10 ಲಕ್ಷಕ್ಕೂ ಹೆಚ್ಚು ಕೆ.ವಿ.ಕೆ. ಕ್ರಾಪ್‌ ಹೆಲ್ತ್‌ಕೇರ್ ಸೇವೆಗಳನ್ನುನೀಡಿದ ಯೋಜನೆಯ ಸಿ.ಎಸ್.ಸಿ. ಕೇಂದ್ರಗಳು

ನಮ್ಮ ದೇಶದ ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ಅನೇಕ ಸಂಶೋಧನೆ ಹಾಗೂ ಅಭಿವೃದ್ಧಿಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ನಡೆಸಿಕೊಂಡು ಬಂದಿರುತ್ತವೆ. 1974ರಲ್ಲಿ ಆರಂಭಗೊoಡ ಕೃಷಿ ವಿಜ್ಞಾನ ಕೇಂದ್ರಗಳ ಸಂಪೂರ್ಣ ಧನ ಸಹಾಯವನ್ನು ಭಾರತ ಸರಕಾರವು ನಡೆಸಿಕೊಂಡು ಬಂದಿದ್ದು, ರಾಜ್ಯ ಸರಕಾರಗಳು ಕೃಷಿ ವಿಜ್ಞಾನ ಕೇಂದ್ರಗಳಿಗೆ ತನ್ನದೇ ಆದ ನೆರವನ್ನು ನೀಡಿರುತ್ತವೆ. ಒಟ್ಟಿನಲ್ಲಿ ಕೃಷಿ ಅಭಿವೃದ್ಧಿಗಾಗಿ ಸರಕಾರವು ಕೃಷಿ ವಿಜ್ಞಾನ ಕೇಂದ್ರವನ್ನು ಒಂದು ಪ್ರಮುಖ ಸಂಸ್ಥೆಯಾಗಿ ಅಭಿವೃದ್ಧಿಪಡಿಸುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳು ಸ್ಥಳೀಯ ಕೃಷಿ ವಿಶ್ವವಿದ್ಯಾನಿಲಯಗಳ ಜೊತೆಗೆ ಸಂಯೋಜನೆಗೊoಡು, ತನ್ನ ಸಂಸ್ಥೆಯ ವಿಜ್ಞಾನಿಗಳ, ಕೃಷಿ ವಿಜ್ಞಾನ ಕೇಂದ್ರದ ಪರಿಣಿತರ ಹಾಗೂ ಪ್ರಾದ್ಯಾಪಕರುಗಳ ಜೊತೆಗೂಡಿ ಅನೇಕ ಸಂಶೋಧನೆಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಸಂಶೋಧನೆಗಳಷ್ಟೇ ಅಲ್ಲದೇ, ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ರೈತರಿಗೆ ಸೂಕ್ತ ಮಾಹಿತಿ, ತರಬೇತಿ ಮತ್ತು ಪರಿಹಾರಗಳನ್ನು ಸೂಚಿಸಿರುತ್ತದೆ. ರೈತರು ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳಿಗೆ ತೆರಳಲು ಸಮಯ ಮತ್ತು ಪ್ರಯಾಣದ ವೆಚ್ಚವನ್ನು ವ್ಯಯ ಮಾಡಬೇಕಾಗುತ್ತದೆ. ಈ ಸಮಸ್ಯೆಯಿಂದಾಗಿ ಹೆಚ್ಚಿನ ರೈತರು ಕೃಷಿ ವಿಜ್ಞಾನ ಕೇಂದ್ರಗಳಿಗೆ ತೆರಳದೆ ತಮ್ಮ ಅಲ್ಪ ಅನುಭವದಲ್ಲೇ ಕೃಷಿಯನ್ನು ಮಾಡಿಕೊಳ್ಳುತ್ತಾ ಮಹತ್ತರ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲುವಾಗಿ ರೈತರಿಗೆ ಉನ್ನತ ಕೃಷಿ ವಿಜ್ಞಾನಿಗಳಿಂದ ಮಾಹಿತಿ, ಮಾರ್ಗದರ್ಶನ ನೀಡುವಂತಹ ವಿನೂತನ ಸೌಲಭ್ಯವನ್ನು ‘ಕಾಮನ್ ಸರ್ವಿಸ್ ಸೆಂಟರ್’ನಲ್ಲಿ ‘ಕೆ.ವಿ.ಕೆ. ಕ್ರಾಪ್ ಹೆಲ್ತ್ಕೇರ್’ ಸೇವೆಯಡಿಯಲ್ಲಿ ಪ್ರಾರಂಭಿಸಲಾಯಿತು. ಈ ಸೇವೆಯಡಿಯಲ್ಲಿ ರೈತರು ತಮ್ಮ ಗ್ರಾಮದಲ್ಲಿರುವ ಸಿ.ಎಸ್.ಸಿ. ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಸಮಸ್ಯೆಯನ್ನು ಆನ್‌ಲೈನ್ ಮೂಲಕ ನೋಂದಾವಣೆ ಮಾಡಿಸಿಕೊಳ್ಳಬೇಕು. ಸಿ.ಎಸ್.ಸಿ. ಪೋರ್ಟಲ್‌ನಲ್ಲಿ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು, ಪರಿಣಿತರು ಈಗಾಗಲೇ ನೋಂದಾವಣೆಯಾಗಿದ್ದು ನೇರವಾಗಿ ವಿಜ್ಞಾನಿಗಳಿಂದ ಮಾಹಿತಿ, ಮಾರ್ಗದರ್ಶನಗಳನ್ನು ಪಡೆಯಲು ಈ ಕೆಳಗಿನ ನಾಲ್ಕು ವಿಷಯಗಳ ಕುರಿತು ರೈತರು ನೋಂದಾಯಿಸಿಕೊಳ್ಳಬಹುದಾಗಿದೆ. ಅವುಗಳೆಂದರೆ :
ಬೆಳೆಗಳಿಗೆ ಸಂಬoಧಿಸಿದ ಪೋಷಕಾಂಶಗಳು.
ಬೆಳೆಗಳಿಗೆ ಸಂಬoಧಪಟ್ಟ ರೋಗಗಳು.
ನಿರ್ದಿಷ್ಟ ಬೆಳೆ ಅಥವಾ ಉತ್ಪನ್ನಗಳ ಕುರಿತು ಮಾಹಿತಿ.
ಇತರ ಸಮಸ್ಯೆಗಳು ಮತ್ತು ವಿಚಾರಗಳು.

ಈ ನಾಲ್ಕು ವಿಚಾರಗಳಲ್ಲಿ ಮೇಲಿನ ಮೂರು ಸೇವೆಗಳು ಬೆಳೆ, ಮಣ್ಣು, ಮುಂದೆ ಬೆಳೆಯಬಹುದಾದ ಬೆಳೆಗಳು, ರೋಗಗಳು, ಮಾರುಕಟ್ಟೆ ಬೆಲೆ, ಪರ್ಯಾಯ ಉತ್ಪನ್ನಗಳು ಮುಂತಾದವುಗಳಿಗೆ ಸಂಬoಧಿಸಿದವುಗಳಾಗಿದ್ದರೆ, ನಾಲ್ಕನೇ ವಿಷಯದಲ್ಲಿ ರೈತರು ಇತರ ಸಮಸ್ಯೆಗಳನ್ನು ತಿಳಿಸಬಹುದಾಗಿದೆ. ಇತರ ಸಮಸ್ಯೆಗಳ ಆಯ್ಕೆಯಲ್ಲಿ, ಸಮಸ್ಯೆಗಳನ್ನು ಸುಮಾರು ಐವತ್ತು ಶಬ್ದಗಳೊಳಗಾಗಿ ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡಬೇಕಾಗಿದೆ. ಈ ವಿವರಣೆಯ ಆಧಾರದ ಮೇಲೆ ರೈತರ ಬೇಡಿಕೆಯು ವಿಜ್ಞಾನಿಗಳಿಗೆ ರವಾನೆಯಾಗಿ ಅವರು ನಿಗದಿತ ಸಮಯವನ್ನು ನೀಡುತ್ತಾರೆ. ಸಾಮಾನ್ಯವಾಗಿ ಹತ್ತು ದಿನಗಳೊಳಗಾಗಿ ಮಾಹಿತಿ ನೀಡುವ ಸಮಯ ಮತ್ತು ದಿನಾಂಕ ನಿಗದಿಯಾಗುತ್ತದೆ. ಆ ಸಮಯದಲ್ಲಿ ರೈತರಿಗೆ ವಿಜ್ಞಾನಿಗಳು ಕರೆಯನ್ನು ಮಾಡುತ್ತಾರೆ. ಆ ಸಮಯದಲ್ಲಿ ಅವರೊಂದಿಗೆ ತಮ್ಮ ಕೃಷಿ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಬಹುದಾಗಿದೆ. ತಮ್ಮ ಎಲ್ಲಾ ಕೃಷಿ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನವನ್ನು ಪಡೆದು, ಅತೀ ಹೆಚ್ಚಿನ ಕೃಷಿ ಅಭಿವೃದ್ಧಿಯನ್ನು ಸಾಧಿಸಬಹುದು. ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಮಾಡಿರುವ ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳ ಫಲಗಳು ಸುಲಭವಾಗಿ ಕೆ.ವಿ.ಕೆ. ಕ್ರಾಪ್ ಹೆಲ್ತ್ಕೇರ್ ಸೇವೆಯ ಮೂಲಕ ರೈತರ ಮನೆಬಾಗಿಲಿಗೆ ತಲುಪುವಂತಾಗಿದೆ. ಅದು ಕೇವಲ ರೂ. 5/- ರ ಸೇವಾಶುಲ್ಕದೊಂದಿಗೆ. ಇದು ರೈತರ ಪಾಲಿಗೆ ವರದಾನವೇ ಸರಿ. ಮುಂದಿನ ದಿನಗಳಲ್ಲಿ ವೀಡಿಯೋ ಕಾನ್ಫರೆನ್ಸ್ನ ಮೂಲಕ ರೈತರಿಗೆ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಗಳು ನಡೆಯುತ್ತಿವೆ.
ನಮ್ಮ ಯೋಜನೆಯ ಮೂಲಕ ಹತ್ತು ಸಾವಿರ ಸಿ.ಎಸ್.ಸಿ. ಕೇಂದ್ರಗಳಲ್ಲಿಯೂ ಈ ಸೇವೆಯನ್ನು ನೀಡಲಾಗುತ್ತಿದೆ. ಈ ಸೇವೆಯನ್ನು ಆರಂಭಿಸಿ ಕೆಲವೇ ತಿಂಗಳುಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರು ನಮ್ಮ ಯೋಜನೆಯ ಮೂಲಕ ಈ ಸೇವೆಗಳನ್ನು ಪಡೆದುಕೊಂಡಿರುತ್ತಾರೆ. ಇಲ್ಲಿಯವರೆಗೆ ಸುಮಾರು 10.50 ಲಕ್ಷ ರೈತರು ಯೋಜನೆಯ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಕೆ.ವಿ.ಕೆ. ಕ್ರಾಪ್ ಹೆಲ್ತ್ಕೇರ್ ಸೇವೆಯನ್ನು ಪಡೆದು, ತಮ್ಮ ಅನೇಕ ಕೃಷಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಲ್ಲದೇ ಅವರಿಗೆ ಅತ್ಯಾಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ. ಸದಾ ಕೃಷಿ ಮತ್ತು ರೈತರ ಕಲ್ಯಾಣವನ್ನು ಬಯಸುವ ಪೂಜ್ಯ ಶ್ರೀ ಹೆಗ್ಗಡೆಯವರು ಕೈಗೊಂಡ ಅನೇಕ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಈ ಒಂದು ಸೇವೆಯು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಒಂದು ಹೊಸ ಬೆಳವಣಿಗೆಯನ್ನು ತಂದಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *