ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಭಾರತೀಯ ಕಲ್ಪನೆಯಲ್ಲಿ ಭೂಮಿಯನ್ನು “ತಾಯಿ” ಎಂದು ಸಂಬೋಧಿಸಲಾಗಿದೆ. ಗದ್ದೆಗಿಳಿಯುವ ಮುನ್ನ ಭೂಮಿ ಮುಟ್ಟಿ ನಮಸ್ಕರಿಸುವವರೂ ಇದ್ದಾರೆ. ಭೂಮಿಗೆ ಕಾಲಕಾಲಕ್ಕೆ ಬೇಕಾದ ನೀರು, ಗೊಬ್ಬರಗಳನ್ನು ಕೊಟ್ಟು ಅದು ಸದಾ ಜೀವಂತವಾಗಿರುವAತೆ ನಮ್ಮ ಹಿರಿಯರು ನೋಡಿಕೊಳ್ಳುತ್ತಿದ್ದರು. ಆದ್ದರಿಂದಲೇ ಸಾವಿರಾರು ವರ್ಷಗಳಿಂದ ನಾವು ಬೆಳೆ ತೆಗೆಯುತ್ತಿದ್ದರೂ ಮತ್ತೆ ಮತ್ತೆ ಭೂಮಿ ಬಸಿರಾಗುವುದನ್ನು ಕಾಣುತ್ತೇವೆ. ಮನುಷ್ಯ, ದನಕರು ಮಾತ್ರವಲ್ಲ ಅನೇಕ ರೀತಿಯ ಕ್ರಿಮಿ-ಕೀಟಗಳು, ಪ್ರಾಣಿ – ಪಕ್ಷಿಗಳು, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಈ ಗದ್ದೆ, ಭೂಮಿಯಿಂದಾಗಿ ಬದುಕುತ್ತಿವೆ. ಆ ಕಾಲದಲ್ಲಿ ಗೊಬ್ಬರದ ಗಿಡ, ಹಟ್ಟಿಗೊಬ್ಬರ, ಹೆಚ್ಚೆಂದರೆ ಕಹಿಬೇವು ಇತ್ಯಾದಿಗಳನ್ನು ಗೊಬ್ಬರಕ್ಕಾಗಿ ಮತ್ತು ಕೀಟನಾಶಕವಾಗಿ ಉಪಯೋಗಿಸುವ ಕಲೆ ಶಾಲೆ ಮೆಟ್ಟಿಲು ಹತ್ತದ ರೈತನಿಗೂ ಗೊತ್ತಿತ್ತು. ಭತ್ತದ ಒಂದು ಕೊಳಲು ಆದ ಬಳಿಕ ದ್ವಿದಳ ಧಾನ್ಯಗಳನ್ನು ಬೆಳೆಸುವುದರ ಮೂಲಕವೂ ಭೂಮಿ ಸಮೃದ್ಧವಾಗುತ್ತಿತ್ತು.
ಈ ಭೂಮಿಯಿಂದ ಬೆಳೆಯನ್ನು ಕಟಾವು ಮಾಡಿ ಮನೆ ತುಂಬಿಸುವ ಸಂಭ್ರಮ ಮನೆ-ಮನೆಗಳದ್ದಾಗಿದೆ. ಗದ್ದೆ ಉಳುವ, ಕೋಣಗಳನ್ನು ಓಡಿಸುವ ಮೂಲಕ ಗದ್ದೆಗಳ ಫಲವತ್ತತೆಯನ್ನು ಹೆಚ್ಚಿಸುವ ಉಪಾಯದ ಜತೆ ಮನರಂಜನೆಯೂ ಸಿಗುತ್ತಿತ್ತು. ಹಳ್ಳಿಗಳಲ್ಲಿ ದೊಡ್ಡ ಗದ್ದೆಗಳನ್ನು ಉಳುವುದಿದ್ದರೆ ಎಲ್ಲರೂ ಸೇರಿ ತಮ್ಮ ತಮ್ಮ ಮನೆಯ ಎತ್ತುಗಳನ್ನು ತರುವುದಿತ್ತು. ಆ ದಿನ ಗದ್ದೆಯ ಯಜಮಾನನ ಮನೆಯಲ್ಲಿ ಹೊಟ್ಟೆ ತುಂಬಾ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು.
‘ದೀಪಾವಳಿ’ ಬಂತೆಂದರೆ ಗದ್ದೆ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನೆಲ್ಲಾ ಇಟ್ಟು, ಅವುಗಳನ್ನು ಅಲಂಕರಿಸಿ ಪೂಜಿಸುವ ಪದ್ಧತಿ ಇತ್ತು. ಈಗ ಇಂತಹ ಪ್ರಕೃತಿ ಜೊತೆಗಿನ ನಂಟನ್ನು ಬೆಸೆಯುವ ಅಚರಣೆಗಳು ಕಡಿಮೆಯಾಗುತ್ತಿವೆ. ಭೂಮಿಯ ನಂಟು ಬಿಟ್ಟು, ಎಲ್ಲವನ್ನೂ ಸೂಪರ್‌ಮಾರ್ಕೆಟ್‌ನಿಂದಲೇ ತರುವ ಮಂದಿಗೆ ಹಿಂದಿನ ಆಚರಣೆಗಳು ಹಾಸ್ಯಾಸ್ಪದವಾಗಿ ಕಾಣಬಹುದು. ಆದರೆ ಇದು ನಮ್ಮನ್ನು ಸಲಹುವ ತಾಯಿಗೆ ಕೃತಜ್ಞತೆ ಹೇಳುವ ವಿಧಾನ ಎಂಬುದನ್ನು ಮರೆಯಬಾರದು.
ಯಾವಾಗ ನಾವು ಭೂಮಿಯನ್ನು ಒಂದು ಉದ್ಯಮದ ಹಾಗೆ, ಕಾರ್ಖಾನೆಯ ಹಾಗೆ, ಭತ್ತ ಬೆಳೆಯುವ ಯಂತ್ರವೆಂದು ಕೊಂಡೆವೋ, ಅಂದಿನಿಂದ ಅನೇಕ ರೀತಿಯಲ್ಲಿ ಭೂಮಿ ತನ್ನ ಸಾರವನ್ನು ಕಳೆದುಕೊಂಡದ್ದಲ್ಲದೆ, ಆಕೆಯಿಂದ ಪಡೆವ ಭತ್ತ, ದವಸಧಾನ್ಯ, ತರಕಾರಿಗಳೆಲ್ಲವೂ ಸತ್ವ ಕಳೆದುಕೊಂಡವು. ಆಕೆಗೆ ದುಃಖ ಕೊಟ್ಟದ್ದನ್ನು, ನಾವೀಗ ಕಾಯಿಲೆಗಳ ರೂಪದಲ್ಲಿ ಅನುಭವಿಸುವಂತೆ ಆಗಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಉಪಯೋಗಿಸಿ ಬೆಳೆಸಿದ ಹೆಚ್ಚಿನ ಬೆಳೆಗಳನ್ನು ಮತ್ತೆ ನಾವೇ ತಿನ್ನುವುದರಿಂದ ಇದು ಹಲವಾರು ರೀತಿಯ ರೋಗಗಳಿಗೆ ಕಾರಣವಾಗಿದೆ. ಮಳೆಗೂ, ಕೃಷಿಗೂ ಅವಿನಾಭಾವ ಸಂಬಂಧವಿದೆ. ಮಳೆ ಬಾರದಿದ್ದರೆ ದೇವರಿಗೆ ಪೂಜೆ, ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಮಳೆ ಬರದಿದ್ದರೆ ಉತ್ತರಕನ್ನಡ ಭಾಗದಲ್ಲಿ ಯುವಕರು ಹೆಣ್ಣುವೇಷ ಹಾಕಿ, ಮಗುವನ್ನೆತ್ತಿಕೊಂಡು ‘ಯವ್ವಾ ಭಿಕ್ಷೆ ನೀಡವ್ವಾ, ಮಕ್ಕಳು ಮರಿ ಹಸಗೊಂಡಾವ’- ಅಂತ ಭಿಕ್ಷೆ ಬೇಡೋ ಕ್ರಮವೂ ಇದೆ. ‘ಅಶ್ವಿನಿ ನಕ್ಷತ್ರದಲ್ಲಿ ಬರುವ ಮಳೆ ಹೂಗಾರ ಮನೆಯಲ್ಲಿ, ಕೃತಿಕಾ ಮಳೆ ತಳವಾರದಲ್ಲಿ, ಭರಣಿ ಮಳೆ ಅಗಸರಲ್ಲಿ, ರೋಹಿಣಿ ಮಳೆ ಬಣಜಿಗರ, ಶಿಶಿರದ ಮಳೆ ವೈಶ್ಯರ ಮನೆಯಲ್ಲಿ ವಾಸವಾಗಿರುತ್ತದೆ’ ಎಂಬ ನಂಬಿಕೆಯಿದ್ದು ಆಯಾ ಸಂದರ್ಭದಲ್ಲಿ ಅಂಥ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುವುದೂ ಇದೆ. ಒಟ್ಟಾರೆ ಚೆನ್ನಾಗಿ ಬೆಳೆ ಬಂದರೆ, ರೈತನ ಮನೆಯಲ್ಲಿ ವರ್ಷಪೂರ್ತಿ ಗಂಜಿ, ದನಕರುಗಳಿಗೆ ಹೊಟ್ಟೆ ತುಂಬಾ ಮೇವು ಸಿಗುತ್ತದೆ.
ಭೂಮಿ ತಾಯಿಯನ್ನು ಹೆಣ್ಣೆಂದು ಭಾವಿಸಿ ದ.ಕ. ಜಿಲ್ಲೆಯಲ್ಲಿ “ಕೆಡ್ಡಸ” ಆಚರಣೆ ಮಾಡುತ್ತೇವೆ. ಆ ದಿನ ಭೂಮಿಗೆ ನೇಗಿಲು ಮುಟ್ಟಿಸಬಾರದು ಮಾತ್ರವಲ್ಲ ಭೂಮಿ ತಾಯಿಗೆ ಮೂರು ದಿನ ಕಳೆದ ಬಳಿಕ ಸ್ನಾನ ಮಾಡಲಿಕ್ಕೆ ಬೇಕಾದ ಎಣ್ಣೆ, ಸೀಗೆಪುಡಿ, ಇತ್ಯಾದಿಗಳನ್ನು ಗದ್ದೆ ಬದಿಯಲ್ಲಿ ಇಡುವ ಕ್ರಮವೂ ಇದೆ. ಕೆಲವೆಡೆ ಸುಗ್ಗಿ ಹುಣ್ಣಿಮೆ, ಎಳ್ಳಮವಾಸ್ಯೆ ಹಬ್ಬದಂದು ಅನ್ನಕೊಡೋ ಭೂಮಿತಾಯಿಗೇ ಅನ್ನ ಉಣಿಸುವ ಕ್ರಮವೂ ಇದೆ.
ಜಡಿ ಜಡಿ ಮಳೆ ಸುರಿಯುತ್ತಿದ್ದಂತೆ ರೈತಾಪಿಜನರ ಕೃಷಿ ಚಟುವಟಿಕೆ ಶುರುವಾಗುತ್ತದೆ. ಒಂದು ಕೊಳಲು ಆದ ಬಳಿಕ ಬೆಳೆಯಬಹುದಾದ ಧಾನ್ಯಗಳು, ಮಳೆ ಇಲ್ಲದಿದ್ದರೂ ಬೆಳೆಸಬಹುದಾದ ಸಿರಿಧಾನ್ಯಗಳನ್ನು ನಾವು ಇಂದು ಕೈಬಿಟ್ಟಿದ್ದೇವೆ. ಭತ್ತ ಕೃಷಿ ಅಳಿವಿನಂಚಿಗೆ ತಲುಪಲು ಇದೂ ಒಂದು ಕಾರಣವಾಗಿದೆ.
ಕೊರೊನಾ ಸಂದರ್ಭದಲ್ಲಿ ಹಳ್ಳಿಯಮಕ್ಕಳು ಹಳ್ಳಿಗೆ ಹಿಂದಿರುಗುತ್ತಿದ್ದಾರೆ. ಯಾರದೋ ಮನೆಯ ಗೇಟ್ ಕಾಯವ ಯುವಕ ತನ್ನ ಮನೆ, ಹೊಲಗದ್ದೆಗಳನ್ನು ಕಾಯುವಂತಾದರೆ, ಮನೆಯಲ್ಲೇ ಇದ್ದು ದುಡಿಯುವಂತಾದರೆ, ಅಪ್ಪ, ಅಮ್ಮ, ಮಕ್ಕಳು ಒಟ್ಟಾಗಿ ಕುಳಿತು ರೊಟ್ಟಿಯೋ, ಗಂಜಿಯೋ ಉಣ್ಣುವಂತಾದರೆ ಅದೇ ನೆಮ್ಮದಿ ಜೀವನ. ಪೇಟೆಯ ಥಳಕು ಬಳುಕಿಗೆ ಬೇಕಾದ ಯಾವುದೇ ಸಾಧನ, ಸಾಮಗ್ರಿಗಳು ಇಲ್ಲಿ ಬೇಕಾಗಿಲ್ಲ. ಸರಳ ಜೀವನದಿಂದ ಆಗುವ ಉಳಿತಾಯವೇ ದೊಡ್ಡ ಲಾಭ. ಹಾಲು, ತರಕಾರಿ, ಮನೆಬಾಡಿಗೆ, ಬಸ್ಸು ಖರ್ಚು, ಒಳ್ಳೆಯ ಉಡುಗೆ, ವಾಚ್, ಮೊಬೈಲ್‌ಗಳಿಗೆ ಹೆಚ್ಚು ವ್ಯಯಿಸಬೇಕಿಲ್ಲ.
ಇಂದು ಕೊರೊನಾ ರೋಗಿಗಳಿಗೆ ಕೊಡುವ ಶುದ್ಧಗಾಳಿಗೆ ಸಾವಿರಾರು ರೂಪಾಯಿ ಕೊಡುವ ನಾವು, ದೇವರು ಇಷ್ಟು ವರ್ಷ ಕೊಟ್ಟಂತಹ ಶುದ್ಧಗಾಳಿಗೆ, ನೀರಿಗೆ ಎಷ್ಟು ಹಣ ಕೊಡಬೇಕಾದೀತು! ಹಳ್ಳಿಗಳಲ್ಲಿ ಅವು ಧರ್ಮಾರ್ಥವಾಗಿ ಸಿಗುತ್ತಿದೆ. ಭೂಮಿತಾಯಿಗೆ, ಗಾಳಿ, ನೀರು ಕೊಟ್ಟ ಆ ದೇವರಿಗೆ ಬೆಳಿಗ್ಗೆ ಎದ್ದು ಭಕ್ತಿಯಿಂದ ನಮಿಸುವ ಮೂಲಕ ಕೃತಜ್ಞರಾಗೋಣ.