ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸುಖ ಅಂದರೇನು? ಒಂದು ರೀತಿಯಲ್ಲಿ ನಿರಾಕುಲತೆಯ ಹೆಸರೇ ಸುಖ. ಎಲ್ಲಿ ಆಕುಲತೆ, ವಿಕಲ್ಪಗಳಿರುತ್ತವೆಯೋ ಅಲ್ಲಿ ಸುಖವಿಲ್ಲ. ಬೆಳಗ್ಗಿನ ಉಪಾಹಾರ ಸೇವಿಸಬೇಕಾದರೆ ಇದನ್ನು ಯಾರು ಮಾಡಿದ್ದು! ಏನೇನು ಹಾಕಿರಬಹುದು? ಶುಚಿಯಾಗಿ ಮಾಡಿದ್ದಾರೋ, ಇಲ್ಲವೋ ಅಂತ ಯೋಚನೆಗಳು ಶುರುವಾದರೆ ತಿಂಡಿಯಲ್ಲಿ ಮನಸ್ಸು ನಿಲ್ಲುವುದಿಲ್ಲ. ಅದಕ್ಕೆ ಯೋಗಿಗಳು ಮನೆ, ಮಕ್ಕಳ ಗೊಡವೆ ಬಿಟ್ಟು ಆ ಮಟ್ಟಿನ ಆಕುಲತೆಯಿಂದ ದೂರ ಆದರು. ಕೆಲವರಿಗೆ ತಮ್ಮ ಮನೆ ಬಿಟ್ಟು ದೂರ ಹೋದರೆ ಆಕುಲತೆ ಜಾಸ್ತಿ. ತಿಂಡಿ ಸರಿಯಾಗಿ ಸೇರುವುದಿಲ್ಲ, ನಿದ್ದೆ ಸರಿ ಬರುವುದಿಲ್ಲ. ಎಷ್ಟೇ ದೊಡ್ಡ ಫೈವ್‌ಸ್ಟಾರ್ ಹೋಟೇಲ್‌ನಲ್ಲಿರಲಿ ಅಲ್ಲಿಂದ ತಮ್ಮದೇ ಸಣ್ಣ ಮನೆಗೆ ಬಂದು ಮನೆ ಊಟ ಮಾಡಿ ರಾತ್ರಿ ತನ್ನ ಹಾಸಿಗೆಯಲ್ಲೇ ಮಲಗಿದರಷ್ಟೆ ಅವರಿಗೆ ಸುಖನಿದ್ದೆ.
‘ನಿರಾಕುಲತೆ’, ‘ನಿಶ್ಚಿಂತೆ’ ಎಂಬ ಶಬ್ದಗಳು ಇವತ್ತು ಅರ್ಥ ಕಳೆದುಕೊಂಡಿವೆ. ಪೇಟೆ ಪಟ್ಟಣಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಹಾಲು, ಪೇಪರ್ ಒಳಗಿಟ್ಟು ಗೃಹಿಣಿಯರು ಟೀ, ಕಾಫಿ, ಬೆಳಗ್ಗಿನ ತಿಂಡಿ ತಯಾರಿಸುವ ಆತಂಕದಲ್ಲಿರುತ್ತಾರೆ. ಉಪ್ಪಿಟ್ಟೋ, ರೊಟ್ಟಿ -ಪಲ್ಯನೋ ಮಾಡಿ ಮಕ್ಕಳಿಗೆ, ಯಜಮಾನರಿಗೆ ಕೊಟ್ಟು, ಟಿಫನ್‌ಗೆ ಹಾಕಿ, ಶಾಲೆಗೋ ಆಫೀಸಿಗೋ ಸಾಗಹಾಕಬೇಕಾದರೆ ಅವರಿಗೆ ಸಾಕೋಸಾಕಾಗಿರುತ್ತದೆ. ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಅವರಿಗೆ ಸ್ನಾನ ಮಾಡಿಸಿ, ಶಾಲಾ ಯುನಿಫಾರಂ ಹಾಕಿಸಿ, ಪುಸ್ತಕವನ್ನು ಚೀಲಕ್ಕೆ ತುಂಬಿಸಿ, ಟಿಫಿನ್ ಬಾಕ್ಸ್, ನೀರಿನ ಬಾಟಲ್ ಹಿಡಿದು ರಿಕ್ಷಾನೋ, ಬಸ್ಸೋ ಬರುವವರೆಗೆ ಕಾದು ಬಸ್ಸು ಹತ್ತಿಸಿ ಮನೆಗೆ ಬರುವವರೆಗಿನ ಆತಂಕವನ್ನು ದೇವರೇ ಬಲ್ಲ.
ಹಿಂದಿನ ಕಾಲದಲ್ಲೂ ಮನೆ ತುಂಬಾ ಮಕ್ಕಳಿದ್ದರು. ಗಂಡಸರು ಕೆಲಸಕ್ಕೆ ಹೋಗುತ್ತಿದ್ದರು. ಹಳ್ಳಿ ಶಾಲೆಗಳು ಆರಂಭವಾಗುತ್ತಿದ್ದುದೇ ಬೆಳಿಗ್ಗೆ ಗಂಟೆ ೯.೩೦ರ ಮೇಲೆ. ಮಕ್ಕಳು ನಡೆದುಕೊಂಡೇ ಹೋಗುತ್ತಿದ್ದರು. ಊಟ, ತಿಂಡಿ ಬಗ್ಗೆ ಈಗಿನಷ್ಟು ವೈವಿಧ್ಯತೆ ಬೇಕಿರಲಿಲ್ಲ. ಯುನಿಫಾರಂ ಜೊತೆಗೆ ಟೈ, ಶೂಸ್ ಇತ್ಯಾದಿಗಳ ರಗಳೆಯೂ ಇರಲಿಲ್ಲ. ಕೆಲವೊಂದು ಕುಟುಂಬಗಳಲ್ಲಿ ಅಣ್ಣ – ತಮ್ಮಂದಿರು ಜೊತೆಗಿರುವಾಗ ಕೆಲಸ ಹಂಚಿಕೊಳ್ಳಲು ಅಕ್ಕ – ತಂಗಿಯರೂ ಇರುತ್ತಿದ್ದರು. ಸ್ವಲ್ಪ ಬೆಳೆದ ಹೆಣ್ಣು ಮಕ್ಕಳು ಹೆಚ್ಚಿನ ಮನೆಕೆಲಸಗಳಲ್ಲಿ ಭಾಗಿಗಳಾಗುತ್ತಿದ್ದರು. ಅದಕ್ಕಿಂತ ಹೆಚ್ಚು ‘ನನ್ನ ಮನೆ, ನನ್ನ ಕೆಲಸ, ನನ್ನವರು’ ಎಂಬ ಪ್ರೀತಿ ನೆಲೆಸಿತ್ತು. ನಾವು ಮಾಡುವ ಕೆಲಸ ಬಲವಂತದಿAದ ಆದಾಗ ಕಷ್ಟ. ಸಂತೋಷದಿAದ ಆದಾಗ ಅಲ್ಲಿ ವ್ಯಾಕುಲತೆ ಇರುವುದಿಲ್ಲ. ಕೆಲವರಿರುತ್ತಾರೆ ಎಷ್ಟೇ ಸಮಸ್ಯೆ, ಕಷ್ಟಗಳಿದ್ದರೂ ಸ್ವಭಾವತಃ ಒಂದು ರೀತಿಯ ನಿರಾಕುಲ ಸ್ಥಿತಿಯಲ್ಲಿರುತ್ತಾರೆ. ಹಾಗೆಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಿಲ್ಲವೆಂದಲ್ಲ. ಆದರೆ ಹೆಚ್ಚು ಗಡಿಬಿಡಿಗೆ ಒಳಗಾಗದೆ, ಮನೆಮಂದಿಗೂ ಆತಂಕವನ್ನು ಉಂಟುಮಾಡದೆ ತಮ್ಮ ಪ್ರಯತ್ನ ಮಾಡುತ್ತಿರುತ್ತಾರೆ. ಮತ್ತೆ ಕೆಲವರು ಸಣ್ಣಪುಟ್ಟ ಸಮಸ್ಯೆಗಳು ಬಂದಾಗ ತಾವೂ ಆತಂಕ ಪಟ್ಟು ಸಿಟ್ಟುಗೊಳ್ಳುವುದಲ್ಲದೆ, ಮನೆಮಂದಿಯ ಮೇಲೆಲ್ಲ ರೇಗಾಡುತ್ತಿರುತ್ತಾರೆ.
ನಮ್ಮ ಹಿರಿಯರು ಧರ್ಮ, ಅರ್ಥ, ಕಾಮಗಳೆಂಬ ಪುರುಷಾರ್ಥಗಳನ್ನು ಪಾಲಿಸಿಕೊಂಡು ಧರ್ಮದ ಮೂಲಕವಾಗಿ ಗಳಿಸಿದ ಅರ್ಥ, ಕಾಮಗಳಿಗೆ ಹೆಚ್ಚಿನ ಮನ್ನಣೆ ಕೊಡುತ್ತಿದ್ದರು. ಜೀವನದಲ್ಲಿ ನೆಮ್ಮದಿಯಾಗಿದ್ದರು. ಯಾರಿಗೂ ಯಾರ ಮೇಲೂ ಸ್ಪರ್ಧೆ ಮೇಲಾಟಗಳಿರಲಿಲ್ಲ. ಶ್ರೀಮಂತಿಕೆ ಇದ್ದರೆ, ‘ಅದು ಅವನ ಪುಣ್ಯ, ಪಡಕೊಂಡು ಬಂದಿದ್ದು’ ಎಂಬ ಕರ್ಮಸಿದ್ಧಾಂತದ ವೇದಾಂತ ಹೇಳಿ ತಮ್ಮ ಸರಳತೆಯಲ್ಲಿ ತಾವು ಬದುಕುವ ಪ್ರಯತ್ನವನ್ನು ಮಾಡುತ್ತಿದ್ದರು.
ಕೆಲವೊಮ್ಮೆ ಆತಂಕಗಳನ್ನು ಮೈ ಮೇಲೆ ಎಳೆದುಕೊಂಡು ಒದ್ದಾಡುವವರೂ ಇದ್ದಾರೆ. ಯಾರಿಗೋ ಸಾಲಕೊಟ್ಟು ‘ವಾಪಾಸ್ ಬರಲಿಲ’್ಲ ಅಂತ ಒದ್ದಾಡುವುದು, ಫೈನಾನ್ಸ್ ಕಂಪೆನಿಯಲ್ಲಿ ದುಡ್ಡಿಟ್ಟು ‘ಅದು ಮುಳುಗಿಹೋಯು’್ತ ಅಂತ ಪೇಚಾಡುವುದು, ಲಾಟರಿ ಟಿಕೆಟ್, ಇಸ್ಪೀಟ್, ಬೆಟ್‌ಕಟ್ಟುವುದು, ಕೆಲವೊಮ್ಮೆ ಕುದುರೆ ರೇಸ್‌ಗೆ ದುಡ್ಡು ಕಟ್ಟಿ ಸೋಲು – ಗೆಲುವುಗಳ ಮಧ್ಯೆ ಆತಂಕ ಪಟ್ಟುಕೊಳ್ಳುವವರೂ ಇರುತ್ತಾರೆ.
ಇನ್ನು ಮಕ್ಕಳ ವಿಷಯಕ್ಕೆ ಬಂದರೂ ಕೆಲವು ಮಕ್ಕಳು ಒಂದೇ ಆಟದಲ್ಲಿ ಅರ್ಧಗಂಟೆ ತಲ್ಲೀನರಾಗಿ ಆಡಬಲ್ಲರು. ಮತ್ತೆ ಕೆಲವು ಮಕ್ಕಳಿಗೆ ಹತ್ತು ನಿಮಿಷದಲ್ಲಿ ಆಟ ಬೋರಾಗುತ್ತೆ. ಹೆಸರಾಂತ ಆಟಗಾರರಿಗೂ ಈ ನಿರಾಕುಲತೆ, ಸಹನೆ, ಶಾಂತತೆ, ಒಂದು ಗಿಫ್ಟ್ ಇದ್ದ ಹಾಗೆ. ಸ್ವಲ್ಪ ಮನಸ್ಸು ಆಕುಲಗೊಂಡರೆ ಆಟದಲ್ಲಿ ಕೇಂದ್ರೀಕರಿಸುವುದಕ್ಕಾಗುವುದಿಲ್ಲ. ಆಟದಲ್ಲಿ ಮಾತ್ರವಲ್ಲ ವ್ಯಾಪಾರ, ವ್ಯವಹಾರಗಳಲ್ಲಿ, ಮಕ್ಕಳ ಓದಿನಲ್ಲೂ ಇದು ಪರಿಣಾಮ ಬೀರುತ್ತದೆ.
ಕೆಲವೊಮ್ಮೆ ಅದಕ್ಕಾಗಿ ಧ್ಯಾನ, ಯೋಗಗಳ ಮೊರೆ ಹೋಗಬೇಕಾಗುವುದೂ ಇದೆ. ಪ್ರಾಣಿಗಳೂ ಕೂಡಾ ತಮ್ಮ ಪ್ರಾಕೃತಿಕ ಕಾಮನೆಗಳನ್ನು ಪೂರೈಸಿಕೊಂಡ ಬಳಿಕ ನಿರಾಕುಲವಾಗಿರುತ್ತವೆ. ಯಾಕೆಂದರೆ ಅವುಗಳಿಗೆ ಮೂರು ತಲೆಮಾರುಗಳಿಗಾಗುವಷ್ಟು ಆಸ್ತಿಪಾಸ್ತಿ ಗಳಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ತಮ್ಮೊಳಗೆ ಹೋಲಿಸಿಕೊಳ್ಳುವುದಿಲ್ಲ, ಮಾತ್ಸರ್ಯ ಪಡುವುದಿಲ್ಲ ಇದು ಅವುಗಳಿಗೆ ಸಿಕ್ಕಿದ ವರ.
ನಾವು ಕೂಡಾ ಕೊರೊನಾದಂತಹ ಮಾಹಾಮಾರಿಯ ಬಗ್ಗೆ ಎಚ್ಚರಿಕೆಯನ್ನು ವಹಿಸಿ ಮುಂಬರುವ ಹೊಸ ವರುಷದಿಂದ ನಿರಾಕುಲತೆಯ ಬದುಕನ್ನು ಸಾಗಿಸುವ ಪ್ರತಿಜ್ಞೆ ಮಾಡೋಣ. ಆ ಮೂಲಕ ನಮ್ಮ ಬದುಕನ್ನು ಸುಂದರಗೊಳಿಸೋಣ.