ಕೀಟಗಳ ಪ್ರಪಂಚವೆಂಬ ವಿಸ್ಮಯ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಇತ್ತೀಚೆಗೆ ‘ವಿಸ್ಮಯ ಕೀಟ ಪ್ರಪಂಚ’ ವೆಂಬ ಪುಸ್ತಕವೊಂದು ನನ್ನ ಕೈಸೇರಿತು. ಪುಟ ತೆರೆಯುತ್ತಿದ್ದಂತೆ ನಾನು ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ, ಬರುವಾಗ, ನಮ್ಮ ಪರಿಸರದ ಸುತ್ತಮುತ್ತ, ಮನೆಯಂಗಳದ ಹೂದೋಟದಲ್ಲಿ, ಗದ್ದೆಗಳಲ್ಲಿ, ಬಾಳೆ ತೋಟದಲ್ಲಿ ನೋಡಿದ ಕೀಟಗಳು, ಅವುಗಳ ಚಲನ – ವಲನ, ಬಣ್ಣ, ಅಂದ, ಸೌಂದರ್ಯ, ಕಾರ್ಯವೈಖರಿಯನ್ನು ಕಂಡು ಬೆರಗುಗೊಂಡೆ. ನಗಾರಿಯ ಶಬ್ದದಂತೆ ಶಬ್ದ ಮಾಡುವ ಸಿಕಾಡ ಕೀಟ, ಕೆಂಪಿರುವೆಗಳು, ಜೀರುಂಡೆ, ಬಣ್ಣ ಬಣ್ಣದ ಚಿಟ್ಟೆಗಳು, ಸಾರಂಗ ಜೀರುಂಡೆ, ಕಡ್ಡಿಕೀಟ, ಸೆಗಣಿ ಜೀರುಂಡೆ, ಸ್ಪಿçಂಗ್‌ನ0ತೆ ಪುಟಿಯುವ ಜಿಗಿ ಹುಳಗಳ, ರಾತ್ರಿ ಕಾಣಸಿಗುವ ಮಿಂಚು ಹುಳಗಳು, ಕಾಂಡಕೊರಕ ಕೀಟಗಳು, ವಿಶಾಲ ರೆಕ್ಕೆಯ ಭೂಪಟ ಪತಂಗ, ಹಳದಿ ಬಣ್ಣದ ಚಿಟ್ಟೆ, ಗೆದ್ದಲು ಹುಳ, ಉಣ್ಣೆ ತಿಗಣೆ, ಜಿರಾಫೆ ಕೀಟ, ಬೆಳ್ಳಿ ಮೀನು ಕೀಟ, ಕೊಡತಿ ಕೀಟ, ಜಿರಲೆ ಮುಂತಾದ ಕೀಟಗಳ ವರ್ಣರಂಜಿತ ಚಿತ್ರಗಳೊಂದಿಗೆ ಅವುಗಳ ಕುರಿತ ಸವಿವರವಾದ ಮಾಹಿತಿಯು ಅದರಲ್ಲಿತ್ತು. ಇವುಗಳನ್ನು ನೋಡುತ್ತಿದ್ದಂತೆ ಬಾಲ್ಯದ ದಿನಗಳೊಮ್ಮೆ ನೆನಪಿಗೆ ಬಂದು ಬಿಟ್ಟವು. ಹಿಂದೆ ಕೀಟಗಳೊಂದಿಗೆ ಆಟವಾಡುತ್ತಾ, ಅವುಗಳ ಬಣ್ಣ, ಶಬ್ದಗಳಿಗೆ ಮಾರುಹೋಗುತ್ತಿದ್ದ ಆ ದಿನಗಳು ಇಂದು ಎಲ್ಲಿಗೆ ಹೋದುವು?
ಬೆಳಿಗ್ಗೆದ್ದು ಬಸ್ ಹತ್ತಿ ಶಾಲೆಗಳಿಗೆ ತೆರಳುವ ಇಂದಿನ ವಿದ್ಯಾರ್ಥಿಗಳಿಗೆ ಈ ಕೀಟಗಳ ಪರಿಚಯ ಇರಲು ಸಾಧ್ಯವೇ ಇಲ್ಲ. ಇವುಗಳನ್ನು ನೋಡಿದವರು ಕಡಿಮೆಯೆಂದೆ ಹೇಳಬಹುದು. ಆದರೆ ನಾವು ಕೂಡಾ ಕೀಟಗಳಿಂದ ಕಲಿಯುವಂಥದ್ದು ಸಾಕಷ್ಟಿದೆ. ಜೇನಿನಿಂದ ಒಗ್ಗಟ್ಟನ್ನು, ಪತಂಗಗಳಿ0ದ ಆಹ್ಲಾದವನ್ನು ಹೀಗೆ ಪ್ರತಿ ಕೀಟವು ನಮ್ಮ ಬದುಕಿಗೆ ಪಾಠವಾಗಿದೆ.
ಪುರಂದರ ದಾಸರ ಹಾಡಿನಂತೆ ‘ಮಧುಕರ ವೃತ್ತಿ ನಿನ್ನದು’ ಎಂಬ ಈ ಹಾಡಿನಲ್ಲಿ ಬಹಳಷ್ಟು ಅರ್ಥಗಳಿವೆ. ಜೇನು ಹುಳ ಬೇರೆ ಬೇರೆ ಪುಷ್ಪಗಳಿಂದ ತನಗೆ ಬೇಕಾದಷ್ಟು ಸಿಹಿಯನ್ನು ಸಂಗ್ರಹಿಸುತ್ತದೆ. ಒಂದೇ ಪುಷ್ಪದಿಂದ ಅದರಲ್ಲಿರುವ ಎಲ್ಲ ಸಿಹಿಯನ್ನು ತಂದು ಬಿಡುವುದಿಲ್ಲ. ಅಂದರೆ ಇನ್ನೊಬ್ಬರಿಂದ ಬೇಡಿ ತರುವಾಗಲೂ ಅವರಿಗೆ ನೋವಾಗದಂತೆ ಬೇಕಾದಷ್ಟೇ ತರಬೇಕು. ಒಬ್ಬರಿಂದಲೇ ಕೇಳಿ ಪಡೆಯುವ ಬದಲು ಬೇರೆ ಬೇರೆ ಮಂದಿಯ ಬಳಿ ಹೋಗಬೇಕೆಂಬ ಜೀವನಪಾಠ ಇಲ್ಲಿದೆ.
ಪ್ರಕೃತಿಯೇ ನಮಗೆ ಪಾಠಶಾಲೆ. ಅಲ್ಲಿನ ಕೀಟಗಳು, ಜೀವವೈವಿಧ್ಯಗಳಿಂದ ನಾವು ಕಲಿಯಬೇಕಾದುದು ಸಾಕಷ್ಟಿದೆ. ನಾವು ಪ್ರಕೃತಿಯೊಂದಿಗೆ ಪ್ರೀತಿಯನ್ನು ಬೆಳೆಸಿಕೊಂಡಾಗ ಅಲ್ಲಿನ ಕೀಟಗಳ ಜೀವನ ಶೈಲಿಯ ಸುಂದರ ಅನುಭವವನ್ನು ಆನಂದಿಸಲು – ಅನುಭವಿಸಲು ಸಾಧ್ಯವಾಗುತ್ತದೆ. ಜಗತ್ತಿಗೆ ಸಾಮರಸ್ಯ – ಸಹಬಾಳ್ವೆಯ ಪಾಠವನ್ನು ಪ್ರಕೃತಿ, ಅಲ್ಲಿರುವ ಪುಷ್ಪಗಳು, ಪತಂಗ, ಕೀಟಗಳು ಹೇಳಿಕೊಟ್ಟಿದ್ದಾವೆ. ಆದರೆ ಅದನ್ನು ಅನುಭವಿಸುವ ಗುಣ ನಮ್ಮಲ್ಲಿರಬೇಕಷ್ಟೇ.
ಪ್ರಕೃತಿಯಲ್ಲಿ ಕಾಣ ಸಿಗುವ ಪ್ರತಿಯೊಂದು ಕೀಟವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಕೀಟಶಾಸ್ತçಜ್ಞರು ‘ಸಿಕಾಡ’ ಎಂದು ಕರೆಯುವ ಕೀಟ ನಗಾರಿ ಬಾರಿಸಿದಂತೆ ಶಬ್ದವನ್ನು ಮಾಡುತ್ತದೆ. ಇದು ಗಾತ್ರದಲ್ಲಿ ಜೇನುನೊಣಕ್ಕಿಂತ ದೊಡ್ಡದು. ಜೇನುನೊಣದಂತೆ ಕಚ್ಚುವುದಿಲ್ಲ. ಇವು ಸಾಮಾನ್ಯವಾಗಿ ಮಧ್ಯ ಬೇಸಿಗೆಯ ಕಾಲದಲ್ಲಿ ಮರದ ರೆಂಬೆ, ಕೊಂಬೆ ಮತ್ತು ಕಾಂಡಗಳ ಮೇಲೆ ಕಾಣಸಿಗುತ್ತವೆ. ಮರದ ಎಲೆಗಳನ್ನೆ ಜೋಡಿಸಿ ಗೂಡು ಕಟ್ಟುವ ಕೆಂಪಿರುವೆಗಳು ಗೂಡುಕಟ್ಟುವ ಕಾಯಕಕ್ಕೇ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ಎಲ್ಲ ಬಗೆಯ ಇರುವೆಗಳು ತಮ್ಮ ದೇಹದ ತೂಕಕ್ಕಿಂತ ಹತ್ತು ಪಟ್ಟು ಹೆಚ್ಚು ಭಾರ ಹೊರುವಷ್ಟು ಶಕ್ತಿಶಾಲಿಯಾಗಿರುತ್ತವೆ. ಜಿಂಕೆಯ ಕೋಡಿನಂತೆ ಎರಡು ದವಡೆಗಳಿರುವ ಸಾರಂಗ ಜೀರುಂಡೆಗೆ ಬಲಿಷ್ಠ, ಭಯಾನಕ ದವಡೆಗಳಿದ್ದರೂ ಅವು ಮನುಷ್ಯರಿಗಾಗಲೀ ಅಥವಾ ಇತರ ಕೀಟಗಳಿಗಾಗಲೀ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಇನ್ನು ಕಡ್ಡಿ ಕೀಟವನ್ನು ಸಾಮಾನ್ಯವಾಗಿ ನೀವೆಲ್ಲರು ನೋಡಿರುತ್ತೀರಿ. ಇದರ ರಚನೆ ಮತ್ತು ಬಣ್ಣವನ್ನು ನೋಡಿದಾಗ ಒಣಗಿದ ಒಂದು ಕಡ್ಡಿಯಂತೆ ಕಾಣುತ್ತದೆ. ಕೀಟಶಾಸ್ತçದಲ್ಲೇ ಅತೀ ದೊಡ್ಡದಾದ ಕೀಟವೆಂಬ ಪ್ರಶಂಸೆಗೆ ಇದು ಪಾತ್ರವಾಗಿದೆ. ಇದು ಯಾವುದಾದರೂ ಮರದಲ್ಲಿ ಕುಳಿತರೆ ಮನುಷ್ಯರ ಕಣ್ಣಿಗೂ ಕಾಣುವುದಿಲ್ಲ. ಇನ್ನು ಸೆಗಣಿಯನ್ನು ತನ್ನ ಮೂತಿಯಿಂದಲೇ ದೂಡುತ್ತಿರುವ ಜೀರುಂಡೆಯ ಪರಿಚಯ ಯಾರಿಗಿಲ್ಲ. ತನಗಿಂತ ಹತ್ತುಪಟ್ಟು ದೊಡ್ಡ ಗಾತ್ರದ ಸೆಗಣಿ ಉಂಡೆಯನ್ನು ಈ ಜೀರುಂಡೆ ದೂಡುತ್ತಾ ಹೋಗುತ್ತದೆ. ಗಂಡು ಮತ್ತು ಹೆಣ್ಣು ಸೆಗಣಿ ಜೀರುಂಡೆ ಜೋಡಿಯು ಸೆಗಣಿ ಚೂರುಗಳನ್ನು ಸೇರಿಸಿ ಉಂಡೆ ಮಾಡಿ ಅದನ್ನು ಒಂದು ಜೀರುಂಡೆಯು ತನ್ನೆರಡು ಹಿಂದಿನ ಕಾಲುಗಳಿಂದ ಎಳೆದರೆ, ಮತ್ತೊಂದು ಜೀರುಂಡೆ ತಲೆ ಕೆಳಗೆ ಮಾಡಿ ತನ್ನ ಕಾಲುಗಳಿಂದ ತಳ್ಳಿ ಉರುಳಿಸುವ ದೃಶ್ಯವನ್ನು ನೋಡುವುದೇ ಚೆಂದ. ಈ ಕೀಟಗಳು ತನ್ನ ಮುಂದಿನ ಸಂತತಿಯ ಬಗ್ಗೆ ವಹಿಸುವ ಕಾಳಜಿ ಇಂದಿನ ಧಾವಂತ ಬದುಕಿನಲ್ಲಿ ಪೋಷಕರ ಪಾತ್ರ ಮರೆತಿರುವ ನಮಗೆ ಮರುಕಳಿಸಿ ಮಾದರಿಯಾಗಿ ನಿಲ್ಲುತ್ತವೆ. ಇನ್ನು ಗುಂಡಿ ತೋಡಿ ಮಣ್ ಎಳ್ಕೊಳೋ ಕೀಟವೊಂದಿದೆ. ಬಾಲ್ಯದಲ್ಲಿ ಮಣ್ಣಿನೊಂದಿಗೆ ಆಟವಾಡಬೇಕಾದರೆ ‘v’ ಆಕಾರದ ಅಲಿಕೆಯಂತಹ ಗುಂಡಿಗಳನ್ನು ನೋಡಿರುತ್ತೇವೆ. ಗುಂಡಿಯ ಒಳಗೊಂದು ಕೀಟ ಇರುತ್ತಿತ್ತು. ಹೀಗೆ ಕೀಟಗಳ ಬಗ್ಗೆ ಬರೆಯುತ್ತಾ ಹೋದರೆ ಸಾಕಷ್ಟಿದೆ.
ಅಂತೂ ಪ್ರಕೃತಿಯಲ್ಲಿನ ಪ್ರತಿಯೊಂದು ಕೀಟಗಳನ್ನು ರಕ್ಷಿಸುವತ್ತ್ತ ನಾವು ಗಮನಹರಿಸಬೇಕಾಗಿದೆ. ಪ್ರತಿಯೊಂದು ಕೀಟವು ಅನೇಕ ವಿಶೇಷತೆಗಳಿಂದ ಕೂಡಿದೆ. ಕೀಟಗಳ ಕುರಿತಂತೆ ಆಸಕ್ತರು ಡಾ. ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಪುಸ್ತಕವನ್ನು ಓದಬಹುದಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates