ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ
ಕಳೆದ ಸಂಚಿಕೆಯಲ್ಲಿ ಬ್ಯಾಂಕ್‌ನಿ0ದ ಗೃಹಸಾಲ ಪಡೆಯಲು ಎಲ್ಲಾ ರೀತಿಯಲ್ಲಿ ಪ್ರಯತ್ನಪಟ್ಟು ಬ್ಯಾಂಕ್‌ನ ವಕೀಲರಿಂದ ಅರ್ಹ ಲೀಗಲ್ ಒಪಿನಿಯನ್ ಪಡೆದ ಮೇಲೂ ಕೂಡಾ ಕೆಲವೊಂದು ವಿಚಾರದಲ್ಲಿ ಬ್ಯಾಂಕ್‌ನ ಇಂಜಿನಿಯರ್‌ಗಳು ತಮ್ಮ ವಿಚಕ್ಷಣೆಯಲ್ಲಿ ಕೆಲವು ತಪಾವತುಗಳನ್ನು ಗುರುತಿಸಿ ಕೊನೆಯಲ್ಲಿ ಸಾಲದ ಅರ್ಜಿ ತಿರಸ್ಕೃತವಾಗಿ ಪಟ್ಟ ಎಲ್ಲಾ ಶ್ರಮ ವ್ಯರ್ಥ ಆದ ಬಗ್ಗೆ ತಿಳಿದೆವು.
ಒಂದು ಶಿಸ್ತುಬದ್ಧ ಅರ್ಥ ವ್ಯವಸ್ಥೆಯಲ್ಲಿ ಬ್ಯಾಂಕ್ ವಿಧಿಸುವ ನಿಯಮಗಳೆಲ್ಲವೂ ಅಗತ್ಯವಾಗಿದೆ. ಆದರೆ ಸಾಮಾನ್ಯ ಜನರಿಗೆ, ಅದರಲ್ಲೂ ಬಡವರಿಗೆ ಆ ನಿಯಮಗಳನ್ನು ಅನುಸರಿಸಲು ಬೇಕಾದ ದಾಖಲೆ ಪತ್ರ, ಜಾಮೀನು ಇಲ್ಲದೇ ಇರುವುದೇ ಮುಖ್ಯ ಸಮಸ್ಯೆಯಾಗಿದೆ. ನಿಯಮ, ಜಾಮೀನು, ಆದಾಯ ದೃಢೀಕರಣ ಇತ್ಯಾದಿ ದಾಖಲೆಗಳು ಕೇವಲ ಗೃಹಸಾಲಕ್ಕೆ ಅಷ್ಟೇ ಅಲ್ಲ, ಇತರೆ ಸಾಲಗಳಿಗೆ ಕೂಡಾ ನೀಡಲೇಬೇಕು. ಇನ್ನು ಸಾಲದ ಉದ್ದೇಶದ ವಿಚಾರಕ್ಕೆ ಬಂದರೆ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಬ್ಯಾಂಕ್‌ನಲ್ಲಿ ಅಂತಹ ಸಾಲದ ಸ್ಕೀಮ್ ಇದ್ದಲ್ಲಿ ಮಾತ್ರ ಸಾಲ ನೀಡಲು ಸಾಧ್ಯವಾಗುತ್ತದೆ. ಉದ್ದೇಶಿತ ಸಾಲದ ಸ್ಕಿಮ್ ಬ್ಯಾಂಕಿನಲ್ಲಿ ಇಲ್ಲದಿದ್ದಲ್ಲಿ ಸಾಲವಿಲ್ಲ. ಉದಾ : ಮಗಳ ಮದುವೆಗೆ ಸಾಲ ಬೇಕೆಂದು ಬ್ಯಾಂಕ್‌ನಲ್ಲಿ ಸಾಲ ಕೇಳಿದರೆ ಅಂತಹ ಯಾವ ಸ್ಕೀಮ್ ಬ್ಯಾಂಕ್‌ನಲ್ಲಿ ಇಲ್ಲ. ಸ್ಕೀಮ್ ಇಲ್ಲದೇ ಸಾಲದ ಖಾತೆ ಕಂಪ್ಯೂಟರ್‌ನಲ್ಲಿ ಓಪನ್ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ನವರಿಗೆ ಬೇರೆ ಯಾವುದೇ ಸುಳ್ಳು ಉದ್ದೇಶವನ್ನು ಹೇಳಿ ಮಗಳ ಮದುವೆಗೆ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ’ ಎಂಬ ಗಾದೆ ನಿಮ್ಮ ನೆನಪಿಗೆ ಬಂದರೆ ಅದನ್ನು ಪಕ್ಕದಲ್ಲಿ ಇಡಿ. ಏಕೆಂದರೆ ಒಂದು ಸುಳ್ಳು (ಬೇರೆ ಯಾವುದೋ ಸಾಲದ ಉದ್ದೇಶ) ಹೇಳಿಯೂ ಬ್ಯಾಂಕ್‌ನಿAದ ಸಾಲ ಪಡೆಯಲು ಸಾಧ್ಯ ಇಲ್ಲ. ಸಾಲ ಕೊಡುವ ಮೊದಲು ಪರಿಶೀಲನೆಗೆ ಬರುವ ಬ್ಯಾಂಕ್ ಅಧಿಕಾರಿಗಳು ಬರುತ್ತಾರೆ. ಏನಾದರೂ ಸುಳ್ಳು ಉದ್ದೇಶದಿಂದ ಸಾಲಕ್ಕೆ ಪ್ರಯತ್ನಿಸಿದ್ದರೆ ಅಲ್ಲಿ ಬಣ್ಣ ಬಯಲಾಗುತ್ತದೆ. ಬ್ಯಾಂಕ್‌ನಲ್ಲಿ ಯಾವ ಉದ್ದೇಶಕ್ಕೆ ಸಾಲ ಕೇಳಿದಿರೋ, ಆ ಉದ್ದೇಶಕ್ಕೆ ಸಾಲದ ಮೊತ್ತ ಬಳಕೆಯಾಗಬೇಕು. ಉದಾ : ಒಂದು ವ್ಯಾಪಾರ ಉದ್ದೇಶಕ್ಕೆ ಸಾಲ ತೆಗೆಯುವುದಾದರೆ ಬ್ಯಾಂಕ್‌ನ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನಿಮ್ಮ ಅಂಗಡಿ ಹೇಗಿದೆ, ಅದು ವ್ಯಾಪಾರಕ್ಕೆ ಯೋಗ್ಯವಾಗಿದೆಯೇ, ಪ್ರಸ್ತುತ ಅಂಗಡಿಯಲ್ಲಿ ಸಾಮಾಗ್ರಿಗಳಿದೆಯೇ ಎಂದು ಪರಿಶೀಲಿಸುತ್ತಾರೆ. ಒಂದು ವೇಳೆ ನಿಮ್ಮಲ್ಲಿ ಭೌತಿಕವಾಗಿ ಕಟ್ಟಡ ಇದ್ದು, ದಾಖಲಾತಿಗಳೂ ಸರಿಯಾಗಿದ್ದರೆ ಮಾತ್ರ ನಿಮ್ಮ ಸಾಲದ ಅರ್ಜಿಯನ್ನು ಪರಿಗಣಿಸುತ್ತಾರೆ. ಆದರೆ ಸಾಲದ ಹಣ ನೇರವಾಗಿ ನಗದಿನ ರೂಪದಲ್ಲಿ ನಿಮ್ಮ ಕೈಗೆ ಸಿಗುತ್ತದೆ ಎಂಬ ಯಾವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ವ್ಯಾಪಾರದ ಉದ್ದೇಶಗಳಿಗೆ ಬ್ಯಾಂಕ್ ಸಾಲ ಕೊಡುವುದು ಹೆಚ್ಚಾಗಿ ಅವಧಿಯ ಸಾಲಗಳಾಗಿರುತ್ತದೆ (Term Loans). ಇಲ್ಲಿ ನೀವು ಯಾರಿಂದ ಕೊಟೇಷನ್ ಪಡೆಯುತ್ತೀರೋ ಅವರ ಖಾತೆಗೆ ನೇರವಾಗಿ ಸಾಲದ ಮೊತ್ತ ವರ್ಗಾವಣೆಯಾಗುತ್ತದೆ. ಹೋಲ್ಸೇಲ್ ಡೀಲರ್‌ನವರಿಂದ ಖರೀದಿ ಮಾಡಲು ಕೊಟೇಷನ್ ಕೊಟ್ಟಿರುತ್ತೀರಿ. ಇಲ್ಲವೇ ಅಂಗಡಿಯ ಅಭಿವೃದ್ಧಿಗಾಗಿ ಫ್ರಿಡ್ಜ್ ಮುಂತಾದ ಪರಿಕರಗಳ ಕೊಟೇಷನ್ ಕೊಟ್ಟಿರುತ್ತೀರಿ. ಇಲ್ಲಿ ಸಾಲ ಬಿಡುಗಡೆಯಾಗುವಾಗ ಜಿಎಸ್‌ಟಿ ಪಾವತಿಯೊಂದಿಗೆ ಡೀಲರ್‌ನ ಅಕೌಂಟ್‌ಗಳಿಗೆ ಮೊತ್ತ ವರ್ಗಾವಣೆಯಾಗುವುದರಿಂದ ಯಾವುದೇ ಹೊಂದಾಣಿಕೆಗಳಿಗೆ ಸಾಧ್ಯವಿಲ್ಲ. ಇಷ್ಟಾಗಿಯೂ ಏನಾದರೂ ಹೊಂದಾಣಿಕೆ ಮಾಡಲು ಪ್ರಯತ್ನ ಪಟ್ಟಲ್ಲಿ ದುಬಾರಿ ಜಿಎಸ್‌ಟಿಯನ್ನು ನಿಮ್ಮ ಕೈಯಿಂದ ಕಟ್ಟಬೇಕು. ಒಂದು ವೇಳೆ ನೀವು ಇದಕ್ಕೆ ಸಿದ್ಧರಾದರೂ ಕೂಡಾ ಸಾಲದ ವಿನಿಯೋಗದ ಪರಿಶೀಲನೆ ಸಂದರ್ಭದಲ್ಲಿ ಆ ವಸ್ತುಗಳು ನಿಮ್ಮಲ್ಲಿ ಇಲ್ಲದಿರುವಾಗ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತೀರಿ. ಇಷ್ಟಕ್ಕೇ ನಿಲ್ಲುವುದಿಲ್ಲ. ಆ ವಸ್ತುಗಳಿಗೆ ಇನ್ಶೂರೆನ್ಸ್ಗಳನ್ನು ಮಾಡಬೇಕಾಗಿರುತ್ತದೆ. ಅದಕ್ಕೆ ನೀವು ಖರೀದಿ ಮಾಡಿದ ಬಿಲ್‌ನ ಮೂಲ ಪ್ರತಿಯನ್ನು ಬ್ಯಾಂಕಿಗೆ ನೀಡಬೇಕಾಗಿರುತ್ತದೆ. ಇಂತಹ ಏಳುಸುತ್ತಿನಕೋಟೆಯಲ್ಲಿ ಯಾವುದೋ ಉದ್ದೇಶ ಹೇಳಿ, ಇನ್ಯಾವುದಕ್ಕೂ ಸಾಲ ಬಳಕೆ ಮಾಡಲು ಸಾಧ್ಯವಿಲ್ಲ. ಹಾಗಂತ ಹೇಳಿ ನಿಮ್ಮ ಎಲ್ಲಾ ಉದ್ದೇಶಗಳಿಗೆ ಬ್ಯಾಂಕ್‌ನವರಿಗೆ ಸ್ಕೀಮ್ ತರಲು ಸಾಧ್ಯವೂ ಇಲ್ಲ.
ಸಾಮಾನ್ಯವಾಗಿ ಹೆಚ್ಚು ಬಳಕೆಯಲ್ಲಿರುವಂತಹ ಉದ್ದೇಶಗಳಿಗೆ ಬ್ಯಾಂಕ್‌ನಲ್ಲಿ ಸಾಲದ ಸ್ಕೀಮ್‌ಗಳಿವೆ. ಉದಾ : ಗೃಹ ಸಾಲ, ವ್ಯಾಪಾರ ಸಾಲ, ಸ್ವಉದ್ಯೋಗ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಚಿನ್ನ ಅಡವು ಸಾಲ, ಕೃಷಿ ಅಭಿವೃದ್ಧಿ ಸಾಲ, ಹೈನುಗಾರಿಕೆ ಸಾಲ ಇತ್ಯಾದಿ. ಇವುಗಳು ಖಂಡಿತಾ ಮುಖ್ಯ ಉದ್ದೇಶಗಳಾಗಿವೆ. ಸಾಮಾನ್ಯರ ಜೀವನದಲ್ಲಿ ಇನ್ನೂ ಅನೇಕ ಉದ್ದೇಶಗಳಿಗೆ ಸಾಲದ ಅಗತ್ಯತೆ ಖಂಡಿತಾ ಇರುತ್ತದೆ. ದಾಖಲೆಗಳಿಲ್ಲದೆ ಮನೆ ರಿಪೇರಿ, ಚಿನ್ನ ಖರೀದಿ, ಮದುವೆ, ಹೆಚ್ಚು ಬಡ್ಡಿಯಲ್ಲಿ ಪಡೆದ ಸಾಲದ ಮರುಪಾವತಿಗೆ, ಹಳೆ ವಾಹನ ಖರೀದಿ, ವೈದ್ಯಕೀಯ ವೆಚ್ಚ ಭರಿಸಲು, ಗೃಹೋಪಯೋಗಿ ವಸ್ತುಗಳ ಖರೀದಿ, ಇತ್ಯಾದಿ ಉದ್ದೇಶಗಳಿಗೆ ಸಾಮಾನ್ಯವಾಗಿ ಬ್ಯಾಂಕ್‌ನಲ್ಲಿ ಸ್ಕೀಮ್‌ಗಳು ಇಲ್ಲ. ಆಗ ಮಾಮೂಲಿಯಂತೆ ಶೇ. 25 ರಿಂದ ಶೇ.30ರಷ್ಟು ದುಬಾರಿ ಬಡ್ಡಿದರದಲ್ಲಿ ಫೈನಾನ್ಸ್ ಸಂಸ್ಥೆಗಳಿ0ದ ಸಾಲ ಮಾಡಬೇಕು. ಫೈನಾನ್ಸ್ನಿಂದ ಸಾಲ ತೆಗೆದು ಮಗಳ ಮದುವೆ ಮಾಡಿ ಬೀದಿಗೆ ಬಂದ ಪೋಷಕರ ದುರಂತ ಕಥೆಗಳನ್ನು ನಾವು ಕೇಳಿದ್ದೇವೆ. ಇಂತಹ ದುರಂತಗಳು ಆಗಬಾರದಾಗಿದ್ದರೆ ಇದಕ್ಕೊಂದು ಸರಿಯಾದ ಪರ್ಯಾಯ ವ್ಯವಸ್ಥೆ ಖಂಡಿತಾ ಬೇಕು. ಜನ ಸಾಮಾನ್ಯರ ಸಾಮಾನ್ಯ ಉದ್ದೇಶಗಳಿಗೆ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತಹ ಪರ್ಯಾಯ ವ್ಯವಸ್ಥೆ ಬೇಕು. ಆ ಪರ್ಯಾಯ ವ್ಯವಸ್ಥೆಯ ಬಗ್ಗೆ ಮುಂದೆ ತಿಳಿಯೋಣ.