ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹಿoದೆ ಎಲ್ಲರೂ ಊರಲ್ಲೇ ಇದ್ದು ವಿವಿಧ ಕೆಲಸಗಳಲ್ಲಿ ತೊಡಗಿರುತ್ತಿದ್ದರು. ಇಂದು ಉದ್ಯೋಗವನ್ನು ಹುಡುಕಿ ಹಳ್ಳಿಯಿಂದ ಪೇಟೆಗೆ ಹೋಗುವವರ ಸಂಖ್ಯೆಯು ಗಣನೀಯವಾಗಿ ಏರಿದೆ. ಹೀಗೆ ನಗರ, ದೇಶವನ್ನರಿಸಿ ದೂರ ಹೋದರೂ ನಮ್ಮೂರು, ನಮ್ಮ ದೇಶವನ್ನು ಮರೆಯಬಾರದು. ನಮ್ಮ ಹುಟ್ಟೂರು, ತಾಲೂಕು, ಜಿಲ್ಲೆ, ರಾಜ್ಯ, ದೇಶದ ಅಭಿವೃದ್ಧಿಗೆ ನಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು. ಇದು ಸಮಾಜದ ಋಣ ತೀರಿಸುವ ಕೆಲಸ. ವ್ಯಕ್ತಿ ಹೇಗಿರಬೇಕೆಂಬ ಅನೇಕ ಮಾರ್ಗದರ್ಶಿ ಸೂತ್ರಗಳು ಗ್ರಂಥಗಳಲ್ಲಿ ಲಭ್ಯ. ವ್ಯಕ್ತಿಯ ಪರಿವರ್ತನೆಯಿಂದ ಸಂಸಾರದ ಪರಿವರ್ತನೆ, ತನ್ಮುಖೇನ ಸಮಾಜ ಮತ್ತು ದೇಶದ ಪರಿವರ್ತನೆ ಸಾಧ್ಯವೆಂದು ಭಾರತೀಯರಾದ ನಾವು ನಂಬಿದ್ದೇವೆ. ದೇಶದಲ್ಲಿ ಪರಿವರ್ತನೆ ತರಬೇಕೆಂದರೆ ಮೊದಲು ವ್ಯಕ್ತಿಯಲ್ಲಿ ಬದಲಾವಣೆ ಉಂಟಾಗಬೇಕೆoದು ನಮ್ಮ ಆಶಯ. ಚೀನಾ ದೇಶದವರ ಚಿಂತನೆ ಸ್ವಲ್ಪ ಭಿನ್ನವಂತೆ. ‘ಮೊದಲು ಸಂಸಾರದಲ್ಲಿ ಪರಿವರ್ತನೆ ತನ್ನಿ. ಆಗ ವ್ಯಕ್ತಿ, ಸಮಾಜ ಪರಿವರ್ತನೆ ತನ್ನಿಂತಾನೆ ಆಗುತ್ತದೆ’ ಎನ್ನುತ್ತಾರವರು.
ಸಂಸಾರ ಮತ್ತು ಸಮಾಜದ ಮುಖ್ಯ ಘಟಕ ವ್ಯಕ್ತಿ. ಹಾಗಾಗಿ ವ್ಯಕ್ತಿ ಪರಿವರ್ತನೆಯಿಂದಲೇ ಉಳಿದೆಲ್ಲ ಪರಿವರ್ತನೆಯೆಂಬುದು ನಮ್ಮ ಬಲವಾದ ನಂಬಿಕೆ. ಒಮ್ಮೆ ಗುರುಗಳು ‘ನಿಮ್ಮಲ್ಲಿ ಮೋಕ್ಷಕ್ಕೆ ಯಾರು ಹೋಗುತ್ತೀರಿ?’ ಎಂದು ಶಿಷ್ಯರನ್ನು ಪ್ರಶ್ನಿಸಿದರಂತೆ.
ಆ ಶಿಷ್ಯ ಸಮೂಹದಲ್ಲಿ ವೇದಶಾಸ್ತçಗಳನ್ನು ಆಳವಾಗಿ ಅಧ್ಯಯನ ಮಾಡಿದವರೂ ಇದ್ದರಾದರೂ ಯಾರೂ ತುಟಿಪಿಟಿಕ್ಕೆನ್ನಲಿಲ್ಲ. ಆಗ ಅಲ್ಲೇ ಇದ್ದ ಕನಕದಾಸರು ಹೇಳಿದ ಮಾತು ‘ನಾನು ಹೋದರೆ ಹೋದೇನು!’ ಉಳಿದ ಶಿಷ್ಯರಿಗೆ ಈ ಮಾತು ಉದ್ಧಟತನವೆನ್ನಿಸಿತಂತೆ. ‘ಜ್ಞಾನೇನ ಮುಕ್ತಿಃ’ ಎಂಬoತೆ ಇಷ್ಟೆಲ್ಲ ಜ್ಞಾನ ಸಂಪನ್ನರಾದ ನಾವೇ ಗುರುಗಳ ಮಾತಿಗೆ ಉತ್ತರ ಹೇಳಲಿಲ್ಲ. ಈತನಾದರೋ ಹೇಗೆ ಮೋಕ್ಷಕ್ಕೆ ಹೋದಾನು! ಎಂದು ಸಿಡಿಮಿಡಿಗೊಂಡರು. ಆಗ ಗುರುಗಳು ನಕ್ಕು ಹೀಗೆ ಉತ್ತರಿಸುತ್ತಾರೆ, ‘ನಾನು’ ಎಂದರೆ ಅಹಂಕಾರ. ನಾನು ಹೋದರೆ ಎಂದರೆ ಅಹಂಕಾರವನ್ನು ಬಿಟ್ಟರೆ ಮೋಕ್ಷ ಪ್ರಾಪ್ತಿ ಸುಲಭ. ನಮ್ಮೆಲ್ಲ ಸಾಧನೆಗೆ ಅಡ್ಡಿಯಾಗಿರುವುದೇ ಈ ‘ಅಹಂ’. ಹಾಗಾಗಿ ‘ಅಹಂ’ನಲ್ಲಿ ಅಂದರೆ ನನ್ನಲ್ಲಿ (ವ್ಯಕ್ತಿಯಲ್ಲಿ) ಪರಿವರ್ತನೆಯಾದರೆ ಬೇರೆ ಪರಿವರ್ತನೆ ಸಾಧ್ಯವೆಂಬುದು ಭಾರತೀಯರ ಚಿಂತನೆ. ‘ನಾನು’ ಎಂಬುದು ಜಾಗೃತವಾಗಿದ್ದಷ್ಟು ಸಮಯ ಸಂಸಾರದಲ್ಲಿ ಸಾಮರಸ್ಯ ಮೂಡಲು ಸಾಧ್ಯವಿಲ್ಲ. ಅಹಂಕಾರವೇ ಇಂದು ಸಂಸಾರವನ್ನು ವಿಭಜಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ವ್ಯಕ್ತಿಗಳು ಅಹಂಕಾರ, ಸ್ವಾರ್ಥ ಬದಿಗೊತ್ತಿ ವಿಶಾಲವಾಗಿ ಚಿಂತಿಸುವವರಾಗಬೇಕು. ‘ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ಎಂಬ ಭಾವ ಜಾಗೃತವಾಗಬೇಕು. ಇಂತಹ ವಿಶ್ವತೋಮುಖ ಚಿಂತನೆಯನ್ನು ಜಾಗೃತಗೊಳಿಸಿ, ವ್ಯಕ್ತಿ – ವ್ಯಕ್ತಿಗಳಲ್ಲಿ ಸಂಸ್ಕಾರ ಮೂಡಿಸುವ ಕೆಲಸಗಳನ್ನು ಶ್ರದ್ಧಾಕೇಂದ್ರಗಳು ಇಂದು ಮಾಡುತ್ತಿವೆ.
ಶ್ರದ್ಧಾಕೇಂದ್ರಗಳು ದೀಪಸ್ತಂಭಗಳoತೆ ಕಾರ್ಯನಿರ್ವಹಿಸುತ್ತಿವೆ. ಸಂಸಾರವೆoಬ ಸಾಗರದಲ್ಲಿ ಸುಖ – ದುಃಖವೆಂಬ ಅಲೆಗಳ ಮಧ್ಯೆ ದಿಕ್ಕು ಕಾಣದವರಂತಿರುವಾಗ ಈ ಶ್ರದ್ಧಾಕೇಂದ್ರಗಳು ದೀಪಸ್ತಂಭಗಳಾಗಿ ದಿಕ್ಕು, ಗುರಿ ತೋರುತ್ತವೆ. ಅಂತಹ ಧಾರ್ಮಿಕ ಕೇಂದ್ರಗಳನ್ನು ಶ್ರದ್ಧಾ, ಭಕ್ತಿಯಿಂದ ಉಳಿಸಿ ಬೆಳೆಸಿದರೆ ಅವು ನಮ್ಮ ಬದುಕನ್ನು ಬೆಳಗಿಸುತ್ತವೆ.
ಶ್ರದ್ಧಾಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಶ್ರದ್ಧಾಕೇಂದ್ರಗಳೆoದರೆ ಕೇವಲ ಭಕ್ತಿಯ ಕೇಂದ್ರಗಳಷ್ಟೇ ಆಗಿರದೆ ಸ್ವಚ್ಛತೆಯ ಕೇಂದ್ರಗಳು ಆಗಿರಬೇಕೆಂಬ ನಿಟ್ಟಿನಲ್ಲಿ 1017ರ ಜನವರಿ ತಿಂಗಳಲ್ಲಿ ಆರಂಭವಾದ ‘ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ’ಕ್ಕೆ ಇದೀಗ ಏಳು ವರ್ಷಗಳು ಸಂದಿವೆ. ವರ್ಷದಲ್ಲಿ ಎರಡು ಬಾರಿಯಂತೆ ಸಾಮೂಹಿಕವಾಗಿ ರಾಜ್ಯದೆಲ್ಲೆಡೆ ನಡೆಸಿಕೊಂಡು ಬರಲಾಗುತ್ತಿರುವ ಈ ಅಭಿಯಾನಕ್ಕೆ ಊರವರು, ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು, ದೇವಾಲಯಗಳ ಆಡಳಿತ ಮಂಡಳಿಯವರು, ಮಠಾಧಿಪತಿಗಳು, ಸಮಾಜದ ಗಣ್ಯರು ನೀಡಿದ ಸಹಕಾರ ಅನನ್ಯ.
ಕಾರ್ಯಕ್ರಮದ ಪ್ರತಿಫಲವಾಗಿ ಇದೀಗ ರಾಜ್ಯದ ಹೆಚ್ಚಿನ ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತೆಯ ಕಲ್ಪನೆ ಮೂಡಿದೆ. ಭಯ, ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ನಮ್ಮೂರಿನ ಶ್ರದ್ಧಾಕೇಂದ್ರಗಳನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಜಾಗೃತಿ ಜನ ಸಮುದಾಯದಲ್ಲಿ ಮೂಡಿದೆ. ಇದನ್ನು ನಾನು ಶ್ರೀಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಗಮನಿಸುತ್ತಿದ್ದೇನೆ. ನಾವು ಭೇಟಿ ನೀಡಿದ ಶ್ರದ್ಧಾಕೇಂದ್ರಗಳನ್ನು ನಾವೇ ಮಲಿನಗೊಳಿಸುವುದು ಒಂದು ದೊಡ್ಡ ಪಾಪದ ಕೆಲಸ. ಶುಚಿತ್ವ ಕಾಪಾಡದಿದ್ದರೆ ಶ್ರದ್ಧಾಕೇಂದ್ರಗಳ ಭೇಟಿಯಿಂದ ನಮಗೆ ಯಾವುದೇ ರೀತಿಯ ಪುಣ್ಯ ದೊರೆಯಲಾರದು ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಶ್ರದ್ಧಾಕೇಂದ್ರಗಳು ಸ್ವಚ್ಛವಾಗಿ ಕಂಗೊಳಿಸುವುದರಲ್ಲಿ ಎರಡು ಮಾತಿಲ್ಲ.
ಈ ಬಾರಿ ನಡೆದ 7ನೇ ವರ್ಷದ ಸ್ವಚ್ಛತಾ ಅಭಿಯಾನದಲ್ಲಿ 17,603 ಶ್ರದ್ಧಾಕೇಂದ್ರಗಳನ್ನು ಸ್ವಚ್ಛಗೊಳಿಸಲಾಗಿದ್ದು ಸುಮಾರು
೫ ಲಕ್ಷ ಸ್ವಯಂಸೇವಕರು ಈ ಸಪ್ತಾಹದಲ್ಲಿ ಭಾಗವಹಿಸಿರುವುದನ್ನು ತಿಳಿದು ಸಂತೋಷವಾಗಿದೆ. ಸಮಾಜಮುಖಿ ಕೆಲಸಗಳನ್ನು ನಾವು ಮಾಡೋಣ. ಮಾಡುವವರನ್ನು ಪ್ರೋತ್ಸಾಹಿಸೋಣ.