ಬಾಟಲಿ ನೀರು ನೆನಪಾಗುತ್ತದೆ. ಆದರೆ, ಮನೆಯಲ್ಲಿ ಕುದಿಸಿ ಆರಿಸಿದ ನೀರನ್ನು ಶೇಖರಿಸಿಟ್ಟುಕೊಂಡು ಕುಡಿಯುವುದು ಒಳ್ಳೆಯದು. ಹಿಂದೆ ಮನೆಯಲ್ಲಿ ಸಮಾರಂಭಗಳು ನಡೆಯುವಾಗ ಪಕ್ಕದ ಬಾವಿಯಿಂದ ತೆಗೆದ ನೀರನ್ನು ಬಕೆಟ್‌ಗಳಲ್ಲಿ ಹಾಕಿ ಸಭೆಗೆ ಕುಡಿಯಲು ಕೊಡುತ್ತಿದ್ದರು. ಈಗ ಹಳ್ಳಿಗಳಲ್ಲೂ ಬಾಟಲಿ ನೀರು ಜಾರಿಗೆ ಬರುತ್ತಿದೆ. ಒಂದು ಸಭೆ ಆಗಿ ಮುಗಿದ ಬಳಿಕ ಅಲ್ಲೆಲ್ಲಾ ಪ್ಲಾಸ್ಟಿಕ್ ಬಾಟಲಿಗಳದ್ದೆ ರಾಶಿ.
ಇತ್ತೀಚೆಗೆ ಸಣ್ಣಪುಟ್ಟ ಬಾಟಲಿಗಳೂ ಮಾರುಕಟ್ಟೆಗೆ ಬಂದಿದ್ದು ಒಂದು ಲೋಟದಷ್ಟೂ ನೀರು ಹಿಡಿಸದ ಈ ಬಾಟಲಿಗಳನ್ನು ಇಡೀ ಸಭೆಗೆ ಕೊಡಲಾಗುತ್ತಿದೆ. ನೀರು ಬೇಕೋ ಬೇಡವೋ! ಅಂತೂ ಬಾಟಲಿ ನೀರು ಧರ್ಮಕ್ಕೆ ಸಿಗುತ್ತದೆ ಅಂದ ತಕ್ಷಣ ಅದೇ ತೀರ್ಥ ಎಂಬoತೆ ಎಲ್ಲರೂ ನನಗೊಂದಿರಲಿ ಎಂದು ತೆಗೆದುಕೊಳ್ಳುವುದನ್ನು ನೋಡಬಹುದು. ನೀರಿಗೆ ದುಡ್ಡು ಕೊಡುವ ದಿನ ಬರುತ್ತದೆ ಅಂತ ನಮ್ಮ ಹಿರಿಯರು ಅಂದುಕೊoಡಿರಲಿಕ್ಕಿಲ್ಲ. ಮೊದಲು ಅನ್ನ ವಿಕ್ರಯ ಮಾಡುವುದು ಅಂದರೆ ಹೋಟೆಲ್‌ನಲ್ಲಿ ಊಟ ಕೊಡುವುದು ತಪ್ಪು ಎಂಬ ಭಾವನೆ ಇತ್ತು.
ಪ್ರಕೃತಿದತ್ತವಾಗಿ ಒಳ್ಳೆಯ ನೀರಿರುವ ಪ್ರದೇಶದಲ್ಲಿರುವವರು ಅದೃಷ್ಟಶಾಲಿಗಳು. ಕೆಲವೆಡೆ ಉಪ್ಪು ನೀರು, ಜಿಗುಟು ನೀರು ದೊರೆಯುತ್ತದೆ. ಉಪ್ಪು ಮತ್ತು ಖನಿಜಗಳು ಸೇರಿಕೊಂಡಿರುವ ನೀರು ಸಿಗುವ ಪ್ರದೇಶಗಳಲ್ಲಿ ಸ್ನಾನ ಮಾಡುವಾಗ, ಬಟ್ಟೆ ಒಗೆಯುವಾಗ ಎಷ್ಟೇ ಸಾಬೂನು ಹಾಕಿದರೂ ನೊರೆ ಬರುವುದಿಲ್ಲ. ಆಹಾರ ಧಾನ್ಯಗಳು ಸರಿಯಾಗಿ ಬೇಯುವುದಿಲ್ಲ, ಪಾತ್ರೆಗಳಲ್ಲೂ ಉಪ್ಪಿನ ಕಲೆ. ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದನ್ನು ಕಾಣಬಹುದು. ಇಂತಹ ಕಡೆಗಳಲ್ಲಿ ಯೋಜನೆಯಿಂದ ಶುದ್ಧಗಂಗಾ ಘಟಕಗಳ ಮೂಲಕ ನೀರನ್ನು ಶುದ್ಧೀಕರಿಸಿ ವಿತರಿಸುವ ಕೆಲಸ ಮಾಡಲಾಗುತ್ತಿದೆ. ನೀರನ್ನು ಪೋಲಾಗದಂತೆ ಜಾಗೃತೆಯಾಗಿ ಬಳಸುವ ಪಾಠ ಮನೆಯಿಂದಲೇ ಆರಂಭ ಆಗಬೇಕಾಗಿದೆ. ಸರ್ಕಾರ ನೀರು ಸರಬರಾಜು ಮಾಡುವುದು ಹೌದಾದರೂ ನೀರನ್ನು ಸೃಷ್ಟಿ ಮಾಡುವುದು ಅಸಾಧ್ಯ ಎಂಬ ಮಾತನ್ನು ನಾವೆಲ್ಲ ನೆನಪಿಟ್ಟಕೊಳ್ಳಬೇಕು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates