ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸಂಸಾರದಲ್ಲಿ ಒಂದು ಸೊನ್ನೆ ಹೋದರೆ ‘ಸಸಾರ’ ಆಗುತ್ತದೆ. ‘ಸಸಾರ’ ಎಂದರೆ ಯಾವುದಕ್ಕೂ ಬೇಡದವರು ಎಂದು. ಆದರೆ ಆ ಸೊನ್ನೆಯನ್ನು ಉಳಿಸಿಕೊಳ್ಳುವ ಹಾಗೆ ನಮ್ಮ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವುದು ನಮ್ಮ ನವಜೀವನ ಸಮಿತಿಯ ಆದ್ಯತೆ ಎಂಬುದು ನನ್ನ ಭಾವನೆ. ಇಂದು ಒಂದು ಲಕ್ಷಕ್ಕೂ ಅಧಿಕ ಮಂದಿ ಕುಡಿತ ಬಿಟ್ಟಿದ್ದಾರೆ. ಇದರಿಂದಾಗಿ ಅವನ ಹೆಂಡತಿ, ಮಕ್ಕಳು, ಅಣ್ಣ, ತಮ್ಮ ಹೀಗೆ ಐದು ಲಕ್ಷಕ್ಕೂ ಅಧಿಕ ಮಂದಿಗೆ, ಸಮಾಜಕ್ಕೂ ಅದರಿಂದ ಪ್ರಯೋಜನವಾಗುತ್ತದೆ.
ಯಾವುದೇ ಒಂದು ಅಭ್ಯಾಸ ಆರಂಭಿಸಲು ಅಥವಾ ಬಿಡಲು ಇಪ್ಪತ್ತು ದಿನ ಸಾಕಾಗುತ್ತದೆ ಎಂಬ ಮಾತಿದೆ. ಯೋಗ ಮಾಡಬೇಕು, ವಾಕಿಂಗ್ ಶುರು ಮಾಡಬೇಕು ಎಂದು ನಿಶ್ಚಯಿಸಿ ಇಪ್ಪತ್ತು ದಿವಸ ಬಿಡದೆ ಮಾಡಿದರೆ ಅದನ್ನು ಮುಂದುವರಿಸಿಕೊ0ಡು ಹೋಗಲು ಸುಲಭವಾಗುತ್ತದೆ. ಹಾಗೆಯೇ ಕಾಫಿ, ಟೀ ಸೇವನೆ ಬಿಡಬೇಕು, ಕುಡಿತ ಬಿಡಬೇಕು ಎಂದು ಇಪ್ಪತ್ತು ದಿವಸ ಸಂಕಲ್ಪ ಮಾಡಿದರೆ ಬಿಡಲು ಸಾಧ್ಯ ಎಂದು ಹೇಳುತ್ತಾರೆ. ಇಪ್ಪತ್ತು ದಿನ ಮಾತ್ರ ಅದನ್ನು ಅನವರತವಾಗಿ ಮಾಡಬೇಕು. ಆದ್ದರಿಂದ ಮದ್ಯವಿಲ್ಲದೆ ನೂರು ದಿನಗಳನ್ನು ಕಳೆದವರಿಗೆ ಇನ್ನು ನೂರು ವರ್ಷದವರೆಗೂ ತೊಂದರೆಯಿಲ್ಲ ಎಂದು ನಾನು ಭಾವಿಸುತ್ತೇನೆ.
ಜನಜಾಗೃತಿ ವೇದಿಕೆಯ ಕೆಲಸ ಎಂದರೆ ಕಲ್ಲು ಬಂಡೆಯನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗುವುದು. ಒಂದು ಕಲ್ಲುಬಂಡೆಯನ್ನು ಕೆಳಗಿನಿಂದ ಮೇಲೆ ಹೊತ್ತುಕೊಂಡು ಹೋಗುವುದು ಬಹಳ ಕಷ್ಟ. ಆದರೆ ಅದನ್ನೇ ಕೆಳಗೆ ದೂಡುವುದು ಒಂದು ನಿಮಿಷದ ಕೆಲಸ. ಒಮ್ಮೆ ಮದ್ಯಪಾನ ಬಿಟ್ಟವರು ಮತ್ತೆ ಅತ್ತ ಯೋಚನೆಯನ್ನು ಮಾಡಬಾರದು. ಮತ್ತೆ ಅದೇ ಚಟವನ್ನು ಹತ್ತಿಸಿಕೊಂಡರೆ ಮೇಲಕ್ಕೇರಿದ ಕಲ್ಲುಬಂಡೆ ಒಂದೇ ನಿಮಿಷದಲ್ಲಿ ಕೆಳಗೆ ಬಿದ್ದಂತಾಗುತ್ತದೆ. ಆದರೆ ಮೇಲೆ ಹತ್ತಿಸಲು ಜನಜಾಗೃತಿ ವೇದಿಕೆಯ ತಂಡದವರು ಎಷ್ಟು ಕಷ್ಟಪಟ್ಟಿದ್ದಾರೆ ಎಂದು ನಮಗೆ ತಿಳಿದಿದೆ. ಮೇಲಕ್ಕೇರಿದವರು ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ಗಟ್ಟಿಯಾಗಿ ನಿಲ್ಲಬೇಕಾದವರು ಪಾನಮುಕ್ತರು. ಮದ್ಯಬಿಟ್ಟವರು ಮತ್ತೆ ಅದರ ಯೋಚನೆಯನ್ನು ಮಾಡಬಾರದು.
ಮನುಷ್ಯನನ್ನು ಬಿಟ್ಟು ಬೇರೆ ಯಾವುದೇ ಪ್ರಾಣಿ – ಪಕ್ಷಿಯನ್ನೊಮ್ಮೆ ಗಮನಿಸಿ, ಯಾವುದಕ್ಕೂ ದುರಭ್ಯಾಸಗಳಿಲ್ಲ. ಅವುಗಳು ಮನೆ ಕಟ್ಟುತ್ತವೆ, ಗೂಡು ಕಟ್ಟುತ್ತವೆ, ಮರಿ ಮಾಡುತ್ತವೆ, ಮರಿಗಳಿಗೆ ಆಹಾರ ತಂದುಕೊಡುತ್ತವೆ, ಹಾರಾಡಲೂ ಕಲಿಸುತ್ತವೆ, ಉದ್ಯೋಗವನ್ನೂ ಕಲಿಸುತ್ತವೆ, ಬೇಟೆಯಾಡುವುದನ್ನೂ ಕಲಿಸುತ್ತವೆ, ಹಣ್ಣುಗಳನ್ನು ತಂದು ತಿನ್ನಲು ಕಲಿಸುತ್ತವೆ. ನಾವು ನಮ್ಮ ಮಕ್ಕಳಿಗೆ ಏನು ಮಾಡಿದ್ದೇವೆ?! ಪ್ರಾಣಿ – ಪಕ್ಷಿಗಳಿಗಿಂತ ಬಹಳ ಶ್ರೇಷ್ಠ ಎಂದು ಹೇಳುವಂತಹ ಮನುಷ್ಯರು ನಾವೇನು ಮಾಡಿದ್ದೇವೆ ಎಂದು ಒಂದು ನಿಮಿಷ ಯೋಚನೆ ಮಾಡಬೇಕಾಗುತ್ತದೆ.
ಜೇನು ನೊಣದ ಬಾಯಿಯಲ್ಲಿ ಜೇನೂ ಇರುತ್ತದೆ, ವಿಷವೂ ಇರುತ್ತದೆ. ಅದು ಕುಟುಕಿದರೆ ವಿಷ ಆಗುತ್ತದೆ, ಜೇನು ಸಂಗ್ರಹಿಸುವಾಗ ಜೇನು ನೊಣವಾಗಿ ಜೇನು ಸಂಗ್ರಹ ಮಾಡುತ್ತದೆ. ಈಗ ಮದ್ಯಮುಕ್ತರಾದವರು ಇಷ್ಟು ದಿನಗಳ ಕಾಲ ನಿಮ್ಮ ಮನೆಯವರಿಗೆ ವಿಷವನ್ನು ಕೊಟ್ಟು ಶರಾಬಿನ ಅಂಗಡಿಯವನಿಗೆ ಜೇನು ಕೊಟ್ಟು ಜೇಬು ಖಾಲಿ ಮಾಡಿಕೊಂಡು ಬರುವವರು ನೀವು ಆಗಿದ್ದೀರಿ. ಇನ್ನು ಮುಂದೆ ಇದು ಬದಲಾಗಬೇಕು. ಜೇನು ಹೇಗೆ ಬಿಡುವಿಲ್ಲದೆ ದುಡಿಯುತ್ತದೆಯೋ, ತಾನು ದುಡಿದು ಮನೆಗೆ ತಂದು ಸಂಗ್ರಹಿಸುತ್ತದೆಯೋ ಹಾಗೆಯೇ ನಿಮ್ಮ ಪ್ರತಿಯೊಂದು ನಿಮಿಷದ ಶ್ರಮ, ದುಡ್ಡು ಎಲ್ಲವೂ ನಿಮ್ಮವರಿಗಾಗಿ ಸಿಗಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆಗ ಮಾತ್ರ ಮನೆಯವರಿಗೆ ನಿಮ್ಮ ಬಗ್ಗೆ ನಂಬಿಕೆ ಬರುತ್ತದೆ.
ಸಂಕಲ್ಪ ಮತ್ತು ವಿಕಲ್ಪಗಳು ಎಲ್ಲರಲ್ಲಿಯೂ ಇರುತ್ತವೆ. ಗ್ರಾಮಾಭಿವೃದ್ಧಿ ಯೋಜನೆ ಮಾಡಬೇಕು ಎಂದು ಹೇಳುವ ಒಂದು ಸಣ್ಣ ಸಂಕಲ್ಪ ಇಂದು ಸುಮಾರು ೫೦ ಲಕ್ಷ ಕುಟುಂಬಗಳಲ್ಲಿ, ಮನೆಗಳಲ್ಲಿ ಬೆಳಕನ್ನು ನೀಡುತ್ತಿದೆ. ಹಾಗೆಯೇ ಪ್ರತಿ ಗ್ರಾಮದ ಜನರ ನೀರಿನ ದಾಹ ಇಂಗಬೇಕಾದರೆ ಕೆರೆ ಬೇಕು ಎಂದು ಸಂಕಲ್ಪ ಮಾಡಿದೆವು. ಇವತ್ತು ನಮಗೆ ಆಶ್ಚರ್ಯವಾಗುವಂತೆ 100 ದಿನದಲ್ಲಿ 110 ಕೆರೆಗಳು ಆಗಿದೆ. ಇದು ಎಂತಹ ಪವಾಡ ಎಂದು ಯೋಚಿಸಿ. ಹಾಗೆಯೇ ಜನಜಾಗೃತಿ ಎಂಬುದು ಕೂಡಾ ಒಂದು ಒಳ್ಳೆಯ ಸಂಕಲ್ಪ. ಲಕ್ಷಾಂತರ ಮಂದಿ ಇದೀಗ ಕುಡಿತ ಬಿಟ್ಟು ಸುಖ ಸಂಸಾರದತ್ತ ಮುಖಮಾಡಿದ್ದಾರೆ. ಅವರ ಆರೋಗ್ಯ, ಸಾಮಾಜಿಕ, ನೈತಿಕ ನಡವಳಿಕೆ ಹೀಗೆ ಎಲ್ಲವೂ ಚೆನ್ನಾಗಿದೆ. ಆದ್ದರಿಂದ ಇದು ಕೂಡಾ ಆರೋಗ್ಯಕ್ಕೆ ಪೂರಕವಾದ ಒಂದು ಉತ್ತಮ ಕಾರ್ಯಕ್ರಮ. ಇದರ ಮಧ್ಯೆ ವಿಕಲ್ಪಗಳೂ ಇತ್ತು. ಗ್ರಾಮಾಭಿವೃದ್ಧಿ ಯೋಜನೆಯು ಜನರಲ್ಲಿ ಆರ್ಥಿಕ ಜಾಗೃತಿ ಮೂಡಿಸಿದರೆ, ಜನಜಾಗೃತಿಯಿಂದ ಜನರು ಕುಡಿಯುವುದನ್ನು ಬಿಟ್ಟರೆ ಕೆಲಸಕ್ಕೆ ಜನ ಸಿಗುವುದಿಲ್ಲ. ಇವರೆಲ್ಲ ಯಾಕೆ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಹೇಳುವವರೂ ಇದ್ದರು. ಆದರೆ ಯಾವುದೇ ವಿಕಲ್ಪವನ್ನು ನಾವು ಮನಸ್ಸಿಗೆ ಹಚ್ಚಿಕೊಳ್ಳದೆ ನಮ್ಮ ಸಂಕಲ್ಪವನ್ನು ನಾವು ಗಟ್ಟಿಮಾಡಿಕೊಂಡು ಹೋದರೆ ಖಂಡಿತವಾಗಿಯೂ ನಮಗೆ ಆ ಕೆಲಸದಿಂದ ಪ್ರಯೋಜನ ಆಗುತ್ತದೆ.
ದೀಪ ಇವತ್ತು ಹಚ್ಚಿದರೆ ಈಗಲೇ ಬೆಳಕಾಗುತ್ತದೆ. ನಾಳೆ ಬೆಳಕಾಗುವುದಲ್ಲ. ನಾವು ಇವತ್ತು ಹೊಟ್ಟೆಗೆ ಊಟ ಮಾಡಿದರೆ ಈಗಲೇ ಹೊಟ್ಟೆ ತುಂಬುತ್ತದೆ. ನಾಳೆ ಅಲ್ಲ. ಹಾಗೆಯೇ ನೀವು ಯಾವ ದಿನ ಕುಡಿತ ಬಿಡಬೇಕು ಎಂದು ಸಂಕಲ್ಪ ಮಾಡಿದಿರೋ ಆ ದಿನವೇ ನಿಮ್ಮ ಬದುಕಿಗೊಂದು ಬೆಳಕಾಗಿದೆ. ನೀವು ಶಾರೀರಿಕವಾಗಿ, ಮಾನಸಿಕವಾಗಿ ಸುಧಾರಣೆಯಾಗಿದ್ದೀರಿ. ಲಿವರ್‌ಗೆ ಟ್ರೀಟ್‌ಮೆಂಟ್ ಮಾಡುವ ವೈದ್ಯರು ಹೇಳುತ್ತಿದ್ದರು ಬೇರೆಲ್ಲಾ ಕಾಯಿಲೆಗಳಿಂದ ಬರುವ ಲಿವರ್‌ನ ರೋಗ ಬೇಗ ವಾಸಿಯಾಗುವುದಿಲ್ಲ. ಆದರೆ ಕುಡಿತದಿಂದ ಬರುವ ಲಿವರ್‌ನ ಕಾಯಿಲೆ ಕುಡಿತ ಬಿಟ್ಟ ಮರುದಿನದಿಂದಲೆ ಗುಣ ಆಗಲು ಶುರುವಾಗುತ್ತದೆ. ಶರೀರಕ್ಕೆ ಅಂತಹ ಶಕ್ತಿ ಇದೆ ಎಂದು ಹೇಳುತ್ತಿದ್ದರು. ಹಿಂದೆ ನಿಮ್ಮ ಬದುಕಿನಲ್ಲಿ ಎಣ್ಣೆ ಇತ್ತು, ಬತ್ತಿ ಇತ್ತು. ಆದರೆ ಬೆಳಕು ಇರಲಿಲ್ಲ. ಇಂದು ಆ ಬೆಳಕು ನಿಮ್ಮ ಬದುಕಿನಲ್ಲಿ ಬಂದಿದೆ. ನೀವು ಬೆಳಗುವುದಲ್ಲದೆ ನಿಮ್ಮ ಮನೆ, ಮಕ್ಕಳು, ಸಮಾಜ ಎಲ್ಲದಕ್ಕೂ ನೀವು ಬೆಳಕಾಗಿದ್ದೀರಿ.
ಏನೂ ತಪ್ಪು ಮಾಡದೆ ಕಷ್ಟಪಡುವವರು, ಉಪವಾಸ, ಅವಮಾನ ಎಲ್ಲವನ್ನೂ ಸಹಿಸುವವರು ಹೆಣ್ಮಕ್ಕಳು. ಆದರೆ ಅವರು ಗಂಡಸರ ಹಾಗೆ ಮಕ್ಕಳನ್ನು ಬಿಟ್ಟು, ಮನೆಯನ್ನು ಬಿಟ್ಟು ಹೋಗುವ ಹಾಗಿಲ್ಲ. ಗೂಟಕ್ಕೆ ಕಟ್ಟಿದ ದನ ಕರುವನ್ನು ಬಿಟ್ಟು ಹೋಗದಿರುವಂತೆ ಮಕ್ಕಳಿಗಾಗಿ ಎಷ್ಟೇ ಕಷ್ಟ ಇದ್ದರೂ ತಾಯಿ ಆ ಮನೆಯಲ್ಲೇ ಇರುತ್ತಾಳೆ. ಮಕ್ಕಳನ್ನು ಸಂಭಾಳಿಸುತ್ತಾಳೆ, ಅವಳು ದುಡಿದು ಮಕ್ಕಳು ಮತ್ತು ಗಂಡನ ಹೊಟ್ಟೆ ತುಂಬಿಸುತ್ತಾಳೆ. ನಾವು ಜ್ಞಾನವಿಕಾಸದಲ್ಲಿ ನಾಟಕಗಳನ್ನು ಕಲಿಸುತ್ತೇವೆ. ಕುಡಿತದ ಬಗ್ಗೆ ನಾಟಕ ಎಂದರೆ ಯಾವುದೇ ಸಂಭಾಷಣೆಯನ್ನು ಬರೆದುಕೊಡಬೇಕಾಗಿಲ್ಲ. ಅವರೇ ಮಾತಾಡುತ್ತಾರೆ. ಒಬ್ಬಳು ಗಂಡ ಆಗುತ್ತಾಳೆ, ಒಬ್ಬಳು ಹೆಂಡತಿ ಆಗುತ್ತಾಳೆ, ಮಕ್ಕಳಾಗುತ್ತಾರೆ, ಅವರೇ ಮಾತಾಡುತ್ತಾರೆ. ಚೆನ್ನಾಗಿ ಬಾಯಿಪಾಠ ಮಾಡಿಸುತ್ತಾರೆ. ಅವರಿಗೆ ಗೊತ್ತಿದೆ ಏನು ನಡೆಯುತ್ತಿದೆ ಎಂದು.
ಮನುಷ್ಯ ಯಾವಾಗಲೂ ಬೀಳುವುದು ದೊಡ್ಡ ದೊಡ್ಡ ಬೆಟ್ಟ – ಗುಡ್ಡವನ್ನು ಎಡವಿ ಅಲ್ಲ. ಸಣ್ಣ ಸಣ್ಣ ಕಲ್ಲುಗಳನ್ನು ತಾಗಿ ಎಡವಿ ಅವನು ಬೀಳುತ್ತಾನೆ. ಹಾಗೆಯೇ ನಾವು ಬೀಳುವುದು ಏನೋ ದೊಡ್ಡ ತಪ್ಪು ಮಾಡಿ ಅಲ್ಲ. ಸಣ್ಣ ಒಂದು ದೌರ್ಬಲ್ಯ, ಸಣ್ಣ ಒಂದು ಕುಡಿತದ ಚಟ, ಸಣ್ಣ ಸಿಗರೇಟ್‌ನ ಒಂದು ಚಟ ಈ ಸಣ್ಣಪುಟ್ಟ ಚಟಗಳಿಂದಲೇ ನಾವು ನಾಶ ಆಗುವುದು. ರಾವಣ, ದುರ್ಯೋಧನನಂತಹ ಮಹಾನ್ ವ್ಯಕ್ತಿಗಳಿಗೂ ಸಣ್ಣ ಒಂದು ದೌರ್ಬಲ್ಯ ಇತ್ತು. ಅದು ಹೆಣ್ಣು ಮತ್ತು ಮಣ್ಣು. ಅದರಿಂದಾಗಿ ರಾಮಾಯಣ, ಮಹಾಭಾರತ ಎಲ್ಲ ಸಂಭವಿಸಿತು. ಆ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎನ್ನುವುದನ್ನು ನಿಮಗೆ ಜನಜಾಗೃತಿ ಶಿಬಿರದಲ್ಲಿ ಕಲಿಸಿದ್ದಾರೆ.
ಒಂದು ದೊಡ್ಡ ಅರಮನೆ ಇತ್ತು. ಆ ಅರಮನೆಯಲ್ಲಿ ರಾಜನ ಬಳಿ ಒಂದು ಗೆದ್ದಲು ಹುಳು ಬಂದು ಕೇಳುತ್ತದೆ. ನನಗೆ “ನಿಮ್ಮ ಅರಮನೆಯಲ್ಲಿ ಸ್ವಲ್ಪ ಜಾಗ ಕೊಡಿ’’ ಎಂದು. ರಾಜ ಹೇಳುತ್ತಾನೆ, ಇಲ್ಲಪ್ಪ ನಿನಗೆ ಜಾಗವಿಲ್ಲ ಎಂದು. ಗೆದ್ದಲು ಹುಳ ಹೇಳುತ್ತದೆ “ನಾನು ಇಷ್ಟು ಚಿಕ್ಕವನಿದ್ದೇನೆ. ನಿಮಗೆ ಇಷ್ಟು ದೊಡ್ಡ ಅರಮನೆ ಇದೆ. ನನಗೆ ಒಂದು ಸ್ವಲ್ಪ ಜಾಗ ಕೊಟ್ಟರೆ ಏನಾಗುತ್ತದೆ’’ ಎಂದು. ರಾಜ ಕೊನೆಗೆ ಗೆದ್ದಲು ಹುಳಕ್ಕೆ ಜಾಗ ಕೊಡುತ್ತಾನೆ. ಎರಡು – ಮೂರು ವರ್ಷ ಬಿಟ್ಟು ನೋಡಿದರೆ ಅರಮನೆಯ ತೊಲೆಗಳೆಲ್ಲ ಮುರಿದು ಬೀಳುತ್ತಿವೆ. ಯಾಕೆಂದರೆ ಗೆದ್ದಲು ಹುಳ ಒಳಗೇ ಕುಳಿತು ಕೆಲಸ ಮಾಡಿದೆ. ಮರಿ ಮಾಡಿದೆ, ಅಲ್ಲಿ ಗೆದ್ದಲು ಮರವನ್ನು ಕೊರೆದಿದೆ. ಹೀಗೆ ಒಂದು ಸಣ್ಣ ಚಟ ಹೇಗೆ ನಮ್ಮನ್ನು ಒಳಗಿಂದ ಒಳಗೆ ಸಾಯಿಸುತ್ತದೆ, ಒಳಗಿಂದ ಒಳಗೆ ನಮ್ಮನ್ನು ನೋಯಿಸುತ್ತದೆ ಎಂದು ಹೇಳುವುದು ದೊಡ್ಡ ವಿಷಯ.
ನಾನು ಪೇಪರ್‌ನ ಸಂದರ್ಶನವೊ0ದನ್ನು ಓದಿದ್ದೆ. ಗಂಡ ಮತ್ತು ಹೆಂಡತಿ ಇಬ್ಬರೂ ಬೆಳಿಗ್ಗೆಯಿಂದ ಸಂಜೆಯವರೆಗೆ ಕಲ್ಲುಕುಟ್ಟುವ ಕೆಲಸವನ್ನು ಮಾಡುತ್ತಿದ್ದರು. ಹೆಂಡತಿಗೆ ಸಂಬಳ ಕಡಿಮೆ. ಗಂಡನಿಗೆ ಸಂಬಳ ಜಾಸ್ತಿ. ಹೆಂಗಸು ಸಾಯಂಕಾಲ ಆದಾಗ ಮನೆಗೆ ಹೋಗುತ್ತಾಳೆ, ಅಡುಗೆ ಮಾಡುತ್ತಾಳೆ, ಮನೆ ಗುಡಿಸಿ, ಒರೆಸುತ್ತಾಳೆ, ಮಕ್ಕಳಿಗೆ ಸ್ನಾನ ಮಾಡಿಸುತ್ತಾಳೆ, ಊಟ ಮಾಡಿಸುತ್ತಾಳೆ, ಎಲ್ಲ ಕೆಲಸ ಮಾಡುತ್ತಾಳೆ. ಒಂದು ದಿನ ಪತ್ರಕರ್ತರು ಆ ಮನೆಗೆ ಬರುತ್ತಾರೆ. ಅಂದರೆ ಕಲ್ಲು ಕುಟ್ಟುವ ಕೆಲಸದಲ್ಲಿಯೂ ಹೆಂಗಸರು ಇರುವುದು ಕಡಿಮೆ. ಹಾಗೆ ಬಂದು ಅವಳನ್ನು ಸಂದರ್ಶನ ಮಾಡುತ್ತಾರೆ. ‘ನಿಮ್ಮ ಗಂಡ ಎಲ್ಲಿಗೆ ಹೋಗಿದ್ದಾರೆ’ ಎಂದು ಕೇಳುತ್ತಾರೆ. ‘ಪಾಪ, ಅವರಿಗೆ ತುಂಬಾ ಸುಸ್ತಾಗಿದೆ. ಕುಡಿಯಲು ಹೋಗಿದ್ದಾರೆ’ ಎನ್ನುತ್ತಾಳೆ. ನಿನಗೆ ಸುಸ್ತಾಗಿಲ್ವಾ? ಎಂದು ಕೇಳಿದರು. ನನಗೆ ಮನೆಯಲ್ಲಿ ತುಂಬಾ ಕೆಲಸ ಇದೆ. ಅಡುಗೆ ಮಾಡಬೇಕು, ಮಕ್ಕಳನ್ನು ಸ್ನಾನ ಮಾಡಿಸಬೇಕು, ಊಟ ಮಾಡಿಸಬೇಕು, ಪಾತ್ರೆ ತೊಳೆಯಬೇಕು, ಬಟ್ಟೆ ತೊಳೆಯಬೇಕು ಇದನ್ನೆಲ್ಲಾ ಮಾಡುತ್ತೇನೆ ಎಂದಳು. ಹಾಗಿದ್ದರೆ ನಿಮಗೆ ಸುಸ್ತಾಗಲ್ವಾ? ಎಂದು ಕೇಳುತ್ತಾರೆ ಅವರು. ಆ ಹಳ್ಳಿ ಹೆಣ್ಮಗಳು ಒಂದೇ ಉತ್ತರ ಹೇಳಿದಳು. ‘ಸೂರ್ಯನಿಗೆ ಸುಸ್ತಾದರೆ ಹೇಗೆ?’ ಎಂದು. ಸೂರ್ಯ ದಿನವೂ ಹುಟ್ಟಬೇಕು, ದಿನವೂ ಮುಳುಗಬೇಕು. ಒಂದು ದಿನ ಇವತ್ತು ನನಗೆ ಸುಸ್ತಾಗಿದೆ, ಬರುವುದಿಲ್ಲ ಎಂದರೆ ಇಡೀ ಜೀವಜಾಲ ತಣ್ಣಗಾಗುತ್ತದೆ. ಸೂರ್ಯ ಇಲ್ಲ ಅಂದರೆ ಪ್ರಕೃತಿಯಲ್ಲಿ ಯಾವುದೇ ಕೆಲಸವಿಲ್ಲ. ಹಾಗೆಯೇ ಮಹಿಳೆ ಅಂದರೆ ಒಂದು ಮನೆಯ ಸೂರ್ಯ ಇದ್ದ ಹಾಗೆ. ಅವಳು ಮನೆಯಲ್ಲಿ ಏನೋ ಹುಷಾರಿಲ್ಲ ಎಂದು ಎದ್ದೇಳದಿದ್ದರೆ ಕಸ ಮನೆಯಲ್ಲಿ ತುಂಬಿಕೊಳ್ಳುತ್ತದೆ. ಪಾತ್ರೆ ಹಾಗೆಯೆ ಬಿದ್ದಿರುತ್ತದೆ. ಅಡುಗೆ ಆಗಿರುವುದಿಲ್ಲ. ಮಕ್ಕಳು ಅಮ್ಮ… ಅಮ್ಮ… ಹಸಿವು ಎಂದರೆ ಕೊಡುವವರು ಯಾರೂ ಇರುವುದಿಲ್ಲ. ಅವಳಿಗೆ ಕಾಯಿಲೆ ಇರಲಿ, ನೋವಿರಲಿ, ನಗುವಿರಲಿ ಕೆಲಸ ಮಾಡಲೇಬೇಕು.
ಮನೆಮಂದಿ, ಬಂಧುಗಳು, ಸ್ನೇಹಿತರು, ಹೆಂಡತಿ, ಯಾರ ಬುದ್ಧಿ ಮಾತನ್ನೂ ಕೇಳದಿದ್ದವರು ಎಂಟು ದಿನದಲ್ಲಿ ಹೇಗೆ ಕುಡಿತ ಬಿಟ್ಟರು? ಮನೆಮಂದಿಯೆಲ್ಲ ಹೇಳಿದರೂ ಕೇಳದವರು ಮದ್ಯವರ್ಜನ ಶಿಬಿರಕ್ಕೆ ಸೇರಲು ಹೇಗೆ ಒಪ್ಪಿಕೊಂಡರು ಎಂಬುದೊ0ದು ದೊಡ್ಡ ಪವಾಡ ಎಂದು ನನಗೆ ಅನ್ನಿಸುತ್ತದೆ. ಮದ್ಯ ರಾಕ್ಷಸನಿಂದ ಬಿಡಿಸಿಕೊಂಡ ನಿಮಗೆ ಮತ್ತು ಇನ್ಮುಂದೆ ಸುಖಜೀವನದ ಕಲ್ಪನೆ ಮಾಡಿಕೊಂಡ0ತಹ ಮಹಿಳೆಯರಿಗೆ, ಮನೆಯವರಿಗೆ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯು ಒಳಿತು ಮಾಡಲಿ.