ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಏನಾದರೂ ಒಂದು ಒಳ್ಳೆಯ ಕೆಲಸ ಆದರೆ ತಕ್ಷಣ ‘ಅದು ನಾನು ಮಾಡಿದ್ದು, ನಾನು ಹೇಳಿದ್ದು, ನನ್ನಿಂದಾಗಿ ಆಗಿದ್ದು’ ಇತ್ಯಾದಿ ಮಾತುಗಳು ಬರುತ್ತವೆ. ಕೆಟ್ಟದಾದಾಗ ಅದಕ್ಕೆ ಯಾರೂ ಹೊಣೆಗಾರರಿರುವುದಿಲ್ಲ. ನಮ್ಮ ಹಕ್ಕು, ಸವಲತ್ತುಗಳ ಬಗ್ಗೆ ನಮಗೆಲ್ಲ್ಲಾ ಚೆನ್ನಾಗಿ ಗೊತ್ತಿದೆ. ಆದರೆ ಕರ್ತವ್ಯದ ವಿಚಾರ ಬಂದಾಗ ಅಲ್ಲಿ ನಾವಿಲ್ಲ. ಇತ್ತೀಚೆಗೆ ವಾಟ್ಸಪ್ ಮೆಸೇಜ್ ಗಳ ಸೃಷ್ಟಿಕರ್ತರು ಯಾರೆಂಬುದೇ ಗೊತ್ತಿರುವುದಿಲ್ಲ. ನಮಗೆ ಬರುವ ಮೆಸೇಜ್ ಗಳು ಫಾರ್ವಡ್ ಆಗಿದ್ದು, ನಾವು ಕಳುಹಿಸುವುದೂ ಹಾಗೆ. ನನಗೆ ಬರುವ ಬೇಡದ ವಿಚಾರಗಳನ್ನು ನಾನು ಇತರರಿಗೆ ಕಳುಹಿಸದೆ ಇದ್ದರೆ, ಅಷ್ಟರಮಟ್ಟಿಗಾದರೂ ಸರಪಣಿ ತುಂಡಾಗುತ್ತದೆ. ಆದರೆ ಅದರ ಸತ್ಯಾಸತ್ಯತೆಗಳ ಬಗ್ಗೆ ಯೋಚಿಸುವವರು ಯಾರು?
ಕೊರೊನಾ ಸಂದರ್ಭದಲ್ಲಿ ‘ಸರಕಾರ, ಅಧಿಕಾರಿಗಳು, ಮಂತ್ರಿಗಳು, ವೈದ್ಯರುಗಳು ಒಟ್ಟಿನಲ್ಲಿ ವ್ಯವಸ್ಥೆ ಯಾವುದೂ ಸರಿ ಇಲ್ಲ’ ಎನ್ನುವ ದೂರು ಎಲ್ಲರದ್ದೂ. ಆದರೆ ದಿನದಿಂದ ದಿನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೋಂಕು ಹೆಚ್ಚುತ್ತಿದ್ದಾಗ ಅವರಿಗೆಲ್ಲ ಐ.ಸಿ.ಯು., ಮಾತ್ರೆ, ಲಸಿಕೆ, ಆಕ್ಸಿಜನ್ ಹೀಗೆ ಎಲ್ಲದರ ವ್ಯವಸ್ಥೆ ಮಾಡುವುದು ಸುಲಭದ ಮಾತಲ್ಲ. ಆದರೆ ಈ ಬಗ್ಗೆ ಯಾರೂ ಯೋಚಿಸುವುದಿಲ್ಲ. ಕೊರೊನಾ ಸಮಯ ‘ವೈದ್ಯಕೀಯ ಎಮರ್ಜೆನ್ಸಿ’ ಇದ್ದಹಾಗೆ.
ಜನ ಕೊರೊನಾ ಆರಂಭವಾದ ವರ್ಷ ಸ್ವಲ್ಪ ಹೆದರಿದ್ದರು, ಎಚ್ಚರಿಕೆಯಲ್ಲಿದ್ದರು, ಎರಡನೇಯ ಅಲೆಯ ಹೊತ್ತಿಗೆ ಆ ಭಯವೂ ಹೋಗಿದೆ. ‘ಸರಕಾರದ ಯಾವುದೇ ಕಾನೂನು ನಮ್ಮ ಒಳಿತಿಗಾಗಿ ಇದೆ’ ಎನ್ನುವ ಪರಿಜ್ಞಾನ ಇನ್ನೂ ನಮ್ಮಲ್ಲಿ ಬಂದಿಲ್ಲ. ಇಲ್ಲವಾದಲ್ಲಿ ಹೆಲ್ಮೆಟ್ ಹಾಕಿಕೊಳ್ಳುವುದನ್ನು ಕಾನೂನು ಮೂಲಕ ಜಾರಿ ತರುವುದಷ್ಟೇ ಅಲ್ಲ, ಹಾಕದವರನ್ನು ದಿನಾ ನೋಡಿ ತಡೆದು ನಿಲ್ಲಿಸಿ ದಂಡವಸೂಲಿ ಮಾಡಬೇಕಾದ ಪ್ರಮೇಯ ಬರುತ್ತಿರಲಿಲ್ಲ. ಪ್ರಜೆಗಳಿಗೂ ತನ್ನ ಜವಾಬ್ದಾರಿಯ ಅರಿವಿರಬೇಕು. ತಮ್ಮ ಅಂಕಣದಲ್ಲಿ ನಾಗರಾಜ್ ಇಳಿಗುಂಡಿಯವರು ಹೇಳಿದಂತೆ ನಾಳೆಯ ಬಗ್ಗೆ ಭರವಸೆ ಇಟ್ಟುಕೊಂಡ ನಾವಿಂದು ಯುದ್ಧಕ್ಕೆ ತಯಾರಾಗಬೇಕಾಗಿದೆ. ಈ ಸಮರ ಬೇಗ ಮುಗಿಯುವಂತದ್ದಲ್ಲ. ಇಲ್ಲಿ ಸರಕಾರ, ಸೇನಾಧಿಪತಿ, ನಾವು 130 ಕೋಟಿ ಪ್ರಜೆಗಳೆಲ್ಲ ಸೈನಿಕರು ಎನ್ನುತ್ತಾರೆ. ಆದರೆ ಎಲ್ಲ ಭಾರ ಸೇನಾಧಿಪತಿಯ ಮೇಲೆ ಹಾಕಿ ಸೈನಿಕರೆಲ್ಲ ಶಿಸ್ತು ಪಾಲಿಸದೆ, ಸೇನಾಧಿಪತಿಯನ್ನೇ ದ್ವೇಷಿಸುತ್ತಾ, ಟೀಕಿಸುತ್ತಾ ಕುಳಿತರೆ ಯುದ್ಧ ಗೆಲ್ಲುವುದು ಹೇಗೆ?
ಕೊರೊನಾ ವಿರುದ್ಧದ ಯುದ್ಧ ಎಲ್ಲ ದೇಶದ ಮುಖಂಡರೂ ಸೇರಿ ವ್ಯೂಹ ರಚಿಸಿ ಮಾಡಬೇಕಾದ ಯುದ್ಧ. ದೇಶದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಲ್ಲರೂ ಸೇರುವುದು ಮುಖ್ಯ. ಯಾಕೆಂದರೆ ಇವತ್ತು ಪಕ್ಷವಲ್ಲ ಪ್ರಪಂಚದ ಜನ ಉಳಿಯಬೇಕಾಗಿದೆ. ‘ವಸುದೈವ ಕುಟುಂಬಕಂ’ ಎಂಬ ಮಾತಿನ ಅರ್ಥವನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಡಾಕ್ಟರ್, ನರ್ಸ್ ಗಳಂತೂ ದಿನವಿಡೀ ತಮ್ಮ ಜೀವದ ಆಸೆ ಬಿಟ್ಟು ರೋಗಿಗಳೊಂದಿಗೆ ಕಳೆಯುತ್ತಿದ್ದಾರೆ. ಅದೂ ದಿನದ 8 ರಿಂದ 10 ಗಂಟೆಗಳ ಕಾಲ ಪ್ಲಾಸ್ಟಿಕ್ (ಪಿ.ಪಿ.ಇ. ಕಿಟ್)ನೊಳಗೆ ತಮ್ಮನ್ನು ತೂರಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ, ಅದರ ಜೊತೆ ರೋಗಿ ಸತ್ತರೆ ಡಾಕ್ಟರ್ ಮೇಲೆ ಹಲ್ಲೆ, ಆಸ್ಪತ್ರ್ರೆ ಎದುರು ಧರಣಿ. ಅವರಿಗೂ ಹೆಂಡತಿ ಮಕ್ಕಳಿದ್ದಾರೆ. ದಿನಾಲೂ ಮನೆಯಿಂದ ಹೊರಡುವಾಗ ಹುಷಾರಾಗಿ ಮನೆಗೆ ಬರುವವರೆಗೆ ಮನೆಯವರಿಗೆಷ್ಟು ಚಿಂತೆ. ಮಹಿಳಾ ವೈದ್ಯರುಗಳು, ನಸರ್್ಗಳ ಕತೆ ಅಂತೂ ಕೇಳುವುದೇ ಬೇಡ. ಮನೆಯಲ್ಲಿರುವ ಪುಟ್ಟ ಮಕ್ಕಳನ್ನೂ ಮುಟ್ಟುವಂತಿಲ್ಲ, ಮುದ್ದಿಸುವಂತಿಲ್ಲ. ಪೊಲೀಸರದ್ದೂ ಅದೇ ಪಾಡು. ಅದಕ್ಕಾಗಿಯೇ ಅವರನ್ನು ‘ವಾರಿಯರ್ಸ್’ ಅಂದರೆ ‘ಸೈನಿಕರು’ ಎಂದು ಕರೆಯಲಾಗಿದೆ. ನಮ್ಮ ರಕ್ಷಣೆಗಾಗಿ ಇರುವ ‘ವಾರಿಯರ್ಸ್’ನ ರಕ್ಷಣೆ ನಮ್ಮ ಹೊಣೆಯಾಗಬೇಕು. ನಾವು ಮನೆಯಲ್ಲಿ ಇದ್ದು ಸೂಕ್ತ ಮುಂಜಾಗರೂಕತೆ ತೆಗೆದುಕೊಂಡಲ್ಲಿ ನಾವು ಮಾತ್ರ ಬದುಕುವುದಲ್ಲ ಅವರೂ ಬದುಕಿಕೊಳ್ಳುತ್ತಾರೆ. ಈ ಬಗ್ಗೆ ಮನೆಯ ಮಹಿಳೆಯರು ತಮ್ಮ ಮಕ್ಕಳನ್ನು ತಿದ್ದಿ, ಬುದ್ಧಿ ಹೇಳಿ ಅವರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ.
ಪೇಪರಿನಲ್ಲಿ, ಟಿ.ವಿಯಲ್ಲಿ ಮಾತ್ರವಲ್ಲ ಫೋನೆತ್ತಿದರೆ ಕೊರೊನಾ ಜಾಗೃತಿ ಬಗ್ಗೆ ಎಚ್ಚರಿಕೆ ಸಂದೇಶ ಬರುತ್ತಿರುತ್ತದೆ. ‘ಎಲ್ಲವನ್ನೂ ಕಡೆಗಣಿಸಿ ತಲೆ ಗಟ್ಟಿ ಇದೆ ಎಂದು ಬಂಡೆಗೆ ಹೊಡೆದುಕೊಂಡಂತೆ’. ಮನೆ-ಮಂದಿ, ಹೆಂಡತಿ ಮಕ್ಕಳ ಯೋಚನೆ ಮಾಡದೆ ಜನರು ಬೀದಿ ಬೀದಿ ಅಲೆದಾಡುವುದನ್ನು ನಿಲ್ಲಿಸಬೇಕು.
ಕೊರೊನಾ ಮೂರನೇ ಅಲೆಯನ್ನು ತಡೆಯುವ ಪ್ರಯತ್ನವನ್ನು ನಾವೆಲ್ಲ ಸೇರಿ ಮಾಡಬೇಕಿದೆ. ಸೋಂಕು ಇಳಿಮುಖವಾಗುತ್ತಿದೆಯೆಂದುಕೊಂಡು ಕೊರೊನಾ ಮುಂಜಾಗರೂಕತಾ ಕ್ರಮವನ್ನು ಮರೆತುಬಿಡದಿರಿ.