ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಯೋಚಿಸಿದರೆ ಅದೊಂದು ‘ವಿಶ್ವರೂಪ ದರ್ಶನ’ವಾದಂತೆ ಭಾಸವಾಗುತ್ತದೆ. ದುರ್ಗೆಯ ಕೈಗಳಲ್ಲಿರುವ ವೈವಿಧ್ಯಮಯ ಆಯುಧಗಳಂತೆ ಕಾಲ ಕಾಲಕ್ಕೆ ಸಮಾಜದ ನಾನಾ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೊಸ ಯೋಚನೆ, ಚಿಂತನೆಗಳೊಂದಿಗೆ ಹೊಸ ಹೊಸ ಕಾರ್ಯಕ್ರಮಗಳು ಯೋಜನೆಯ ಮೂಲಕ ಮೂಡಿ ಬಂದಿರುವುದನ್ನು ನಾವು ನೋಡಬಹುದು. ಜನರಲ್ಲಿ ಉಳಿತಾಯದ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ವಾರದಲ್ಲಿ ರೂ.10ರಂತೆ ಉಳಿತಾಯದ ಉದ್ದೇಶವನ್ನಿಟ್ಟು ಆರಂಭವಾದ ಸಂಘಗಳು ಮುಂದೆ ‘ಪ್ರಗತಿಬಂಧು’ ಎಂದು ಕರೆಸಿಕೊಂಡವು. ಉಳಿತಾಯದೊಂದಿಗೆ ಶ್ರಮ ವಿನಿಮಯವೂ ನಡೆಯಿತು. ಈ ಪ್ರಗತಿಬಂಧುಗಳ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿತರಿಸುವ ಸಾಲಕ್ಕೆ ‘ಪ್ರಗತಿನಿಧಿ’ ಎಂದು ಹೆಸರಾಯಿತು. ಈ ಪ್ರಗತಿನಿಧಿ ಲಕ್ಷಾಂತರ ಮಂದಿಯ ಬದುಕನ್ನು ಬಂಗಾರವಾಗಿಸಿದೆ.
ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಮದ್ಯಪಾನ ಮಾರಕವಾಗಿತ್ತು. ಗಂಡಸರು ಎಷ್ಟೇ ದುಡಿದರೂ ಮನೆಗೆ ಬರುವಾಗ ಬರಿಗೈಯಲ್ಲಿ ಬರುವ ವಿಚಾರವನ್ನು ತಿಳಿದು ದುಶ್ಚಟ ನಿರ್ಮೂಲನೆಗಾಗಿ ‘ಮದ್ಯವರ್ಜನ ಶಿಬಿರ’ಗಳು ಪ್ರಾರಂಭವಾದವು. ಮಾತ್ರವಲ್ಲ ಕುಡಿತ ಬಿಟ್ಟವರು ಮತ್ತೆ ಕುಡಿತಕ್ಕೆ ಜಾರದಂತೆ ‘ನವಜೀವನ ಸಮಿತಿ’ಗಳ ಮೂಲಕ ಪರಸ್ಪರ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಬೇಕೆಂಬ ಕಲ್ಪನೆಗೆ ನಾಂದಿಯಾಯಿತು. ಆರ್ಥಿಕ ಸ್ವಾವಲಂಬನೆಯ ಜೊತೆಗೆ ಮಹಿಳೆ ಬೌದ್ಧಿಕವಾಗಿಯೂ ಬೆಳೆಯಬೇಕೆಂಬ ನಿಟ್ಟಿನಲ್ಲಿ ‘ಜ್ಞಾನವಿಕಾಸ’ದ ಮೂಲಕ ಅರಿವು ಮೂಡಿಸುವ ಯೋಜನೆ ಫಲಪ್ರದವಾಯಿತು. ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಊರುಗಳಲ್ಲಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಅಲ್ಲಿನ ಕೆರೆಗಳ ಹೂಳೆತ್ತಲಾಗಿದೆ. ಈಗಾಗಲೆ ನೂರಾರು ಕೆರೆಗಳು ಪುನಶ್ಚೇತನದ ಭಾಗ್ಯವನ್ನು ಪಡೆದಿವೆ. ಕುಡಿಯಲು ಗಡಸು ನೀರು ದೊರೆಯುವಲ್ಲಿ ‘ಶುದ್ಧಗಂಗಾ ಘಟಕ’ ಸ್ಥಾಪಿಸಿದ ಪರಿಣಾಮ ಅಲ್ಲಿನ ಮಂದಿಗೆ ಯೋಗ್ಯ ನೀರು ಕುಡಿಯಲು ಸಿಗುವಂತಾಯಿತು.
ಕೃಷಿ ಭೂಮಿಯ ಉಳುಮೆಗೆ ಕಾರ್ಮಿಕರ ಕೊರತೆ ಉಂಟಾದಾಗ ನಾನಾ ರೀತಿಯ ಯಂತ್ರಗಳನ್ನು ಪೂರೈಸುವ ‘ಕೃಷಿ ಯಂತ್ರಧಾರೆ’ ಕಾರ್ಯಕ್ರಮ ತಲೆಯೆತ್ತಿದರೆ, ಯುವಕ – ಯುವತಿಯರನ್ನು ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ‘ಸ್ವಉದ್ಯೋಗ’ ತರಬೇತಿಗಳೂ ಆರಂಭವಾದವು. ಸೂಕ್ತ ತರಬೇತಿ ಒದಗಿಸುವ ಸಲುವಾಗಿ ರಾಜ್ಯದ ಮೂರು ಕಡೆಗಳಲ್ಲಿ ‘ತರಬೇತಿ ಕೇಂದ್ರ’ಗಳು ಆರಂಭಗೊಂಡವು. ಇಲ್ಲಿ ಕೃಷಿ, ಹೈನುಗಾರಿಕೆ ಇತ್ಯಾದಿ ಸ್ವಉದ್ಯೋಗ ತರಬೇತಿಗಳನ್ನೂ ನೀಡಲಾಯಿತು.
ಅಕಸ್ಮಾತ್ತಾಗಿ ಎದುರಾಗುವ ಕಾಯಿಲೆಗಳಿಗಾಗಿ ‘ಸಂಪೂರ್ಣ ಸುರಕ್ಷಾ’, ‘ಆರೋಗ್ಯ ರಕ್ಷಾ’ ಎಂಬ ಬೇರೆ ಬೇರೆ ರೀತಿಯ ವಿಮಾ ಸೌಲಭ್ಯಗಳನ್ನು ಪರಿಚಯಿಸಲಾಯಿತು. ಇನ್ನು ಮನುಷ್ಯರಿಗೆ ಮಾತ್ರವಲ್ಲ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಸುಗಳಿಗೂ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ‘ಜ್ಞಾನತಾಣ’ ಕಾರ್ಯಕ್ರಮದಡಿ ಟ್ಯಾಬ್, ಲ್ಯಾಪ್‍ಟಾಪ್‍ಗಳ ವಿತರಣೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಸುಜ್ಞಾನ ನಿಧಿ’ ಶಿಷ್ಯವೇತನದ ಮೂಲಕ ವಿದ್ಯೆಗೆ ಪ್ರೋತ್ಸಾಹ ನೀಡಲಾಯಿತು. ‘ಜ್ಞಾನದೀಪ’ ಕಾರ್ಯಕ್ರಮದನ್ವಯ ಪೀಠೋಪಕರಣ, ಕ್ರೀಡಾ ಸಾಮಗ್ರಿ, ಬೋಧನಾ ಸಾಮಗ್ರಿ ಇತ್ಯಾದಿ ಅನೇಕ ಸೇವೆಗಳೊಂದಿಗೆ ಶಿಕ್ಷಕರನ್ನು ಒದಗಿಸುವ ಮಹತ್ತರ ಕಾರ್ಯವೂ ಕಾರ್ಯಗತವಾಗಿದೆ. ಹನ್ನೊಂದು ಸಾವಿರಕ್ಕೂ ಮಿಕ್ಕಿ ಬಡಕುಟುಂಬಗಳಿಗೆ ‘ಮಾಸಾಶನ’ ವಿತರಣೆ ಮಾಡುತ್ತಿದ್ದು, ತೀರಾ ಅಸಹಾಯಕ ಬಡ ಕುಟುಂಬಗಳನ್ನು ಸರ್ವೇ ಮೂಲಕ ಗುರುತಿಸಿ ಅವರಿಗೆ ಬೇಕಾದ ಜೀವನೋಪಯೋಗಿ ವಸ್ತುಗಳ ಜೊತೆಗೆ ಅವರ ಆರೋಗ್ಯ, ಊಟ, ವಸತಿ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುವುದಕ್ಕಾಗಿ ‘ವಾತ್ಸಲ್ಯ ಕಾರ್ಯಕ್ರಮ’ವನ್ನು ಆರಂಭಿಸಲಾಯಿತು. ಇತ್ತೀಚೆಗೆ ಆರಂಭಿಸಲಾದ ‘ಜನಮಂಗಲ’ ಕಾರ್ಯಕ್ರಮದಲ್ಲಿ ವಿಶೇಷಚೇತನರಿಗೆ ಮತ್ತು ಅಂತಹ ಅನೇಕ ಸಂಸ್ಥೆಗಳಿಗೆ ಸಲಕರಣೆ, ಸಹಾಯಧನ ವಿತರಣೆ ನಿರಂತರವಾಗಿ ನಡೆಯುತ್ತಿದೆ. ಕಳೆದ ವರ್ಷ ಕಾಡಿದ ನೆರೆ ಮತ್ತು ಕೊರೊನಾದಂತಹ ಪಿಡುಗಿನ ಸಂದರ್ಭದಲ್ಲಿ ತಕ್ಷಣ ಸಹಾಯಕ್ಕೆ ಧಾವಿಸಲು ಉತ್ಸಾಹಿ ಯುವಕರ ಅಗತ್ಯವಿತ್ತು. ಆಗ ಮೂಡಿಬಂದದ್ದೇ ‘ಶೌರ್ಯ’. ಈ ಶೌರ್ಯ ತಂಡಕ್ಕೆ ಸೇರಿದ ಯುವಕರನ್ನು ನಾನಾ ರೀತಿಯಲ್ಲಿ ತರಬೇತಿಗೊಳಿಸಿ ‘ವಿಪತ್ತು ನಿರ್ವಹಣಾ ಸಮಿತಿ’ಯನ್ನು ರಚಿಸಲಾಯಿತು.
ಊರವರ ಸಹಕಾರದೊಂದಿಗೆ ತಮ್ಮ ಬದುಕಿನ ಕೊನೆಯ ಪಯಣವನ್ನು ತೀರಿಸುವ ಹಿಂದೂ ರುದ್ರಭೂಮಿಗಳು ಸ್ವಚ್ಛವಾಗಿ ಎಲ್ಲಾ ಅನುಕೂಲತೆಗಳನ್ನು ಒಳಗೊಳ್ಳುವಂತೆ ಆಗಿದೆ. ಇನ್ನು ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮಗಳೊಂದಿಗೆ ಅರಣ್ಯದಲ್ಲಿ ಕಾಡುಹಣ್ಣಿನ ಗಿಡಗಳನ್ನು ಬೆಳೆಸುವ ಕಾರ್ಯಕ್ರಮವೂ ನಡೆಯುತ್ತಿದೆ.
ಮನುಷ್ಯನ ಆಧ್ಯಾತ್ಮಿಕ ಉನ್ನತಿಗೆ ಶ್ರದ್ಧಾಕೇಂದ್ರಗಳು ಬೇಕು. ಮಾತ್ರವಲ್ಲ ಅವು ಸ್ವಚ್ಛವಾಗಿರಬೇಕೆಂಬ ನಿಟ್ಟಿನಲ್ಲಿ ‘ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ’ವೂ ವರ್ಷದಲ್ಲಿ ಎರಡು ಬಾರಿಯಂತೆ ನಡೆಯುತ್ತದೆ. ಜನರ ಕಲ್ಯಾಣ ಆಗಬೇಕಾದರೆ ಗ್ರಾಮಗಳ ಕಲ್ಯಾಣವೂ ಆಗಬೇಕು. ಆ ನಿಟ್ಟಿನಲ್ಲಿ ‘ಗ್ರಾಮ ಕಲ್ಯಾಣ ಯೋಜನೆ’ಯಡಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ, ಅಂಗನವಾಡಿ, ಆರೋಗ್ಯ ಉಪಕೇಂದ್ರ, ಕಟ್ಟಡ ರಚನೆ, ಗ್ರಂಥಾಲಯ, ಸಮುದಾಯ
ಭವನ, ಭಜನಾ ಮಂದಿರ, ಯುವಕ ಮಂಡಲ ಇತ್ಯಾದಿ ಅನೇಕ ಕಟ್ಟಡ ಕಾಮಗಾರಿಗಳಿಗೂ ಸಹಾಯ ನೀಡಲಾಗುತ್ತದೆ.
ಭೃಗು ಋಷಿಯ ಕಮಂಡಲದಲ್ಲಿ ಸಿಕ್ಕಿದ ಮೀನು ಸ್ವಲ್ಪ ಬೆಳೆದು ತನ್ನನ್ನು ವಿಶಾಲ ಜಾಗದಲ್ಲಿ ಬಿಡುವಂತೆ ಹೇಳುತ್ತದೆ. ಹಾಗೆ ಕಮಂಡಲದಿಂದ ಬಾವಿಗೆ, ಬಾವಿಯಿಂದ ಕೆರೆ, ಸರೋವರ, ಕೊನೆಗೆ ಸಮುದ್ರಕ್ಕೆ ಹಾಕುವವರೆಗೂ ಮೀನು ಬೆಳೆಯುತ್ತಿತ್ತಂತೆ. ಹಾಗೇ ನಮ್ಮ ಯೋಜನೆ ಸಣ್ಣದಾಗಿ ಹುಟ್ಟ್ಟಿ ವಿಸ್ತಾರವಾಗುತ್ತಾ ಬೆಳೆಯುತ್ತಿರುವುದೇ ಸಂತೋಷದ ವಿಚಾರ.
‘ಗ್ರಾಮಾಭಿವೃದ್ಧಿ ಯೋಜನೆ’ ಎಂಬ ಈ ‘ಕಲ್ಪವೃಕ್ಷ’ ಮತ್ತಷ್ಟು ಬೆಳೆದು ತನ್ನ ರೆಂಬೆಕೊಂಬೆಗಳನ್ನು ಚಾಚಲಿ, ಆ ಮೂಲಕ ಗ್ರಾಮೀಣ ಬದುಕಿನಲ್ಲಿ ಕ್ಷೇಮ, ನೆಮ್ಮದಿಗಳು ಶಾಶ್ವತವಾಗಿ ನೆಲೆಗೊಳ್ಳಲೆಂಬುದೇ ನಮ್ಮೆಲ್ಲರ ಹಾರೈಕೆ.