ಕೆರೆ ರಕ್ಷಣೆಯ ಕ್ಷೇತ್ರಪಾಲರು

ಎಲ್ಲಾ ನಾಗರೀಕತೆಗಳ ಉಗಮ ನದಿ ದಡಗಳಲ್ಲೇ ಆಗಿವೆ. ನೀರಿಲ್ಲದಿದ್ದರೆ ಜನರೂ ಇಲ್ಲ, ಜೀವನವೂ ಇಲ್ಲ. ನಾವು ಇತಿಹಾಸದಲ್ಲಿ ರಾಜ-ಮಹಾರಾಜರ ಯುದ್ಧ, ರಾಜ್ಯಗಳ ವಿಸ್ತರಣೆಯ ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಆದರೆ ಜನರಿಗಾಗಿ ಸಾಲುಮರಗಳನ್ನು ನೆಡೆಸುವುದು, ಕೆರೆಗಳನ್ನು ನಿರ್ಮಿಸುವುದು, ತಂಗಲು ಛತ್ರಗಳನ್ನು ಕಟ್ಟಿಸುವುದು ಇವೆಲ್ಲಾ ಕೆಲವೇ ಕೆಲವು ರಾಜರ ಕಾಲದಲ್ಲಿ ಮಾತ್ರ ನಡೆದಿದೆ.
ಹಿಂದಿನವರು ಇಪ್ಪತ್ತು ಮೂವತ್ತು ಎಕರೆಗಳಷ್ಟು ದೊಡ್ಡ ಗಾತ್ರದ ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಅದರಲ್ಲಿ ಕ್ರಮೇಣ ಹೂಳು ತುಂಬಿ ಅವುಗಳು ನಿಷ್ಪçಯೋಜಕವಾಗಿದ್ದವು. ಒಂದು ಊರಿನ ದೇಗುಲ, ಕೆರೆಗಳು ಸುಸ್ಥಿತಿಯಲ್ಲಿರುವಾಗ ಬೇಕಾದ ಹಾಗೆ ಉಪಯೋಗಿಸಿಕೊಳ್ಳುತ್ತೇವೆ. ಆದರೆ ಅವು ಪಾಳು ಬಿದ್ದಾಗ ಅವುಗಳ ಬಗ್ಗೆ ಗಮನಹರಿಸದೆ ನಮಗೆ ಅದರ ಸಂಬoಧವೇ ಇಲ್ಲ ಎಂಬoತೆ ಇರುವುದು ಹೆಚ್ಚಿನವರ ವಾಡಿಕೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರದಿಂದ ‘ಧರ್ಮೋತ್ಥಾನ ಟ್ರಸ್ಟ್’ ಅನ್ನು ಸ್ಥಾಪಿಸಲಾಗಿದೆ. ಹಾಗೆಯೇ ಕೆರೆಗಳ ಅಭಿವೃದ್ಧಿಗಾಗಿ ‘ನಮ್ಮೂರು ನಮ್ಮ ಕೆರೆ’ ಎಂಬ ವಿನೂತನ ಯೋಜನೆಯನ್ನು ರೂಪಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಜನರ ಬದುಕಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮಗಳೇ ಆಗಿವೆ. ಆದರೆ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಕೇವಲ ಜನರಿಗಷ್ಟೇ ಅಲ್ಲ, ಎಲ್ಲಾ ಜೀವಸಂಕುಲಗಳಿಗೆ ಉಪಯುಕ್ತವಾಗುವ ಕಾರ್ಯಕ್ರಮವಾಗಿದೆ.
ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮನೆಗಳಲ್ಲಿ ಬಾವಿ ಇದ್ದು ಅದರಲ್ಲಿ ಪರಿಶುದ್ಧ ನೀರು ದೊರೆಯುತ್ತಿದೆ. ಆದರೆ ಉತ್ತರ ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಬಾವಿ, ಕೆರೆಗಳಿಲ್ಲ. ಬದಲಾಗಿ ಇರುವ ಕೆಲವೇ ಕೆಲವು ಕೊಳವೆಬಾವಿಗಳಲ್ಲಿ ದೊರೆಯುವ ನೀರಿಗಾಗಿ ಹೆಂಗಸರು ಪರದಾಡುವುದು, ಜಗಳವಾಡುವುದನ್ನು ನಾವು ನೋಡುತ್ತೇವೆ. ಈ ಹಿಂದೆ ಕೊಳವೆಬಾವಿಯಲ್ಲಿ ನೀರು ಬತ್ತಿದರೆ, ಮಳೆ ಇಲ್ಲ ಅಂದರೆ ಆ ಊರಿನ ಜನರು ಗುಳೆ ಹೋಗುತ್ತಿದ್ದರು. ಈಗ ಸರಕಾರದ ಮೇಲೆ ಒತ್ತಡ ಹೇರಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುವುದು ರೂಢಿಯಾಗಿದೆ.
ಸಾಹಿತಿ ವಸುಧೇಂದ್ರ ಅವರು ಒಂದು ಕಡೆ ಬರೆಯುತ್ತಾರೆ; ‘ತಾನು ಅಮೆರಿಕದಲ್ಲಿ ಒಂದು ಕಂಪೆನಿಯಲ್ಲಿ ಮೀಟಿಂಗ್‌ನಲ್ಲಿರಬೇಕಾದರೆ ಬಳ್ಳಾರಿಯಲ್ಲಿರುವ ನನ್ನ ಅಕ್ಕ ಪದೇ ಪದೇ ಫೋನ್ ಮಾಡುತ್ತಾಳೆ. ಏನಪ್ಪಾ! ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಯಾಗಿರಬಹುದೇನೋ! ಎಂದು ಫೋನ್ ಎತ್ತಿದರೆ “ನಮ್ಮ ಮನೆ ನಳ್ಳಿಯಲ್ಲಿ ನೀರು ಬಂತು ಕಣೋ” ಅಂತ ಸಂತೋಷದಿoದ ಹೇಳಿದಳು.’ ಇದು ಅಲ್ಲಿಯ ನೀರಿನ ಬವಣೆಯನ್ನು ಸೂಚಿಸುತ್ತದೆ. ನೀರಿನ ಜವಾಬ್ದಾರಿ ಮಹಿಳೆಯರದ್ದೇ ಆಗಿದೆ. ರಾಜಸ್ಥಾನದಂತಹ ಮರುಭೂಮಿಯಲ್ಲಿ ನೀರಿಗಾಗಿ ಮೈಲುಗಟ್ಟಲೆ ನಡೆಯಬೇಕಾಗುತ್ತದೆ. ಕೆಲವೊಮ್ಮೆ ನೀರು ಹೊರಲಿಕ್ಕೆ ಒಬ್ಬಳು ಜೊತೆ ಆಗುತ್ತಾಳೆ ಎಂದು ಹೆಂಡತಿಯೇ ತನ್ನ ಗಂಡನಿಗೆ ಇನ್ನೊಂದು ಮದುವೆ ಆಗುವಂತೆ ಒತ್ತಡ ಹಾಕುವುದೂ ಇದೆಯಂತೆ.
ಆಯಾ ಊರಿನ ಕೆರೆ ಆ ಊರಿನವರಿಗೆ ಗಂಗಾ ನದಿಯಷ್ಟೇ ಪೂಜ್ಯ ಹಾಗೂ ಪವಿತ್ರ. ಆದ್ದರಿಂದ ಈಗಾಗಲೇ ರಾಜ್ಯದ್ಯಾಂತ ಹೂಳೆತ್ತಲಾದ ಎಲ್ಲಾ ಕೆರೆಗಳ ‘ಕೆರೆ ಅಭಿವೃದ್ಧಿ ಸಮಿತಿ’ಯವರು ನಿಮ್ಮೂರಿನ ಕೆರೆಗಳು ಕಲುಷಿತವಾಗದಂತೆ ಕಾಪಾಡುವ ಹೊಣೆಯನ್ನು ಹೊರಬೇಕು. ಇದು ಪುಣ್ಯದ ಕೆಲಸವಾಗಿದೆ. ಕೆರೆಯ ಅಭಿವೃದ್ಧಿಯಿಂದ ಊರು ಉದ್ಧಾರವಾಗುತ್ತದೆ. ಊರಿನ ದೇವಸ್ಥಾನಗಳಲ್ಲಿ ದೇಗುಲ ಮತ್ತು ಊರಿನ ರಕ್ಷಣೆಗಾಗಿ ಕ್ಷೇತ್ರಪಾಲರನ್ನು ಸ್ಥಾಪಿಸುತ್ತಾರೆ. ಹೀಗೆ ಕೆರೆ ಅಭಿವೃದ್ಧಿ ಸಮಿತಿಯವರೆಲ್ಲಾ ಕ್ಷೇತ್ರಪಾಲರಂತೆ ನಿಂತು ತಮ್ಮ ಊರಿನ ಕೆರೆಗಳನ್ನು ರಕ್ಷಣೆ ಮಾಡಬೇಕಾಗಿದೆ.
ಕ್ಷೇತ್ರದಿಂದ ಈಗಾಗಲೇ 800 ಕೆರೆಗಳ ಹೂಳೆತ್ತಿ ಊರಿನವರಿಗೆ ಹಸ್ತಾಂತರಿಸಲಾಗಿದೆ. ನಾವು ಇನ್ನು 1000 ಕೆರೆಗಳ ಪುನಶ್ಚೇತನದ ನಿರೀಕ್ಷೆಯಲ್ಲಿದ್ದೇವೆ. ಇತ್ತೀಚೆಗೆ ಚಾಮರಾಜನಗರದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕೆರೆಯೊಂದರ ಹೂಳೆತ್ತುವ ಕೆಲಸವಾಗುತ್ತಿರಬೇಕಾದರೆ ಒಂದೆಡೆಯಿoದ ಜೆ.ಸಿ.ಬಿ. ನಿಂತಿರುವAತೆಯೇ ಇನ್ನೊಂದೆಡೆಯಿoದ ಆನೆಯೊಂದು ಬಂದು ನೀರು ಕುಡಿಯುವ ದೃಶ್ಯವನ್ನು ಕಂಡು ಬಹಳ ಸಂತೋಷವಾಯಿತು. ನಮ್ಮ ಪ್ರಯತ್ನ ಸಾರ್ಥಕವೆಂದೆನಿಸಿತು. ಕಾಡುಪ್ರಾಣಿಗಳಿಗೂ ನೀರಿನ ಅಗತ್ಯತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನಾವೆಲ್ಲ ಮನವರಿಕೆ ಮಾಡಿಕೊಳ್ಳಬೇಕು. ಇನ್ನು ಕೆರೆಗಳ ಏರಿಯಲ್ಲಿ ಮರಗಳನ್ನು ನೆಟ್ಟಿರುವುದರಿಂದ ಇದು ಪಕ್ಷಿಗಳಿಗೆ ತಂಗುದಾನವೂ ಆಗಿದೆ.
ಕೆರೆಯ ಅಭಿವೃದ್ಧಿ ಎನ್ನುವುದು ಮಾನವ ಮತ್ತು ಜೀವ ಸಂಕುಲಗಳ ಅಳಿವು-ಉಳಿವಿಗೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇದನ್ನು ಅರಿತುಕೊಂಡು ತಮ್ಮ ಊರಿನ ಕೆರೆಗಳು ಮತ್ತೆ ಕಸದಿಂದ, ಹೂಳಿನಿಂದ ತುಂಬದoತೆ ಅವುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *