ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಜಗತ್ತಿನಲ್ಲಿ ಅನೇಕ ರೀತಿಯ ಸಂಪತ್ತುಗಳನ್ನು ಹೊಂದಿದವರಿರುತ್ತಾರೆ. ಕೆಲವರು ಗುಣ ಸಂಪನ್ನರಾದರೆ, ಕೆಲವರು ಧನ ಸಂಪನ್ನರು, ಜ್ಞಾನ ಸಂಪನ್ನರು, ಕಲಾ ಸಂಪನ್ನರು, ರೂಪ ಸಂಪನ್ನರು, ವಿದ್ಯಾ ಸಂಪನ್ನರು. ಈ ಎಲ್ಲಾ ಸಂಪತ್ತುಗಳಿದ್ದಾಗಲೇ ಸಮಾಜಕ್ಕೆ ಶೋಭೆ. ಆದರೆ ವಿದ್ಯೆ, ರೂಪ, ಗುಣ, ಧನ, ಕಲೆ, ಜ್ಞಾನ ಎಲ್ಲಾ ಇದ್ದು ವಿನಯವಂತರಾಗಿಲ್ಲದಿದ್ದರೆ, ಅಂಥವರೊAದಿಗೆ ವ್ಯವಹರಿಸುವುದು ಕಷ್ಟ. ಧನಿಕನಿದ್ದು ಅಹಂಕಾರಿಯಾದರೆ, ಸಹಾಯ ಯಾಚಿಸಲು ಆತನ ಬಳಿ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಜ್ಞಾನಿ, ವಿದ್ವಾಂಸ ವಿದ್ಯಾವಂತ ಅನ್ನಿಸಿಕೊಂಡವನಲ್ಲಿ ವಿನಯತೆ ಇಲ್ಲವಾದಲ್ಲಿ ಆತನ ವಿದ್ವತ್ತಿಗೆ ಯಾರೂ ತಲೆಬಾಗುವುದಿಲ್ಲ. ದೊಡ್ಡ ಕಲಾವಿದರಲ್ಲೂ ‘ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ’ ಎನ್ನುವ ಗರ್ವ ಇರುತ್ತದೆ. “ವಿನಯ ಮೋಕ್ಷದ ದ್ವಾರವೂ ಹೌದು. ಎಲ್ಲೂ ತಲೆ ಬಾಗದಿದ್ದರೂ, ಭಗವಂತನೆದುರು ತಲೆ ಬಾಗಲೇಬೇಕು. ಆಗ ಮಾತ್ರ ಆತನ ಬಳಿಗೆ ಹೋಗಲು ಸಾಧ್ಯ.’’
ವಿನಯದಲ್ಲೂ ಎರಡು ವಿಧ. ಲೌಕಿಕ ಮತ್ತು ಪಾರಮಾರ್ಥಿಕ ವಿನಯ. ಲೌಕಿಕವಾಗಿ ನಾವು ಅನೇಕ ಸಲ ಅನಿವಾರ್ಯವಾಗಿ ವಿನಯ ಪ್ರದರ್ಶನ ಮಾಡಬೇಕಾಗುತ್ತದೆ. ನಮಗಿಂತ ಬಲಶಾಲಿಗಳು, ಅಧಿಕಾರಿಗಳು, ಧನವಂತರೆದುರು, ತಗ್ಗಿ ಬಗ್ಗಿ ವಿನಯದಿಂದ ನಡೆದುಕೊಳ್ಳುತ್ತೇವೆ. ವ್ಯಾಪಾರಿ ತನ್ನ ಅಂಗಡಿಗೆ ಬಂದ ಗ್ರಾಹಕರು ಎಷ್ಟೇ ಕೂಗಾಡಿದರೂ ವಿನಯ ತೋರಿಸುತ್ತಾನೆ. ಸೀರೆ ಅಂಗಡಿಗೆ ಹೋಗಿ ರಾಶಿ ರಾಶಿ ಸೀರೆ ಬಿಡಿಸಿ, ಎಲ್ಲವನ್ನೂ ಬಿಟ್ಟು ಬರಿಗೈಯಲ್ಲಿ ಹೋದರೂ, ‘ಮತ್ತೆ ನಾಳೆ ಬನ್ನಿ ಮೇಡಂ, ಹೊಸ ಸೀರೆಗಳು ಬರುತ್ತವೆ’ ಎಂದು ನಗು ಬೀರುತ್ತಾನೆ. ತನ್ನ ಕೆಲಸ ಆಗಬೇಕಾದಲ್ಲಿ ಅಧಿಕಾರಿಗಳಿಗೆ ಆದರ, ಸತ್ಕಾರದೊಂದಿಗೆ ವಿನಯತೆ ಬೇಕು. ಜೀವನದುದ್ದಕ್ಕೂ ನಾನಾ ರೀತಿಯಲ್ಲಿ ವಿನಯತೆಯನ್ನು ತೋರಿಸಬೇಕಾಗುತ್ತದೆ.
ಬಾವಿಗೆ ಬಿದ್ದ ಕೊಡ ಬಗ್ಗಿದರಷ್ಟೆ ನೀರು ತುಂಬಿಕೊಳ್ಳಬಹುದು. ವಟವೃಕ್ಷ ಗಾಳಿಗೆ ಸೆಟೆದು ನಿಂತಹಾಗೆ ಬೀಳುತ್ತದೆ. ಹುಲ್ಲು ಗಾಳಿಗೆ ಬಾಗಿ, ಬಿರುಗಾಳಿಯನ್ನಾದರೂ ಸಹಿಸಿಕೊಳ್ಳುತ್ತದೆ. ಕ್ರೋಧಿ ವ್ಯಕ್ತಿಯಾದರೂ ಕಾಲಿಗೆ ಬಿದ್ದರೆ, ಮನಸ್ಸು ಮೃದುವಾಗಿ ಕ್ಷಮಿಸಬಲ್ಲ. ‘ಕನ್‌ಫ್ಯೂಶಿಯಸ್’ ಎಂಬ ಶ್ರೇಷ್ಠ ಜ್ಞಾನಿಯಲ್ಲಿ ‘ವಿನಯ ಅಂದ್ರೇನು?’ ಎಂದು ಕೇಳಿದ್ದಕ್ಕೆ, ಆತ ‘ತನ್ನ ಬಾಯಿ ನೋಡು’ ಅಂತಾನೆ. ‘ಬಾಯಿಯಲ್ಲೇನಿದೆ?’ ಅಂದರೆ ‘ಬಾಯಿಯಲ್ಲಿ ಮತ್ತೆ ಬಂದ ಹಲ್ಲು ಹೋಗಿದೆ, ನಾಲಿಗೆ ಇದೆ ಅಂತಾನೆ. ಹಲ್ಲು ಗಟ್ಟಿ ಇತ್ತು. ಎಲ್ಲವನ್ನೂ ಕಚ್ಚುತ್ತಿತ್ತು. ಅಷ್ಟೂ ಹಲ್ಲುಗಳ ಮಧ್ಯೆ ನಾಲಗೆ ತನ್ನ ವಿನಯ ಗುಣದಿಂದ ಉಳಿದುಕೊಂಡಿದೆ’ ಅಂತಾನೆ. ಕೆಲವೊಮ್ಮೆ ಗುಣಗಳಿಗಿಂತ ದೋಷಗಳನ್ನೇ ಹುಡುಕಿ, ತೃಪ್ತಿಪಡುವ ಮತ್ಸರಿಗಳೂ ಇರುತ್ತಾರೆ. ಆದರೆ ಯಾರಲ್ಲಿ ವಿನಮ್ರತೆ ಇರುತ್ತದೆ, ಅವರಿಗೆ ಗುಣಗಳ ಬಗ್ಗೆ ಆದರ, ಗೌರವ ಇರುತ್ತದೆ. ಅವರಿಗೆ ಎಲ್ಲಾ ಕಡೆ ಒಳಿತೇ ಕಾಣುತ್ತದೆ.
ಧರ್ಮಾತ್ಮರಲ್ಲಿ, ಜ್ಞಾನಿಗಳಲ್ಲಿ, ಚಾರಿತ್ರö್ಯ ಉಳ್ಳವರಲ್ಲಿ, ವಿನಯ ತೋರಿಸಬೇಕು. ಹಾಗೆಯೇ ನಮ್ಮನ್ನು ತಿದ್ದಿ ಮುನ್ನಡೆಸುವ ಗುರುಗಳಲ್ಲಿ, ತಪಸ್ವಿಗಳಲ್ಲಿ ವಿನಯ, ಗೌರವ ತೋರಿಸಬೇಕು. ದೊಡ್ಡ ಪಾತ್ರೆ ಎಲ್ಲಾ ಪಾತ್ರೆಗಳಿಗೆ ನೀರು ತುಂಬುತ್ತಿದ್ದರೆ, ಸಣ್ಣ ಲೋಟ ಹೇಳುತ್ತದೆ, ‘ನನ್ನನ್ನು ಯಾಕೆ ನೀರಿನಿಂದ ಭರ್ತಿ ಮಾಡಲ್ಲ?’ ‘ನೀನು, ನಾನು ಬಂದಾಗ ಮಗುಚಿಕೊಂಡಿದ್ದರೆ, ತುಂಬಿಸುವುದು ಹೇಗೆ?’ ಎನ್ನುತ್ತದೆ ದೊಡ್ಡಪಾತ್ರೆ.
ರಾವಣ ಸೋತು ಬಿದ್ದಿದ್ದಾಗ, ರಾಮ ತಮ್ಮನಾದ ಲಕ್ಷö್ಮಣನಿಗೆ ‘ರಾವಣನಿದ್ದಲ್ಲಿ ಹೋಗು ಆತನಲ್ಲಿ ಜ್ಞಾನವಿದೆ ತಿಳಿದುಕೊಳ್ಳು’ ಎಂದಾಗ ಲಕ್ಷö್ಮಣ ಹೋಗಿ ಆತನ ತಲೆ ಬಳಿ ಕುಳಿತುಕೊಳ್ಳುತ್ತಾನೆ. ಅಲ್ಲಿ ಜ್ಞಾನ ಸಿಗುವುದಿಲ್ಲ. ‘ಕಾಲಿನ ಹತ್ತಿರ ಕುಳಿತುಕೋ’ ಅನ್ನುತ್ತಾನೆ ರಾಮ.
ಸಂಧಾನಕ್ಕೆ ಕೃಷ್ಣನಲ್ಲಿ ಹೋದಾಗಲೂ ಧರ್ಮರಾಯ ವಿನಯದಿಂದ ಕಾಲ ಬಳಿ ಕುಳಿತರೆ, ದುರ್ಯೋಧನ ತಲೆಯ ಬಳಿ ಕುಳಿತುಕೊಳ್ಳುತ್ತಾನೆ. ನಿದ್ದೆಯಲ್ಲಿದ್ದ ಕೃಷ್ಣ ಎಚ್ಚೆತ್ತಾಗ ಮೊದಲು ಕಾಲ ಬಳಿಯಲ್ಲಿ ಕುಳಿತ ಧರ್ಮರಾಯನನ್ನೇ ನೋಡುತ್ತಾನೆ ಮತ್ತು ಯುದ್ಧದಲ್ಲಿ ಅವರ ಪರವಾಗಿ ನಿಲ್ಲುತ್ತಾನೆ. ಫಲಪುಷ್ಪಗಳಿರುವ ಮರಕ್ಕಿಂತಲೂ ಏನೂ ಇಲ್ಲದ ಚಂದನಕ್ಕೆ ಬೆಲೆ ಬರುವುದು ಅದರ ಸುವಾಸನೆಯ ಗುಣದಿಂದ. ಆದ್ದರಿಂದ ವ್ಯಾಪಾರ, ವ್ಯವಹಾರ, ಅಧಿಕಾರ ಮಾತ್ರವಲ್ಲ ಕುಟುಂಬದಲ್ಲಿ ‘ವಿನಯ’ವೆಂಬ ಸಂಪತ್ತು ಇದ್ದವನು ಗೆಲ್ಲಬಲ್ಲ.
‘ವಿನಯವಂತಿಕೆ’ ಎನ್ನುವುದು ತನ್ನಷ್ಟಕ್ಕೆ ಬರುವುದಿಲ್ಲ. ಹೆತ್ತವರು ಸಣ್ಣ ಮಕ್ಕಳಲ್ಲಿ ಅದನ್ನು ಬೆಳೆಸಬೇಕು. ಇತರರಿಂದ ನೋಡಿ ಕಲಿಯಬೇಕು. ಅಧ್ಯಾತ್ಮ ಪುರುಷರ ಪುಸ್ತಕಗಳನ್ನು ಓದಬೇಕು. ಒಳ್ಳೆಯವರ ಗೆಳೆತನವನ್ನು ಮಾಡಿದ್ದಲ್ಲಿ ವಿನಯತೆ ನಮಗರಿವಿಲ್ಲದಂತೆ ಮೈಗೂಡುತ್ತದೆ. ಪುಟ್ಟ ಮಕ್ಕಳನ್ನು ವಿನಯವಂತರನ್ನಾಗಿಸುವುದು ಹೆತ್ತವರ ಕರ್ತವ್ಯವೂ ಹೌದು.