ಸಣ್ಣ ಪುಟ್ಟ ಬದಲಾವಣೆಯಲ್ಲಿ ಖುಷಿ

ಅನೇಕರಿಗೆ ಜೀವನದಲ್ಲಿ ಅಲ್ಪ – ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಲು ಮನಸ್ಸಿರುವುದಿಲ್ಲ. ನಾವಿರುವುದೇ ಹೀಗೆ ಎಂದು ಅಂದುಕೊoಡಿರುತ್ತಾರೆ. ಆದರೆ ಈ ಅಲ್ಪಸ್ವಲ್ಪ ಬದಲಾವಣೆಗಳಿಂದಲೇ ನಮ್ಮ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ ಎಂಬುದನ್ನು ಗಮನಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹೊದಿಕೆ ಮಡಚಿಡುವುದು, ಸ್ನಾನದ ಬಳಿಕ ಒರೆಸಿದ ಒದ್ದೆ ಬಟ್ಟೆಯನ್ನು ಒಣಗಲು ಹಾಕುವುದು, ಕಾಫಿ – ನೀರು ಕುಡಿದ ಲೋಟವನ್ನು ತಕ್ಷಣ ತೊಳೆದಿಡುವುದು. ಒಗೆದ ಬಟ್ಟೆಯನ್ನು ಸರಿಯಾಗಿ ಇಡುವುದು, ಇಸ್ತಿç ಮಾಡಿಟ್ಟ ಬಟ್ಟೆಯನ್ನು ಜೋಡಿಸಿಡುವುದು, ಓದಿದ ನಂತರ ಪೇಪರ್ ಅನ್ನು ಮಡಚಿ ಅದರ ಜಾಗದಲ್ಲಿಡುವುದು, ಬಾತ್‌ರೂಂನಲ್ಲಿ ದಿನನಿತ್ಯ ಉಪಯೋಗಿಸುವ ವಸ್ತುಗಳಾದ ಬ್ರಷ್, ಪೇಸ್ಟ್, ಶೇವಿಂಗ್ ಸೆಟ್ ಇತ್ಯಾದಿಗಳನ್ನು ಸರಿಯಾದ ಸ್ಥಾನದಲ್ಲಿ ಜೋಡಿಸಿಡುವುದು, ನಾವು ಕುಳಿತುಕೊಳ್ಳುವ ಸೋಫಾ – ಕುರ್ಚಿಗಳು ಸರಿಯಾಗಿರುವಂತೆ ಅದರ ಸ್ಥಾನದಲ್ಲೆ ಇರುವಂತೆ ನೋಡಿಕೊಳ್ಳುವುದು ಹೀಗೆ ಪಟ್ಟಿ ಉದ್ದವಾಗಿ ಕಂಡರೂ ಇವೆಲ್ಲವನ್ನು ಮನೆಮಂದಿಯೆಲ್ಲ ರೂಢಿಸಿಕೊಂಡರೆ ಅಕಸ್ಮಾತ್ ಯಾರಾದರೂ ಅತಿಥಿಗಳು ಬಂದಾಗ ಗಡಿಬಿಡಿ ಆಗುವ ಪ್ರಸಂಗ ತಪ್ಪುತ್ತದೆಯಲ್ಲದೆ ನಮಗೂ ನಮ್ಮ ಮನೆ ಒಂದು ನೆಮ್ಮದಿಯ ತಾಣವಾಗುತ್ತದೆ.
ಮಗಳ ಮನೆಗೆ ಬಂದ ತಾಯಿಯೊಬ್ಬಳು ಮಗಳ ಮನೆ ಅಸ್ತವ್ಯಸ್ತವಾಗಿರುವುದನ್ನು ಕಂಡು ಮಗಳ ಮೇಲೆ ರೇಗಾಡುತ್ತಾಳೆ. ಆದರೆ ಇಡೀ ದಿನ ಆ ಮನೆಯಲ್ಲಿದ್ದುಕೊಂಡು ಮನೆಯ ಆಗು-ಹೋಗುಗಳನ್ನು ಗಮನಿಸಿದಾಗ ಆಕೆಯ ಮನೆಯರ‍್ಯಾರೂ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೆ ಹೊರಗೆ ಆಫೀಸ್‌ನಲ್ಲೂ ದುಡಿದು ಒಳಗಿನ ಕೆಲಸಗಳ ಜವಾಬ್ದಾರಿಯನ್ನು ತಾನೊಬ್ಬಳೆ ವಹಿಸಿಕೊಳ್ಳಬೇಕಾದ ತನ್ನ ಮಗಳ ಅಸಹಾಯಕತೆ, ಕಷ್ಟವನ್ನು ಗಮನಿಸುತ್ತಾಳೆ. ಇದನ್ನೆಲ್ಲ ಕಂಡ ತಾಯಿ ಅಲ್ಲಿಂದ ಹೊರಡಬೇಕಾದರೆ ‘‘ಮಗಳೇ ನನ್ನಿಂದ ಒಂದು ತಪ್ಪಾಗಿದೆ. ನಾನು ನಿನಗೆ ಗೃಹಿಣಿಯಾಗುವ ಎಲ್ಲಾ ವಿಚಾರಗಳನ್ನು ಕಲಿಸಿದ್ದೇನೆ ಆದರೆ ನಿನಗೊಂದು ರೋಲ್ ಮಾಡೆಲ್ ಅನ್ನು ಕೊಡಲಿಲ್ಲ’’ ಎನ್ನುತ್ತಾಳೆ. ಮರುದಿನ ತನ್ನ ಮನೆಗೆ ಹೋದವಳೇ ಮಗನ ರೂಮಿಗೆ ಹೋಗಿ ‘‘ಒಳಗೆ ಅಡುಗೆ ಮನೆ ಟೇಬಲ್ ಮೇಲೆ ಕಾಫಿ ಇಟ್ಟಿದ್ದೇನೆ ತೆಗೆದುಕೊಂಡು ಕುಡಿದು ಲೋಟ ತೊಳೆದಿಡು, ಒಗೆಯುವ ಬಟ್ಟೆಗಳನ್ನು ತಂದು ವಾಷಿಂಗ್ ಮೆಷಿನ್‌ಗೆ ಹಾಕು, ಇಸ್ತಿç ಮಾಡಿಟ್ಟ ಬಟ್ಟೆಗಳನ್ನು ನಿನ್ನ ಕಪಾಟಿನಲ್ಲಿ ಜೋಡಿಸಿಡು. ಇನ್ನು ಮುಂದೆ ನಿನ್ನ ರೂಮ್ ಅನ್ನು ಸ್ವಚ್ಛ ಮಾಡಲು ನಾನು ಬರಲ್ಲ. ನಿನ್ನ ಪುಸ್ತಕಗಳು, ಬಟ್ಟೆಬರೆ, ಹಾಸಿಗೆ, ಹೊದಿಕೆಗಳೆಲ್ಲವನ್ನು ಸರಿಯಾಗಿ ಇಟ್ಟುಕೊಳ್ಳುವುದು ನಿನ್ನ ಜವಾಬ್ದಾರಿ’’ ಅಂದಾಗ ಮಗ ಆಶ್ಚರ್ಯದಿಂದ ಅಮ್ಮನನ್ನು ನೋಡುತ್ತಾನೆ. ಯಾಕೆಂದರೆ ಈವರೆಗೆ ಬೆಳಿಗ್ಗೆ ಕೋಣೆಗೆ ಕಾಫಿ ತಂದುಕೊಡುವುದರಿAದ ಹಿಡಿದು ಮುಂದಿನ ಎಲ್ಲಾ ಕೆಲಸಗಳನ್ನು ಅವಳೇ ಮಾಡುತ್ತಿದ್ದಳು. ಹೀಗೆ ಮುಂದಕ್ಕೆ ಮಗಳಿಗಲ್ಲದಿದ್ದರೂ ಮನೆಗೆ ಬರುವ ಸೊಸೆಗೆ ಆಕೆ ಒಂದು ಒಳ್ಳೆಯ ‘ರೋಲ್ ಮಾಡೆಲ್’ ಆಗುತ್ತಾಳೆ.
ನಮ್ಮನ್ನು ನಾವು ತಿದ್ದಿಕೊಳ್ಳಬೇಕಾದರೆ ಬಹಳ ದೊಡ್ಡ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ದಿನನಿತ್ಯದ ಸಣ್ಣ ಪುಟ್ಟ ಬದಲಾವಣೆಗಳೇ ಮುಂದಿನ ದೊಡ್ಡ ಬದಲಾವಣೆಯ ಮೆಟ್ಟಿಲುಗಳಾಗುತ್ತವೆ. ಸಣ್ಣ ಉದ್ದಿಮೆ ಆರಂಭಿಸುವುದು, ಸಣ್ಣ ಲೇಖನ ಬರೆಯಲು ಆರಂಭಿಸುವುದು, ತಮಗಿಷ್ಟವಾದ ಆಟದ ಅಭ್ಯಾಸ ಮಾಡುತ್ತಾ ಚಾಂಪಿಯನ್ ಆಗುವುದು ಹೀಗೆ ಸಣ್ಣ ಪುಟ್ಟ ಗುರಿಗಳಿದ್ದಾಗ ಆ ಗುರಿಯನ್ನು ತಲುಪಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಮೊದಲಿಗೆ ಇದು ಅಸಾಧ್ಯವೆನಿಸಿದರೂ ಸತತ ಪ್ರಯತ್ನದಿಂದ ಎಲ್ಲ ಸಾಧ್ಯವಾಗುತ್ತದೆ. ಪ್ರಯತ್ನಿಸುತ್ತಿದ್ದಂತೆ ಒಂದೆರಡು ವರ್ಷಗಳು ಕಳೆದಾಗ ನಮ್ಮ ಗುರಿಗೆ ನಾವು ಎಷ್ಟು ಹತ್ತಿರ ಬಂದಿದ್ದೇವೆ ಎಂಬುದರ ಅರಿವಾಗುತ್ತದೆ. ಸ್ವಲ್ಪ ದುಡ್ಡು ಉಳಿಸಿದಾಕ್ಷಣ ಲಕ್ಷಾಧೀಶರಾಗುವುದಿಲ್ಲ. ಮೂರು ದಿನ ಜಿಮ್‌ಗೆ ಹೋದ ತಕ್ಷಣ ಬಾಡಿ ಬಿಲ್ಡರ್ ಆಗಲಾರ. ನಿಧಾನದಲ್ಲಿ ಆಗುವ ಬದಲಾವಣೆಗಳಿಂದಲೇ ನಮ್ಮಲ್ಲಿರುವ ಕೆಟ್ಟ ಗುಣಗಳು ನಾಶವಾಗಿ ಒಳಿತಾಗುವುದನ್ನು ಕಾಣಬಹುದು.
ಎಲ್ಲಾ ದೊಡ್ಡ ವಿಚಾರಗಳು ಸಣ್ಣದರಿಂದಲೇ ಆರಂಭವಾಗುತ್ತದೆ. ಅಭ್ಯಾಸವೆಂಬ ಬೀಜ ಸಣ್ಣದಾಗಿಯೇ ಇರುತ್ತದೆ. ಆದರೆ
ಆ ಅಭ್ಯಾಸಗಳು ಪುನರಾವರ್ತನೆ ಆದಾಗ ಆ ಬೀಜ ನೆಲದಲ್ಲಿ ಸರಿಯಾಗಿ ಬೇರು ಬಿಡಲು, ರೆಂಬೆ – ಕೊಂಬೆಗಳು ಬೆಳೆಯಲು ಆರಂಭವಾಗುತ್ತದೆ. ಗುರಿಯೆಡೆಗೆ ನೋಡುತ್ತಾ ಕುಳಿತಲ್ಲಿ ಗುರಿ ಮುಟ್ಟಲಾಗುವುದಿಲ್ಲ. ಪ್ರತಿ ಒಂದು ಹೆಜ್ಜೆ ಮುಂದಿಡುತ್ತಾ ಹೋದಾಗ ಮಾತ್ರ ಅಲ್ಲಿಗೆ ತಲುಪಬಹುದು. ಮೊದಲ ಹೆಜ್ಜೆ ಇಟ್ಟು ಪ್ರಯತ್ನ ಪಡೋಣ.
ಜೀವನದಲ್ಲಿ ಹಣ, ಅಂತಸ್ತಿನಲ್ಲಿ ಸಿಗುವ ಖುಷಿ, ಗೌರವಕ್ಕಿಂತ ನಾವು ಮಾಡುವ ಸಣ್ಣಪುಟ್ಟ ಕೆಲಸಗಳಲ್ಲಿ ಸಿಗುವ ಸಂತೋಷಗಳು ಶಾಶ್ವತ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಮೂಲಕ ನಾವು ಇತರರಿಗೆ ಮಾದರಿಯಾಗಿ ಬದುಕುವ ಪ್ರಯತ್ನ ಮಾಡೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *