ಸಮರ್ಪಕ ನಿರ್ವಹಣೆಗೆ ಸಂದ ಮನ್ನಣೆ ಲಾಭಾಂಶ

ಪ್ರಧಾನಿ ನರೇಂದ್ರ ಮೋದಿಯವರು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ದೇಶದ ‘ವಿತ್ತ ಮಂತ್ರಿ’ ಅಂದರೆ ಹಣಕಾಸಿಗೆ ಸಂಬoಧಿಸಿದ ಬಹುದೊಡ್ಡ ಖಾತೆಯನ್ನು ಕೊಟ್ಟು ಹೆಣ್ಣು ಮಕ್ಕಳ ಬಗ್ಗೆ ಭರವಸೆ ಇಡಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ‘ಗ್ರಾಮಾಭಿವೃದ್ಧಿ ಯೋಜನೆಯಲ್ಲಿರುವ ಶೇ. 62ರಷ್ಟು ಹೆಣ್ಣು ಮಕ್ಕಳಿಗೆ ಬ್ಯಾಂಕ್ ಸಾಲವನ್ನು ವ್ಯವಸ್ಥೆಗೊಳಿಸುವ ಮೂಲಕ ನಾವು ಪ್ರತಿ ಮನೆಮನೆಯ ಹಣಕಾಸಿನ ಜವಾಬ್ದಾರಿಯನ್ನು ಹೆಣ್ಣು ಮಕ್ಕಳ ಕೈಗೆ ಕೊಟ್ಟಿದ್ದೇವೆ’ ಎಂದು ಖಾವಂದರು ಲಾಭಾಂಶ ವಿತರಣೆ ಕಾರ್ಯಕ್ರಮದಲ್ಲಿ ಹೇಳಿದರು. ಇದು ನಿಜವಾದ ಮಾತು. ಇಷ್ಟು ವರ್ಷಗಳವರೆಗೆ ಹೈನುಗಾರಿಕೆ, ಕೃಷಿ, ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೆಣ್ಣು ಮಕ್ಕಳು ನಿರ್ವಹಿಸುತ್ತಿದ್ದರೂ ಆರ್ಥಿಕ ವ್ಯವಹಾರ ಅಂದರೆ ಹಣಕಾಸಿನ ವಿಚಾರ ಬಂದಾಗ ಅದು ಹೆಣ್ಣು ಮಕ್ಕಳ ಕೈಗೆ ಸಿಗುತ್ತಿರಲಿಲ್ಲ.
ಯೋಜನೆಯಿಂದಾಗಿ ಹೆಣ್ಣುಮಕ್ಕಳ ಕೈಗೆ ಹಣ ಬರಲು ಯಾವಾಗ ಆರಂಭವಾಯಿತೊ ಅವಳು ಅದನ್ನು ಜಾಗರೂಕತೆಯಿಂದ ಬಳಸಿ ಸಮಯಕ್ಕೆ ಸರಿಯಾಗಿ ಹಿಂದಿರುಗಿಸತೊಡಗಿದಳು. ಯಾವಾಗ, ಯಾವುದಕ್ಕೆ ಸಾಲ ಪಡೆದುಕೊಳ್ಳಬೇಕು ಎನ್ನುವ ಬಗ್ಗೆಯೂ ಚಿಂತಿಸುವ, ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸುವ ಸಾಮರ್ಥ್ಯ ಅವಳಿಗಿತ್ತು. ಶಾಲೆಗೆ ಹೋಗುವ ಮಕ್ಕಳಿದ್ದರೆ ಅವಳ ಮೊದಲ ಆದ್ಯತೆ ಮಕ್ಕಳ ವಿದ್ಯಾಭ್ಯಾಸಕ್ಕೆ. ಮಗಳ ಮದುವೆ, ಸ್ವ ಉದ್ಯೋಗ, ಮನೆ ನಿರ್ಮಾಣ, ಮನೆ ರಿಪೇರಿ ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಸಾಲ ಪಡೆದು ಆರ್ಥಿಕವಾಗಿ ಸ್ವಾವಲಂಬಿ ಆಗುವ ಪ್ರಯತ್ನಕ್ಕೆ ಕೈಹಾಕುತ್ತಿದ್ದಾಳೆ. ತನ್ನ ಕುಟುಂಬದ ಅವಶ್ಯಕತೆಗಳನ್ನು ಒಂದೊoದಾಗಿ ಪೂರೈಸುವುದರಲ್ಲಿ ಅವಳ ಸಾಲ ಸದುಪಯೋಗವಾಗುತ್ತಿದೆ.
ಮೊನ್ನೆ ಯೋಜನೆಯ ಸದಸ್ಯರಿಗೆ ರೂ. 600 ಕೋಟಿ ಲಾಭಾಂಶ ವಿತರಣೆಗೆ ಆಗಮಿಸಿದ್ದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳುವಂತೆ ಧರ್ಮಸ್ಥಳ ಎಲ್ಲದಕ್ಕೂ ಪ್ರಯೋಗ ಶಾಲೆ. ಸ್ವ ಉದ್ಯೋಗ, ಗ್ರಾಮಾಭಿವೃದ್ಧಿ ಯೋಜನೆ, ಪ್ರಕೃತಿ ಚಿಕಿತ್ಸಾಲಯ, ಆಯುರ್ವೇದ ಹೀಗೆ ಹತ್ತು ಹಲವು ಪ್ರಯೋಗಗಳು ನಡೆಯುವ ಸ್ಥಳ ಧರ್ಮಸ್ಥಳ. ಇಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಆಯಿತೆಂದರೆ ಮತ್ತೆ ಅದನ್ನು ಎಲ್ಲಾ ಕಡೆ ವಿಸ್ತರಿಸುವುದು ಸುಲಭ. ಪ್ರಯೋಗ ಎಲ್ಲಾ ಕಡೆ ಮಾಡುವುದಕ್ಕಾಗುವುದಿಲ್ಲ. ಪ್ರಯೋಗ ಮಾಡುವಾಗ ಅನೇಕ ಅಡೆತಡೆಗಳು, ಲಾಭ ನಷ್ಟಗಳು ಉಂಟಾಗಬಹುದು. ಆದರೆ ಅದನ್ನೆಲ್ಲಾ ನಿವಾರಿಸುತ್ತಾ, ಅದಕ್ಕೆಲ್ಲಾ ಪರಿಹಾರ ಹುಡುಕುತ್ತಾ ಮುಂದುವರಿದಾಗ ಒಂದು ಒಳ್ಳೆಯ ಮಾದರಿ ಸಿಗುವುದಕ್ಕೆ ಸಾಧ್ಯವಿದೆ. ಆದರೆ ಈ ಪ್ರಯೋಗಗಳಿಗೆ ಎದೆ ಒಡ್ಡಿ ಯಾವುದು ಸರಿ? ಯಾವುದು ತಪ್ಪು? ಹೇಗೆ ಮಾಡಿದರೆ ಸರಿ ಆಗಬಹುದು ಎನ್ನುವುದನ್ನು ಕಂಡುಕೊಳ್ಳಲು ಒಳ್ಳೆಯ ಅಧಿಕಾರಿಗಳು ಮತ್ತು ಕಾರ್ಯಕರ್ತರ ಪಡೆ ಬೇಕಾಗುತ್ತದೆ. ಹೊಸದನ್ನು ಮಾಡಲು ಹೊರಟಾಗ ಅದು ಕಷ್ಟ, ಇದು ಆಗಲ್ಲ ಎಂದು ಹಿಂಜರಿಯುವವರಿದ್ದಾಗ ಯಾವುದೇ ಹೊಸತನವನ್ನು ತರುವುದು ಕಷ್ಟ ಆಗುತ್ತಿದೆ. ನಮ್ಮ ಸದಸ್ಯರೂ ಕಾಲಕಾಲಕ್ಕೆ ಯೋಜನೆಯಲ್ಲಿ ಆಗುತ್ತಿರುವ ಬದಲಾವಣೆಗೆ ಹೊಂದಿಕೊoಡು ಆಗೋದೆಲ್ಲಾ ನಮ್ಮ ಒಳ್ಳೆಯದಕ್ಕೆ ಎಂಬ ವಿಶ್ವಾಸವಿರಿಸಿದ್ದರಿಂದ ಇಂಥ ಬದಲಾವಣೆ ಸಾಧ್ಯವಾಗುತ್ತದೆ.
ಓರ್ವ ಹೆಣ್ಣು ಮಗಳು ಹೊಸದಾಗಿ ಅಡುಗೆ ಕಲಿಯುವಾಗ ಕೈತುಂಬಾ ಬಿಸಿಮುಟ್ಟಿದ ಗಾಯಗಳಾಗುವುದು ಸಹಜ. ಉಪ್ಪು, ಹುಳಿ, ಖಾರ ಸರಿಯಾಗಿದೆಯೋ ಇಲ್ಲವೋ ಎಂದು ಆಗಾಗ ರುಚಿ ನೋಡುತ್ತಾ, ಮತ್ತೆ ಬೇಕಾದ್ದನ್ನು ಸೇರಿಸುವುದೂ ಅನಿವಾರ್ಯ. ಆದರೆ ಒಮ್ಮೆ ಅಡುಗೆ ಚೆನ್ನಾಗಿ ಕರಗತ ಆದ ಮೇಲೆ ಯಾವುದೇ ಅಳತೆ ಬೇಕಾಗಿಲ್ಲ. ಕೈ ಅಳತೆ, ಕಣ್ಣಳತೆಯಲ್ಲೇ ಇಷ್ಟು ಪಲ್ಯಕ್ಕೆ ಇಷ್ಟು ಉಪ್ಪು, ಹುಳಿ, ಖಾರ ಬೇಕಾಗುತ್ತದೆ ಎಂಬ ತಿಳುವಳಿಕೆ ಅವಳದ್ದಾಗುತ್ತದೆ. ಒಂದು ಹೊಸ ಅಡುಗೆ, ಪಲ್ಯ, ಸಿಹಿತಿಂಡಿ ಮಾಡಬೇಕಾದಲ್ಲಿ ಅದರಲ್ಲಿ ನುರಿತವಳು ಪಕ್ಕದಲ್ಲಿ ಇದ್ದರೆ ಸುಲಭ. ಅವಳು ಮಾಡುವುದನ್ನು ನೋಡಿ ತಾನೂ ಕಲಿಯಬಹುದು. ಹೆಚ್ಚು ಕಡಿಮೆ ಆದಾಗ ಅವಳ ಸಲಹೆ ಇದ್ದೇ ಇರುತ್ತದೆ. ಅಡುಗೆ ಮನೆ ಯಾವಾಗಲೂ ಒಂದು ಪ್ರಯೋಗ ಶಾಲೆ ಇದ್ದಂತೆಯೇ. ಹಾಗೇ ‘ಗ್ರಾಮಾಭಿವೃದ್ಧಿ ಯೋಜನೆ’ ಎಲ್ಲಾ ರೀತಿಯ ಪ್ರಯೋಗಗಳಿಗೆ ಒಡ್ಡಿಕೊಂಡು ಇವತ್ತು ಒಂದು ಒಳ್ಳೆಯ ಮಾದರಿ ಯೋಜನೆಯಾಗಿ ಬೆಳೆದು ನಿಂತಿದೆ. ಅದನ್ನು ಸರಕಾರವೂ ಅನುಸರಿಸಬಹುದು ಎಂಬ ಮಾತನ್ನು ವಿತ್ತ ಸಚಿವರು ಹೇಳಿರುವುದು ನಮ್ಮ ಯೋಜನೆಗೆ ಹೆಮ್ಮೆ ತರುವ ವಿಚಾರ.
ಈಗ ನಮ್ಮ ಗ್ರಾಮೀಣ ಮಹಿಳೆಯರು ನಿಜವಾದ ಅರ್ಥದಲ್ಲಿ ಗೃಹಲಕ್ಷ್ಮೀಯರಾಗಿದ್ದಾರೆ. ಹಾಗಾಗಿ ಮನೆಯಲ್ಲಿ ಅವಳಿಗೊಂದು ಸ್ಥಾನ ಲಭ್ಯವಾಗಿದೆ. ಗಂಡ, ಮಕ್ಕಳ ದೃಷ್ಟಿಯಲ್ಲಿ ಅವಳು ಏನೂ ವ್ಯವಹಾರ ಜ್ಞಾನವಿಲ್ಲದ, ಅಡುಗೆ ಮನೆಗೆ ಸೀಮಿತವಾದ ಹೆಂಗಸಾಗುವ ಬದಲು ಎಲ್ಲಾ ರೀತಿಯ ವ್ಯವಹಾರ ಜ್ಞಾನವುಳ್ಳ, ಸಂಸಾರದ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ಶ್ರಮಿಸುವ ಮಹಿಳೆಯಾಗಿ ಮೂಡಿ ಬಂದಿದ್ದಾಳೆ. ಮನೆಯ ಗೌರವ ಮತ್ತು ಹೆಸರು ಎರಡನ್ನು ಉಳಿಸುವ ಕೆಲಸ ಅವಳಿಂದ ಆಗಿದೆ. ಯೋಜನೆಯಲ್ಲಿರುವ 55 ಲಕ್ಷ ಮಂದಿ ಸದಸ್ಯರಲ್ಲಿ 38 ಲಕ್ಷದಷ್ಟು ಹೆಣ್ಣುಮಕ್ಕಳೇ ಇದ್ದಾರೆಂದರೆ ಯೋಜನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವಲ್ಲಿ ಮತ್ತು ಸಿಕ್ಕಿದ ಅವಕಾಶವನ್ನು ಸದುಪಯೋಗಗೊಳಿಸಿಕೊಳ್ಳುವಲ್ಲಿ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿದ್ದಾರೆ ಎಂದೇ ಅರ್ಥ. ಲಾಭಾಂಶದ ಹೆಚ್ಚಿನ ಪಾಲನ್ನು ಮಹಿಳೆಯರೇ ಪಡೆದುಕೊಂಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಒಟ್ಟಿನಲ್ಲಿ ಸಂಘಗಳ ಸಮರ್ಪಕ ನಿರ್ವಹಣೆಗೆ ಸಂದ ಮನ್ನಣೆ ಈ ಲಾಭಾಂಶ ವಿತರಣೆ. ನಮ್ಮ ಮಹಿಳೆಯರು ಇನ್ನಷ್ಟು ಉತ್ಸಾಹದಿಂದ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲೆoದು ಹಾರೈಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *