ಡಾ. ಎಲ್. ಎಚ್. ಮಂಜುನಾಥ್
ಕಳೆದ ಐದು ವರ್ಷಗಳಿಂದೀಚೆಗೆ ಚಿಕಿತ್ಸಾ ವೆಚ್ಚಗಳು ಗಣನೀಯವಾಗಿ ಜಾಸ್ತಿಯಾಗಿವೆ. ಆರೋಗ್ಯ ಸಮಸ್ಯೆ ಬಂದಾಗ ಸಾಮಾನ್ಯರು ಮತ್ತಷ್ಟು ಬಡವರಾಗುತ್ತಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನೆರವು ಪಡೆದುಕೊಂಡು ಅನೇಕ ನೂತನ ವ್ಯವಹಾರಗಳನ್ನು ಪ್ರಾರಂಭಿಸಿರುವ ನನ್ನ ಸಹೋದರ ಸಹೋದರಿಯರು ಈ ನಿಟ್ಟಿನಲ್ಲಿ ಬಹಳಷ್ಟು ಜಾಗೃತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಚಿಂತಿಸಿದ ಪೂಜ್ಯರು 2003ನೇ ಇಸವಿಯಲ್ಲಿಯೇ ಪ್ರಾರಂಭಿಸಿದ ಆರೋಗ್ಯ ವಿಮಾ ಯೋಜನೆ ‘ಸಂಪೂರ್ಣ ಸುರಕ್ಷಾ’. ಬಹುಶಃ ಭಾರತ ದೇಶದ ಪ್ರಥಮ ಸಮುದಾಯ ಆರೋಗ್ಯ ವಿಮಾ ಯೋಜನೆ ಎಂದು ಇದನ್ನು ಹೇಳಬಹುದಾಗಿದೆ. ಆರು ಜನರ ಒಂದು ಕುಟುಂಬಕ್ಕೆ ಆಸ್ಪತ್ರೆ ಖರ್ಚುಗಳಿಂದ ರಕ್ಷಣೆ ನೀಡುವ ಈ ವಿಮಾ ಯೋಜನೆಯು ಏಪ್ರಿಲ್ 1 ರಿಂದ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಇದಕ್ಕೆ ಪ್ರತಿವರ್ಷ ವಂತಿಗೆಯನ್ನು ಪಾವತಿಸಬೇಕು. ಗ್ರಾಮಾಭಿವೃದ್ಧಿ ಯೋಜನೆಯಿಂದ ತಂದಿರುವ ಈ ಕಾರ್ಯಕ್ರಮಕ್ಕೆ ‘ಸಂಪೂರ್ಣ ಸುರಕ್ಷಾ’ ಎಂದು ಹೆಸರಿಡಲಾಗಿದ್ದು ಇದರಲ್ಲಿ ಹಲವಾರು ವಿಶೇಷತೆಗಳು, ಬೇರೆ ಕಡೆಗಳಲ್ಲಿ ಲಭ್ಯವಾಗದ ಸೌಲಭ್ಯಗಳು ಇವೆ. ಅವುಗಳೆಂದರೆ,
ವಿಮೆ ಮಾಡಿದ ಮೊದಲ ದಿವಸದಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅವಕಾಶ.
ಕುಟುಂಬದ ಯಾವನೇ ಸದಸ್ಯ ಆದರೂ ತಮ್ಮ ಕುಟುಂಬಕ್ಕೆ ನೀಡಲಾಗಿರುವ ಸಂಪೂರ್ಣ ಮೊತ್ತವನ್ನು ಅಗತ್ಯ ಬಿದ್ದರೆ ಬಳಸಿಕೊಳ್ಳುವ ಅವಕಾಶ.
ಖಾತ್ರಿಯಾದ ಹೆರಿಗೆ ಸೌಲಭ್ಯ.
ಹೆಚ್ಚಿನ ಖಾಯಿಲೆಗಳಿಗೆ ಪ್ಯಾಕೇಜ್ ಮಾಡಿಸಲಾಗಿದೆ. ಈ ವಿಮಾ ಯೋಜನೆಯಲ್ಲಿ ಸಣ್ಣಪುಟ್ಟ ಕಾಯಿಲೆಗಳಾದ ಫ್ಲೂ, ಡೆಂಗ್ಯೂ, ಇಲಿಜ್ವರ ಮುಂತಾದ ಜ್ವರಗಳಿಗೂ ಆಸ್ಪತ್ರೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಇದೊಂದು ಸಮುದಾಯ ವಿಮಾ ಯೋಜನೆಯಾಗಿರುವುದರಿಂದ ಈ ಯೋಜನೆಯನ್ನು ಪ್ರಾರಂಭಿಸುವ ಮೊದಲು ವಿಮಾ ಕಂಪನಿಗಳೊಡನೆ ವಿಮರ್ಶಿಸಿ, ಚರ್ಚಿಸಿ ಅತ್ಯಂತ ಕಡಿಮೆ ಬೆಲೆಯ ಪ್ರೀಮಿಯಂ ಅನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, 2023-24ನೇ ಸಾಲಿಗೆ ರೂ. 1.20 ಲಕ್ಷ ಸೌಲಭ್ಯಕ್ಕೆ ರೂ. 5,400 ಪ್ರೀಮಿಯಂ ಮಾತ್ರ ಇತ್ತು. ಅಂದರೆ ಶೇ. ೪ರಷ್ಟು ಪ್ರೀಮಿಯಂ ಅನ್ನು ವಿಧಿಸಲಾಗಿತ್ತು. ಇತರ ವಿಮಾ ಯೋಜನೆಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯ ವಿಮಾ ಯೋಜನೆ ಎಂದು ಹೇಳಬಹುದಾಗಿದೆ.
ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯಲ್ಲಿ ಹೆಚ್ಚಿನ ಆಸ್ಪತ್ರೆಗಳ ಜೊತೆಯಲ್ಲಿ ಚರ್ಚಿಸಿ ನೆಟ್‌ವರ್ಕ್ ಆಸ್ಪತ್ರೆಗಳನ್ನಾಗಿ ಮಾಡಿಕೊಳ್ಳಲಾಗಿದೆ. ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹಣಕಟ್ಟದೇ ನಗದುರಹಿತ ಚಿಕಿತ್ಸೆಯನ್ನು ಪಡೆದುಕೊಂಡು ಹೋಗುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಇನ್ನು ವಿಮಾ ಯೋಜನೆ ಮಾಡಿಸಿದ್ದರೂ ಕೂಡಾ ಕೆಲವೊಂದು ಸಮಸ್ಯೆಗಳಿಗೆ ಈ ವಿಮಾ ಯೋಜನೆಯಿಂದ ಸೌಲಭ್ಯ ಸಿಗುವುದಿಲ್ಲ. ಅದನ್ನೂ ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಮದ್ಯಪಾನ, ಸಿಗರೇಟ್, ಗುಟ್ಕಾ ಸೇವನೆಯಿಂದ ಬಂದೊದಗುವ ಖಾಯಿಲೆಗಳಿಗೆ ವಿಮಾ ಸೌಲಭ್ಯ ಸಿಗುವುದಿಲ್ಲ. ಅದೇ ರೀತಿ ಗರ್ಭಧಾರಣೆಗೆ ಸಂಬoಧಿಸಿದ ಅಥವಾ ಗರ್ಭಕ್ಕೆ ಸಂಬoಧಿಸಿದ ಯಾವುದೇ ಚಿಕಿತ್ಸೆಗೆ ಸೌಲಭ್ಯ ಸಿಗುವುದಿಲ್ಲ. ಸಂಪೂರ್ಣ ಸುರಕ್ಷಾ ಯೋಜನೆ ಬಹಳ ಜನಪ್ರಿಯವಾಗಿದ್ದು ಪ್ರತಿವರ್ಷ ವಿಮಾ ಕಂಪನಿಗೆ ಪಾವತಿಸಿದ ಮೊತ್ತದಷ್ಟೇ ಸೌಲಭ್ಯ ದೊರಕುತ್ತಿರುವುದು ಗಮನಾರ್ಹವಾಗಿದೆ.
ಸಂಪೂರ್ಣ ಸುರಕ್ಷಾ ಮಾಡಲು ಇಚ್ಛಿಸದ ಇತರ ಸದಸ್ಯರಿಗೆ ಮತ್ತು ಅವರ ಗಂಡನಿಗೆ ಅನುಕೂಲವಾಗುವಂತೆ ‘ಆರೋಗ್ಯ ರಕ್ಷಾ’ ಎಂಬ ವಿಮಾ ಕಾರ್ಯಕ್ರಮವನ್ನೂ ಜಾರಿಗೆ ತರಲಾಗಿದೆ. ಇದು ಅಲ್ಪ ಮೊತ್ತದ ಆಸ್ಪತ್ರೆ ಖರ್ಚುಗಳಿಗೆ ನೆರವು ನೀಡುವ ಯೋಜನೆಯಾಗಿರುತ್ತದೆ. ಇದರಲ್ಲಿ ಗಂಡ – ಹೆಂಡತಿ ಇಬ್ಬರಿಗೆ ಸೇರಿ ರೂ. 20 ಸಾವಿರ ಸೌಲಭ್ಯ ದೊರೆಯುತ್ತಿದ್ದು ಇದನ್ನು ಯಾರೊಬ್ಬರಾದರೂ ಬಳಸಿಕೊಳ್ಳಬಹುದಾಗಿದ್ದು ಇದಕ್ಕೆ ಅತ್ಯಂತ ಅಲ್ಪ ಮೊತ್ತದ ಪ್ರೀಮಿಯಂ ಅಂದರೆ 2023-14ನೇ ಸಾಲಿಗೆ ಕೇವಲ ರೂ. 274 ಪ್ರೀಮಿಯಂ ಅನ್ನು ವಿಧಿಸಲಾಗಿತ್ತು.
ಇದಲ್ಲದೆ ಸರಕಾರವು ‘ಆಯುಷ್ಮಾನ್ ಭಾರತ್’ ಎಂಬ ಬೃಹತ್ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ಸರಕಾರವು ಕೂಡಾ ಇದಕ್ಕೆ ಪೂರಕವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅನುಷ್ಠಾನದ ದೃಷ್ಟಿಯಿಂದ ಅತ್ಯಂತ ಸರಳ, ಅತ್ಯಂತ ವೇಗವಾಗಿ ಮತ್ತು ಅತ್ಯಂತ ನಿರ್ದಿಷ್ಟವಾಗಿ ಸೌಲಭ್ಯ ಕೊಡುವ ಯೋಜನೆ ಎಂದು ಸಂಪೂರ್ಣ ಸುರಕ್ಷಾ ಯೋಜನೆಯು ಹೆಸರುವಾಸಿಯಾಗಿದೆ. ಆದ್ದರಿಂದ ನನ್ನೆಲ್ಲ ಸಹೋದರ/ಸಹೋದರಿಯರಲ್ಲಿ ಕೇಳಿಕೊಳ್ಳುವುದೆನೆಂದರೆ ದಯವಿಟ್ಟು ನಿಮ್ಮ ಕುಟುಂಬಕ್ಕೆ ಸಂಪೂರ್ಣ ಸುರಕ್ಷಾ ಯೋಜನೆಯನ್ನು ಮಾಡಿಸಿಕೊಳ್ಳಿರಿ. ಐದು ಸಾವಿರ ರೂಪಾಯಿ ಖರ್ಚು ಆದರೂ ಸಹಿತ ಇದರಿಂದ ಎಷ್ಟೋ ಪಟ್ಟು ನಿಮಗೆ ಅಗತ್ಯಬಿದ್ದಾಗ ದೊರೆಯುತ್ತದೆ ಎಂಬುವುದನ್ನು ತಿಳಿದುಕೊಳ್ಳಿರಿ. ಯಾವಾಗಲಾದರೂ ಒಮ್ಮೆ ಬರುವ ಖಾಯಿಲೆoಗಳಿಗೆ ಆಗುವ ಖರ್ಚಿನಿಂದಾಗಿ ನೀವು ಇಷ್ಟು ವರ್ಷ ಪಾವತಿಸಿದ ಪ್ರೀಮಿಯಂ ಲಾಭದಾಯಕವಾಗಿಯೇ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಹೆಚ್ಚಿನ ಜನರು ‘ಸಂಪೂರ್ಣ ಸುರಕ್ಷಾ’ ಮಾಡಿದಷ್ಟು ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದನ್ನು ಕೂಡಾ ನಮ್ಮೆಲ್ಲ ಸ್ವಸಹಾಯ ಸಂಘಗಳ ಸದಸ್ಯರು ನೆನಪಿಟ್ಟುಕೊಳ್ಳಬೇಕು. ಕಡಿಮೆ ಪ್ರೀಮಿಯಂ ಮಾಡಿದ್ದಲ್ಲಿ ಸುಲಭವಾಗಿ ಎಲ್ಲರೂ ಸೇರಿಕೊಳ್ಳಬಹುದಾದ ಯೋಜನೆ ಇದು ಆಗುತ್ತದೆ.
ನೆನಪಿಡಿ, ನೀವು ಕಟ್ಟುವ ಪ್ರೀಮಿಯಂ ಅನ್ನು ನೇರವಾಗಿ ವಿಮಾ ಕಂಪನಿಗೆ ವರ್ಗಾಹಿಸಲಾಗುತ್ತದೆ. ನಂತರದ ದಿನಗಳಲ್ಲಿ ಈ ವಿಮೆಯನ್ನು ನಿರ್ವಹಣೆ ಮಾಡಲು ಗ್ರಾಮಾಭಿವೃದ್ಧಿ ಯೋಜನೆಯೇ ಹಲವು ಕೋಟಿ ರೂಪಾಯಿಗಳ ವೆಚ್ಚವನ್ನು ಮಾಡುತ್ತದೆ. ಅದ್ದರಿಂದ ಇದು ಒಂದು ರೀತಿಯಲ್ಲಿ ‘ಅನುದಾನಿತ ಯೋಜನೆ’ಯೆಂದೇ ಹೇಳಬಹುದಾಗಿದೆ. ಅದ್ದರಿಂದಲೇ ಇಷ್ಟು ಕಡಿಮೆ ಬೆಲೆಯಲ್ಲಿ ವಿಮೆಯನ್ನು ಮಾಡಲು ಸಾಧ್ಯವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನನ್ನೆಲ್ಲ ಸಹೃದಯ ಸಹೋದರ/ಸಹೋದರಿಯರು ವಿಮೆ ಮಾಡಿಸಬೇಕೆಂದು ಕೋರುತ್ತೇನೆ.