ಡಾ. ಚಂದ್ರಹಾಸ್ ಚಾಮಾಡಿ
ಶಿಬಿ ಚಕ್ರವರ್ತಿ ಆಡಳಿತ ನಡೆಸಿದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಶಿಬಿ ಎಂಬಲ್ಲಿ ನಲುವತ್ತು ಎಕರೆ ಆರು ಗುಂಟೆ ವಿಸ್ತೀರ್ಣದ ಕೆರೆಯೊಂದು ಇದೆ. ‘ಶಿಬಿ ಕೆರೆ’ ಎಂಬ ಹೆಸರಿನ ಈ ಕೆರೆಗೆ ಹಿಂದಿನ ಕಾಲದಲ್ಲಿ ರಾಜರು ಯುದ್ಧಕ್ಕೆ ಹೊರಡುವ ಮುಂಚೆ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ. ಸಂತಾನ ಭಾಗ್ಯಕ್ಕಾಗಿ ಕೆರೆಗೆ ಬಾಗಿನ ಅರ್ಪಿಸುವ ಸಂಪ್ರದಾಯವೂ ಇಲ್ಲಿತ್ತು. ಇಲ್ಲಿಗೆ ಹರಕೆ ಹೊತ್ತು ಸಂತಾನಭಾಗ್ಯದ ಭಾಗ್ಯ ಪಡೆದ ಹತ್ತಾರು ಮಂದಿ ಈ ಊರಿನಲ್ಲೆ ಕಾಣಸಿಗುತ್ತಾರೆ.
ಜನಸಂಖ್ಯೆ ಹೆಚ್ಚುತ್ತಿದ್ದಂತೆ ಕೆರೆಯಲ್ಲಿ ಕಸಕಡ್ಡಿಗಳು ತುಂಬತೊಡಗಿದವು. ವಿಶಾಲವಾದ ಕೆರೆಯ ಹೂಳೆತ್ತುವುದು ಅಷ್ಟು ಸುಲಭದ ಮಾತಲ್ಲ. ಹೂಳು ತುಂಬಿ ಕೆರೆ ಬರಿದಾಗುತ್ತಿರುವುದನ್ನು ಯಾರ ಗಮನಕ್ಕೆ ತಂದರೂ ಅದರಿಂದ ಪ್ರಯೋಜನವಾಗಲಿಲ್ಲ. ಪರಿಣಾಮ ಸುಮಾರು 21ವರ್ಷಗಳ ಕಾಲ ಕೆರೆ ತುಂಬಾ ಜಾಲಿಗಿಡ ಬೆಳೆದು ಕೆರೆ ಕಣ್ಮರೆಯಾಯಿತು. ಊರಿನ ಕೊಳವೆ ಬಾವಿಗಳು ಬತ್ತಲು ಆರಂಭವಾದವು.
ಕೆರೆ ಹೂಳೆತ್ತಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಊರಿನ ಸಮಾನ ಮನಸ್ಕರು ಸೇರಿಕೊಂಡು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಕೆರೆಯ ಕಥೆಯನ್ನು
ಶ್ರೀ ಹೆಗ್ಗಡೆಯವರಿಗೆ ವಿವರಿಸಿದರು. ಊರಿನವರ ಕೋರಿಕೆಯಂತೆ ಕೆರೆಯ ಹೂಳೆತ್ತುವ ಕೆಲಸಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಥ್ ನೀಡಿತು. ಕೆರೆಯ ಅಭಿವೃದ್ಧಿ ಕೆಲಸಗಳಿಗಾಗಿ ಯೋಜನೆಯಿಂದ ‘ನಮ್ಮೂರು – ನಮ್ಮ ಕೆರೆ’ ಯೋಜನೆಯಡಿ ರೂ. 10 ಲಕ್ಷ ಅನುದಾನವನ್ನು ಒದಗಿಸಿದರು. 2017 ರಲ್ಲಿ ಕೆರೆಯ ಹೂಳೆತ್ತುವ ಕೆಲಸ ಆರಂಭವಾಯಿತು.
64 ದಿನಗಳಲ್ಲಿ ಹೂಳೆತ್ತಿದರು
ಸುಮಾರು ೬೪ ದಿನಗಳಲ್ಲಿ 13,,666 ಲೋಡ್ ಹೂಳು ತೆಗದಿದ್ದಾರೆ. ಫಲವತ್ತಾದ ಮಣ್ಣನ್ನು ರೈತರು ತಮ್ಮ ಹೊಲ, ಗದ್ದೆಗಳಿಗೆ ಹಾಕಿಕೊಂಡಿದ್ದಾರೆ. ಒಂದು ಲೋಡ್ ಮಣ್ಣಿಗೆ ರೂ. 10 ರಂತೆ ರೂ. 1,36,660 ಅನ್ನು ಸಂಗ್ರಹಿಸಿ ಕೆರೆಯ ಅಭಿವೃದ್ಧಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದಾರೆ. ಕೆರೆ ವಿಶಾಲವಾಗಿರುವ ಕಾರಣ ಸುಮಾರು 29 ಎಕರೆಯಲ್ಲಿ ಹೂಳೆತ್ತಲಾಗಿದೆ. ಹೂಳೆತ್ತುವ ಕೆಲಸದಲ್ಲಿ
66 ಟ್ರಾö್ಯಕ್ಟರ್‌ಗಳು, 2 ಹಿಟಾಚಿಗಳು, 2ಜೆಸಿಬಿಗಳು ಸಾಥ್ ನೀಡಿವೆ.
ಕೃಷಿ ಜಮೀನನ್ನು ಫಲವತ್ತಾಗಿಸಿದ ಹೂಳು
ಶಿಬಿ ಕೆರೆಯ ಮಣ್ಣಿನಲ್ಲಿ ಸಾರಜನಕ, ರಂಜಕ, ಪೊಟ್ಯಾಸಿಯಂ ಅಂಶ ಹೇರಳವಾಗಿದ್ದು ಕರಿಶೆಟ್ಟಿಹಳ್ಳಿ, ದುರ್ಗದಹಳ್ಳಿ, ಉಮಾಪತಿ ಹಳ್ಳಿ, ಹೆತ್ತಪ್ಪನ ಹಟ್ಟಿ, ಹುಂಜುನಾಲು, ಕಾಳಜ್ಜಿಹಟ್ಟಿ, ಶಿಬಿ ಅಗ್ರಹಾರ, ಬಸರಿ ಹಳ್ಳಿ, ಅಜ್ಜಯ್ಯನ ಪಾಲ್ಯ, ಬೋರ್‌ಸಂದ್ರ, ಮಂಟಪ, ತಿಮ್ಮನಹಳ್ಳಿ ಹಟ್ಟಿ, ನಾಗೇನ ಹಳ್ಳಿಯ ಸುಮಾರು 200 ರೈತರು ನಾ ಮುಂದು, ತಾ ಮುಂದು ಎನ್ನುತ್ತಾ ಮಣ್ಣನ್ನು ತಮ್ಮ ಜಮೀನಿಗೆ ಕೊಂಡೋಗಿ ಸುರಿದರು.
‘ಕೆರೆಯ ಮಣ್ಣು ಜೇಡಿ ಮಿಶ್ರಿತವಾಗಿದ್ದು ಒಣಗಿದ ನಂತರ ಭೂಮಿಗೆ ಅಂಟುತ್ತದೆಯoತೆ. ಈ ಮಣ್ಣು ಅಡಕೆಗೆ ಉತ್ತಮ. ಹೂಳು ಹಾಕಿದ ಮುಂದಿನ ವರ್ಷದಿಂದ ಒಂದು ಅಡಕೆ ಗಿಡಕ್ಕೆ ಐದು ಕೆ.ಜಿ. ಕುರಿಗೊಬ್ಬರ ಹಾಕುವವರು ಎರಡುವರೆ ಕೆ.ಜಿ. ಹಾಕಿದರೆ ಸಾಕಾಗುತ್ತದೆ’ ಎನ್ನುತ್ತಾರೆ ಹೂಳಿನಿಂದಾಗಿ ಅಡಕೆ ಬೆಳೆಯ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡ ರೈತ ಉಮೇಶ್.
ತುಂಬಿದುವು 2250 ಕೊಳವೆ ಬಾವಿಗಳು
ಇಲ್ಲಿನ ಪ್ರತಿ ಮನೆಗಳಲ್ಲಿ ಎರಡರಿಂದ ಮೂರು ಕೊಳವೆ ಬಾವಿಗಳಿವೆ. ವಿಶೇಷವೆಂದರೆ ಇವುಗಳಲ್ಲಿ ಶೇ.90ರಷ್ಟು ಬಾವಿಗಳು ಬತ್ತಿದ್ದವು. ಇದೀಗ ಕೆರೆ ತುಂಬಿದ್ದು ಇಲ್ಲಿನ 2,250 ಕೊಳವೆ ಬಾವಿಗಳು ಮರುಪೂರಣಗೊಂಡಿವೆ.
ಜಲಮಟ್ಟ ಹೆಚ್ಚಳ
ಕೆರೆಯ ಹೂಳೆತ್ತುತ್ತಿದ್ದಂತೆ ಸುರಿದ ಮಳೆಗೆ ಕೆರೆ ತುಂಬಿದೆ. ಕೆರೆ ತುಂಬಿದ ಪರಿಣಾಮ ಊರಿನ ಜಮೀನುಗಳಲ್ಲೂ ಜಲಮಟ್ಟ, ತೇವಾಂಶವೂ ಹೆಚ್ಚಿದೆ. ಹಿಂದೆ ನೀರಿಗಾಗಿ ಕೊಳವೆಬಾವಿ ತೋಡುವವರು 720 ಅಡಿ ತೊಡಬೇಕಿತ್ತು. ಈಗ 120 ರಿಂದ 200 ಅಡಿಯೊಳಗೆ ನೀರು ದೊರೆಯುತ್ತಿದೆ. ಕೆರೆಯ ಹೂಳೆತ್ತಿದ ನಂತರ ತುಂಬಿದ ಕೆರೆ ಇಂದಿನವರೆಗೂ ಬತ್ತಿಲ್ಲ. ಐದು ವರ್ಷ ಮಳೆ ಬಾರದಿದ್ದರೂ ಕೆರೆಯು ಬತ್ತುವುದಿಲ್ಲ. ಕೆರೆ ಹೂಳೆತ್ತಿದ ನಂತರ ಊರಿನಲ್ಲಿ ಸಂತಸ, ಸಂಭ್ರಮ ಮನೆ ಮಾಡಿದೆ. ಊರಿನವರನ್ನೆಲ್ಲ ಒಟ್ಟು ಸೇರಿಸಿದ ಹೆಗ್ಗಳಿಕೆ ಈ ಕೆರೆಗೆ ಸಲ್ಲುತ್ತದೆ ಎನ್ನುತ್ತಾರೆ ಇಲ್ಲಿನವರು.
20 ವರ್ಷಗಳ ನಂತರ ಭತ್ತ ಬೆಳೆದರು
ಇಲ್ಲಿನ ಸಿದ್ಧಗಂಗಮ್ಮ ಎಂಬವರು ಹಿಂದೆ ಒಂದುವರೆ ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದರು. ಕೆರೆ ಬತ್ತಿದ ನಂತರ ಭತ್ತ ಬೆಳೆಯುವುದು ನಿಂತು ಹೋಯಿತು. ಇದೀಗ ಇಪ್ಪತ್ತು ವರ್ಷಗಳ ನಂತರ ಅಂದರೆ 2018 ರಿಂದ ಮತ್ತೆ ಭತ್ತ ಬೆಳೆಯಲು ಆರಂಭಿಸಿದ್ದಾರೆ.
ಜನರ ನಂಬುಗೆಗೆ ಪಾತ್ರವಾದ, ಕೃಷಿಕರ ಕೈಹಿಡಿದ, ಊರಿನ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ ‘ಶಿಬಿ ಕೆರೆ’ ನಮ್ಮ ಸಂಸ್ಕೃತಿಯ ಕೊಂಡಿಯಾಗಿ, ಇತರ ಕೆರೆಗಳಿಗೆ ಮಾದರಿಯಾಗಿ ಕಾಣಸಿಗುತ್ತಿದೆ.
ಬೆಂಗಳೂರು ಬಿಟ್ರು – ಕೃಷಿ ಶುರುವಿಟ್ರು
ಹರೀಶ್ ಎಂಬವರು ಕೆರೆ ಅಭಿವೃದ್ಧಿಯಾದ ನಂತರ ಬೆಂಗಳೂರಿನ ಕಂಪನಿಯೊAದನ್ನು ಬಿಟ್ಟು ಊರಿನತ್ತ ಮರಳಿ ಕೃಷಿ ಆರಂಭಿಸಿದ್ದಾರೆ. ಕೆರೆ ತುಂಬಿದ ಕಾರಣ ಇವರ ಒಣಭೂಮಿ ನೀರಾವರಿ ಭೂಮಿಯಾಗಿ ಮಾರ್ಪಟ್ಟಿದೆ. ಇದೀಗ ಋತುಗಳಿಗನುಗುಣವಾಗಿ ಬೇರೆಬೇರೆ ಕೃಷಿಗಳನ್ನು ಬೆಳೆದು ಕೈತುಂಬಾ ಆದಾಯವನ್ನು ಗಳಿಸುತ್ತಿದ್ದಾರೆ.
ಭಕ್ತರ ಇಷ್ಟಾರ್ಥ ಈಡೇರಿಸುವ ಕೆರೆ
ಶಿಬಿ ಕೆರೆ ಎಂದರೆ ಜನರಲ್ಲಿ ಭಯ, ಭಕ್ತಿಯಿದೆ. ಪ್ರತಿ ಶುಕ್ರವಾರದ ದಿನ ಈ ಕೆರೆಗೆ ಬಾಗಿನ ಅರ್ಪಿಸಿ ಜನರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ದೂರದ ಊರುಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಬಟ್ಟೆ ಒಗೆಯುವುದು, ದನ – ಕರುಗಳನ್ನು ತೊಳೆಯುವುದು ಇಲ್ಲಿ ನಿಷಿದ್ಧ. ಸೂತಕ ಇದ್ದವರು ಕೆರೆಯ ದಡಕ್ಕೂ ಹೋಗುವುದಿಲ್ಲ. ಇನ್ನು ಮಹಾನವಮಿಯ ದಿನ ಬೇರೆ ಬೇರೆ ಕಡೆಗಳಿಂದ ದೇವರನ್ನು ಪಲ್ಲಕ್ಕಿಯಲ್ಲಿ ಇರಿಸಿ ತಂದು ಶುದ್ಧವಾದ ಈ ಕೆರೆಯ ನೀರಿನಲ್ಲಿ ದೇವರುಗಳಿಗೆ ಗಂಗಾಸ್ನಾನ ಮಾಡುತ್ತಾರೆ.