ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ದಯೆ – ದಾಕ್ಷಿಣ್ಯ ಇವೆಲ್ಲಾ ಮಾನವನಲ್ಲಿರಬೇಕಾದ ಒಳ್ಳೆಯ ಗುಣಗಳು. ಇವುಗಳನ್ನು ನಾವು ಬಾಲ್ಯದಿಂದಲೇ ಕಲಿತುಕೊಂಡಿದ್ದೇವೆ. ಆದರೆ ಇಂದು ದಾಕ್ಷಿಣ್ಯಕ್ಕೂ ಒಂದು ಮಿತಿಯನ್ನು ಹಾಕಿಕೊಳ್ಳಬೇಕಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ದಾಕ್ಷಿಣ್ಯ ಮಾಡದಿರುವುದೂ ಬಹಳ ಒಳ್ಳೆಯದು. ಅದು ಮನೆಯಲ್ಲಿ, ಕಚೇರಿ ಅಥವಾ ರಾಜಕೀಯ ಕ್ಷೇತ್ರ ಹೀಗೆ ಎಲ್ಲೇ ಇರಬಹುದು. ಕೆಲವೊಮ್ಮೆ ನಾವು ನೇರವಾಗಿ ‘ಇಲ್ಲ, ಆಗುವುದಿಲ್ಲ’ ಎಂದು ಹೇಳುವ ಧೈರ್ಯವನ್ನು ತೋರಬೇಕಾಗುತ್ತದೆ. ಇಲ್ಲವಾದರೆ ‘ದಾಕ್ಷಿಣ್ಯಕ್ಕೆ ಹೋದ ಮೂಗು ಮತ್ತೆ ಬರುವುದಿಲ’್ಲ ಎಂಬoತಾಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ಕೈ ಕೆಳಗೆ ಕೆಲಸ ಮಾಡುವ ಅಧಿಕಾರಿಗಳನ್ನು ಬಳಸಿಕೊಳ್ಳುವುದಿದೆ. ತಾನು ಮಾತ್ರ ಶುದ್ಧ ಹಸ್ತ ಎಂದು ತೋರಿಸಿಕೊಳ್ಳುತ್ತಾ ಬೇರೆಯವರಿಂದ ಲಂಚ ವಸೂಲಿ ಮಾಡಿಸುವ ಪ್ರಸಂಗಗಳು ನಡೆಯುತ್ತಿರುತ್ತವೆ. ರಾಜಕಾರಣಿ, ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಾಕ್ಷಿಣ್ಯಕ್ಕೆ ಒಳಗಾಗದಿದ್ದರೆ ಅವರನ್ನು ಹೆದರಿಸಬಹುದು ಅಥವಾ ಅವರಿಗೆ ಇತರ ರೀತಿಯಲ್ಲಿ ತೊಂದರೆ ಕೊಡಬಹುದು. ಆದರೆ ದಾಕ್ಷಿಣ್ಯಕ್ಕೆ ಬಿದ್ದು ಅವರು ಹೇಳಿದ ಕೆಲಸವನ್ನು ಮಾಡಿದ್ದಲ್ಲಿ ಕೊನೆಗೆ ಅಧಿಕಾರಿ ಉದ್ಯೋಗವನ್ನು ಕಳೆದುಕೊಂಡು ಸೆರೆಮನೆ ವಾಸವನ್ನು ಅನುಭವಿಸಬೇಕಾದ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಇಂಥ ಸಂದರ್ಭ ಎದುರಾದಾಗ ಕಾನೂನು ಬಾಹಿರವಾದದ್ದನ್ನು ನಾನು ಮಾಡಲಾರೆ ಎಂದು ಸಂಬoಧಿಸಿದ ಅಧಿಕಾರಿ ನಿರ್ದಾಕ್ಷಿಣ್ಯವಾಗಿ ಹೇಳುವ ಧೈರ್ಯವನ್ನು ತೋರಿದರೆ ಹೆಚ್ಚೆಂದರೆ ಆತನಿಗೆ ವರ್ಗಾವಣೆ ಆಗಬಹುದು ಅಷ್ಟೇ.
ಇತ್ತೀಚೆಗೆ ಭಿಕ್ಷÄಕಿಯೊಬ್ಬಳು ತನ್ನ ಪುಟ್ಟ ಕಂದಮ್ಮಳ ಜೊತೆ ಕಾರಿನ ಬಳಿ ಬಂದು ನಮಗೆ ನೀವು ದುಡ್ಡು ಕೊಡಬೇಡಿ, ಹೊಟ್ಟೆಗಿಲ್ಲ, ಊಟ ತಿಂಡಿಗಾಗುವಷ್ಟು ಸ್ವಲ್ಪ ದವಸ – ಧಾನ್ಯವನ್ನು ಕೊಡಿಸಿ ಎಂದಳು. ಪಕ್ಕದಲ್ಲೇ ಇದ್ದ ದೊಡ್ಡ ಅಂಗಡಿಯೊoದಕ್ಕೆ ಕರೆದುಕೊಂಡು ಹೋದಾಗ ತಕ್ಷಣ ಆ ಹುಡುಗಿ ಪರಿಚಿತ ಅಂಗಡಿ ಎಂಬoತೆ ಸಾಮಾಗ್ರಿಗಳನ್ನು ತುಂಬುವ ತಳ್ಳು ಗಾಡಿಯನ್ನು ತೆಗೆದುಕೊಂಡು ಬಂದು ಅಕ್ಕಿ, ಬೇಳೆ, ಎಣ್ಣೆ ಹೀಗೆ ಕಂಡದೆಲ್ಲವನ್ನು ಕೆ.ಜಿ.ಗಟ್ಟಲೆ ಲೆಕ್ಕದಲ್ಲಿ ಗಾಡಿಯಲ್ಲಿ ತುಂಬುವುದಕ್ಕೆ ಆರಂಭಿಸಿದಳು. ಅಂಗಡಿಯಲ್ಲಿ ಈ ಸಾಮಾಗ್ರಿಗಳೆಲ್ಲಾ ಎಲ್ಲೆಲ್ಲಿವೆ ಎಂದು ಗೊತ್ತಿರುವ ಅವಳ ವರ್ತನೆ ನೋಡಿ ನಮಗೆ ಆಶ್ಚರ್ಯವಾಯಿತು. ಆಗ ಅಂಗಡಿಯ ಪ್ರತಿನಿಧಿ ‘ಇವರು ಈ ರೀತಿ ವಾರದಲ್ಲಿ ಎರಡರಿಂದ – ಮೂರು ದಿನವಾದರೂ ಬರುತ್ತಾರೆ ಮೇಡಂ. ಹಾಗಾಗಿ ಅವಳಿಗೆ ಎಲ್ಲಾ ಗೊತ್ತಿದೆ. ನಿಮ್ಮಂಥವರನ್ನು ಹೇಗೆ ಮೋಸಗೊಳಿಸಬಹುದು ಎನ್ನುವುದು ಅವಳಿಗೆ ಚೆನ್ನಾಗಿ ತಿಳಿದಿದೆ. ಇದು ಭಿಕ್ಷಾಟನೆಯ ಹೊಸ ದಾರಿ’ ಅಂದಾಗ ದವಸ – ಧಾನ್ಯ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದು ದಾಕ್ಷಿಣ್ಯಕ್ಕೆ ಒಳಗಾಗಿ ಉಪಾಯವಿಲ್ಲದೆ ಅವಳು ಖರೀದಿಸಿದ ಎಲ್ಲಾ ಸಾಮಾಗ್ರಿಗಳ ಮೊತ್ತವನ್ನು ಅಂಗಡಿ ಮಾಲಕರಿಗೆ ಪಾವತಿಸಬೇಕಾಯಿತು.
ಕೇಳುವುದಕ್ಕೆ ಅವಳಿಗೆ ಯಾವ ದಾಕ್ಷಿಣ್ಯವು ಇಲ್ಲ. ದಿನಾ ಬಂದು ಸ್ವಲ್ಪ ಸಕ್ಕರೆ ಇದ್ದರೆ ಕೊಡಿ, ಸ್ವಲ್ಪ ಹಾಲು, ಟೀ ಪುಡಿ, ನೆಂಟರು ಬಂದಿದ್ದಾರೆ ಎನ್ನುತ್ತಾ ಎಲ್ಲದಕ್ಕೂ ಪಾತ್ರೆ ಹಿಡಿದುಕೊಂಡು ಬರುತ್ತಾಳೆ ಎಂದು ಹಿಂದಿನಿoದ ಬೈಯುವ ಹೆಂಗಸು ಯಾವತ್ತೂ ನೆರೆ ಮನೆಯವಳಿಗೆ ‘ಇಲ್ಲ’ ಎಂದು ಹೇಳಿಯೇ ಇಲ್ಲ. ಯಾಕೆಂದರೆ ‘ಇಲ್ಲ’ ಎಂದು ಹೇಳಲು ಅವರನ್ನು ದಾಕ್ಷಿಣ್ಯ ಬಿಟ್ಟಿಲ್ಲ. ಯಾರಿಗಾದರೂ ಅಗತ್ಯ ಇದ್ದಾಗ ಸಹಾಯ ಮಾಡುವುದು ಒಳ್ಳೆಯದೆ, ಆದರೆ ಇತ್ತೀಚಿನ ದಿನಗಳಲ್ಲಿ ತಕ್ಷಣ ನೆರವಿಗೆ ಬರುತ್ತಾರೆ ಅಂತ ಗೊತ್ತಾದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಚು.
ಮಕ್ಕಳು ಹಠ ಮಾಡುತ್ತಾರೆಂದು ಚಿಕ್ಕಂದಿನಿoದ ಅವರು ಕೇಳಿದ್ದನ್ನೆಲ್ಲಾ ಕೊಡಿಸುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಕೆಲವೊಮ್ಮೆ ಅವರಿಗೆ ಎಷ್ಟೇ ಬೇಸರವಾಗಲಿ ಈ ಸಲ ಕೊಡಿಸುವುದಕ್ಕಾಗುವುದಿಲ್ಲ ಎಂದು ಹೇಳುವ ಅಭ್ಯಾಸವನ್ನು ಹೆತ್ತವರು ರೂಢಿಸಿಕೊಳ್ಳಬೇಕು. ಇಲ್ಲಿ ಪ್ರೀತಿಯ ದಾಕ್ಷಿಣ್ಯಕ್ಕೆ ಒಳಗಾಗಲೇಬಾರದು.
ಬಹಳ ದಿನಗಳ ಪೂರ್ವ ತಯಾರಿ ಮಾಡಿ ಆ ದಿನ ಮನೆಯಲ್ಲಿ ಅಡುಗೆ ಮಾಡದೆ ಮನೆಮಂದಿಯೆಲ್ಲಾ ಹೋಟೆಲ್‌ಗೆ ಹೋಗಿ ಭರ್ಜರಿ ಊಟ ಮುಗಿಸಿ, ಸಿನಿಮಾ ನೋಡಿಕೊಂಡು ಬರುವುದೆಂದು ಮನೆಯಿಂದ ಹೊರಡಬೇಕೆನ್ನುವಷ್ಟರಲ್ಲಿ ಮನೆಗೆ ಅತಿಥಿಗಳು ಬಂದುಬಿಡುವುದುoಟು. ಅದೇ ಊರಿನವರು, ಪರಿಚಿತರು, ಆಗಾಗ ಬರುವ ಅತಿಥಿಗಳಾದರೆ ಯಾವುದೇ ದಾಕ್ಷಿಣ್ಯ ಮಾಡಿಕೊಳ್ಳದೆ ತಮ್ಮ ಇವತ್ತಿನ ಕಾರ್ಯಕ್ರಮದ ಬಗ್ಗೆ ಅವರಿಗೆ ತಿಳಿಸಿ ಕ್ಷಮೆಯಾಚಿಸಿ ಹೊರಟು ಬಿಡಬಹುದು. ಆದರೆ ಯಾವಾಗಲಾದರೂ ಒಮ್ಮೆ ಬರುವ ಅಪರೂಪದ ಅತಿಥಿಗಳಾದರೆ ಆಗ ನಾವು ದಾಕ್ಷಿಣ್ಯಕ್ಕೆ ಒಳಗಾಗುತ್ತೇವೆ. ಆದರೆ ಕೆಲವು ಅತಿಥಿಗಳಿರುತ್ತಾರೆ ಬೆಳಿಗ್ಗೆ ತಿಂಡಿಯ ಸಂದರ್ಭದಲ್ಲಿ ಬಂದು ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಮುಗಿಸಿಕೊಂಡೆ ಹೊರಡುವವರು. ಇವರು ಮನೆಯವರ ಆದ್ಯತೆ, ಅಡಚಣೆಗಳ ಬಗ್ಗೆ ಚಿಂತಿಸುವುದಿಲ್ಲ. ಮಕ್ಕಳಿಗೆ ಪರೀಕ್ಷೆ, ಮನೆಯೊಡತಿಗೆ ಅಸೌಖ್ಯ ಅಥವಾ ಏನಾದರೂ ತುರ್ತು ಕೆಲಸವೇ ಇರಬಹುದು, ಆದರೆ ಯಾವ ಸೂಕ್ಷö್ಮಗಳನ್ನು ಇವರು ಅರಿತುಕೊಳ್ಳಲಾರರು. ಇವರನ್ನು ನಿಭಾಯಿಸುವುದು ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ಪ್ರತಿ ಬಾರಿ ನಾವು ದಾಕ್ಷಿಣ್ಯಕ್ಕೆ ಒಳಗಾಗುವುದು ಒಳ್ಳೆಯದಲ್ಲ.
ಗೆಳೆಯನಿಗೆ ಕಾಗದಪತ್ರಗಳಿಲ್ಲದೆ ಸಾಲ ಕೊಟ್ಟವರು, ಸಾಲಕ್ಕೆ ಗ್ಯಾರಂಟಿ ನಿಂತು ಮೋಸ ಹೋದವರು, ಮನೆಯನ್ನು ಬಾಡಿಗೆಗೆ ಕೊಟ್ಟು ಮತ್ತೆ ಅವರನ್ನು ಎಬ್ಬಿಸಲಾಗದೆ ಕಷ್ಟಪಡುವವರು, ಸಾಮಾಜಿಕ ಜಾಲತಾಣದಲ್ಲಿ ಬಂದ ಬಹುಮಾನದ ಸಂದೇಶಕ್ಕೆ ಕಟ್ಟುಬಿದ್ದು ಹಣ ಕಳೆದುಕೊಂಡವರು, ದಾಕ್ಷಿಣ್ಯಕ್ಕೆ ಪ್ರೇಮಿ ಕರೆದಲ್ಲೆಲ್ಲಾ ಹೋಗಿ ಕೊನೆಗೆ ಆಕೆ ಕೈಕೊಟ್ಟಾಗ ಕೊರಗುವವರು, ಡಿಸ್ಕೌಂಟ್ ಆಫರ್‌ಗಳಿಗೆ ಮರುಳಾಗಿ ಹಳೆಯ ವಸ್ತುಗಳನ್ನು ಕೊಳ್ಳುವವರು ಹೀಗೆ ಅತಿ ದಾಕ್ಷಿಣ್ಯಕ್ಕೆ ಬಿದ್ದು ಕಷ್ಟಪಡುವ ಸಾಕಷ್ಟು ಮಂದಿ ನಮ್ಮ ನಡುವೆ ಇರುತ್ತಾರೆ.
ಅನೇಕ ಸಲ ನಮ್ಮ ಒಳ್ಳೆಯತನವನ್ನು ನಮ್ಮ ದೌರ್ಬಲ್ಯ ಎಂದು ಭಾವಿಸುವವರಿದ್ದಾರೆ. ಆದರೆ ಅದು ನಮ್ಮ ಸಮಸ್ಯೆ ಅಲ.್ಲ ಸಮಸ್ಯೆ ಅವರದ್ದೆ ಆಗಿರುತ್ತದೆ. ಕನ್ನಡಿ ಎಂದಿಗೂ ಬದಲಾಗುವುದಿಲ್ಲ. ಕನ್ನಡಿ ತನ್ನೆದುರು ಬಂದವರಿಗೆ ಅವರ ಮುಖ ಹೇಗಿರುತ್ತದೆಯೋ ಹಾಗೇ ತೋರಿಸುವ ಕೆಲಸವನ್ನು ಮಾಡುತ್ತದೆ. ಹಾಗೆಯೇ ನಾವು ಕೂಡಾ ನಮ್ಮ ಒಳ್ಳೆಯತನವನ್ನು ಇನ್ನೊಬ್ಬರಿಗಾಗಿ ಬಿಟ್ಟುಕೊಡಬೇಕಾದ ಅಗತ್ಯವಿಲ್ಲ.
ಬದುಕಿನಲ್ಲಿ ದಾಕ್ಷಿಣ್ಯ ಇರಬೇಕು. ಆದರೆ ಯಾರಿಗೆ, ಯಾವಾಗ, ಯಾಕೆ ದಾಕ್ಷಿಣ್ಯ ತೋರಿಸಬೇಕೆಂಬ ಅರಿವು ನಮಗಿರಬೇಕಾದುದು ಅಗತ್ಯ. ಅತೀ ದಾಕ್ಷಿಣ್ಯಕ್ಕೆ ಬಿದ್ದರೆ ನಮ್ಮ ಸುಂದರ ಬದುಕನ್ನು ಕಳೆದುಕೊಳ್ಳುವ ಪ್ರಸಂಗ ಎದುರಾಗಬಹುದು. ಆದ್ದರಿಂದ ಕೆಲವೊಮ್ಮೆ ದಾಕ್ಷಿಣ್ಯ ತೋರುವ ಬದಲು ನೇರವಾಗಿ ‘ಇಲ್ಲ’ ಎಂದು ಹೇಳುವುದರಲ್ಲಿ ಯಾವ ತಪ್ಪು ಇಲ್ಲ.