ಕಲೆಯನ್ನೂ, ಕಲಾವಿದರನ್ನೂ ಪ್ರೋತ್ಸಾಹಿಸಬೇಕಿದೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು


‘ಬಡವನಿಗೆ ಬಡತನವಲ್ಲದೆ ನೂರಾರು ಕಷ್ಟಗಳು ಮೈಮೇಲೆ ಬಂದಿರುತ್ತವೆ. ತನ್ನನ್ನು ನಂಬಿದವರು ಹಸಿದಿರುತ್ತಾರೆ. ಪ್ರಾಮಾಣಿಕನಾಗಿದ್ದರೂ ಎದ್ದು ನಿಲ್ಲಲು ಸಹಾಯ ಸಿಗುವುದಿಲ್ಲ. ಮಾಡಬೇಕೆಂದಿರುವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಮತ್ತು ಅವನು ಕಳೆದುಕೊಳ್ಳುವ ಎಲ್ಲ ಸಾಮಾಜಿಕ, ಆರ್ಥಿಕ ನಷ್ಟವನ್ನು ತಮ್ಮ ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಒಂದಷ್ಟು ಜನ ಕಾದು ಕುಳಿತಿರುತ್ತಾರೆ’. ಈ ಮಾತನ್ನು ‘ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಎನ್ನುವ ಪುಸ್ತಕದಲ್ಲಿ ಓದುತ್ತಿದ್ದೆ. ಆಗ ತಕ್ಷಣ ಮನಸ್ಸಿಗೆ ಹೊಳೆದದ್ದು ಕೆಲವು ದಿನಗಳ ಹಿಂದೆ ಓದಿದ್ದ CRAFTS OF INDIA ಎಂಬ ಪುಸ್ತಕದ ಹಲವಾರು ಲೇಖನಗಳು. ‘ಹ್ಯಾಂಡ್‌ಮೆಡ್ ಇನ್ ಇಂಡಿಯಾ’ (Handmade in INDIA) ಎನ್ನುವ ಪುಸ್ತಕದ ಮಾಹಿತಿಗಳನ್ನು ನನ್ನ ಮಗಳು ಶ್ರದ್ಧಾಳ ಮನೆಯಲ್ಲಿ ಒಮ್ಮೆ ನೋಡಿದ್ದೆ, ಬಳಿಕ ಆ ಪುಸ್ತಕವನ್ನು ತರಿಸಿಕೊಂಡೆ.


ಭಾರತದ ಎಲ್ಲಾ ರಾಜ್ಯಗಳಲ್ಲಿ, ವಿಶೇಷವಾಗಿ ಗ್ರಾಮೀಣ ಮಟ್ಟದವರೆಗೆ ಇರುವಂತಹ ಕಲಾವಿದರನ್ನು, ಗುಡಿ ಕೈಗಾರಿಕೆಗಳನ್ನು ಗುರುತಿಸಿ, ಅವುಗಳನ್ನು ಸಂಗ್ರಹಿಸಿ ಚಿತ್ರಸಹಿತ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಗುಡಿ ಕೈಗಾರಿಕೆಗಳಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ವಸ್ತುಗಳನ್ನು ತಯಾರು ಮಾಡುವ ಕಲಾವಿದರಿದ್ದಾರೆ. ಅವರ ಕಲೆ ನಿಜಕ್ಕೂ ಅದ್ಭುತ. ನನಗೆ ತಿಳಿದಂತೆ ಇಂಥ ಕಲಾವಿದರು ಪ್ರತಿಯೊಂದು ಗ್ರಾಮದಲ್ಲಿ ಇದ್ದಾರೆ.


ಅದಿತಿ ರಂಜನ್ ಮತ್ತು ಎಂ.ಪಿ.ರಂಜನ್ ಸಂಗ್ರಹಿಸಿದ ಕಲೆಯ ಕುರಿತಾದ ಈ ಪುಸ್ತಕದಲ್ಲಿ ವಿವರಗಳನ್ನು ಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಗುಡಿ ಕೈಗಾರಿಕೆ ಶಿಲ್ಪಗಳನ್ನು ಅಥವಾ ಚಿತ್ರಗಳನ್ನು ನೋಡಿದರೆ ಅವುಗಳು ಎಷ್ಟು ಅಮೂಲ್ಯವಾದದ್ದು, ಎಷ್ಟು ಬೆಲೆ ಬಾಳುವಂಥದ್ದು ಎಂಬುದು ಅಚ್ಚರಿ ಮೂಡಿಸುತ್ತದೆ. ಆದರೆ ಇವು ಗ್ರಾಮಗಳಲ್ಲಿ ತಾತ್ಸಾರಕ್ಕೆ ಒಳಪಟ್ಟಿದೆ. ಅದನ್ನೇ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಅಥವಾ ವಿದೇಶಕ್ಕೆ ಕೊಂಡೊಯ್ದರೆ ಅದಕ್ಕೆಷ್ಟು ಮೌಲ್ಯ ಬರಬಹುದು ಎಂದು ಚಿಂತಿಸುತ್ತಿದ್ದೆ. ಆಗ ನನ್ನ ಗಮನ ಹರಿದದ್ದು ಅದನ್ನು ತಯಾರಿಸುವ ಕಲಾವಿದರ ಬಗ್ಗೆ. ವಿಶೇಷವಾಗಿ ಬಹುತೇಕ ಕಲಾವಿದರು, ಗ್ರಾಮೀಣ ಪ್ರದೇಶದಲ್ಲಿ ಇದ್ದು ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ ಅದನ್ನು ಖರೀದಿ ಮಾಡಲು ಏಜೆಂಟರು ನಗರಗಳಿಂದ ಬರುತ್ತಾರೆ. ಅವರು ಕೊಡುವಂತಹ ಮುಂಗಡಕ್ಕೆ ಸರಿಯಾಗಿ ವಸ್ತುಗಳನ್ನು ತಯಾರಿಸಿ ಕೊಡುವುದು ಕಲಾವಿದರ ಉದ್ಯೋಗ. ಇವರು ಗ್ರಾಮೀಣ ಪ್ರದೇಶದಲ್ಲೇ ಉತ್ಪನ್ನಗಳನ್ನು ಮಾರಿದರೆ ದೊರಕುವ ಬೆಲೆಗಳಿಗಿಂತ ಕನಿಷ್ಠ ಶೇಕಡ 30 ರಿಂದ 50 ರಷ್ಟು ಹೆಚ್ಚು ಬೆಲೆ ಈ ಮಧ್ಯವರ್ತಿಗಳಿಂದ ಸಿಗಬಹುದು. ಆದರೆ ಅದೇ ನಗರ ಪ್ರದೇಶಗಳಿಗೆ ಹೋಗಿ ಯಾವುದಾದರೂ ಸಂತೆ ಅಥವಾ ಮಾಲ್‌ಗಳಲ್ಲಿ ಪ್ರದರ್ಶಿಸಿದರೆ ಶೇ. ೫೦೦ರಷ್ಟು ಲಾಭ ಸಿಗಬಹುದು. ಆದರೆ ಅದು ಕಲಾವಿದನಿಗೆ ದೊರಕುವುದಿಲ್ಲ. ಮಧ್ಯವರ್ತಿಗಳಿಗೆ ಸಿಗುತ್ತದೆ.


ಧಾರವಾಡದಲ್ಲಿ ಅನೇಕ ಕೈಗಾರಿಕೆಗಳಿದ್ದು, ನಮ್ಮ ಜನತಾ ಶಿಕ್ಷಣ ಸಮಿತಿಯ ಕುಶಲ ಕೈಗಾರಿಕಾ ಘಟಕದಲ್ಲಿ ಹಿಂದೆ ನವಲಗುಂದ ಕಾರ್ಪೆಟ್ ಅನ್ನು ತಯಾರಿಸುತ್ತಿದ್ದರು. ಅವುಗಳು ಗಟ್ಟಿಮುಟ್ಟಾಗಿರುವಂತೆ ಮಗ್ಗದಲ್ಲಿ ನೇಯುತ್ತಿದ್ದರು. ಶಾಶ್ವತ ಬಣ್ಣವನ್ನು ಬಳಸುತ್ತಿದ್ದರು. ನೂಲುಗಳಿಗೆ ಬಣ್ಣ ಹಾಕುವುದು ಕೂಡಾ ವಿಶೇಷ ಕಲೆ. ಅದರಲ್ಲಿ ವಿಶೇಷವಾಗಿ ಕೆಂಪು, ಹಳದಿ, ಕಪ್ಪು ಈ ಮೂರು ಬಣ್ಣಗಳನ್ನು ಮಾತ್ರ ಪ್ರಾಕೃತಿಕವಾಗಿ ತಯಾರಿಸಿ ಅವುಗಳನ್ನು ಈ ನೂಲಿಗೆ ಹಚ್ಚಿ ನೇಯ್ದರೆ ಎಷ್ಟು ವರ್ಷವಾದರೂ ಬಣ್ಣಗೆಡುವುದಿಲ್ಲ.

ನಮ್ಮ ಕ್ಷೇತ್ರದಲ್ಲೇ 40 – 50 ವರ್ಷಗಳ ಕಾರ್ಪೆಟ್‌ಗಳಿದ್ದಾವೆ. 1975 ರಿಂದ 1980 ರ ಇಸವಿಯ ನಡುವೆ ಅದರ ಬೆಲೆ ಕುಸಿಯಿತು. ಮಾರುಕಟ್ಟೆ ಕುಸಿಯಿತು. ಮುಂದೆ ಈ ಕಲೆಗೆ ಬೇಡಿಕೆ ಕಡಿಮೆಯಾಗಿ ನಿಂತು ಹೋಗುವ ಸ್ಥಿತಿ ಬಂದಾಗ ಅಲ್ಲಿನ ಮುಖ್ಯಸ್ಥರು ‘ನ್ಯಾಶನಲ್ ಹ್ಯಾಂಡಿಕ್ರಾಫ್ಟ್’ ಅನ್ನು ಸಂಪರ್ಕಿಸಿದರು. ಆ ಸಂಸ್ಥೆಯವರು ಬಂದು ಇಲ್ಲಿನ ಕೆಲಸಗಳನ್ನು ನೋಡಿದರು. ಬಳಿಕ ‘ನೀವು ಕಾರ್ಪೆಟ್‌ಗಳಲ್ಲಿ ಒಂದೇ ತೆರನಾದ ಬಣ್ಣವನ್ನು ಬಳಸುತ್ತಿದ್ದೀರಿ, ಕೆಂಪು, ಹಳದಿ, ಕಪ್ಪಿನ ಜೊತೆಗೆ ಕಡುನೀಲಿ, ತಿಳಿಯಾದ ನೀಲಿ, ಬಿಳಿ ಹೀಗೆ ವಿವಿಧ ಬಣ್ಣಗಳನ್ನು ಹೊಂದಾಣಿಕೆ ಮಾಡಿ, ಹೊಸ ವಿನ್ಯಾಸದೊಂದಿಗೆ ತಯಾರಿಸಿ’ ಎಂದರು. ಅವರ ಸಲಹೆಯಂತೆ ವಿವಿಧ ಬಣ್ಣಗಳಿಂದ, ವಿನ್ಯಾಸಗಳಿಂದ ತಯಾರಿಸಲ್ಪಟ್ಟ ಕಾರ್ಪೆಟ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡವು. ಮಾರುಕಟ್ಟೆ ವಿಸ್ತಾರವಾಯಿತು.


ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಗೆ ಅವಶ್ಯಕತೆ ಇರುವ ದಿನಬಳಕೆಯ ವಸ್ತುಗಳನ್ನು, ಅಕ್ಕಿ, ಜೋಳ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳನ್ನು ಅವರೇ ಬೆಳೆದುಕೊಳ್ಳುತ್ತಿದ್ದರು. ಎಣ್ಣೆ, ಅಡುಗೆಗೆ, ಕೈಗಾರಿಕೆಗೆ ಬಳಕೆಯಾಗುವ ಎಣ್ಣೆಗಳನ್ನು, ಕೃಷಿ ಮತ್ತು ಮನೆ ಬಳಕೆಗೆ ಬೇಕಾದ ಮರದ ಎಲ್ಲ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಕ್ರಮೇಣ ನಾಗರಿಕತೆ ಬೆಳೆದಂತೆ ಗ್ರಾಮೀಣ ಜನರು ಗುಡಿ ಕೈಗಾರಿಕೆಗಳ ಮೌಲ್ಯವನ್ನು ಕಳೆದುಕೊಂಡರು. ದೂರದ ಕಾರ್ಖಾನೆಗಳಲ್ಲಿ ತಯಾರಾಗುವ ಸ್ಟೈನ್ ಲೆಸ್ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ವಸ್ತುಗಳು ಹಗುರ ಮತ್ತು ಅಗ್ಗದ ವಸ್ತುಗಳಾಗಿರುವುದರಿಂದ ಹಳ್ಳಿ ಜನರು ಅದನ್ನು ಆಯ್ಕೆ ಮಾಡಿದರು. ಇದರಿಂದಾಗಿ ಗುಡಿ ಕೈಗಾರಿಕೆ ಮತ್ತು ಗ್ರಾಮ ಕೈಗಾರಿಕೆಗಳು ಸ್ತಬ್ಧವಾದುವು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಅವಶ್ಯಕತೆಗಳಿರುವ ಮಣ್ಣಿನ ಪಾತ್ರೆ ಮುಂತಾದ ಅಗತ್ಯ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಲು ಈ ಕಲೆ ಬಲ್ಲವರಿಗೆ ಸಾಕಷ್ಟು ಅವಕಾಶಗಳಿವೆ.


1980ನೇ ಇಸವಿಯ ಸುಮಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿ ಇಳಕಲ್ ಮುಂತಾದ ಸೀರೆಗಳನ್ನು ಬಹಳಷ್ಟು ಮಹಿಳೆಯರು ಉಡುತ್ತಿದ್ದರು. ಮಾತೆಯರು ಆ ಸೀರೆಯನ್ನು ಉಟ್ಟುಕೊಂಡು ತಲೆಯಲ್ಲಿ ಬಿಂದಿಗೆ ಹೊತ್ತುಕೊಂಡು, ಹಣೆಗೊಂದು ಭಸ್ಮದ ತಿಲಕವನ್ನು ಇಟ್ಟುಕೊಂಡಿದ್ದರೆ ಸಾಕ್ಷಾತ್ ದೇವತೆಗಳಂತೆ ಕಾಣುತ್ತಿದ್ದರು. ಇತ್ತೀಚೆಗೆ ಕೆಲವು ಕಾರ್ಯಕ್ರಮಗಳಿಗೆ ಹೋದಾಗ ವಯಸ್ಸಾದ ಮಹಿಳೆಯರು ಕೂಡಾ ಆಧುನಿಕ ನೈಲನ್ ಮುಂತಾದ ಬಟ್ಟೆಗಳನ್ನು ಉಡುತ್ತಿದ್ದಾರೆ. ಕೈಮಗ್ಗದಿಂದ ತಯಾರಾದ ಸೀರೆಗಳನ್ನು ಉಪಯೋಗಿಸುತ್ತಿರಲಿಲ್ಲ. ಹಾಗಾಗಿ ಅನೇಕ ಕೈಮಗ್ಗದ ವಸ್ತು ತಯಾರಕರು ‘ನಮಗೆ ಸಹಾಯ ಮಾಡಿ, ಅಥವಾ ಕೆಲವು ಸೀರೆಗಳನ್ನು ನೀವು ಖರೀದಿಸಿ’ ಎಂದು ಧರ್ಮಸ್ಥಳಕ್ಕೆ ಬಂದು ಕೇಳಿಕೊಂಡಿದ್ದು ಇದೆ.


ಹಾಸ್ಯಕ್ಕೊಂದು ಕತೆ ಇದೆ. ಒಂದು ರಾಜ್ಯದಲ್ಲಿ ಬಹಳ ತೆಳುವಾದ ಬಟ್ಟೆಯನ್ನು ತಯಾರಿಸುವ ನಿಪುಣ ಕಲಾವಿದನಿದ್ದ. ಅವನ ಪ್ರಖ್ಯಾತಿ ಕೇಳಿದ ರಾಜ ಅವನನ್ನು ಕರೆಸಿ, ‘ನನಗೊಂದು ಒಳ್ಳೆಯ ಧಿರಿಸು ತಯಾರಿಸಿಕೊಡು’ ಎಂದ. ಈತ ನೂಲು ತೆಗೆದು ಒಳ್ಳೆಯ ಬಟ್ಟೆ ತಯಾರಿಸಿ ರಾಜನಿಗೆ ಕೊಟ್ಟ. ರಾಜ ಅದನ್ನು, ರಾಜದರ್ಬಾರಿನ ದಿವಸ ಅಥವಾ ಮೆರವಣಿಗೆಯಲ್ಲಿ ಹೋಗುವ ದಿವಸ ಧರಿಸಿದ. ಅವನ ಮೈಯೆಲ್ಲ ಕಾಣುತ್ತಿತ್ತು. ಎಷ್ಟೆಂದರೆ ರಾಜನ ಮೈಮೇಲಿನ ಕೂದಲು ಕೂಡಾ ಕಾಣಿಸುತ್ತದೆ. ಆದರೆ ರಾಜ ತಾನು ಶ್ರೇಷ್ಠ ಕಲಾವಿದನಿಂದ ನೇಯ್ದಿರುವ ಬಟ್ಟೆ ಧರಿಸಿದ್ದೇನೆ ಎಂಬ ಅಭಿಮಾನದಲ್ಲಿ ಬೀಗುತ್ತ ಮೆರವಣಿಗೆಯಲ್ಲಿ ಹೊರಟಿದ್ದ.
ರಾಜನಾದುದರಿಂದ ಯಾರಿಗೂ ಹೇಳುವುದಕ್ಕೆ ಧೈರ್ಯವಿಲ್ಲ. ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಒಂದು ಮನೆಯ ಮಾಳಿಗೆಯಲ್ಲಿ ನಿಂತಿದ್ದ ಮಗುವೊಂದು ಗಟ್ಟಿಯಾಗಿ, ‘ಅಮ್ಮ ರಾಜ ಬೆತ್ತಲೆ ಇದ್ದಾನೆ’ ಎಂದು ಕಿರುಚಿತು. ಆಗ ರಾಜನಿಗೆ ತನ್ನ ಮೈಮೇಲೆ ಇರುವ ಬಟ್ಟೆ ನವಿರಾಗಿದ್ದು, ಅದರ ಪಾರದರ್ಶಕತೆ ಅರಿವಿಗೆ ಬಂತು. ಹಾಗೆ ಮಗು ಹೇಳುವವರೆಗೂ ಗೊತ್ತಾಗದ ಸತ್ಯ, ಈ ಗುಡಿಕೈಗಾರಿಕೆಯಲ್ಲಿದೆ. ಇಂದು ಆ ಕಲಾವಿದರೆಲ್ಲ ಮರೆಯಾಗಿದ್ದಾರೆ. ಅವರ ಮಕ್ಕಳು ಆ ಉದ್ಯೋಗ ಬಿಟ್ಟು, ಶಿಕ್ಷಣ ಪಡೆದು ಬೇರೆ ಉದ್ಯೋಗ ಹೊಂದಿದ್ದಾರೆ.


ನಿಜ, ನಾನು ಅನೇಕ ಜನರಿಗೆ ಹೇಳುತ್ತಿದ್ದೇನೆ. ನಿಮ್ಮ ಕುಲಕಸುಬನ್ನು ಬಿಡಬೇಡಿ. ಈಗ ಆಧುನಿಕವಾಗಿ ಎಲ್ಲ ಕಲೆಗಳಿಗೆ ಬೆಲೆ ಬಂದಿದೆ. ಕಲೆಯನ್ನು ಸುಧಾರಣೆ, ಮಾರ್ಪಾಡು ಮಾಡಿಕೊಳ್ಳಿ. ಆಧುನಿಕತೆಗೆ ಹೊಂದಿಸಿಕೊಳ್ಳಿ. ಭಾರತವನ್ನು ವಿಶ್ವಸಂಸ್ಥೆಯ ಪುರಾತತ್ವ ವಿಭಾಗವು ಶ್ರೇಷ್ಠ ಕಲೆಯ ಸಂಪತ್ತೆಂದು ಗುರುತಿಸಿದೆ. ಆದರೆ ಆಧುನಿಕತೆ ಹೆಸರಿನಲ್ಲಿ ಶಿಲ್ಪಕಲೆ ನಾಶವಾಗುತ್ತಿದೆ. ಕಟ್ಟಡಗಳು ಹಾಗೂ ದೇವಾಲಯಗಳು ಸಿಮೆಂಟಿನಿAದಲೇ ರಚಿತವಾಗತೊಡಗಿವೆ.
ನಮ್ಮ ಮಂಜೂಷಾ ಮ್ಯೂಸಿಯಂನಲ್ಲಿ ವಿವಿಧ ಕಡೆಗಳಿಂದ ತಂದ ಅನೇಕ ಗುಡಿಕೈಗಾರಿಕೆ ವಸ್ತುಗಳನ್ನು ಸಂಗ್ರಹಿಸಿದ್ದೇನೆ. ಗುಜರಾತ್, ಮಧ್ಯಪ್ರದೇಶ, ಕೇರಳ, ತಮಿಳುನಾಡು ಹೀಗೆ ಅನೇಕ ಕಡೆಗಳಿಂದ ವಸ್ತುಗಳನ್ನು ಸಂಗ್ರಹಿಸಿ ತಂದಿದ್ದು, ಅವುಗಳನ್ನು ದೊಡ್ಡ ಕಟ್ಟಡದಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದನ್ನು ವೀಕ್ಷಕರು ನೋಡಿ, ‘ವಾಹ್, ಆಹಾ, ಎಷ್ಟೊಂದು ಚೆನ್ನಾಗಿದೆ’ ಎಂದಾಗ ಕಲೆಗೆ ಬೆಲೆ ಬರುತ್ತದೆ. ಮನೆಯಲ್ಲೋ ಅಥವಾ ಕಾರ್ಖಾನೆಯಲ್ಲೋ ಕಲೆಗೆ ಬೆಲೆ ಸಿಗದೆ ನಗಣ್ಯವಾಗಿರುವಂಥದ್ದು ವಸ್ತು ಸಂಗ್ರಹಾಲಯ ಸೇರಿದಾಗ ಕಲೆ ತನ್ನ ಮೌಲ್ಯ ಹೆಚ್ಚಿಸಿಕೊಂಡು, ಕಲೆಗೂ, ಕಲಾವಿದನಿಗೂ ಗೌರವ ತಂದುಕೊಡುತ್ತದೆ.
‘ಗೃಹ ಕೈಗಾರಿಕೆ ಮತ್ತು ಗುಡಿಕೈಗಾರಿಕೆ ದೇಶದ ಅಮೂಲ್ಯ ಸಂಪತ್ತು. ಅದನ್ನು ಉಳಿಸಿಕೊಳ್ಳಿ, ರಕ್ಷಿಸಿಕೊಳ್ಳಿ’ ಎಂದು ಗಾಂಧೀಜಿ ಹೇಳುತ್ತಿದ್ದರು. ಇಂದು ಅನೇಕ ಸಂಘಟನೆಗಳು, ಸಂಸ್ಥೆಗಳು ಮತ್ತು ಕಟ್ಟಡಗಳ ವಿನ್ಯಾಸಗಾರರು, ಒಳಾಂಗಣ ವಿನ್ಯಾಸಗಾರರು ಗ್ರಾಮೀಣ ಕಲಾವಿದರ ಬಗ್ಗೆ ಗಮನ ಹರಿಸಿ, ಅವರಿಂದ ತಯಾರಿಸಲ್ಪಟ್ಟ ವಿಶಿಷ್ಟ ಕಲೆಗಳನ್ನು ತಮ್ಮ ಕಟ್ಟಡದ ವಿನ್ಯಾಸಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಲಾವಿದರಿಗೆ ಬೇಡಿಕೆ ಹೆಚ್ಚುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ, ಅವರ ಬಡತನವನ್ನು ದೂರ ಮಾಡಬೇಕಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *