ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಹಿಂದಿನ ಸಂಚಿಕೆಯಲ್ಲಿ ಪ್ರಗತಿನಿಧಿಯ ಬಡ್ಡಿ ಲೆಕ್ಕಾಚಾರ ಹಾಗೂ ಮರುಪಾವತಿ ಚೀಟಿಯ ವಿವರಗಳನ್ನು ತಿಳಿಸಲಾಗಿತ್ತು. ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿ ಬಡ್ಡಿದರವು ವಾರ್ಷಿಕ ಶೇ.14 ಆಗಿದ್ದರೂ, ವಾರದ ಮರುಪಾವತಿಯ ಮೂಲಕ ಒಂದು ವರ್ಷಕ್ಕೆ ನಿವ್ವಳ ಬಡ್ಡಿ ಪಾವತಿ ಶೇಕಡಾವಾರಿಗೆ ಹೋಲಿಸಿದಾಗ ಕೇವಲ ಶೇ. 7.27 ಆಗುವುದೆಂದು ತಿಳಿದುಕೊಂಡಿದ್ದೇವೆ. ಓರ್ವ ಸದಸ್ಯ ರೂ. 1 ಲಕ್ಷ ಸಾಲವನ್ನು ಪಡೆದುಕೊಂಡು 50 ವಾರಗಳಲ್ಲಿ (ಒಂದು ವರ್ಷದಲ್ಲಿ) ಮರುಪಾವತಿ ಮಾಡುವುದಾದಲ್ಲಿ ವಾರದ ಕಂತು ರೂ. 2,140/- ಆಗಿದ್ದು 50 ವಾರಗಳಿಗೆ ಒಟ್ಟು ರೂ. 1,06,992/- ಮರುಪಾವತಿ ಆಗುತ್ತದೆ. ಈ ಮೊತ್ತದಲ್ಲಿ ಸಾಲದ ಮೊತ್ತವನ್ನು ಕಳೆದಾಗ ಒಂದು ವರ್ಷಕ್ಕೆ ಪಾವತಿಸುವ ನಿವ್ವಳ ಬಡ್ಡಿ ಮೊತ್ತ ಕೇವಲ ರೂ. 6,992/- ಆಗುವುದೆಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿದುಕೊಂಡಿದ್ದೇವೆ.
ಯೋಜನೆಯಲ್ಲಿ ಸದಸ್ಯರು ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಅವರಿಗೆ ಮೊದಲು ‘ಮರುಪಾವತಿ ಚೀಟಿ’ಯನ್ನು ನೀಡಲಾಗುತ್ತದೆ. ಈ ಹಿಂದೆ ತಿಳಿಸಿದಂತೆ, ಎಲ್ಲಾ ವಿವರಗಳನ್ನೊಳಗೊಂಡ ಮರುಪಾವತಿ ಚೀಟಿಯಲ್ಲಿ ಸದಸ್ಯರು ತಾವು ಪ್ರತೀ ವಾರ ಮರುಪಾವತಿ ಮಾಡಿದ ಮೊತ್ತವನ್ನು ನಮೂದಿಸುವುದರ ಮೂಲಕ ಮರುಪಾವತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ. ಹೀಗೆ ಸದಸ್ಯರೇ ನಿರ್ವಹಿಸುವ ಮರುಪಾವತಿ ಚೀಟಿಯನ್ನು ಮಾಸಿಕ ವರದಿಯೊಂದಿಗೆ ಪ್ರತೀ ತಿಂಗಳು ಪರಿಶೀಲಿಸಬೇಕಾಗುತ್ತದೆ. ಮಾಸಿಕ ವರದಿಯನ್ನು ಪ್ರತೀ ತಿಂಗಳು ಸಂಘಗಳಿಗೆ ನೀಡಲಾಗುತ್ತದೆ. ಸದಸ್ಯರು ತಮ್ಮ ಮಾಸಿಕ ವರದಿಯನ್ನು ಸಂಘದ ಮೀಟಿಂಗ್ನಲ್ಲಿ ಕುಳಿತು ಸುದೀರ್ಘವಾಗಿ ವಿಶ್ಲೇಷಿಸುತ್ತಾರೆ. ಎಲ್ಲವೂ ಸಮರ್ಪಕವಾಗಿದೆ ಎಂದು ಖಚಿತಪಡಿಸಿದ ನಂತರ ಇನ್ನೊಂದು ಪ್ರತಿಗೆ ಸಹಿ ಮಾಡಿ ಯೋಜನೆಗೆ ಹಿಂದಿರುಗಿಸುತ್ತಾರೆ. ಮಾಸಿಕ ವರದಿಗಳು ಸಂಪೂರ್ಣ ಕಂಪ್ಯೂಟರೀಕೃತವಾಗಿದ್ದು, ಸಾಫ್ಟ್ವೇರ್ನಿಂದಲೇ ಅಟೋಮೆಟಿಕ್ ಆಗಿ ಜನರೇಟ್ ಆಗುತ್ತವೆ. ಈ ಮಾಸಿಕ ವರದಿಯಲ್ಲಿರುವ ಅಂಶಗಳನ್ನು ಪ್ರತಿಯೊಬ್ಬ ಸದಸ್ಯರು ತಮ್ಮ ನಿರ್ಣಯ ಪುಸ್ತಕದ ನಿರ್ಣಯಗಳೊಂದಿಗೆ ಹಾಗೂ ಮರುಪಾವತಿ ಚೀಟಿಯೊಂದಿಗೆ ಗಮನಿಸಿದಾಗ ನಿಖರವಾದ ಮಾಹಿತಿಗಳು ಲಭ್ಯವಾಗುತ್ತವೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಅತ್ಯಂತ ಸಾಮಾನ್ಯ ಸದಸ್ಯರು ಕೂಡಾ ಕೈಗೊಳ್ಳಬಹುದಾಗಿದೆ. ಯೋಜನೆಯ ಸಾಫ್ಟ್ವೇರ್ಗಳು ಸುಲಭವಾಗಿ ವರದಿಗಳನ್ನು ತಯಾರಿಸಿಕೊಡುತ್ತವೆ.
‘ಮಾಸಿಕ ವರದಿ’ಗಳು ಸಂಘಗಳ ಪರಿಪೂರ್ಣ ಹಾಗೂ ಅಧಿಕೃತ ಸ್ಟೇಟ್ಮೆಂಟ್ ಆಗಿದೆ. ಏಕೆಂದರೆ ಈ ಮಾಸಿಕ ವರದಿಯಲ್ಲಿ ಪ್ರತೀ ಸದಸ್ಯರ ಉಳಿತಾಯ, ಉಳಿತಾಯ ನಿಧಿಯ ಆಂತರಿಕ ವ್ಯವಹಾರ ಹಾಗೂ ಸಾಲದ ಮೊತ್ತ, ಮರುಪಾವತಿ ಮೊತ್ತ, ಚಾಲ್ತಿ ಮೊತ್ತ ಮುಂತಾದ ಎಲ್ಲಾ ವಿವರಗಳು ಸಿಗುತ್ತವೆ. ಯೋಜನೆಯು ಅಂತಾರಾಷ್ಟ್ರೀಯ ಗುಣಮಟ್ಟದ ಸಾಫ್ಟ್ವೇರ್ಗಳನ್ನು ಅಭಿವೃದ್ಧಿ ಪಡಿಸಿದ್ದರಿಂದ, ಬ್ಯಾಂಕ್ಗಳಿoದ ಪಡೆದ ದತ್ತಾಂಶಗಳನ್ನು ಸಂಪೂರ್ಣ ಕಂಪ್ಯೂಟರೀಕೃತದೊoದಿಗೆ ಲೆಕ್ಕಾಚಾರಕ್ಕೆ ಸಂಯೋಜನೆಗೊಳಿಸಲಾಗುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಒಳಗೊಂಡು ತಯಾರಾಗುವ ವರದಿ ‘ಮಾಸಿಕ ವರದಿ’ ಆಗಿರುತ್ತದೆ.
ಸ್ವಸಹಾಯ ಸಂಘಗಳನ್ನು ಪ್ರತೀ ವರ್ಷ SHG ಆಡಿಟರ್ಗಳಿಂದ ಆಡಿಟ್ಗೆ ಒಳಪಡಿಸಲಾಗುತ್ತದೆ. ಈ ಆಡಿಟ್ ಪ್ರಕ್ರಿಯೆಯಲ್ಲಿ ಸಂಘದ ಹಾಗೂ ಸದಸ್ಯರ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತದೆ. ಮಾಸಿಕ ವರದಿಗಳು, ಸಂಘದ ನಿರ್ಣಯಗಳು, ವಾರದ ಮರುಪಾವತಿಯ ಕಂಪ್ಯೂಟರೀಕೃತ ರಶೀದಿಗಳು, ಸಂಘದ ದಾಖಲಾತಿ ಮುಂತಾದ ಅನೇಕ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ಈ ಪರಿಶೀಲನೆಯು ಸಂಘದ ‘ಗ್ರೇಡಿಂಗ್’ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಯೋಜನೆಯ ಪಾರದರ್ಶಕತೆ ವ್ಯವಸ್ಥೆಯನ್ನು ನಿರಂತರ ಆಡಿಟ್ನ ಮೂಲಕವೂ ಕಾಪಾಡಿಕೊಳ್ಳಲಾಗುತ್ತದೆ. ಸ್ವಸಹಾಯ ಸಂಘಗಳ ಆಡಿಟ್ನ ಪ್ರಕ್ರಿಯೆಗಳಲ್ಲದೇ ಅಗತ್ಯವಿದ್ದಲ್ಲಿ ಕ್ವಿಕ್ ಆಡಿಟ್ಗಳನ್ನೂ ಮಾಡಲಾಗುತ್ತದೆ. ಯೋಜನೆಯ ಅಧಿಕಾರಿಗಳು ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಇವುಗಳನ್ನೆಲ್ಲ ಪರಿಶೀಲಿಸುತ್ತಾರೆ. ಯೋಜನೆಯ ಕೇಂದ್ರ ಕಚೇರಿಯಲ್ಲಿ ‘ಸ್ವಸಹಾಯ ಸಂಘ ಸೇವಾ ವಿಭಾಗ’ವು ಸ್ವಸಹಾಯ ಸಂಘಗಳ ನಿರ್ವಹಣಾ ಗುಣಮಟ್ಟವನ್ನು ಅನೇಕ ಆಯಾಮಗಳಿಂದ ಪರಿಶೀಲಿಸುತ್ತದೆ. ಉನ್ನತ ತಂತ್ರಜ್ಞಾನದಿoದ ಅಪಾಯ ಸೂಚ್ಯಂಕಗಳನ್ನು (risk indicators) ಸೂಕ್ಷ್ಮವಾಗಿ ಗ್ರಹಿಸುತ್ತದೆ. ಪರೋಕ್ಷವಾಗಿ ಕೆಲವೊಂದು ವಿಷಯಗಳನ್ನು ಕೃತಕ ಬುದ್ಧಿಮತ್ತೆ (artificial intelligence) ಮೂಲಕವೂ ಗ್ರಹಿಸುತ್ತದೆ. ಕೇಂದ್ರ ಕಚೇರಿಯ ಅಧಿಕಾರಿಗಳು ಕ್ಷೇತ್ರ ಭೇಟಿಗೆ ತೆರಳಿ ಸಂಘಗಳ ನಿರ್ವಹಣೆಯ ಗುಣಮಟ್ಟವನ್ನು ಪರಿಶೀಲಿಸುತ್ತಾರೆ. ಸಂಘಗಳಿಗೆ ಸಾಲ ನೀಡುವ ಬ್ಯಾಂಕ್ಗಳಿoದಲೂ ಸ್ಯಾಂಪಲ್ ಆಧಾರದ ಮೇಲೆ ಸಂಘಗಳ ಗುಣಮಟ್ಟದ ನಿರ್ವಹಣೆಯ ಬಗ್ಗೆ ಪರಿಶೀಲನೆಯನ್ನು ನಡೆಸುತ್ತಾರೆ. ಹೀಗೆ ಹತ್ತು ಹಲವು ಆಯಾಮಗಳಿಂದ ಯೋಜನೆಯ ಅತ್ಯಂತ ಪಾರದರ್ಶಕ ಮತ್ತು ನಿಖರವಾದ ಲೆಕ್ಕಾಚಾರವನ್ನು ನಿರ್ವಹಣೆ ಮಾಡುತ್ತಿರುವುದರಿಂದಲೇ ರಾಷ್ಟçಮಟ್ಟದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವ್ಯವಸ್ಥೆಯು ಒಂದು ಮಾದರಿ ಬಿ.ಸಿ. ವ್ಯವಸ್ಥೆಯಾಗಿ ರೂಪುಗೊಂಡಿದೆ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿಷಯಗಳನ್ನು ತಿಳಿಯೋಣ.