ರಕ್ತದಾನದಿಂದ ಜೀವದಾನ

ಒಡಿಸ್ಸಾದ ಬಾಲಸೋರ್‌ನಲ್ಲಿ ನಡೆದ ರೈಲು ಅವಘಡದಲ್ಲಿ 270ಕ್ಕೂ ಹೆಚ್ಚು ಜನ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಅವಘಡ ನಡೆದ ಕೂಡಲೇ ಸ್ಥಳೀಯರು, ಸ್ವಯಂ ಸೇವಕ ರಕ್ಷಣಾ ಕಾರ್ಯಕರ್ತರು, ಪೊಲೀಸ್ ಮತ್ತು ಆರೋಗ್ಯ ಇಲಾಖೆ, ಸೇನೆ, ಶ್ವಾನದಳ ಹೀಗೆ ಎಲ್ಲರೂ ರಕ್ಷಣಾ ಕಾರ್ಯದಲ್ಲಿ ತೊಡಗುವ ಮೂಲಕ ಪ್ರಯಾಣಿಕರನ್ನು ರಕ್ಷಿಸುವಲ್ಲಿ, ಗಾಯಾಳುಗಳಿಗೆ ನೆರವು ನೀಡುವಲ್ಲಿ ಹಗಲು ರಾತ್ರಿ ಶ್ರಮಿಸಿದ್ದರು. ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲು ಸ್ಥಳದಲ್ಲೇ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ಬಹಳಷ್ಟು ದುಡಿದಿದ್ದರು. ಈ ವೇಳೆ ಗಾಯಾಳುಗಳಿಗೆ ಅಗತ್ಯವಾಗಿ ಮತ್ತು ತುರ್ತಾಗಿ ಬೇಕಿದ್ದ ರಕ್ತವನ್ನು ದಾನ ಮಾಡಲು ಸುಮಾರು 2000 ಮಂದಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದರು ಹಾಗೂ ರಕ್ತದಾನ ಮಾಡಲೆಂದೇ ಆಸ್ಪತ್ರೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮಾನವೀಯತೆ ತೋರಿದ್ದಾರೆ ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದ್ದೇವೆ. ರಕ್ಷಣಾ ಕಾರ್ಯದಲ್ಲಿ ತೊಡಗಿದವರ ಹಾಗೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲೇಬೇಕು. ಯಾಕೆಂದರೆ ಅಂತಹ ವ್ಯಕ್ತಿಗಳಿಂದಲೇ ಮಾನವೀಯತೆಗೆ ಗೌರವ ಮತ್ತು ಬೆಲೆ ದೊರೆಯುತ್ತಿರುವುದು.
ಒಂದು ಜೀವವನ್ನು ಉಳಿಸಬೇಕಿದ್ದರೆ ವೈದ್ಯರೇ ಆಗಬೇಕೆಂದಿಲ್ಲ. ಆಪತ್ಕಾಲದಲ್ಲಿ ಸಹಾಯ ಮಾಡುವುದರಿಂದಲೂ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯ. ಆತ್ಮಹತ್ಯೆಗೆ ಯತ್ನಿಸುವವನನ್ನು ತಡೆಯುವುದು, ಅಪಘಾತಕ್ಕೊಳಗಾದವರನ್ನು ರಕ್ಷಿಸುವುದು, ದುರ್ಘಟನೆಗಳಿಂದ ಪಾರು ಮಾಡುವುದು ಹೀಗೆ ಹಲವು ಸಂದರ್ಭಗಳಲ್ಲಿ ಮಾಡುವ ಉಪಕಾರಗಳು ಅನೇಕರ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ರಕ್ತದಾನ, ಅಂಗಾoಗ ದಾನ ಮಾಡುವುದರಿಂದಲೂ ಇತರರ ಜೀವವನ್ನು ಉಳಿಸಬಹುದು. ವ್ಯಕ್ತಿಯು ಮೃತನಾದರೆ ಅಥವಾ ಮೆದುಳು ನಿಷ್ಕಿçಯಗೊಂಡರೆ ಮಾತ್ರ ಅಂಗಾoಗ ದಾನ ಮಾಡಬಹುದು. ಆದರೆ ರಕ್ತದಾನವನ್ನು ಜೀವಂತವಿರುವಾಗಲೇ ಮಾಡಬಹುದಾಗಿದೆ. ಮನುಷ್ಯನೊಬ್ಬನ ರಕ್ತದಾನದಿಂದ ಕನಿಷ್ಠ ಮೂರರಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ನಿತ್ಯವೂ ಎಲ್ಲಾ ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಇದ್ದೇ ಇರುತ್ತದೆ. ಅನಾರೋಗ್ಯ ಪೀಡಿತರಿಗೆ ಮಾತ್ರವಲ್ಲದೆ ಅಪಘಾತದಲ್ಲಿ ಗಾಯಗೊಂಡವರಿಗೆ, ಗರ್ಭಿಣಿಯರಿಗೆ, ಶಸ್ತçಚಿಕಿತ್ಸೆಗೆ ಒಳಗೊಳ್ಳುವವರಿಗೆ ಹೀಗೆ ರಕ್ತಕ್ಕೆ ಬಹು ಬೇಡಿಕೆಯಿದೆ. ರಕ್ತದ ಕೊರತೆಯಿಂದ ಮೃತರಾದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಮುಖ್ಯವಾಗಿ ಗರ್ಭಿಣಿಯರು ಹಾಗೂ ಅಪಘಾತದ ಗಾಯಾಳುಗಳು ಅಧಿಕ ರಕ್ತಸ್ರಾವದಿಂದ ಮೃತಪಡುವುದು ಹೆಚ್ಚು. ಅವರಿಗೆ ತಕ್ಷಣ ಸೂಕ್ತ ರಕ್ತ ಪೂರೈಕೆ ಮಾಡಿದರೆ ಬದುಕುಳಿಯುವ ಸಾಧ್ಯತೆಯಿರುತ್ತದೆ. ಕೆಲವೊಂದು ಜಿಲ್ಲೆ, ತಾಲೂಕುಗಳ ಮುಖ್ಯ ಆಸ್ಪತ್ರೆಗಳಲ್ಲಿ ರಕ್ತವನ್ನು ಸಂಗ್ರಹಿಸಿಡಲಾಗುತ್ತದೆ. ಆದರೂ ಕೆಲವೊಂದು ಸಂದರ್ಭದಲ್ಲಿ ರೋಗಿಗಳು ಮೇಲೆ ತಿಳಿಸಿದ ರೈಲು ಅವಘಡದಂತಹ ಭೀಕರ ಅಪಘಾತಗಳಾದಾಗ, ಗಾಯಾಳುಗಳ ಸಂಖ್ಯೆ ಹೆಚ್ಚಿದ್ದ ಸಂದರ್ಭಗಳಲ್ಲಿ ರಕ್ತದ ಕೊರತೆಯುಂಟಾಗುತ್ತದೆ. ಆದ್ದರಿಂದ ರಕ್ತದ ಕೊರತೆಯನ್ನು ನೀಗಿಸಲು ಜನರು ಸ್ವಯಂಪ್ರೇರಿತವಾಗಿ ರಕ್ತದಾನವನ್ನು ಮಾಡಲು ಮುಂದೆ ಬರಬೇಕಿದೆ.
ರಕ್ತದಾನಿಗಳು ನಿಶ್ಚಿಂತೆಯಿoದ ದಾನ ಮಾಡುತ್ತಾರೆ. ವಿದ್ಯಾರ್ಥಿಗಳಂತೂ ಈ ಕಾರ್ಯವನ್ನು ನಿಷ್ಠೆಯಿಂದ ಮಾಡಿ ದಾನಿಗಳಾಗುತ್ತಾರೆ. ರಕ್ತದಾನಿಗಳಾಗಿ ಹೆಸರು ನೋಂದಾಯಿಸಿಕೊoಡವರು ಅವಶ್ಯಕತೆ ಇದ್ದ ತಕ್ಷಣ ಹಾಜರಾಗುತ್ತಾರೆ. ಚೆನ್ನೆöÊನ ಓಎನ್‌ಜಿಸಿ ಕಂಪನಿಯೊoದರಲ್ಲಿ ಕೆಲಸ ಮಾಡುತ್ತಿದ್ದ ನಂಜುoಡಸ್ವಾಮಿಗೆ ಇದೀಗ ೬೪ ವರ್ಷ. ತಮ್ಮ 21ನೇ ವಯಸ್ಸಿನಿಂದಲೇ ರಕ್ತದಾನ ಮಾಡಲು ಪ್ರಾರಂಭಿಸಿದ್ದು, ಇದುವರೆಗೂ 80 ಬಾರಿ ರಕ್ತದಾನ ಮಾಡಿದ್ದಾರೆ. ಹೀಗೆ ಸಾಕಷ್ಟು ಜನರು ಸಾಕಷ್ಟು ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುವವರು ಇದ್ದಾರೆ. ಅಂತಹ ಸೇವಾಮನೋಭಾವನೆಯನ್ನು ನಾವೆಲ್ಲ ಶ್ಲಾಘಿಸಲೇಬೇಕು. ಹಾಗೂ ಅವರಿಂದ ಪ್ರೇರಣೆ ಪಡೆದು ರಕ್ತದಾನಕ್ಕೆ ಮುಂದಾಗಬೇಕು.
ಬಹಳಷ್ಟು ಜನ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಮೂಢನಂಬಿಕೆ, ಸರಿಯಾದ ಮಾಹಿತಿ ಇಲ್ಲದಿರುವಿಕೆ, ಭಯ, ತಪ್ಪು ಕಲ್ಪನೆ ಮುಂತಾದವುಗಳು ಇದಕ್ಕೆ ಕಾರಣವಾಗಿವೆ. ರಕ್ತ ಕೊಟ್ಟರೆ ಪುರುಷತ್ವ ಕಳೆದುಕೊಳ್ಳುತ್ತಾನೆ, ಸ್ತಿçÃಯು ಗರ್ಭ ಧರಿಸುವುದಿಲ್ಲ, ರಕ್ತದಾನ ಮಾಡುವುದರಿಂದ ಏಡ್ಸ್ನಂತಹ ರೋಗಗಳು ಬರುತ್ತವೆ, ರಕ್ತದಾನ ಮಾಡಿದ ಮೇಲೆ ಕೆಲಸ ಮಾಡಲು ಆಗುವುದಿಲ್ಲ ಹೀಗೆ ಅನೇಕ ಕಾರಣಗಳಿಂದ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಅವೆಲ್ಲ ಸುಳ್ಳು ಸುದ್ದಿಗಳು. ಅಂತಹ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ.
ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ, ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಯಾವ ತೊಂದರೆಯೂ ಇರುವುದಿಲ್ಲ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ. ಪುರುಷರು ಮೂರು ತಿಂಗಳಿಗೆ ಒಂದು ಬಾರಿ, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ರಕ್ತದಾನದಿಂದ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ ಎಂಬ ತಪುö್ಪ ಕಲ್ಪನೆಯಿದೆ. ರಕ್ತದಾನ ಮಾಡಿದ ಇಪ್ಪತ್ತೊಂದು ದಿನಗಳಲ್ಲಿ ಶರೀರದಲ್ಲಿ ರಕ್ತವು ಮರುಶೇಖರಣೆಗೊಳ್ಳುತ್ತದೆ. ಒಬ್ಬರಿಂದ ಒಂದು ಬಾರಿಗೆ 471 ಮಿ. ಲೀಟರ್ ರಕ್ತವನ್ನು ಮಾತ್ರ ಪಡೆಯಲಾಗುತ್ತದೆ. ರಕ್ತದಾನ ಮಾಡಿದ ಮೂರು ಗಂಟೆಗಳ ಒಳಗೆ ಅತ್ಯುತ್ತಮ ಆಹಾರ ಅದರಲ್ಲೂ ಹಣ್ಣು – ಹಂಪಲನ್ನು ಹೆಚ್ಚಾಗಿ ಸೇವಿಸುವುದು ಹಾಗೂ ರಕ್ತದಾನ ಮಾಡಿದ ಹನ್ನೆರಡು ಗಂಟೆಯೊಳಗೆ ಯಾವುದೇ ರೀತಿಯ ವ್ಯಾಯಾಮ ಅಥವಾ ದೈಹಿಕ ಶ್ರಮದ ಕೆಲಸಗಳನ್ನು ಮಾಡದಿರುವುದು ಉತ್ತಮ.
ದಾನಿಗಳಿಂದ ರಕ್ತ ಪಡೆಯುವ ಮೊದಲು ವೈದ್ಯರು ದಾನಿಯನ್ನು ಸಂಪೂರ್ಣ ಪರೀಕ್ಷೆಗೊಳಪಡಿಸುತ್ತಾರೆ. ಈ ಮೂಲಕವಾಗಿ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಕೊಂಡoತಾಗುತ್ತದೆ. ದಾನಿಯು ಆರೋಗ್ಯವಂತನಾಗಿದ್ದರೆ ಮಾತ್ರ ರಕ್ತ ಪಡೆಯಲಾಗುತ್ತದೆ. ಅನಾರೋಗ್ಯ ಅಥವಾ ಇತರ ಸಮಸ್ಯೆಗಳಿದ್ದಲ್ಲಿ ಅದಕ್ಕೆ ಪರಿಹಾರ ಸೂಚಿಸಲಾಗುತ್ತದೆ. ರೋಗಿಗಳಿಗೆ ರಕ್ತ ನೀಡುವಾಗಲೂ ಅಷ್ಟೇ, ರಕ್ತವನ್ನು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿಯೇ ನೀಡಲಾಗುತ್ತದೆ.
ರಕ್ತದಾನ ಮಾಡುವಾಗ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಧುಮೇಹ, ರಕ್ತದೊತ್ತಡ, ಏಡ್ಸ್, ಕ್ಯಾನ್ಸರ್ ಇತ್ಯಾದಿ ರೋಗ ಉಳ್ಳವರು ಹಾಗೂ ಮದ್ಯಪಾನ, ಧೂಮಪಾನ ಮುಂತಾದ ಅಮಲು ಪದಾರ್ಥ ಸೇವಿಸಿದವರು ರಕ್ತದಾನ ಮಾಡಬಾರದು. ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಕಡಿಮೆಯಾದರೆ ಅನೇಕ ರೋಗಗಳಿಗೆ ತುತ್ತಾಗಬಹುದು. ಶರೀರದಲ್ಲಿ ರಕ್ತವು ಕಡಿಮೆಯಾಗುತ್ತಿದ್ದಂತೆ ದಣಿವು, ದೌರ್ಬಲ್ಯ, ಉಸಿರಾಟ ಸಮಸ್ಯೆ, ತಲೆ ತಿರುಗುವಿಕೆ, ತಲೆನೋವು ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ರಕ್ತದಾನ ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ.
‘ರಕ್ತವು ಇಡೀ ಮಾನವ ಜನಾಂಗವನ್ನು ಒಗ್ಗೂಡಿಸುವ ಶಕ್ತಿ’ ಎಂದರೆ ತಪ್ಪಾಗಲಾರದು. ಸಮಾಜದಲ್ಲಿ ಜಾತಿ, ಮತ, ಧರ್ಮಗಳ ನಡುವೆ ಭಿನ್ನಾಭಿಪ್ರಾಯ, ಬಿರುಕುಗಳಿದ್ದರೂ ರಕ್ತವು ಧರ್ಮ, ಜಾತಿ, ಪಂಗಡಗಳ ಕಂದಕವನ್ನು ಮೀರಿ ಮಾನವೀಯ ನೆಲೆಯಲ್ಲಿ ಎಲ್ಲರನ್ನು ಒಂದುಗೂಡಿಸುತ್ತದೆ. ‘ಯಾವ ಹೂವು ಯಾರ ಮುಡಿಗೋ’ ಎಂಬoತೆ ಯಾರದೋ ರಕ್ತ ಇನ್ಯಾರಿಗೋ ಜೀವದಾನ ಮಾಡುತ್ತದೆ. ರಕ್ತ ನೀಡುವವರು ನಮ್ಮ ಜಾತಿಯವನಿಗೆ, ಧರ್ಮದವನಿಗೆ ಕೊಡಿ ಎಂದೆನ್ನದೆ ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಿ ಎನ್ನುತ್ತಾರೆ. ರಕ್ತ ಪಡೆಯುವವರೂ ಅಷ್ಟೇ ಯಾರ ರಕ್ತ ಎಂದು ಪರಿಗಣನೆ ಮಾಡದೆ ರಕ್ತ ಪಡೆದು ಜೀವ ಉಳಿಸಿಕೊಳ್ಳುತ್ತಾರೆ. ಈ ಮೂಲಕ ಸಮಾಜದಲ್ಲಿರುವ ಜಾತಿ, ವರ್ಗ, ಪಂಗಡ, ಮತ ಇತ್ಯಾದಿಗಳ ನಡುವಿನ ಕಂದಕಗಳು ಮುಚ್ಚಿ ಮಾನವೀಯತೆ ಗೆಲ್ಲುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates