ಸ್ವಾತಂತ್ರ್ಯ ಹಕ್ಕಲ್ಲ ಅದು ಜವಾಬ್ದಾರಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದೀಗ ಸ್ವಾತಂತ್ರೋತ್ಸವದ 25 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ನಮಗೆ ದೊರೆತ ಸ್ವಾತಂತ್ರ್ಯ ಸುಲಭವಾಗಿ ಬಂದAತದ್ದಲ್ಲ. ಇದು ಸಹಸ್ರಾರು ಜನರ ಬಲಿದಾನಕ್ಕೆ ಸಂದ ಗೌರವ. ನಾವು ಇಂದು ಅನುಭವಿಸುತ್ತಿರುವ ಈ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಶತಮಾನಗಳ ಕಾಲ ಹೋರಾಡಿ ಸುಖ, ನೆಮ್ಮದಿ, ಪ್ರಾಣ, ಆಸ್ತಿ – ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ನಾವು ಎಂದಿಗೂ ಮರೆಯಬಾರದು.
ಸ್ವಾತಂತ್ರ್ಯ ಹೋರಾಟಗಾರರಲ್ಲಿ ಧೈರ್ಯ, ಛಲದೊಂದಿಗೆ ತಮ್ಮ ಮುಂದಿನ ಜನಾಂಗ ನೆಮ್ಮದಿಯಿಂದ ಬದುಕಬೇಕೆಂಬ ಮುಂದಾಲೋಚನೆ ಇತ್ತು. ಅದಕ್ಕಾಗಿ ಆ ದಿನಗಳಲ್ಲೇ ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸುವ ನಿರ್ಧಾರವನ್ನು ಕೈಗೊಂಡು ಅದರಲ್ಲಿ ಯಶಸ್ವಿಯೂ ಆದರು. ಹೀಗೆ ಸಾವಿರಾರು ಮಂದಿಯ ತ್ಯಾಗದ ಪರಿಣಾಮ ದೊರೆತ ಸ್ವಾತಂತ್ರ್ಯನಮಗೆಲ್ಲರಿಗೂ ಜವಾಬ್ದಾರಿಯುತ ಬದುಕನ್ನು ನಿರ್ವಹಿಸಲು ಪ್ರೇರಣೆಯನ್ನು ನೀಡಬೇಕು. ಸ್ವಾತಂತ್ರ್ಯ ದಿನಾಚರಣೆ ಎಂಬುದು ಕೇವಲ ಸಂಭ್ರಮಾಚರಣೆಗಷ್ಟೇ ಸೀಮಿತವಾಗಬಾರದು. ಬದಲಾಗಿ ಹಿರಿಯರ ತ್ಯಾಗವನ್ನು ನೆನಪಿಸಿಕೊಂಡು ವ್ಯಕ್ತಿ, ಜಾತಿ, ಪಕ್ಷಪಾತಕ್ಕಿಂತ ರಾಷ್ಟ್ರ ಮುಖ್ಯವೆಂದು ನಾವು ಸನ್ಮಾರ್ಗದಲ್ಲಿ ಮುನ್ನಡೆಯಲು ಪ್ರೇರಣೆ ಪಡೆಯುವ ದಿನವಾಗಿದೆ.
ಸ್ವತಂತ್ರ ಭಾರತದಲ್ಲಿ ಬದುಕುವ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ಹಕ್ಕು – ಕರ್ತವ್ಯಗಳಿವೆ. ಅವುಗಳನ್ನು ಪಾಲಿಸಿಕೊಂಡು ಬದುಕಿದರೆ ಸಾಮರಸ್ಯದ ಬದುಕನ್ನು ನಾವು ನಿರೀಕ್ಷಿಸಬಹುದಾಗಿದೆ. ಇದೀಗ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಗತ್ಯವಿಲ್ಲ. ಆದರೂ ಬೇರೆ ಬೇರೆ ವಿಷಯಗಳಿಗೆ, ಬೇಡಿಕೆಗಳಿಗೆ ಸಂಬoಧಿಸಿದoತೆ ಆಗಾಗ ಹೋರಾಟಗಳು ನಡೆಯುತ್ತಿರುತ್ತವೆ. ಈ ಅವಕಾಶಗಳನ್ನು ಸ್ವಾತಂತ್ರ್ಯ ನಮಗೆ ನೀಡಿದೆ. ಆದರೆ ದೇಶದೊಳಗೆ ನಡೆಯುವ ಯಾವುದೇ ಹೋರಾಟಗಳು ಸಂವಿಧಾನಬದ್ಧವಾಗಿ ಇರಬೇಕೆ ಹೊರತು ನಮ್ಮ ದೇಶದ ಆಸ್ತಿ, ಪಾಸ್ತಿಗಳಿಗೆ ನಷ್ಟವನ್ನುಂಟು ಮಾಡಿ ದೇಶ ಧಗಧಗಿಸುವಂತೆ ಇರಬಾರದು. ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಗೂ ಪ್ರಶ್ನಿಸುವ ಹಕ್ಕು ಇದೆ. ಹಾಗೆಂದು ಪ್ರಶ್ನಿಸುವ ವಿಧಾನ ದೇಶದ ಕಾನೂನು ಚೌಕಟ್ಟನ್ನು ಮೀರಿ ಹೋಗಬಾರದು ಅಷ್ಟೇ. ಒಂದು ವೇಳೆ ಹಾಗೆ ನಡೆದುಕೊಂಡಲ್ಲಿ ನಾವು ನಮ್ಮ ಪೂರ್ವಜರಿಗೆ ಅವಮಾನ ಮಾಡಿದಂತೆ.
ಇಂದಿನ ಯುವಜನತೆ ತಮ್ಮ – ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಜಾತಿ, ಧರ್ಮ, ಪಂಥಗಳ ಗೋಡೆಗಳನ್ನು ತೊರೆದು ಸಮಾನತೆಯಿಂದ, ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕಿದೆ. ಇತರರಿಗೆ ಕಲಿಸಬೇಕಿದೆ. ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಮುಯ್ಯಿಗೆ ಮುಯ್ಯಿ’ ಎಂಬ ಹಿಟ್ಲರ್‌ನ ತತ್ವದಡಿ ಬೆಳೆದು ಬಂದ ಸಂಸ್ಕೃತಿ ನಮ್ಮದಲ್ಲ. ಯಾವುದೇ ಅಹಿತಕರ ಘಟನೆಗಳು ನಡೆದಾಗ ಅಹಿಂಸಾತ್ಮಕ ಪ್ರತಿಭಟನೆಗಳನ್ನು ಮಾಡುವುದು, ಸಾರ್ವಜನಿಕ ಆಸ್ತಿ – ಪಾಸ್ತಿಗಳನ್ನು ನಷ್ಟ ಮಾಡುವುದು ಶೋಭೆಯಲ್ಲ.
ಇತ್ತೀಚಿನ ದಿನಗಳಲ್ಲಿ ನಡೆಯುವ ಹಿಂಸಾತ್ಮಕ ಕೆಲಸಗಳಲ್ಲಿ ಹೆಚ್ಚಾಗಿ ಯುವಕರೇ ಭಾಗಿಯಾಗುತ್ತಿರುವುದು ಬೇಸರದ ಸಂಗತಿ. ಹಾಗಾದರೆ ನಮ್ಮ ಮಕ್ಕಳು ಎಲ್ಲಿ ದಾರಿ ತಪ್ಪಿದ್ದಾರೆ, ನಾವು ಅವರಿಗೆ ಯಾವ ರೀತಿಯ ಶಿಕ್ಷಣವನ್ನು ನೀಡಿದ್ದೇವೆ, ನೀಡುತ್ತಿದ್ದೇವೆ. ಒಂದು ವೇಳೆ ಉತ್ತಮವಾದ ಶಿಕ್ಷಣವನ್ನು ನೀಡಿದ್ದರೂ ಅವರು ಯಾಕೆ ಹೀಗಾದರು? ಅವರ ಮೇಲೆ ಪ್ರಭಾವ ಬೀರಿದ, ಬೀರುತ್ತಿರುವ ಅಂಶಗಳು ಯಾವುವು ಎಂಬುದನ್ನು ಗಂಭೀರವಾಗಿ ಯೋಚಿಸಿ ಮಕ್ಕಳನ್ನು ಸರಿದಾರಿಗೆ ತರುವ ಕೆಲಸವನ್ನು ಹೆತ್ತವರು, ಶಿಕ್ಷಕರು ಮಾಡಬೇಕಾಗಿದೆ. ಮದ್ಯಪಾನ, ಅಮಲು ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿ ದುಶ್ಚಟಮುಕ್ತ ಸಮಾಜವನ್ನು ನಿರ್ಮಿಸುವ ಪ್ರಯತ್ನವನ್ನು ಗ್ರಾಮಾಭಿವೃದ್ಧಿ ಯೋಜನೆಯು ಜನಜಾಗೃತಿ ವೇದಿಕೆಯಡಿ ಸ್ವಾತಂತ್ರ್ಯಸಂಕಲ್ಪ ಎಂಬ ಕಾರ್ಯಕ್ರಮದ ಮೂಲಕ ಮಾಡುತ್ತಿದೆ. ಇಂತಹ ಕೆಲಸಗಳತ್ತ ಹೆಚ್ಚಿನ ಸಂಘ – ಸಂಸ್ಥೆಗಳು ಒಲವು ತೋರಬೇಕಾಗಿದೆ.
ನಾವು ಮಕ್ಕಳಿಗೆ ಚಿಕ್ಕಂದಿನಲ್ಲೇ ನಮ್ಮ ಸಂಸ್ಕೃತಿ, ನಮ್ಮ ದೇಶದ ಆಚಾರ – ವಿಚಾರ, ಸಹಬಾಳ್ವೆಯ ಬಗ್ಗೆ ತಿಳಿಹೇಳೋಣ. ಹಾಗಾದಾಗ ನಮ್ಮ ಮಕ್ಕಳು, ಮೊಮ್ಮಕ್ಕಳು ನಮ್ಮನ್ನು ಗೌರವಿಸುತ್ತಾರೆ. ಗುರುತಿಸುತ್ತಾರೆ. ಪಡೆದ ಸ್ವಾತಂತ್ರ್ಯವನ್ನು ನಾವು ಹೇಗೆ ಬಳಸಿಕೊಂಡಿದ್ದೇವೆ. ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಬದುಕು ನಿಂತಿರುತ್ತದೆ.
ಸರಕಾರಗಳು ಜಾರಿಗೆ ತರುವ ಯೋಜನೆಗಳ ಪ್ರಯೋಜನವನ್ನು ಪಡೆಯೋಣ. ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘ – ಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮದಲ್ಲಿ ಕೈಜೋಡಿಸೋಣ. ಮುಂದಿನ ಜನಾಂಗಕ್ಕೆ ಈ ಭೂಮಿಯನ್ನು ಸುಂದರವಾಗಿಸೋಣ. ಇದು ನಾವು ಸ್ವತಂತ್ರ ಭಾರತಕ್ಕೆ ನೀಡುವ ದೊಡ್ಡ ಕೊಡುಗೆಯಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates