ಸಾಮಾಜಿಕ ಸೇವೆಯಿಂದ ಸಂತೋಷ

ಡಾ| ಎಲ್. ಎಚ್. ಮಂಜುನಾಥ್

ಇಂದಿನ ದಿನಮಾನಗಳಲ್ಲಿ ಸಮಾಜಸೇವೆ ಎಂಬ ಶಬ್ದವನ್ನು ಹಲವಾರು ಅರ್ಥಗಳಲ್ಲಿ ವಿಶ್ಲೇಷಿಸಲಾಗುತ್ತದೆ. ಪ್ರತಿಯೊಂದು ಊರಿನಲ್ಲಿಯೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಸಹೃದಯಿ ಸೇವಕರು ಇದ್ದೇ ಇರುತ್ತಾರೆ. ಅವರು ಯಾವುದೇ ಪ್ರಚಾರವನ್ನು ಬಯಸುವುದಿಲ್ಲ. ನಿರೀಕ್ಷೆಗಳನ್ನೂ ಇಟ್ಟುಕೊಳ್ಳುವುದಿಲ್ಲ. ತಾವು ಇತರರಿಗೆ ನೀಡುವ ಸೇವೆಯಿಂದಲೇ ಅವರು ತೃಪ್ತಿಯನ್ನು ಪಡೆಯುತ್ತಾರೆ. ಆದುದರಿಂದ ಇಂತಹ ವ್ಯಕ್ತಿಗಳನ್ನು ಸಮಾಜಸೇವಕರೆಂದು ಕರೆಯುವುದಕ್ಕಿಂತ ‘ಸಾಮಾಜಿಕ ಸೇವಕ’ರೆಂದು ಕರೆಯುವುದು ಹೆಚ್ಚು ಅರ್ಥಪೂರ್ಣ ಎಂದು ನನಗೆ ಅನಿಸುತ್ತದೆ.
ತನಗಿಂತ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಸಂವೇದನಾಶೀಲತೆ ಎಲ್ಲರಲ್ಲಿಯೂ ಸುಪ್ತವಾಗಿ ಇರುತ್ತದೆ. ಕಾಲಕಳೆದಂತೆ ನಂತರ ಅನೇಕರಿಗೆ ಈ ಸೇವಾಗುಣ ಮರೆತು ಹೋದರೂ ಹೋಗಬಹುದು. ಆದರೆ ಕೆಲವರಲ್ಲಿ ಈ ಗುಣ ಜಾಗೃತವಾಗಿಯೇ ಇರುತ್ತದೆ. ಇಂತಹವರು ತಮ್ಮ ಬದುಕಿನಲ್ಲಿ ಸಾಮಾಜಿಕ ಸೇವಕರಾಗಿ ರೂಪುಗೊಳ್ಳುತ್ತಾರೆ. ಇದಕ್ಕಾಗಿಯೇ ರೋಟರಿ ಕ್ಲಬ್, ಜೇಸಿ ಕ್ಲಬ್, ಲಯನ್ಸ್ ಕ್ಲಬ್ ಮುಂತಾದ ಸಂಘಟನೆಗಳನ್ನು ಅವರು ಮಾಡಿಕೊಳ್ಳುತ್ತಾರೆ. ಇನ್ನು ಸಾಮಾಜಿಕ ಸೇವೆ ನೀಡುವ ಅನೇಕ ಧಾರ್ಮಿಕ ಸಂಘಟನೆಗಳು ಕಂಡುಬರುತ್ತವೆ. ಸಮಾಜಸೇವೆಗೆಂದೇ ಅನೇಕ ಸ್ವಯಂಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಸಮಾಜದಲ್ಲಿ ಇರುವ ಬಹುದೊಡ್ಡ ಸಂಖ್ಯೆಯ ದುಡಿಯುವ ವರ್ಗದವರನ್ನು ಪ್ರೇರೇಪಣೆ ನೀಡಿ ಅವರಲ್ಲಿ ಸುಪ್ತವಾಗಿರುವ ಸಾಮಾಜಿಕ ಸೇವೆಯ ಆಶಯವನ್ನು ಹೊರತೆಗೆಯುವಂತಹ ಸಂಘ – ಸಂಸ್ಥೆಗಳು ಬಹಳಷ್ಟು ಕಡಿಮೆ.
ಈ ನಿಟ್ಟಿನಲ್ಲಿ ಆಲೋಚನೆ ಮಾಡಿರುವ ನಮ್ಮ ಸಂಸ್ಥೆಯ ಹೆಮ್ಮೆಯ ಅಧ್ಯಕ್ಷರಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸಮಾನ ಮನಸ್ಕರೊಂದಿಗೆ ಚಿಂತಿಸಿ 2019ರಲ್ಲಿ ಪ್ರಾರಂಭಿಸಿದ ಕಾರ್ಯಕ್ರಮವೇ ‘ವಿಪತ್ತು ನಿರ್ವಹಣಾ ಘಟಕ’ ಕಾರ್ಯಕ್ರಮ. ಸಾಮಾಜಿಕ ಸೇವೆ ಮಾಡುವ ಮನಸ್ಸುಳ್ಳ ಯುವಕ – ಯುವತಿಯರನ್ನು ಒಗ್ಗೂಡಿಸಿ ಅವರಿಗೆ ಅಗತ್ಯ ಉಳ್ಳ ಸಣ್ಣಪುಟ್ಟ ಹಲವಾರು ತರಬೇತಿಗಳನ್ನು ಒದಗಿಸಿ ಸಮಾಜದಲ್ಲಿ ಬರುವ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ಅವರಲ್ಲಿ ಮೂಡಿಸಿ, ಅಗತ್ಯಬಿದ್ದಾಗ ಸೇವೆ ಕೊಡುವ ಕಾರ್ಯಕರ್ತರನ್ನಾಗಿ ರೂಪಿಸಿದ್ದು ಇದುವೇ ಶೌರ್ಯ ಕಾರ್ಯಕ್ರಮ. 2019ರ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕವೆಂದು ಹುಟ್ಟಿಕೊಂಡ ಈ ಸಂಘಟನೆಗೆ ತದನಂತರದಲ್ಲಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಶೌರ್ಯ’ ಎಂದು ನಾಮಕರಣ ಮಾಡಿದರು. ಈ ಸಂಘಟನೆಯಲ್ಲಿರುವ ಸದಸ್ಯರೆಲ್ಲರ ಸಾಮಾನ್ಯ ಗುಣವೆಂದರೆ ಅವರು ಬಡವರು, ಸಾಮಾಜಿಕ ಸೇವೆಯನ್ನು ಮಾಡಬೇಕೆಂಬ ಕಳಕಳಿಯನ್ನು ಉಳ್ಳವರು. ಮುಳುಗು ತಜ್ಞರು, ಉರಗ ತಜ್ಞರು, ವಾಹನ ತಜ್ಞರು ಹೀಗೆ ಹಲವಾರು ಕೌಶಲ್ಯವಿರುವ ಜನರನ್ನು ಒಗ್ಗೂಡಿಸಿ ಅವರಿಗೆ ವಿಪತ್ತು ನಿರ್ವಹಣೆಯ ತರಬೇತಿ, ಸಮಸ್ಯೆಗಳು ಬಂದಾಗ ಸ್ಪಂದಿಸುವ ಪರಿಯನ್ನು ಒದಗಿಸಿ ಅಗತ್ಯಬಿದ್ದಾಗ ಬೇಕಾಗುವ ತುರ್ತು ಉಪಕರಣಗಳನ್ನು ಬೇರೆ ಬೇರೆ ತಾಲೂಕಿನಲ್ಲಿರಿಸಿ ಶೌರ್ಯ ಸಂಘಟನೆಯನ್ನು ಜೋಡಿಸಲಾಗಿದೆ. ಪ್ರತಿಯೊಂದು ತಾಲೂಕಿನಲ್ಲಿಯೂ ನೂರಿನ್ನೂರು ಯುವ ಉತ್ಸಾಹಿ ಪಡೆಯ ಮುಂದಾಳತ್ವವನ್ನು ಸ್ವಯಂ ಕಾರ್ಯಕರ್ತರೇ ವಹಿಸಿಕೊಳ್ಳುತ್ತಾರೆ. ಮತ್ತು ಸಮಸ್ಯೆ ಬಂದಾಗ ಸ್ಪಂದಿಸುತ್ತಾರೆ.
ಸರಳ ಸ್ವಯಂಸೇವಾ ಕಾರ್ಯಕ್ರಮವೆಂದು ಪ್ರಾರಂಭಗೊoಡ ಈ ಶೌರ್ಯ ಪಡೆ ಇದೀಗ ನಾಡಿನಾದ್ಯಂತ ಎಲ್ಲರೂ ಮೆಚ್ಚಿಕೊಳ್ಳುವ ಸಾಧನೆಯನ್ನು ಮಾಡುತ್ತಿದೆ. ಪ್ರತಿ ವರ್ಷ ಲಕ್ಷಾಂತರ ವಿವಿಧ ರೀತಿಯ ಸೇವೆಗಳನ್ನು ರಾಜ್ಯದಾದ್ಯಂತ ಹಬ್ಬಿಕೊಂಡಿರುವ ಶೌರ್ಯ ಪಡೆಯು ನೀಡುತ್ತಿದೆ.
ಈ ಪಡೆಗೆ ಪ್ರೇರಕರಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಆಗಾಗ್ಗೆ ಅವರ ಕಷ್ಟ – ಸುಖಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬುವ, ಆತ್ಮವಿಶ್ವಾಸವನ್ನು ನೀಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಶೌರ್ಯ ಪಡೆಗೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಶೌರ್ಯ ಪಡೆ ಯಾರಿಂದಲೂ ನೇರವಾಗಿ ಆದೇಶಗಳನ್ನು ಪಡೆಯದಿದ್ದರೂ ಸಮಾಜದಲ್ಲಿ ಆಗುವ ವಿಪ್ಲವಗಳಿಗೆ ಸ್ವಯಂಪ್ರೇರಿತರಾಗಿ ಸ್ಪಂದಿಸುವ ಶಕ್ತಿಯನ್ನು ಈ ಅವಧಿಯಲ್ಲಿ ಬೆಳೆಸಿಕೊಂಡಿರುವುದು ಬಹಳ ಮೆಚ್ಚಿಕೊಳ್ಳುವ ಅಂಶವಾಗಿದೆ. ಅದೇ ರೀತಿ ಶೌರ್ಯ ಪಡೆಯ ಪ್ರತಿಯೊಬ್ಬ ಕಾರ್ಯಕರ್ತನೂ ಈ ಕಾರ್ಯಕ್ರಮದೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ಪಂದಿಸುವುದು ಕೂಡಾ ಬಹಳ ವಿಶೇಷ.
ಶೌರ್ಯ ಪಡೆಯ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅದೇ ರೀತಿ ಸಮಾಜದ ಕೆಲವು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಮಯದಲ್ಲಿ ಶೌರ್ಯ ಪಡೆಯೊಂದಿಗೆ ಇತರರೂ ಸೇರಿಕೊಂಡಲ್ಲಿ ಶೌರ್ಯ ಪಡೆಯ ಪ್ರಯತ್ನಕ್ಕೆ ಇನ್ನಷ್ಟು ಅರ್ಥ ಬರುತ್ತದೆ ಎಂದು ಭಾವಿಸುತ್ತೇನೆ. ಉದಾಹರಣೆಗೆ ನೇತ್ರಾವತಿ ನದಿ ತಟದಲ್ಲಿ ಶೌರ್ಯ ಪಡೆ ಇತ್ತೀಚೆಗಷ್ಟೆ ಕಾರ್ಯಾಚರಣೆ ನಡೆಸಿ ಇಲ್ಲಿ ಬಿದ್ದ ಎಲ್ಲ ಕಸವನ್ನು ಹೆಕ್ಕಿ ವಿಲೇ ಮಾಡಿತು. ಸುಮಾರು ನಾಲ್ಕು ಲಾರಿ ಲೋಡಿನಷ್ಟು ಕಸವನ್ನು ಹೆಕ್ಕಿದ ಶೌರ್ಯ ಪಡೆಯ ಕೆಲಸವನ್ನು ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಮೆಚ್ಚಿಕೊಂಡರೆ ಮತ್ತು ತದನಂತರದಲ್ಲಿ ಈ ರೀತಿಯ ಕಸವನ್ನು ಬಿಸಾಡದೆ ಇದ್ದಲ್ಲಿ ಶೌರ್ಯ ಪಡೆಯನ್ನು ಅವರು ಗುರುತಿಸಿದಂತೆ ಆಗುತ್ತದೆ. ಈ ರೀತಿಯ ಕಾಯಕಗಳು ಎಲ್ಲೆಡೆಯೂ ಆದಾಗ ದೇಶ ಸುಭಿಕ್ಷವೂ, ಸ್ವಚ್ಛವೂ, ಸಮೃದ್ಧವೂ ಆಗುತ್ತದೆ ಎಂಬುದೇ ಪೂಜ್ಯರ ಆಶಯ. ಇದಕ್ಕಾಗಿ ನಾವೆಲ್ಲರೂ ಶೌರ್ಯ ಪಡೆಯೊಂದಿಗೆ ಅವರು ಮಾಡುವ ಕೈಂಕರ್ಯದೊಡನೆ ಕೈಜೋಡಿಸೋಣ ಎಂಬುದು ನನ್ನ ವಿನಂತಿ. ಸೇವಾ ಮನೋಭಾವವನ್ನೇ ಇಟ್ಟುಕೊಂಡು ಅಗತ್ಯಬಿದ್ದಾಗ ತುರ್ತಾಗಿ ಸನ್ನದ್ಧರಾಗುವ ಈ ಶೌರ್ಯ ಪಡೆಗೆ ನಾವೆಲ್ಲರೂ ಒಂದು ಸಲಾಂ ಹೇಳೋಣವೇ?

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates