ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಾವು ದೈಹಿಕವಾಗಿ ಆರೋಗ್ಯಪೂರ್ಣವಾಗಿ ಇರಬೇಕಾದರೆ ಕೆಲವು ದಿನಚರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆರೋಗ್ಯಪೂರ್ಣವಾದ ಆಹಾರದ ಕ್ರಮ, ಸರಳ ಜೀವನ ಮತ್ತು ಒಳ್ಳೆಯ ವಾತಾವರಣ ಹೆಚ್ಚು ಸಮಯ ಬದುಕುವುದಕ್ಕೆ ಕಾರಣವಾಗುತ್ತದೆ ಎಂಬುದಾಗಿ ಜಪಾನೀಯರ ಅಭಿಪ್ರಾಯ. ಪ್ರಪಂಚದಲ್ಲಿ ದೀರ್ಘಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಜಪಾನ್ ದೇಶದ ಇಕಿಗಾವಾ ಎಂಬ ಪ್ರದೇಶದಲ್ಲಿ. ಅಲ್ಲಿಯ ಜನರು ಪರಸ್ಪರ ಸೌಹಾರ್ದದಿಂದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತ ಸಹೋದರತ್ವ ಭಾವದಿಂದ ಬದುಕುತ್ತಾರಂತೆ. ಜಪಾನಿನ ‘ಉಗಿಮಿ’ ಎಂಬ ಹಳ್ಳಿಯ ಬಹುತೇಕರು ಆರೋಗ್ಯವಂತರು. ಇಲ್ಲಿ ಶತಾಯುಷಿಗಳು ಬಹುಸಂಖ್ಯೆಯಲ್ಲಿದ್ದಾರೆ. ನಿವೃತ್ತ ಜೀವನದಲ್ಲಿಯೂ ಎಂದೂ ನಿರಾಶೆ, ಹತಾಶರಾಗಿ ಬದುಕುವುದಿಲ್ಲ. ಎಲ್ಲರನ್ನೂ ಬಂಧುಗಳoತೆ ಕಾಣುವ, ಯಾರನ್ನಾದರೂ ಮೊದಲನೆಯ ಭಾರಿ ಭೇಟಿಯಾದರೂ ಪ್ರೀತಿಯಿಂದ ಮಾತನಾಡುವುದನ್ನು, ಕಡಿಮೆ ಆಹಾರ ಸ್ವೀಕರಿಸುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.
‘ಯೌವನದ ಮೂಲಗುಟ್ಟು ಉತ್ಸಾಹ, ಕ್ರಿಯಾಶೀಲತೆ’ ಎಂದು ಶತಾಯುಷಿ ಸರ್. ಎಂ. ವಿಶ್ವೇಶ್ವರಯ್ಯ ಹೇಳುತ್ತಿದ್ದರು. ‘ನಾಡಿನ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ನಿಮ್ಮ ಚಿರಯೌವನದ ರಹಸ್ಯವೇನು?’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಇಡೀ ಜನಾಂಗಕ್ಕೇ ಮಾರ್ಗದರ್ಶಕ ಸಂದೇಶವಾಗಿತ್ತು! ‘ಸದಾ ಆನಂದದಿoದ ಇರಬೇಕು. ಕ್ರಿಯಾಶೀಲರಾಗಿ ಗೆಲುವಿಗಾಗಿ ಶ್ರಮಿಸಬೇಕು. ನಿರಂತರವೂ ನಗುತ್ತಿರಬೇಕು, ಎಲ್ಲೆಲ್ಲೂ ತಮಾಷೆಯ ಸಂದರ್ಭಗಳನ್ನು ಗುರುತಿಸಿ ಅನುಭವಿಸಲು ಪ್ರಯತ್ನಿಸಬೇಕು. ಸಂಯಮದಿoದ ವ್ಯವಹರಿಸಬೇಕು. ಈ ಪಂಚಸೂತ್ರಗಳೇ ನನ್ನ ಉತ್ಸಾಹದ ರಹಸ್ಯವಾಗಿದೆ’ ಎಂದಿದ್ದರು.
ಮನುಷ್ಯನ ದೇಹಕ್ಕೆ ಬರುವ ರೋಗಗಳನ್ನು ನಿಯಂತ್ರಿಸಬೇಕಾದರೆ ಜೀವನದಲ್ಲಿ ಕೆಲವು ನಿರ್ಬಂಧಗಳನ್ನು ನಾವೇ ಹಾಕಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ನಾವು ಸೇವಿಸುವ ಇಂದಿನ ಆಹಾರ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಜಪಾನ್ ದೇಶದವರ ಜೀವನಕ್ರಮವನ್ನು ನೋಡಿದರೆ ಅವರು ಯಾವಾಗಲೂ ಕಡಿಮೆ ಆಹಾರವನ್ನು ಸೇವಿಸುತ್ತಾರೆ. ಕಡಿಮೆ ಆಹಾರ ಸೇವಿಸುವುದಕ್ಕೆ ಜಪಾನೀಯರು ಮಾಡಿರುವ ಉಪಾಯ ಹೀಗಿದೆ. ಅವರು ಯಾವುದೇ ಉಪಾಹಾರ ಮಂದಿರಗಳಿಗೆ ಹೋದಾಗ ಅವರಿಗೆ ಒಂದು ದೊಡ್ಡ ಟ್ರೇಯಲ್ಲಿ ಐದು ತಟ್ಟೆಗಳನ್ನಿಟ್ಟು ಆಹಾರ ನೀಡುತ್ತಾರೆ. ಐದು ಪಾತ್ರೆಗಳಲ್ಲಿ ನಾಲ್ಕು ಅತ್ಯಂತ ಚಿಕ್ಕದಾದಂತವುಗಳು ಮತ್ತೆ ಒಂದು ಪಾತ್ರೆಯಲ್ಲಿ ಸ್ವಲ್ಪ ಹೆಚ್ಚಿನ ಆಹಾರ ನೀಡುತ್ತಾರೆ. ಅಂದರೆ ಊಟಕ್ಕೆ ಇಟ್ಟ ಐದು ತಟ್ಟೆಗಳಲ್ಲಿನ ಆಹಾರ ನೋಡುವಾಗ ನಮ್ಮ ಮನಸ್ಸು ಹೇಳುತ್ತದೆ; ‘ನೀನು ತುಂಬಾ ಆಹಾರವನ್ನು ಸ್ವೀಕರಿಸುತ್ತಿದ್ದಿ’ ಎಂದು. ಆಗ ಆ ತಟ್ಟೆಗಳಲ್ಲಿರುವ ಸ್ವಲ್ಪ ಆಹಾರವನ್ನು ಸ್ವೀಕರಿಸಿದಾಗ ತೃಪ್ತಿ ಆಗಿಬಿಡುತ್ತದೆ. ಸ್ಪಲ್ಪ ಹಸಿವಿರುವಾಗಲೇ ಊಟ ನಿಲ್ಲಿಸಿಬಿಡುತ್ತಾರೆ. ಆ ಮೂಲಕ ಜಪಾನಿಯರು ದೇಹದ ತೂಕ ಕಳೆದುಕೊಳ್ಳುತ್ತಾರೆ. ಬೊಜ್ಜು ಕರಗಿಸಿಕೊಳ್ಳುತ್ತಾರೆ.
ಹಾಗಾದರೆ ಜಪಾನ್ ದೇಶದಲ್ಲಿ ಎಲ್ಲರೂ ದೀರ್ಘಾಯುಷಿಗಳೇ? ಖಂಡಿತಾ ಅಲ್ಲ, ‘ಜಪಾನಿನ ಯುವಕರಿಗೆ ದುಡಿಮೆ ಗೊತ್ತು. ಆದರೆ ನಗುವುದು ಗೊತ್ತಿಲ್ಲ’ ಎಂಬ ಒಂದು ಮಾತಿದೆ. ಜಪಾನಿನಲ್ಲಿ ನಮಗೂ ಈ ಅಂಶ ಸತ್ಯ ಎಂದೆನಿಸಿತು. ಅಲ್ಲಿ ರೈಲಿನಲ್ಲಿ ಪ್ರವಾಸ ಮಾಡುವಾಗ ಒಬ್ಬರು ಇನ್ನೊಬ್ಬರನ್ನು ನೋಡಿ ನಗುವುದು, ಸ್ನೇಹಭಾವವನ್ನು ಹೊರಹಾಕುವುದು ಇದ್ಯಾವುದೂ ಇಲ್ಲ. ಎಲ್ಲರೂ ಅವರವರಷ್ಟಕ್ಕೆ ಮೊಬೈಲ್, ಲ್ಯಾಪ್‌ಟಾಪ್ ನೋಡುತ್ತ ಸಂಚಾರ ಮಾಡುತ್ತಾರೆ. ಇದು ಯಾಕೆ ಹೀಗೆ ಎಂದು ಚಿಂತಿಸಿದರೆ ಅವರು ಹೇಳುತ್ತಿದ್ದರು; ‘ಈಗಿನ ತಲೆಮಾರಿಗೆ ಸ್ವಾರ್ಥ ಬಂದುಬಿಟ್ಟಿದೆ. ತಾನು, ತನ್ನದು ಮಾತ್ರ ಜೀವನ ಎಂಬ ಭಾವನೆ ಜಾಗೃತವಾಗಿ ಬಿಟ್ಟಿದೆ. ಹಾಗಾಗಿ ಅವರು ಹಿಂದಿನವರ ಹಾಗೆ ಎಲ್ಲರೊಂದಿಗೆ ಬೆರೆಯುವುದಿಲ್ಲ, ನಗುವುದಿಲ್ಲ. ಎಲ್ಲಿಯವರೆಗೆ ಎಂದರೆ ಮದುವೆಗಳನ್ನು ಕೂಡಾ ಅವರು ಸಾರ್ವಜನಿಕವಾಗಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.’
‘ಜಪಾನಿಯರು ನಗಬೇಕು ಎಂಬುದಾಗಿ ಒಂದು ಹೊಸ ಯೋಜನೆ ಹಾಕಿದ್ದೇವೆ’ ಎಂದು ಅವರಲ್ಲೊಬ್ಬರು ಹೇಳಿದರು. ಅದೇನೆಂದರೆ ‘ಬಾಯಿಗೆ ಎಡ ಮತ್ತು ಬಲ ಬದಿಯ ತೋರುಬೆರಳನ್ನು ಹಾಕಿ ತುಟಿಯ ಬದಿಗಿಟ್ಟು ವಿಸ್ತಾರ ಮಾಡಿ ನಗುವ ಅಭ್ಯಾಸ ಮಾಡಿಸುತ್ತಿದ್ದೇವೆ. ಯಾಕೆಂದರೆ ಅವರಲ್ಲಿ ಮುಖದ ನಗುವ ಸ್ನಾಯುಗಳು ಎಷ್ಟು ಬಿಗುವಾಗಿದೆ ಎಂದರೆ ಅವರಿಗೆ ನಗುವುದೇ ಮರೆತುಹೋಗಿದೆ ಅಥವಾ ನಗಲು ಆಗುವುದಿಲ್ಲ.’ ನಾವು ಆಗ ಹೇಳಿದ್ದುಂಟು; ‘ಭಾರತೀಯರಾದ ನಮಗೆ ನಗುವುದನ್ನು ಹೇಳಿಕೊಡಬೇಕಾಗಿಲ್ಲ. ಆದರೆ ನಗು ನಿಲ್ಲಿಸುವುದು ಹೇಗೆ ಎಂದು ಹೇಳಿಕೊಡಬೇಕು.’ ಹಾಗಾಗಿ ದೀರ್ಘಾಯುಷ್ಯದ ಗುಟ್ಟು ನೆಮ್ಮದಿ ಮತ್ತು ಸಂತೋಷ. ಅದರ ಜೊತೆಗೆ ಎಲ್ಲವನ್ನೂ ಹಿತಮಿತವಾಗಿ ಬಳಸಿ ಸಹನೆಯಿಂದ, ತಾಳ್ಮೆಯಿಂದ, ಸರಿಯಾಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕನ್ನು ಪ್ರೀತಿಸಿದರೆ ತನ್ನಿಂತಾನಾಗಿಯೇ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ.