ನಿತ್ಯವೂ ಮಹಿಳಾ ದಿನವಾಗಲಿ

ಮಾರ್ಚ್ 08 ವಿಶ್ವ ಮಹಿಳಾ ದಿನ. ಈ ದಿನದಂದು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಾಧಕರನ್ನು ಗೌರವಿಸಲಾಗುತ್ತದೆ. ವಿಚಾರಗೋಷ್ಠಿಗಳಲ್ಲಿ ಮಹಿಳಾ ಸಬಲೀಕರಣದ ಕುರಿತು ಚರ್ಚೆಗಳು ನಡೆಯುತ್ತವೆ. ಎಲ್ಲೆಡೆ ಭಾಷಣಗಳು ಕೇಳಿಬರುತ್ತವೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗುತ್ತದೆ. ಹಾಗಾದರೆ ನಿಜವಾದ ಮಹಿಳಾ ದಿನ ಎಂದರೆ ಹೇಗೆ? ಈ ದಿನ ಕೇವಲ ಒಂದೇ ದಿನಕ್ಕೆ ಸೀಮಿತವೆ? ಇದನ್ನು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಕೇಳಿಕೊಳ್ಳಬೇಕಿದೆ.
ಮಹಿಳಾ ದಿನಕ್ಕೊಂದು ನಿಜವಾದ ಅರ್ಥ ಬರುವುದು ಮಹಿಳೆಯರು ಮಾಡುವ ಸಾಧನೆ ಮತ್ತು ಮಹಿಳೆಯರ ಸಬಲೀಕರಣದಿಂದ. ಈ ನಿಟ್ಟಿನಲ್ಲಿ ನಾಲ್ಕು ದಶಕಗಳ ಹಿಂದೆ ಆರಂಭವಾದ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನವಿಕಾಸ’ ಕಾರ್ಯಕ್ರಮ ಇಂದು ಸಾವಿರಾರು ಮಹಿಳೆಯರಿಗೆ ಸ್ವಉದ್ಯೋಗದ ಆಸರೆಯನ್ನಿತ್ತು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿಯೂ ಸಬಲೀಕರಣಗೊಳಿಸಿದೆ. ಅವರು ಸಾಧನೆ ಮಾಡಲು, ತಮ್ಮ ಉದ್ಯೋಗದಲ್ಲಿ ಯಶಸ್ಸು ಪಡೆಯಲು ನಿತ್ಯವು ಶ್ರಮಿಸುತ್ತಿದ್ದಾರೆ. ಆ ಮೂಲಕ ನಿತ್ಯ ಮಹಿಳಾ ದಿನವನ್ನು ಅವರು ಅನುಭವಿಸುತ್ತಿದ್ದಾರೆ.
ಬಡತನದಲ್ಲೆ ಬಾಲ್ಯವನ್ನು ಕಳೆದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸುಮಂಗಲ ಓದಿದ್ದು ಕೇವಲ ಐದನೇ ತರಗತಿ. ಸಣ್ಣ ವಯಸ್ಸಿನಲ್ಲೆ ದಾಂಪತ್ಯಕ್ಕೆ ಕಾಲೀರಿಸುತ್ತಾರೆ. ಗಂಡನಿಗೆ ತಿಂಗಳಿಗೆ ಕೈಸೇರುತ್ತಿದ್ದ ಸಂಬಳ ಕೇವಲ 750 ರೂಪಾಯಿ. ಇದರಿಂದ ಜೀವನ ನಿರ್ವಹಣೆ ಕಷ್ಟವೆಂದುಕೊಂಡು ಸುಮಂಗಲ ಗಂಧದ ಹಾರ ತಯಾರಿಸುವ ಮನೆಯೊಂದರಲ್ಲಿ ಹಾರ ತಯಾರಿ ಕೆಲಸಕ್ಕೆ ಸೇರುತ್ತಾರೆ. ನಂತರ ತಾನೇ ಸ್ವತಹ ಗಂಧದ ಮಾಲೆ ತಯಾರಿಸುತ್ತಾರೆ. ಆದರೆ ಮಾರುಕಟ್ಟೆ ದೊರೆಯದೆ ಇದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮುಂದೆ ಕಡಲೆ ಬೇಳೆ ಹೋಳಿಗೆ ತಯಾರಿಸಿ ಮಾರಾಟ ಮಾಡುವ ಪ್ರಯತ್ನದಲ್ಲೂ ಯಶಸ್ಸು ದೊರೆಯುವುದಿಲ್ಲ. ನಾಲ್ಕು ಜನರ ಎದುರು ನಿಂತು ಮಾತನಾಡುವ ಧೆÉೈರ್ಯ ಅವರಲ್ಲಿ ಇಲ್ಲದ ಕಾರಣ ತಾನು ಕೈಗೊಂಡ ಸಾಲು – ಸಾಲು ಉದ್ಯೋಗಗಳಲ್ಲೂ ಸೋಲನ್ನು ಅನುಭವಿಸುತ್ತಾರೆ. ಹಾಗೆಂದು ಅವರು ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸುವುದಿಲ್ಲ. ಬದಲಾಗಿ ಗ್ರಾಮಾಭಿವೃದ್ಧಿ ಯೋಜನೆಗೆ ಸೇರುತ್ತಾರೆ. ಅಲ್ಲಿ ಮಾತನಾಡುವ ಕಲೆಯನ್ನು ಕರಗತಗೊಳಿಸಿಕೊಳ್ಳುತ್ತಾರೆ. ಯೋಜನೆಯ ಮೂಲಕ ಬ್ಯಾಂಕ್‍ನಿಂದ ಪ್ರಗತಿನಿಧಿ ಪಡೆದು ಟೈಲರಿಂಗ್ ಯಂತ್ರವೊಂದನ್ನು ಖರೀದಿಸುತ್ತಾರೆ. ಆರ್‍ಸೆಟಿಯಲ್ಲಿ ಫ್ಯಾಶನ್ ಡಿಸೈನ್ ತರಬೇತಿಯನ್ನು ಪಡೆದು ಬಟ್ಟೆಯ ಕೈಚೀಲ ತಯಾರಿಯನ್ನು ಆರಂಭಿಸುತ್ತಾರೆ. ಪ್ಲಾಸ್ಟಿಕ್‍ಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಹದಿನೈದು ಬಗೆಯ ಬ್ಯಾಗ್‍ಗಳನ್ನು ತಯಾರಿಸತೊಡಗುತ್ತಾರೆ. ದಿನಕಳೆದಂತೆ ಬಟ್ಟೆ ಬ್ಯಾಗ್‍ಗಳಿಗೆ ಬೇಡಿಕೆ ಹೆಚ್ಚಾಗತೊಡಗಿ ನಿತ್ಯ ತಯಾರಾಗುತ್ತಿದ್ದ ಐವತ್ತು ಬ್ಯಾಗ್‍ಗಳ ಸಂಖ್ಯೆ ಐನೂರು ತಲುಪುತ್ತದೆ.
ಇದೀಗ ಇವರು 12 ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ. ನಿತ್ಯ ಸಾವಿರಾರು ಬಟ್ಟೆ ಬ್ಯಾಗ್‍ಗಳು ಇಲ್ಲಿ ತಯಾರಾಗುತ್ತವೆ. ರೂ. 5 ರಿಂದ 300ರವರೆಗಿನ ಹದಿನೈದು ಬಗೆಯ ಬ್ಯಾಗ್‍ಗಳು ಇಲ್ಲಿವೆ. ಗೋಕರ್ಣ, ಇಡಗುಂಜಿ ದೇವಾಲಯಗಳಿಗೆ ಇವರೇ ಬ್ಯಾಗ್‍ಗಳನ್ನು (ಕೈ ಚೀಲ) ತಯಾರಿಸಿ ನೀಡುತ್ತಿದ್ದಾರೆ. ಇದರೊಂದಿಗೆ ಶಾಲಾ ಯೂನಿಫಾರ್ಮ್‍ನ ಟೆಂಡರ್ ಅನ್ನು ವಹಿಸಿಕೊಳ್ಳುತ್ತಾರೆ. ಇದೀಗ ನಿತ್ಯ ಕೈತುಂಬಾ ಆದಾಯವನ್ನು ಗಳಿಸುವ ಸುಮಂಗಲ ‘ಮೂಕಾಂಬಿಕಾ ಇಕೋ ಬ್ಯಾಗ್ಸ್’ ಘಟಕದ ಮಾಲಕಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಗೋಳಿಯ ಅನಿತಾರವರು ಮೂರು ಮಂದಿ ಹೆಣ್ಮಕ್ಕಳಲ್ಲಿ ಅವರೇ ದೊಡ್ಡವರು. ಸಂಜೆ ವೇಳೆ ಎಸ್.ಟಿ.ಡಿ. ಬೂತ್‍ನಲ್ಲಿ ಕೆಲಸ ಮಾಡಿ ಪಿಯುಸಿಯವರೆಗೆ ಓದುತ್ತಾರೆ. ಅಷ್ಟರಲ್ಲಿ ವಿವಾಹ ಬಂಧನಕ್ಕೊಳಗಾಗಿ ಮುಂಬೈ ಸೇರುತ್ತಾರೆ. ಗಂಡ ಬೀಡಾ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದರು. ಇದರೊಂದಿಗೆ ದಿನಸಿ ಅಂಗಡಿಯೊಂದರ ಬಾಗಿಲು ತೆರೆದರು. ಇವರ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ ದಿನಸಿ ಅಂಗಡಿಯಿಂದ ಸಾಲದ ಸುಳಿ ಸುತ್ತಿಕೊಂಡಿತು. ಅನಿತಾರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳು ಬ್ಯಾಂಕ್ ಸೇರಿದವು. 2010ರಲ್ಲಿ ಮುಂಬೈ ಬಿಟ್ಟು ಮತ್ತೆ ಊರು ಸೇರಿದರು. ಗಂಡ ಹೈನುಗಾರಿಕೆಯನ್ನು ಆರಂಭಿಸಿದರು. ಅನಿತಾ ಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದರು. ನಂತರ ಅನಿತಾ ‘ಶಾರದಾಂಬಾ’ ಜ್ಞಾನವಿಕಾಸ ಕೇಂದ್ರದ ಸದಸ್ಯರಾದರು. ಅನಿತಾರವರಿಗೆ ಜ್ಞಾನವಿಕಾಸದಿಂದ ಧೈರ್ಯ, ಆತ್ಮವಿಶ್ವಾಸ ದೊರೆಯಿತು. ಮಾವ ಮತ್ತು ಗಂಡನ ಅಕ್ಕನ ಮಗ ಜೊತೆ ಸೇರಿ ಕಾರ್ಕಳದ ರೇಂಜಾಳದಲ್ಲೊಂದು ತಿಂಡಿ ತಯಾರಿ ಘಟಕವನ್ನು ಆರಂಭಿಸಿದರು. ಅನಿತಾರವರು ಬೀಜದ ಫ್ಯಾಕ್ಟರಿ ಬಿಟ್ಟು ಆ ತಿಂಡಿ ಘಟಕವನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಸಿಹಿ ತಿಂಡಿ ಘಟಕದಿಂದ ಇನ್ನೇನು ಲಾಭ ಕೈಸೇರುತ್ತದೆ ಎನ್ನುವಾಗ ಕೊರೊನಾ ದೊಡ್ಡ ಆಘಾತವನ್ನು ನೀಡಿತು. ವ್ಯಾಪಾರವಿಲ್ಲದೆ ಫ್ಯಾಕ್ಟರಿಗೆ ಬೀಗ ಜಡಿಯುವ ನಿರ್ಧಾರವನ್ನು ಮಾಡಿದರು. ಆಗ ಅನಿತಾ ತಾನು ತಿಂಡಿ ಘಟಕವನ್ನು ಮುಂದುವರಿಸುವ ಧೈರ್ಯ ತೋರಿದರು. ಗ್ರಾಮಾಭಿವೃದ್ಧಿ ಯೋಜನೆಯ ಸಹಾಯದಿಂದ ಪ್ರಗತಿನಿಧಿ ಪಡೆದು ಅವರಿಂದ ಘಟಕವನ್ನು ಲೀಸ್‍ಗೆ ಪಡೆದುಕೊಂಡರು. ಕೊರೊನಾ ನಂತರ ‘ಮಹಮ್ಮಾಯಿ ಹೋಂ ಪ್ರಾಡಕ್ಟ್’ ಮತ್ತೆ ಅನಿತಾರ ಮಾಲಕತ್ವದಲ್ಲಿ ಶುಭಾರಂಭಗೊಂಡಿತು. ಇದೀಗ ಈ ಘಟಕ ಮನೆ ಮಾತಾಗಿದೆ. ನಿತ್ಯ ಹತ್ತು ಮಂದಿ ದುಡಿಯುತ್ತಿದ್ದಾರೆ. ಇಲ್ಲಿ ತಯಾರಾಗುವ ಹತ್ತಾರು ಬಗೆಯ ತಿಂಡಿಗಳಿಗೆ ಬೇಕರಿಗಳಲ್ಲಿ ಬಹುಬೇಡಿಕೆಯಿದೆ. ಇವರಿಗೆ ಜ್ಞಾನವಿಕಾಸ ವ್ಯವಹಾರ ಕಲೆಯನ್ನು ಕಲಿಸಿದೆಯಂತೆ. ಇದೀಗ ಸುಂದರವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ಅನಿತಾ ಸಿಹಿ ತಿಂಡಿ ಘಟಕದ ಮಾಲಕಿಯಾಗಿ ಒಂದಷ್ಟು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ.
ಹೇಮಾವತಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲ ಕೋಟೆಯವರು. ಓದಿದ್ದು ಎಂಟನೇ ತರಗತಿ. ಅವರಿಗೆ ಇಬ್ಬರು ಮಕ್ಕಳು. ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಗಂಡ ವಿದ್ಯುತ್ ದುರಂತದಲ್ಲಿ ಬಾರದ ಲೋಕಕ್ಕೆ ಪಯಣಿಸುತ್ತಾರೆ. ಮುಂದೆ ಸಂಸಾರ ನಿರ್ವಹಣೆಗಾಗಿ ಸಂಬಂಧಿಕರೋರ್ವರ ಮಾರ್ಗದರ್ಶನದಂತೆ ಹಿಟ್ಟಿನ ಗಿರಾಣಿ ಕೆಲಸದಲ್ಲಿ ತೊಡಗುತ್ತಾರೆ. ಆದರೆ ಅದು ಕೈಹಿಡಿಯಲಿಲ್ಲ. ನಂತರ ಹೇಮಾವತಿ ಯೋಜನೆಯ ‘ತನುಶ್ರೀ’ ಸ್ವಸಹಾಯ ಸಂಘಕ್ಕೆ ಸೇರುತ್ತಾರೆ. ‘ಸಿಂಧೂರ’ ಜ್ಞಾನವಿಕಾಸ ಕೇಂದ್ರದ ಸದಸ್ಯರಾಗುತ್ತಾರೆ. ಕೇಂದ್ರದಿಂದ ದೊರೆತ ಮಾಹಿತಿ, ತರಬೇತಿಯೊಂದಿಗೆ ಯೋಜನೆಯಿಂದ ಪ್ರಗತಿನಿಧಿ ಪಡೆದು ಬಟ್ಟೆ ವ್ಯಾಪಾರವನ್ನು ಆರಂಭಿಸುತ್ತಾರೆ. ಜ್ಞಾನವಿಕಾಸ ಕೆಂದ್ರದಲ್ಲಿ ಕಲಿತ ಸಂವಹನ ಕಲೆ ಇಂದು ಇವರನ್ನು ಓರ್ವ ಯಶಸ್ವಿ ಬಟ್ಟೆ ಉದ್ಯಮಿಯನ್ನಾಗಿಸಿದೆ. ಇದರೊಂದಿಗೆ ಬಿಡುವಿನ ವೇಳೆ ರೊಟ್ಟಿ ತಯಾರಿಯನ್ನು ಆರಂಭಿಸಿದ್ದಾರೆ. ಹಿಂದೆ ಬ್ಯಾಂಕ್ ಮೆಟ್ಟಿಲೇರಲು ಭಯಪಡುತ್ತಿದ್ದ ಹೇಮಾವತಿ ಇಂದು ಪ್ರತಿ ತಿಂಗಳು ಲಕ್ಷಗಟ್ಟಲೆ ವ್ಯವಹಾರವನ್ನು ಬ್ಯಾಂಕ್ ಮೂಲಕ ಮಾಡುತ್ತಿದ್ದು ಓರ್ವ ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ಇಂತಹ ಸಾವಿರಾರು ಉದಾಹರಣೆಗಳು ಜ್ಞಾನವಿಕಾಸ ಕೇಂದ್ರಗಳಲ್ಲಿ ಸಿಗುತ್ತವೆ. ಇವರುಗಳ ಛಲ ಬಿಡದ ಪ್ರಯತ್ನ ಇವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಇವರಂತಹ ಸಾಧಕರಿಂದಲೇ ಮಹಿಳಾ ದಿನಕ್ಕೊಂದು ಅರ್ಥ ಬರುತ್ತದೆ. ಇವರಂತೆ ಇತರರು ಸ್ವಾವಲಂಬಿ ಬದುಕನ್ನು ನಡೆಸುವ ನಿರ್ಧಾರವನ್ನು ಮಹಿಳಾ ದಿನಾಚರಣೆಯಂದು ಕೈಗೊಂಡರೆ ಅವರ ಬಾಳು ಬೆಳಗುತ್ತದೆ. ಆ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳಲ್ಲಿರುವ ಎಲ್ಲ ಮಹಿಳೆಯರು ಪ್ರಯತ್ನ ಪಡುವಂತಾಗಲಿ ಎಂಬ ಆಶಯ ನಮ್ಮದು. ಅವರಿಗೆ ಬೇಕಾದ ತರಬೇತಿ, ಮಾಹಿತಿ, ಮಾರ್ಗದರ್ಶನ, ಆರ್ಥಿಕ ನೆರವು, ಪ್ರಗತಿನಿಧಿಯನ್ನು ಒದಗಿಸುವ ಕೆಲಸವನ್ನು ಯೋಜನೆಯು ಮಾಡುತ್ತಿದೆ.
ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *