ಮಹಾತ್ಮರ ಕನಸುಗಳು ಮಹಾತ್ಮರಿಂದಲೇ ಸಾಕಾರ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಎಂಟು ದಶಕಗಳ ಹಿಂದೆಯೇ ‘ಭವ್ಯ ಭಾರತ’ದ ಕನಸನ್ನು ಕಂಡಿದ್ದರು. ನಮ್ಮ ದೇಶ ಶ್ರೀರಾಮ ರಾಜ್ಯವಾಗಬೇಕೆಂಬ ಮಹತ್ವಕಾಂಕ್ಷೆಯನ್ನು ಹೊಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಸಾಹತು ಆಡಳಿತದಿಂದ ಬಹಳಷ್ಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಅನುಭವಿಸಿದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣಕ್ಕೆ ಚೇತರಿಸಿಕೊಳ್ಳಲಾಗಲಿಲ್ಲ. ಸ್ವತಂತ್ರರಾದ ನಂತರ ಅನೇಕ ವರ್ಷಗಳ ಕಾಲ ನಮ್ಮ ದೇಶ ಹಲವಾರು ಭೀಕರ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ಅನೇಕ ಸಮಸ್ಯೆ ಹಾಗೂ ವೈಫಲ್ಯಗಳನ್ನು ಎದುರಿಸುತ್ತಿದ್ದಂತಹ ಕಠಿಣ ಪರಿಸ್ಥಿತಿ ಅಂದಿತ್ತು. ಆದರೂ ಬಾಪೂಜಿಯವರು ಛಲ ಬಿಡದೆ ರಾಮರಾಜ್ಯದ ಕನಸನ್ನು ನನಸು ಮಾಡುವತ್ತಾ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರು. ಆದರೆ ಈ ದೇಶದ ವಿಶಾಲತೆ, ಅಗಾಧವಾದ ಜನಸಂಖ್ಯೆ, ವೈವಿಧ್ಯತೆಗಳು, ಸಾಮಾಜಿಕ ಸವಾಲುಗಳು ಇವೆಲ್ಲದರ ನಡುವೆ ಬಾಪೂಜಿಯವರ ಕನಸು ನನಸಾಗಲೇ ಇಲ್ಲ. ಮುಂದಕ್ಕೆ ನಾವು ಅವರನ್ನು ಕಳೆದುಕೊಂಡೆವು.
ಹಾಗೆoದು, ಮಹಾತ್ಮರ ಕನಸುಗಳು ಮಾತ್ರ ಅವರೊಂದಿಗೆ ಕಮರಿ ಹೋಗಲಿಲ್ಲ. ಅವರು ಕಂಡ ಕನಸುಗಳನ್ನು ನನಸು ಮಾಡಲು ಮತ್ತೊಂದಷ್ಟು ಮಹಾತ್ಮರನ್ನು ನಮ್ಮ ದೇಶ, ಈ ಪುಣ್ಯ ಭೂಮಿ ಸೃಷ್ಟಿಸಿತು.
ಹೌದು ಮಿತ್ರರೇ, ಅಂದು ಬಾಪೂಜಿಯವರು ಕಂಡ ಎಷ್ಟೋ ಕನಸುಗಳು ಇಂದು ಅನೇಕ ಆಯಾಮಗಳಲ್ಲಿ ನನಸಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪರಮಪೂಜ್ಯ ಶ್ರೀ ಹೆಗ್ಗಡೆಯವರು ಕಳೆದ ನಾಲ್ಕು ದಶಕಗಳಿಂದ ಬಾಪೂಜಿಯವರ ಚಿಂತನೆಯoತೆಯೇ ಚಿಂತಿಸಿ ಕೈಗೊಂಡ ಕಾರ್ಯಕ್ರಮಗಳು ಇಂದು ಹೆಮ್ಮರವಾಗಿ ರಾಜ್ಯವನ್ನೇ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯುವ ಕಾರ್ಯಕ್ರಮಗಳಾಗಿವೆ. ಕೋಟ್ಯಾಂತರ ಜನರಿಗೆ ಬದುಕನ್ನು ಕಟ್ಟಿಕೊಟ್ಟಿವೆ. ‘ಗ್ರಾಮೀಣ ಭಾರತವೇ ನಿಜವಾದ ಭಾರತ, ಗ್ರಾಮಾಭಿವೃದ್ಧಿಯೇ ರಾಮರಾಜ್ಯದ ಮೂಲಮಂತ್ರ ಎಂದು ಕನಸು ಕಂಡವರು ಬಾಪೂಜಿಯವರು. ಇಂದು ಇಡೀ ದೇಶಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಶ್ರೀ ಹೆಗ್ಗಡೆಯವರು ಕೈಗೊಂಡು ಬಾಪೂಜಿಯವರ ಕನಸನ್ನು ನನಸು ಮಾಡುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಂದು ರಾಜ್ಯದ 22 ಸಾವಿರ ಹಳ್ಳಿಗಳು ಕೂಡಾ ಅಭಿವೃದ್ಧಿಯನ್ನು ಕಂಡಿವೆ. ಯೋಜನೆಯ ಹೆಸರೇ ಸೂಚಿಸುವಂತೆ, ಗ್ರಾಮಗಳ ಅಭಿವೃದ್ಧಿ ಯೋಜನೆಯ ಮೂಲ ಮಂತ್ರವಾಗಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣದ ಕನಸನ್ನು ರಾಷ್ಟ್ರಪಿತರು ಕಂಡಿದ್ದರು. ಪೂಜ್ಯ ಶ್ರೀ ಹೆಗ್ಗಡೆಯವರು ಯೋಜನೆಯ ಮೂಲಕ ಕೋಟ್ಯಾಂತರ ಗ್ರಾಮೀಣ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಬಲೀಕರಣಕ್ಕೆ ಕಾರಣೀಭೂತರಾಗಿದ್ದಾರೆ. ಯೋಜನೆಯೊಂದಿಗೆ ಜೋಡಣೆಯಾದ 55 ಲಕ್ಷ ಕುಟುಂಬಗಳ ನಿರ್ವಹಣೆಯಲ್ಲಿ ಮಹಿಳೆಯರದ್ದೇ ಮೇಲುಗೈ. ಯೋಜನೆಯ ನೆರವಿನಿಂದ ಕೃಷಿ, ಶಿಕ್ಷಣ, ಸ್ವ ಉದ್ಯೋಗ, ವೃತ್ತಿಪರ ಉದ್ಯೋಗ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಹೆಮ್ಮೆಯಿಂದ ಮುನ್ನಡೆಯುತ್ತಿದ್ದಾರೆ.
ಗ್ರಾಮೀಣ ಯುವಕ – ಯುವತಿಯರ ಸ್ವ ಉದ್ಯೋಗವು ಬಾಪೂಜಿಯವರ ಮತ್ತೊಂದು ಕನಸಾಗಿತ್ತು. ಪೂಜ್ಯ ಶ್ರೀ ಹೆಗ್ಗಡೆಯವರ ‘ರುಡ್‌ಸೆಟ್’ ಕಲ್ಪನೆಯಿಂದಾಗಿ ದೇಶಾದ್ಯಂತ ‘ಆರ್‌ಸೆಟಿ’ ಮೂಲಕ ಲಕ್ಷಾಂತರ ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿಗಳನ್ನು ನೀಡಿ, ಬ್ಯಾಂಕ್‌ನಿoದ ಆರ್ಥಿಕ ಸಾಲ ಸೌಲಭ್ಯ ಪಡೆಯಲು ನೆರವಾಗಿ ಸ್ವ ಉದ್ಯೋಗಗಳು ಸೃಷ್ಟಿಗೊಂಡವು. ಹೆಚ್ಚು ಕಡಿಮೆ ದೇಶದ ಎಲ್ಲ ಜಿಲ್ಲೆಗಳಲ್ಲೂ ‘ಆರ್‌ಸೆಟಿ’ಗಳು ಕಾರ್ಯನಿರ್ವಹಿಸುತ್ತಿವೆ. ಪೂಜ್ಯರ ಈ ಒಂದು ಚಿಂತನೆಯಿoದಾಗಿ ಸುಮಾರು 45 ಲಕ್ಷ ಯುವಕ – ಯುವತಿಯರು ದೇಶಾದ್ಯಂತ ಇಂದು ಸ್ವ ಉದ್ಯೋಗಗಳನ್ನು ಕೈಗೊಳ್ಳುವಂತಾಗಿದೆ. ಬಾಪೂಜಿಯವರ ‘ಸ್ವಚ್ಛ ಭಾರತ, ಆರೋಗ್ಯ ಭಾರತ’ದ ಕನಸನ್ನು ಪೂಜ್ಯ ಶ್ರೀ ಹೆಗ್ಗಡೆಯವರು ಯೋಜನೆಯ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಸ್ವಚ್ಛತಾ ಕಾರ್ಯಕ್ರಮಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ಇತರ ಸ್ಥಳಗಳಲ್ಲಿ ಕೈಗೊಳ್ಳಲಾಗಿದೆ. ನೈರ್ಮಲ್ಯ ಕಾಪಾಡಿಕೊಳ್ಳುವಲ್ಲಿ ‘ಶುದ್ಧ ಕುಡಿಯುವ ನೀರು’, ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮಗಳು ಸೇವೆ ಸಲ್ಲಿಸುತ್ತಿವೆ. ಜನರಿಗೆ ಶುಚಿತ್ವ, ಆರೋಗ್ಯದ ಬಗ್ಗೆ ಅರಿವು, ತರಬೇತಿಗಳನ್ನು ನೀಡುವುದಲ್ಲದೇ, ಸುಲಭ ವಿಮೆಗಳನ್ನೂ ಮಾಡಲಾಗುತ್ತಿದೆ. ಆಯುಷ್ಮಾನ್ ಸೇವೆಗಳನ್ನು ನೀಡಲಾಗುತ್ತಿದೆ. ಬಾಪೂಜಿಯವರ ಗುಡಿ ಕೈಗಾರಿಕೋದ್ಯಮದ ಕನಸುಗಳು ಕೂಡಾ ಪೂಜ್ಯರ ಅನೇಕ ಸ್ವ ಉದ್ಯೋಗ ಪ್ರೇರಣಾ ಕಾರ್ಯಕ್ರಮಗಳಿಂದ, ಯೋಜನೆಯ ಬಿ.ಸಿ. ಆರ್ಥಿಕ ಸೇವಾ ಸೌಲಭ್ಯಗಳಿಂದ ನನಸಾಗಿದೆ. ಇವು ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ. ಹೊಸ ಸ್ಟಾರ್ಟ್ಅಪ್‌ಗಳಿಗೆ ಯೋಜನೆಯು ಭದ್ರ ತಳಹದಿಯನ್ನು ನಿರ್ಮಿಸಿಕೊಟ್ಟಿದೆ.
‘ಪ್ರಗತಿ’ ಎಂದಿಗೂ ಸ್ಥಿರವಾಗುವುದಿಲ್ಲ, ಅದು ನಿತ್ಯ ನಿರಂತರ. ಮಹಾತ್ಮರ ಕನಸುಗಳು ಮಹಾತ್ಮರಿಂದಲೇ ಸಾಕಾರಗೊಳ್ಳಲು ಸಾಧ್ಯ. ನಾವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಭಾರತದ ಭವ್ಯ ಭವಿಷ್ಯವನ್ನು ನಿರ್ಮಿಸುತ್ತಿರುವ ಮಹಾತ್ಮರೊಂದಿಗೆ ಕೈಜೋಡಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *