ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಕಾಶಿಯಲ್ಲಿ ಒಂದು ಕಾಲದಲ್ಲಿ ಒಂದು ವಿಚಿತ್ರ ಕ್ರಮ ಇತ್ತಂತೆ. ಆ ಊರಿನ ರಾಜನ ಅಧಿಕಾರದ ಕೆಲವು ವರ್ಷಗಳ ಅವಧಿ ಆಗುತ್ತಿದ್ದಂತೆ ಆತನನ್ನು ಗಂಗಾನದಿ ಆಚೆ ದಡಕ್ಕೆ ಅಟ್ಟುತ್ತಿದ್ದರಂತೆ. ಯಾರೂ ಇಲ್ಲದ ಆ ಜಾಗದಲ್ಲಿ ಒಬ್ಬಂಟಿಯಾಗಿ ರಾಜ ಉಳಿದ ಆಯುಷ್ಯವನ್ನು ನರಕಯಾತನೆಯಿಂದ ಕಳೆಯುತ್ತಿದ್ದನಂತೆ. ಹೀಗೆ ಪ್ರತಿ ರಾಜರಿಗೂ ತಮ್ಮ ಅಧಿಕಾರದ ಅವಧಿಯಲ್ಲಿ ಮುಂದೆ ತಮಗಾಗಬಹುದಾದ ಗಡಿಪಾರಿನ ಬಗ್ಗೆ ಚಿಂತೆ ಇದ್ದೇ ಇತ್ತು. ಆದರೆ ಓರ್ವ ರಾಜ ಮಾತ್ರ ನಿಶ್ಚಿಂತೆಯಿoದ ರಾಜ್ಯಭಾರ ನಡೆಸುತ್ತಿದ್ದ. ಮಾತ್ರವಲ್ಲ ಆತನ ಅವಧಿ ಮುಗಿದು ಗಂಗಾನದಿ ಆಚೆ ದಡಕ್ಕೆ ಬಿಟ್ಟು ಬರುವಾಗ ಇತರ ರಾಜರುಗಳಂತೆ ಚಿಂತಿತನಾಗದೆ ಬಹಳ ಸಂತೋಷದಿoದ ಹೊರಟು ಹೋಗುತ್ತಾನೆ.
ಇದಕ್ಕೆ ಕಾರಣ ಇಲ್ಲಿ ಆತ ರಾಜ್ಯಭಾರ ಸಂಭಾಳಿಸುವಾಗಲೇ ತನ್ನ ನಿಷ್ಠಾವಂತ ಸೇವಕರನ್ನು ಗಂಗಾನದಿಯಾಚೆಗೆ ಬಿಟ್ಟು ಅಲ್ಲಿ ಮುಂದಿನ ಬದುಕಿಗೆ ಬೇಕಾದ ಅರಮನೆ ಮತ್ತಿತರ ವ್ಯವಸ್ಥೆಗಳನ್ನು ಮಾಡಿಸುತ್ತಿದ್ದ. ತಾನೂ ಭೇಟಿ ಕೊಟ್ಟು ವ್ಯವಸ್ಥೆಗಳ ಬಗ್ಗೆ ಗಮನವಿರಿಸಿದ್ದ. ಆದುದರಿಂದ ಅವನ ಶೇಷಾಯುಷ್ಯವನ್ನು ಸಂತೋಷದಿoದ ಕಳೆಯುವಂತಾಯಿತು.
ಈ ಮಾತು ನಮ್ಮ ಪ್ರಸ್ತುತ ಜೀವನದ ಬಗೆಗೂ ಅನ್ವಯಿಸುತ್ತದೆ. ಕೆಲಸದಲ್ಲಿ ಇರುವವರೆಲ್ಲರಿಗೆ ನಿವೃತ್ತಿ ಕಡ್ಡಾಯ ಎಂಬ ವಿಚಾರ ಗೊತ್ತೇ ಇರುತ್ತದೆ. ಆದುದರಿಂದ ತಮ್ಮ ನಿವೃತ್ತಿಗೆ ಬೇಕಾದ ವ್ಯವಸ್ಥೆಗಳನ್ನು ಅಂದರೆ ಮನೆ, ಕೃಷಿ, ಬ್ಯಾಂಕ್‌ನಲ್ಲೊoದಷ್ಟು ದುಡ್ಡು, ಆರೋಗ್ಯ ವಿಮೆ ಇತ್ಯಾದಿಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ಮದುವೆ ಇತ್ಯಾದಿ ಜವಾಬ್ದಾರಿಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ.
ಹೆಣ್ಣು ಮಕ್ಕಳಿದ್ದರಂತೂ ಹೆತ್ತವರು ಮಗಳ ಮದುವೆ ಬಗ್ಗೆಯೂ ಹೆಚ್ಚಿನ ಉಳಿತಾಯ, ತಯಾರಿ ಮಾಡಬೇಕಾಗುತ್ತದೆ. ಮದುವೆ ಅಂದ ಬಳಿಕ ಚಿನ್ನ, ಬಣ್ಣ ಮತ್ತಿತರ ಖರ್ಚುಗಳಂತೂ ಇದ್ದೇ ಇರುತ್ತದೆ. ಹಾಗೆಂದು ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಇಷ್ಟೊಂದು ಖರ್ಚು ಮಾಡಿದ್ದೇನೆ. ನಾಳೆ ನನ್ನ ವೃದ್ಧಾಪ್ಯ ಸಮಯದಲ್ಲಿ ಆತ ನನ್ನನ್ನು ನೋಡಿಕೊಳ್ಳಬೇಕು, ನೋಡಿಕೊಳ್ಳುತ್ತಾನೆ ಎಂದು ಭಾವಿಸಿದರೆ ಕೆಲವೊಮ್ಮೆ ನಾವು ನೆನೆಸಿದಂತೆ ನಡೆಯುವುದಿಲ್ಲ. ಆತನಿಗೂ ಮದುವೆ ಆದ ಬಳಿಕ ಸಂಸಾರದ ಖರ್ಚು, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳ ಜೊತೆಗೆ ಈಗಿನ ಕಾಲಕ್ಕೆ ತಕ್ಕಂತೆ ಬದುಕಬೇಕೆಂಬ ಆಸೆ ಇರುವುದೂ ಸಹಜ. ಆದ್ದರಿಂದ ನಮ್ಮ ವೃದ್ಧಾಪ್ಯದ ಚಿಂತೆಯನ್ನು ಇನ್ನೊಬ್ಬರ ಹೆಗಲಿಗೆ ಹೊರಿಸದೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ನಾವೇ ಮಾಡಿಕೊಂಡರೆ ಇನ್ನೊಬ್ಬರ ಮುಂದೆ ಕೈಚಾಚಿ ಬದುಕಬೇಕಾದ ಪ್ರಮೇಯ ಬರಲಿಕ್ಕಿಲ್ಲ.
ವೃದ್ಧರು ಮಾತ್ರವಲ್ಲ ಮಕ್ಕಳೂ ಸಹ ತಮ್ಮ ಮುಂದಿನ ಬದುಕಿನ ಬಗೆಗಿನ ತಯಾರಿಯನ್ನು ಚಿಕ್ಕಂದಿನಿoದಲೇ ಮಾಡಿಕೊಳ್ಳಬೇಕಾಗುತ್ತದೆ. ಚೆನ್ನಾಗಿ ಓದಿದರೆ ಮಾತ್ರ ಒಳ್ಳೆಯ ಅಂಕಗಳು ಬರಲು ಸಾಧ್ಯ. ಉತ್ತಮ ಅಂಕಗಳು ಬಂದರೆ ಒಳ್ಳೆಯ ಕೋರ್ಸ್ಗೆ ಸೇರಬಹುದು. ಆ ಮೂಲಕ ಒಳ್ಳೆಯ ಉದ್ಯೋಗ ಪಡೆಯುವುದಕ್ಕೆ ಸುಲಭವಾಗುತ್ತದೆ. ಇಲ್ಲವಾದಲ್ಲಿ ಗಂಡು ಮಕ್ಕಳಿಗೆ ಮದುವೆ ಆಗುವುದೂ ಅಷ್ಟೇ ಕಷ್ಟ. ಯಾಕೆಂದರೆ ತನ್ನ ಬದುಕನ್ನು ಸಂಭಾಳಿಸಲಾರದವ ತನ್ನ ಜೀವನ ಸಂಗಾತಿಯನ್ನು ಹೇಗೆ ಬಾಳಿಸುತ್ತಾನೆ ಎಂಬ ಭೀತಿ ಹೆಣ್ಣು ಹೆತ್ತವರಲ್ಲಿರುವುದು ಸಹಜ.
ಇತ್ತೀಚೆಗೆ ಮಕ್ಕಳಲ್ಲಿ ಈ ಅರಿವು ಮೂಡುತ್ತಿದೆ. ಮಾತ್ರವಲ್ಲ ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ತಮ್ಮ ಹೊರೆಯನ್ನು ತಂದೆ, ಗಂಡ, ಮಕ್ಕಳ ಹೆಗಲಿಗೆ ಹೊರಿಸದೆ ತಮ್ಮ ಕಾಲ ಮೇಲೆ ತಾವೇ ನಿಲ್ಲುವ, ಅದಕ್ಕಾಗಿ ಓದಿ ಕೆಲಸ ಹಿಡಿಯುವ ಉತ್ಸಾಹ ತೋರುತ್ತಿದ್ದಾರೆ.
ನಿವೃತ್ತಿ ಆದ ಬಳಿಕ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ಸಾಕಷ್ಟು ವಿಮೆ, ಬ್ಯಾಂಕ್ ಬ್ಯಾಲೆನ್ಸ್ ಇದ್ದರೆ ನಿಶ್ಚಿಂತೆಯಿoದ ಕೂಡಿದ ಬದುಕು ನಮ್ಮದಾಗಬಹುದು. ಆದರೆ ಕೆಲವೊಮ್ಮೆ ಜೀವನದ ಸಂಧ್ಯಾಕಾಲದಲ್ಲಿ ಕೆಲವರಿಗೆ ಸಾವಿನ ಭಯ ಕಾಡಲಾರಂಭಿಸುತ್ತದೆ. ಜತೆಗೆ ಒಂಟಿತನದ ಭಯ. ಆ ಬಗ್ಗೆಯೂ ನಾವು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕಾದದ್ದು ಅತೀ ಅಗತ್ಯ. ಮನೆಯಲ್ಲಿ ಒಳ್ಳೆಯ ಪುಸ್ತಕಗಳ ಸಂಗ್ರಹ, ಜತೆಗೆ ಒಂದಿಬ್ಬರು ಉತ್ತಮ ಸ್ನೇಹಿತರು, ಮಾತ್ರವಲ್ಲ ಅಧ್ಯಾತ್ಮದ ಒಲವಿದ್ದಲ್ಲಿ ಒಳ್ಳೆಯ ಸತ್ಸಂಗಗಳು, ಊರಿನ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಇದ್ದು ಧ್ಯಾನ, ಪೂಜೆ ಇತ್ಯಾದಿಗಳನ್ನು ಮಾಡುವುದು. ಬದುಕುವಾಗ ಒಳ್ಳೆಯ ಬದುಕನ್ನು ಬದುಕಿದ್ದೇನೆ. ಸಾವು ಬದುಕಿನ ಒಂದು ಅಂಗ. ಅದಕ್ಕೂ ತಯಾರಾಗಿರಬೇಕಾದದ್ದು ಅನಿವಾರ್ಯವೆಂಬ ಮಾನಸಿಕ ದೃಢತೆಯನ್ನು, ಭಾವಶುದ್ಧಿಯನ್ನು ಬೆಳೆಸಿಕೊಳ್ಳುವುದರಿಂದ ಸಾವಿನ ಬಗೆಗಿನ ಚಿಂತೆ ದೂರವಾಗುತ್ತದೆ. ಪ್ರಯಾಣ ಆರಂಭ ಆದ ಬಳಿಕ ಅದಕ್ಕೊಂದು ಅಂತ್ಯ ಇರಲೇಬೇಕೆಂಬ ನಿರ್ಲಿಪ್ತ ಭಾವ ಬದುಕಿಗೆ ಒಂದು ಸಮಾಧಾನವನ್ನು ಕೊಡುತ್ತದೆ.
ಈ ಮಾನಸಿಕ ನೆಮ್ಮದಿ, ನಿಶ್ಚಿಂತೆ ಬರಬೇಕಾದರೆ ಬದುಕಿನುದ್ದಕ್ಕೂ ಮೋಸ, ವಂಚನೆಗಳಿಲ್ಲದ ಬದುಕು ನಮ್ಮದಾಗಿರಬೇಕು ಎನ್ನುವುದೂ ಅಷ್ಟೇ ಸತ್ಯ. ಆದ್ದರಿಂದ ಸಾವೆಂಬ ಗುರಿಯತ್ತ ಶಾಂತಿಯಿoದ, ನಿರಾಳ ಭಾವದಿಂದ ಸಾಗಬೇಕಾದರೆ ಬದುಕಿನ ಮಾರ್ಗವೂ ಸ್ವಚ್ಛ, ಸರಳ ನಿರ್ಮಲವಾಗಿರುವುದೂ ಅಷ್ಟೇ ಅಗತ್ಯ. ಇದಕ್ಕೂ ಬೇಕು ಪೂರ್ವ ತಯಾರಿ.