ಅಪಘಾತಮುಕ್ತ (Zero Accident) ಸಂಚಾರಿ ವ್ಯವಸ್ಥೆ ನಿರ್ಮಿಸೋಣ

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ

ಜೂನ್ ತಿಂಗಳು ಕಾಲಿಡುತ್ತಿದ್ದಂತೆಯೇ ಮಳೆರಾಯನ ಆಗಮನವಾಗುತ್ತದೆ. ಗುಡುಗು – ಸಿಡಿಲುಗಳ ಅಬ್ಬರ. ಈ ಅಬ್ಬರದ ನಡುವೆ ಆಂಬುಲೆನ್ಸ್ ಸೈರನ್‌ನ ಅಬ್ಬರವೂ ಆಗಿಂದಾಗ್ಗೆ ಕೇಳುತ್ತದೆ. ಹೌದು, ಮಳೆಗಾಲದಲ್ಲಿ ವಿಪರೀತ ರಸ್ತೆ ಅಪಘಾತಗಳು ಆಗುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಆಂಬುಲೆನ್ಸ್ನ ಸೈರನ್ ಸದ್ದು ಮಳೆಗಾಲದ ಕಾರ್ಮೋಡದ ವಾತಾವರಣದಲ್ಲಿ ಇನ್ನಷ್ಟು ಭಯವನ್ನು ಸೃಷ್ಟಿಸುತ್ತದೆ. ರಸ್ತೆಗಳ ಗುಣಮಟ್ಟ ಕಳಪೆಯಾಗಿ ಹೊಂಡ – ಗುಂಡಿಗಳಿದ್ದರೂ ಅಪಘಾತಗಳಾಗುತ್ತವೆ. ಅವುಗಳೆಲ್ಲವನ್ನು ಸರಿಪಡಿಸಿ ನುಣಪಾದ ಉತ್ತಮ ರಸ್ತೆಗಳನ್ನು ಮಾಡಿದರೂ ವೇಗದ ಸವಾರಿಯಿಂದ ಅಪಘಾತಗಳು ಆಗುತ್ತವೆ. ಮಳೆ ಬಿದ್ದಾಗ ಡಾಂಬರ್ ರಸ್ತೆ (ಟಾರ್ ರೋಡ್)ಗಳಲ್ಲಿ ವಾಹನದ ಚಕ್ರಗಳ ಹಿಡಿತ ಮೊದಲಿದ್ದಂತೆ ಇರುವುದಿಲ್ಲ. ಆ ರಸ್ತೆಗಳಲ್ಲಿ ಓಡಾಡಿದ ಎಷ್ಟೋ ವಾಹನಗಳ ಆಯಿಲ್ ರಸ್ತೆಯ ಮೇಲೆ ಚೆಲ್ಲುವುದರಿಂದ ಅವುಗಳ ಸ್ವಲ್ಪ ಅಂಶ ರಸ್ತೆಯ ಮೇಲ್ಭಾಗದಲ್ಲಿ ಉಳಿದುಕೊಳ್ಳಬಹುದು. ಅದರ ಮೇಲೆ ಮಳೆ ನೀರು ಬಿದ್ದಾಗ ರಸ್ತೆಯು ನುಣುಪಾಗಿ ಜಾರುವ ಮೇಲ್ಮೈಯಾಗುತ್ತದೆ. ಇದರ ಮೇಲೆ ಚಲಿಸುವಾಗ ತಕ್ಷಣ ಬ್ರೇಕ್ ಹಾಕಿದರೆ ಚಕ್ರಗಳು ನುಣುಪಾದ ಮೇಲ್ಪದರದಲ್ಲಿ ಜಾರಿ ತಮ್ಮ ಹಿಡಿತವನ್ನು ಕಳೆದುಕೊಂಡು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ. ಇನ್ನು ಬ್ರೇಕ್ ಹಾಕದೇ ತಿರುವಿನ ಜಾಗದಲ್ಲಿ ವೇಗದಿಂದ ಚಲಾಯಿಸುವಾಗ ಚಕ್ರಗಳು ಜಾರಿ ನಿಯಂತ್ರಣ ತಪ್ಪಿ ಎಷ್ಟೋ ಅಪಘಾತಗಳಾಗಿವೆ. ಧಾರಾಕಾರವಾಗಿ ಮಳೆ ಬರುತ್ತಿರುವಾಗ ರಸ್ತೆಗಳು ಸ್ಪಷ್ಟವಾಗಿ ಕಾಣದೆಯೋ ಅಥವಾ ಎದುರು ಬದಿಯಲ್ಲಿ ಬರುವ ವಾಹನ ಬರುವಿಕೆ ಗೊತ್ತಾಗದೆಯೋ ಎಷ್ಟೊ ಅಪಘಾತಗಳಾಗುತ್ತವೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ರಸ್ತೆ ಇದ್ದರಂತೂ ವಾಹನ ಚಲಾಯಿಸುವುದು ಒಂದು ಸರ್ಕಸ್ ಮಾಡಿದಂತೆ. ಕೆನೆಪದರದ ಮಣ್ಣು ಯಾವ ಸಂದರ್ಭದಲ್ಲೂ ವಾಹನವನ್ನು ಬೀಳಿಸಬಹುದು. ರಸ್ತೆಯಲ್ಲಿದ್ದ ಎಷ್ಟೋ ಗುಂಡಿಗಳು ನೀರಿನಿಂದ ಮುಚ್ಚಿಕೊಂಡಾಗ ಅವುಗಳ ಗಾತ್ರ, ಆಳ ತಿಳಿಯದೇ ಅವುಗಳ ಮೇಲೆ ವಾಹನ ಚಲಾಯಿಸಿ ಅಪಘಾತಗಳಾಗಿರುವ ನಿದರ್ಶನಗಳಿವೆ. ಹೀಗೆ ಮಳೆಗಾಲದಲ್ಲಿ ವಾಹನ ಸವಾರರು ತಮ್ಮ ತಪ್ಪಿನಿಂದಲೂ ಅಥವಾ ಎದುರಿನ ವಾಹನ ಸವಾರರ ತಪ್ಪಿನಿಂದಲೂ ಅಪಘಾತಕ್ಕೊಳಗಾಗುವ ಸಂದರ್ಭಗಳು ಹೆಚ್ಚಿರುತ್ತವೆ. ವೇಗವಾಗಿ ವಾಹನ ಚಲಾಯಿಸುವುದು, ಸುರಕ್ಷಿತ ಕ್ರಮಗಳನ್ನು ಪಾಲಿಸದೇ ಇರುವುದು, ಅಜಾಗರೂಕತೆ, ನಿಯಮಗಳನ್ನು ಉಲ್ಲಂಘಿಸುವುದು ಅಪಘಾತಗಳಿಗೆ ಮುಖ್ಯ ಕಾರಣವಾಗಿರುತ್ತದೆ.
ಇಂದು ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತದಿಂದ ಮರಣಹೊಂದುತ್ತಿದ್ದಾರೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರದ್ದೇ ಸಿಂಹಪಾಲು. ಅತೀ ವೇಗದಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿ ಮರಣ ಹೊಂದುವವರ ಸಂಖ್ಯೆ ವರ್ಷಕ್ಕೆ ಸುಮಾರು 85,000 ದಷ್ಟಿದೆ. ದುರಾದೃಷ್ಟವೆಂದರೆ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕ ವಯಸ್ಸಿನ ಎಷ್ಟೋ ಕಾರ್ಯಕರ್ತರನ್ನು ದ್ವಿಚಕ್ರ ವಾಹನದ ರಸ್ತೆ ಅಪಘಾತದಿಂದ ನಾವು ಕಳೆದುಕೊಂಡಿರುತ್ತೇವೆ.
ಎಷ್ಟೋ ಪೋಷಕರು ಶಾಲಾ – ಕಾಲೇಜುಗಳಿಗೆ ಹೋಗುವ ಮಕ್ಕಳ ಹಠಕ್ಕೆ ಬಿದ್ದು ಬಹಳ ವೇಗವಾಗಿ ಓಡುವ ಹೆಚ್ಚು ಸಿ.ಸಿ. ಹೊಂದಿರುವAತಹ ದುಬಾರಿ ಬೈಕ್ ಅನ್ನು ಕೊಡಿಸುತ್ತಾರೆ. ಶಾಲಾ – ಕಾಲೇಜಿಗೆ ಹೋಗಿ ಬರುವ ಮಕ್ಕಳಿಗೆ ಇಷ್ಟು ವೇಗದಲ್ಲಿ ಓಡುವ ದುಬಾರಿ ಬೈಕ್ ಅಗತ್ಯವಿದೆಯೇ? ಈ ಬಗ್ಗೆ ಪರಾಮರ್ಶಿಸುವುದಿಲ್ಲ. ವ್ಯಾಮೋಹದಿಂದ ಮಕ್ಕಳ ಸಂತೋಷಕ್ಕಾಗಿ ಬೈಕ್ ಅನ್ನು ಗಿಫ್ಟ್ ರೂಪದಲ್ಲಿ ಕೊಡುತ್ತಾರೆ. ಆದರೆ ಮುಂದೆ ಅದೇ ಗಿಫ್ಟ್ ಹೆತ್ತವoರಿಗೆ ಸಿಕ್ಕ ‘ಮಕ್ಕಳೆಂಬ ಗಿಫ್ಟ್’ ಅನ್ನು ಕಸಿದುಕೊಂಡ ಎಷ್ಟೋ ನಿದರ್ಶನಗಳಿವೆ. ಯಾವುದೇ ತುರ್ತು ಕೆಲಸಗಳಲ್ಲದೇ ಇದ್ದರೂ ಶಾಲಾ – ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಅನಗತ್ಯವಾಗಿ ಅತೀ ವೇಗದಿಂದ, ಭಾರೀ ಶಬ್ದದೊಂದಿಗೆ ಬೈಕ್ ಅನ್ನು ಓಡಿಸುವುದು, ತಾವು ಅಪಘಾತಕ್ಕೊಳಗಾಗುವುದು, ಇತರರನ್ನು ಗಾಯಗೊಳಿಸುವುದನ್ನು ಸಾಮಾನ್ಯವಾಗಿ ನೋಡಬಹುದು. ರಸ್ತೆ ಅಪಘಾತದಲ್ಲಿ ಬಲಿಯಾದವರಲ್ಲಿ ಯುವಜನತೆಯ ಸಂಖ್ಯೆ ಜಾಸ್ತಿಯಾಗಿದ್ದು ಅತೀ ವೇಗದ ಚಾಲನೆಯೇ ಇದಕ್ಕೆಲ್ಲಾ ಕಾರಣವಾಗಿದೆ.
ವಾಹನಗಳು ಹಾಗೂ ಸಂಚಾರ ವ್ಯವಸ್ಥೆಗಳು ನಮ್ಮ ಜೀವನದ ಅನುಕೂಲಕ್ಕಾಗಿ ಇರಬೇಕೇ ಹೊರತು ಜೀವನದ ಅಂತ್ಯಕ್ಕಲ್ಲ. ವಾಹನ ಹಾಗೂ ಸಂಚಾರಿ ವ್ಯವಸ್ಥೆಯನ್ನು ನಮ್ಮ ಅನುಕೂಲ ಹಾಗೂ ಪ್ರಗತಿಗಾಗಿ ಈ ಕೆಳಗಿನ ಸುರಕ್ಷತೆಯೊಂದಿಗೆ ಉಪಯೋಗಿಸಬೇಕು.
* ವಾಹನ ಚಾಲನೆಯಲ್ಲಿ ಪರಿಪಕ್ವತೆ ಹಾಗೂ ಪರವಾನಗಿ ಇದ್ದಲ್ಲಿ ಮಾತ್ರ ಚಲಾಯಿಸಬೇಕು. * ಸುರಕ್ಷಿತ ಕ್ರಮಗಳಾದ ಹೆಲ್ಮೆಟ್ ಧರಿಸುವುದು (ಹಿಂಬದಿ ಸವಾರ ಕೂಡಾ), ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಇತ್ಯಾದಿ ಕಡ್ಡಾಯವಾಗಿ ಪಾಲಿಸಬೇಕು. *ಸಂಚಾರಿ ವ್ಯವಸ್ಥೆಯ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾ ವಾಹನ ಚಾಲನೆ ಮಾಡಬೇಕು. * ಆದಷ್ಟು ಮಧ್ಯಮ ವೇಗದಲ್ಲಿ ರಸ್ತೆಯ ಎಡಭಾಗದಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಬೇಕು. * ನಿದ್ರಾಹೀನರಾಗಿ, ಚೈತನ್ಯ ಹೀನರಾಗಿ ಅಥವಾ ಆನಾರೋಗ್ಯ ಸಂದರ್ಭದಲ್ಲಿ ವಾಹನ ಚಾಲನೆಯನ್ನು ಮಾಡಬಾರದು. *ಮಳೆಗಾಲದ ಸಂಧರ್ಭದಲ್ಲಿ ರಸ್ತೆ ಯಾವುದೇ ರೂಪದಲ್ಲಿದ್ದರೂ ನಿಧಾನವಾಗಿ, ಸುರಕ್ಷಿತವಾಗಿ ಚಲಾಯಿಸುವುದು. *ತಿರುವುಗಳಲ್ಲಿ ಹಾರ್ನ್ಳ ಹಾರ್ನ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು. * ಶಾಲಾ – ಕಾಲೇಜು ಮಕ್ಕಳಿಗೆ ಅನಗತ್ಯವಾಗಿ ದುಬಾರಿಯಾದ, ವೇಗದ ಬೈಕ್‌ಗಳನ್ನು ಕೊಡಿಸದೇ ಇರುವುದು. ಅನಿವಾರ್ಯವಾದಲ್ಲಿ ಕಡಿಮೆ ಸಿ.ಸಿ.ಯ ಅಥವಾ ಎಲೆಕ್ಟ್ರಾನಿಕ್ ಬೈಕ್‌ಗಳನ್ನು ಕೊಡಿಸುವುದು. * ತಮ್ಮ ವಾಹನಗಳನ್ನು ಸದಾ ಸುಸ್ಥಿರ ವ್ಯವಸ್ಥೆಯಲ್ಲಿಟ್ಟುಕೊಂಡೇ ಚಾಲನೆ ಮಾಡುವುದು. *ಕುಟುಂಬ ಸಮೇತರಾಗಿ ಬಹುದೂರ ಪ್ರಯಾಣಗಳಿದ್ದರೆ – ಆದಷ್ಟು ತಾವೇ ವಾಹನ ಚಾಲನೆ ಮಾಡದೇ ನುರಿತ ಚಾಲಕರೊಂದಿಗೆ ತೆರಳುವುದು. * ದಿನನಿತ್ಯದ ಓಡಾಟಕ್ಕೆ ಸುಲಭವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿದ್ದಲ್ಲಿ ಅವುಗಳನ್ನು ಬಳಸುವುದು ಇತ್ಯಾದಿ.
ಸುರಕ್ಷಿತ ಕ್ರಮದೊಂದಿಗೆ ವಾಹನವನ್ನು ಚಲಾಯಿಸೋಣ ತನ್ಮೂಲಕ ಅಪಘಾತಮುಕ್ತ (Zero Accident) ಸಂಚಾರಿ ವ್ಯವಸ್ಥೆಯನ್ನು ನಿರ್ಮಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates