ಯೋಜನೆಯ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ ಸಿ.ಸಿ. ಖಾತೆ ವ್ಯವಸ್ಥೆಯಿಂದ ಸಿಗುವ ಪ್ರಯೋಜನಗಳು

ಹಿಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‌ಗಳಿಗೆ ಅಧಿಕೃತ ಬಿ.ಸಿ. ಸಂಸ್ಥೆಯಾಗಿ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಗ್ರಾಮೀಣ ಬಡಜನರಿಗೆ ಬ್ಯಾಂಕ್‌ನಿoದ ಆರ್ಥಿಕ ಸೌಲಭ್ಯವನ್ನು ಒದಗಿಸುತ್ತಿರುವ ಬಗ್ಗೆ ತಿಳಿಸಲಾಗಿತ್ತು. ಈ ಬಾರಿ ಸ್ವಸಹಾಯ ಸಂಘಗಳಿಗೆ ಯೋಜನೆಯ ವ್ಯವಸ್ಥೆಯಲ್ಲಿ ಬ್ಯಾಂಕ್‌ನಿoದ ಸಿಗುವ ವಿಶೇಷ ‘ಆಂತರಿಕ ಸಾಲ’ ಸೌಲಭ್ಯದ ಬಗ್ಗೆ ತಿಳಿದುಕೊಳ್ಳೋಣ.
ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿ ನೂತನವಾಗಿ ರಚನೆಗೊಂಡ ಸ್ವಸಹಾಯ ಸಂಘಗಳಿಗೆ ನಿರಂತರ ತರಬೇತಿಯನ್ನು ನೀಡಿ ಅವುಗಳನ್ನು ಪ್ರಬುದ್ಧ ಸಂಘಗಳನ್ನಾಗಿ ಮಾಡಲಾಗುತ್ತದೆ. ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸಲಾಗುತ್ತದೆ. ನಂತರ ಆ ಸಂಘಗಳನ್ನು ಗ್ರೇಡಿಂಗ್‌ಗೊಳಪಡಿಸಿ ಉತ್ತಮ ಗ್ರೇಡಿಂಗ್ ಇರುವ ಸಂಘಗಳಿಗೆ ಬ್ಯಾಂಕ್‌ನಲ್ಲಿ ಸಿ.ಸಿ. ಖಾತೆ ತೆರೆಯುವಲ್ಲಿ ಯೋಜನೆಯಿಂದ ಶಿಫಾರಸ್ಸು ಮಾಡಲಾಗುವುದು. ಬ್ಯಾಂಕ್‌ನ ಬಿ.ಸಿ. ಒಪ್ಪಂದದ ಪ್ರಕಾರ ಯಾವ ಸಂಘವನ್ನು ಸ್ಥಾಪಿಸಿ ಪ್ರಬುದ್ಧಗೊಳಿಸಿ ಬ್ಯಾಂಕ್‌ನ ಸಾಲದ ವ್ಯವಸ್ಥೆಗೆ ಶಿಫಾರಸ್ಸನ್ನು ನೀಡುತ್ತಿದೆಯೋ ಆ ಸಂಘಗಳಿಗೆ ಬ್ಯಾಂಕ್‌ಗಳು ನೇರವಾಗಿ ಸಾಲವನ್ನು ನೀಡುತ್ತವೆ. ಸಂಘದ ಪದಾಧಿಕಾರಿಗಳ ಹಾಗೂ ಎಲ್ಲಾ ಸದಸ್ಯರ ಸಹಿಯೊಂದಿಗೆ ಕಾನೂನುಬದ್ಧವಾದ ಸಾಲದ ಅರ್ಜಿಗಳನ್ನು (loan documents) ಯೋಜನೆಯ ಮೂಲಕ ಪಡೆದುಕೊಳ್ಳುತ್ತದೆ. ನಂತರ ಆ ಸ್ವಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್‌ನ ನಿಗದಿತ ಶಾಖೆಯಿಂದ ‘ಕ್ಯಾಶ್ ಕ್ರೆಡಿಟ್’ ಸಾಲದ ಖಾತೆಯನ್ನು ತೆರೆಯಲಾಗುತ್ತದೆ. ‘ಕ್ಯಾಶ್ ಕ್ರೆಡಿಟ್’ ಸಾಲದ ವ್ಯವಸ್ಥೆಯನ್ನು ಓವರ್‌ಡ್ರಾಫ್ಟ್ ಸಾಲದ ವ್ಯವಸ್ಥೆ ಎಂದೂ ಕರೆಯಬಹುದು. ಇದು ಸ್ವಸಹಾಯ ಸಂಘಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅವುಗಳಲ್ಲಿ ಮುಖ್ಯವಾದ ಪ್ರಯೋಜನಗಳೆಂದರೆ,
1. ಸಿ.ಸಿ. ಖಾತೆಗಳಿಗೆ ಸಂಘದ ಉಳಿತಾಯವನ್ನು ಜಮೆ ಮಾಡಲು ಅವಕಾಶ ಇರುವುದರಿಂದ ಸಂಘದ ಉಳಿತಾಯವನ್ನು ಆಂತರಿಕ ವ್ಯವಹಾರಗಳಿಗೆ ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಆಂತರಿಕ ವ್ಯವಹಾರಕ್ಕೆ ಬಳಸಿಕೊಂಡ ನಂತರ ಇನ್ನೂ ಹೆಚ್ಚಿನ ಮೊತ್ತದ ಅಗತ್ಯತೆ ಇದ್ದಲ್ಲಿ ಮಾತ್ರ ಬ್ಯಾಂಕ್‌ನಿoದ ಸಾಲದ ಮೊತ್ತ ಬಿಡುಗಡೆ ಆಗುತ್ತದೆ. ಆಗ ಬ್ಯಾಂಕ್‌ನ ಸಾಲದ ಮೊತ್ತಕ್ಕೆ ಮಾತ್ರ ಬಡ್ಡಿ ಬೀಳುತ್ತದೆ. ಒಟ್ಟು ಸಾಲದ ಮೊತ್ತಕ್ಕೆ ಅಲ್ಲ. ಉದಾ : ಒಂದು ಸಂಘದಲ್ಲಿ ಆಂತರಿಕ ಉಳಿತಾಯ ರೂ. 50 ಸಾವಿರ ಇದ್ದರೆ ಆ ಮೊತ್ತವು ಸಂಘದ ಸಿ.ಸಿ. ಖಾತೆಗೆ ಜಮೆಯಾಗುತ್ತದೆ. ಉಳಿತಾಯದ ಮೊತ್ತವೇ ಸಂಘದ ಮೊದಲನೇ ಸಾಲಕ್ಕೆ ಬಿಡುಗಡೆಯಾಗುತ್ತದೆ. ರೂ. 50 ಸಾವಿರ ಉಳಿತಾಯ ಇರುವ ಈ ಸಂಘದಲ್ಲಿ ಒಂದು ವೇಳೆ ರೂ. 1ಲಕ್ಷ ಸಾಲವನ್ನು ಸಿ.ಸಿ. ಖಾತೆಯಿಂದ ಪಡೆದರೆ ಆಗ ರೂ. 50 ಸಾವಿರ ಉಳಿತಾಯದ ಮೊತ್ತದಿಂದ ಆಂತರಿಕ ವ್ಯವಹಾರದ ರೂಪದಲ್ಲಿ ಬಿಡುಗಡೆಯಾಗುತ್ತದೆ. ಕೇವಲ ಉಳಿದ ರೂ. ೫೦ ಸಾವಿರ ಮಾತ್ರ ಬ್ಯಾಂಕ್‌ನ ಸಾಲದ ರೂಪದಲ್ಲಿ ಬಿಡುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ಮರುಪಾವತಿಯಾಗುವಾಗ ಸದಸ್ಯರಿಂದ ಪಡೆದ ಬಡ್ಡಿ ಮೊತ್ತದಲ್ಲಿ ರೂ. 50 ಸಾವಿರಕ್ಕೆ ಸಂಬoಧಿಸಿದ ಬಡ್ಡಿಯ ಮೊತ್ತವು ಸಂಘದ ಉಳಿತಾಯಕ್ಕೆ ಸಿಗಬೇಕಾಗಿರುವುದರಿಂದ ಅದು ಸಂಘದ ಆಂತರಿಕ ಲಾಭಾಂಶವಾಗಿ ಸಂಘದ ಸಿ.ಸಿ. ಖಾತೆಗೆ ಜಮೆಯಾಗುತ್ತದೆ. ಉಳಿದ ಬ್ಯಾಂಕ್‌ನ ರೂ. 50 ಸಾವಿರಕ್ಕೆ ಸಂಬoಧಿಸಿದ ಬಡ್ಡಿಯು ಬ್ಯಾಂಕಿಗೆ ಹೋಗುತ್ತದೆ. ಇಲ್ಲಿ ರೂ. 1 ಲಕ್ಷ ಸಾಲ ಆದರೂ, ಬ್ಯಾಂಕ್‌ನಲ್ಲಿರುವ ಸಂಘದ ಸಿ.ಸಿ. ಖಾತೆಯಲ್ಲಿ ರೂ. 50 ಸಾವಿರ ಮಾತ್ರ ಹೊರಬಾಕಿ ಇರುತ್ತದೆ. ಆದರೆ ಸಂಘದ ಸಾಲದ ಹೊರಬಾಕಿ ಮೊತ್ತ ರೂ. 1 ಲಕ್ಷ ಆಗಿರುತ್ತದೆ. ಏಕೆಂದರೆ, ಸಂಘದ ಉಳಿತಾಯದ ಮೊತ್ತವಾದ ರೂ. 50 ಸಾವಿರವನ್ನು ಆಂತರಿಕ ಸಾಲವಾಗಿ ತನ್ನ ಸದಸ್ಯರಿಗೆ ನೀಡಿರುವುದು. ಸಂಘದ ಉಳಿತಾಯವನ್ನು ಸಿ.ಸಿ. ಖಾತೆಗೆ ಬ್ಯಾಂಕ್‌ನ ವ್ಯವಸ್ಥೆಯಲ್ಲಿಯೇ ಜಮೆ ಮಾಡುವ ವಿಶೇಷ ಅವಕಾಶವನ್ನು ಈ ವ್ಯವಸ್ಥೆಯಲ್ಲಿ ನೀಡಿರುವುದಲ್ಲದೇ ಆಂತರಿಕ ಸಾಲಕ್ಕೆ ಅದನ್ನು ಬಳಕೆ ಮಾಡಿ, ಅದರಿಂದ ಸ್ವೀಕರಿಸಿದ ಬಡ್ಡಿ ಮೊತ್ತವನ್ನು ಸಂಘದ ಆದಾಯ(ಲಾಭಾಂಶ) ಆಗಿ ಪಡೆದುಕೊಳ್ಳುವಂತಹ ವಿಶೇಷ ವ್ಯವಸ್ಥೆಯು ಸಂಘದ ಸಿ.ಸಿ. ಖಾತೆಯಲ್ಲಿ ಇರುತ್ತದೆ.
2. ಸಿ.ಸಿ. ಖಾತೆಯು ಒಂದು ಆವರ್ತನ ಸಾಲದ ವ್ಯವಸ್ಥೆ ಆಗಿರುತ್ತದೆ. ಈ ವ್ಯವಸ್ಥೆಯಲ್ಲಿ ಸಂಘದ ಕ್ರಿಯಾಶೀಲ ಅಸ್ತಿತ್ವದ ಆಧಾರದ ಮೇಲೆ ಯೋಜನೆಯ ಶಿಫಾರಸ್ಸಿನೊಂದಿಗೆ ಗರಿಷ್ಠ ಸಾಲದ ಮಿತಿಯನ್ನು ನೀಡಲಾಗುತ್ತದೆ. ಸಂಘದ ಕ್ರಿಯಾಶೀಲ ಅಸ್ತಿತ್ವ ಜಾಸ್ತಿ ವರ್ಷಗಳು ಆದಂತೆ (maturity) ಸಿ.ಸಿ. ವ್ಯವಸ್ಥೆಯಲ್ಲಿ ಸಾಲದ ಮಿತಿಯ ಮೊತ್ತವನ್ನು ಬ್ಯಾಂಕ್ ಹೆಚ್ಚಿಸುತ್ತಾ ಹೋಗುತ್ತದೆ. ಇದು ಹೆಚ್ಚು ಸಮಯದವರೆಗೆ ನಡೆಸಿಕೊಂಡು ಬರುವಂತಹ ಉತ್ತಮ ಗ್ರೇಡಿಂಗ್‌ನ ಸಂಘಗಳಿಗೆ ಹೆಚ್ಚು ಹೆಚ್ಚು ಸಾಲ ಸಿಗಲು ಅವಕಾಶವಾಗುತ್ತದೆ. ಯೋಜನೆಯ ಶಿಫಾರಸ್ಸಿನೊಂದಿಗೆ ಪ್ರಾರಂಭದಲ್ಲಿ ಸಂಘಗಳಿಗೆ ರೂ. ೩ ಲಕ್ಷ, ನಂತರ ರೂ. 5 ಲಕ್ಷ, ರೂ. 10 ಲಕ್ಷ, ರೂ. 15 ಲಕ್ಷ ಹಾಗೂ ರೂ. 25 ಲಕ್ಷದವರೆಗೆ ಸಂಘಗಳ ಕ್ರಿಯಾಶೀಲ ಅಸ್ತಿತ್ವ ಮತ್ತು ಪ್ರಬುದ್ಧತೆಯ ಆಧಾರದ ಮೇಲೆ ಸಾಲದ ಮಿತಿಯನ್ನು ನೀಡಲಾಗಿದೆ. ಯೋಜನೆಯ ಪ್ರಾಯೋಜಿತ ಸ್ವಸಹಾಯ ಸಂಘಗಳಿಗೆ ಯಾವುದೇ ಆಸ್ತಿ ಅಡಮಾನ ಇಲ್ಲದೇ ರೂ. ೨೫ ಲಕ್ಷದವರೆಗೆ ಬ್ಯಾಂಕ್ ಸಾಲ ನೀಡುತ್ತಿರುವುದು ಒಂದು ದಾಖಲೆಯೇ ಸರಿ. ಒಂದು ವೇಳೆ ಸಂಘಗಳಿಗೆ ಸಿ.ಸಿ. ಖಾತೆಯ ಬದಲಾಗಿ ಅವಧಿ ಸಾಲ (Term loan) ಮಾಡಿದ್ದಲ್ಲಿ, ಬ್ಯಾಂಕ್ ಒಮ್ಮೆ ನಿಗದಿಪಡಿಸಿದ ಮೊತ್ತ ಮಾತ್ರ ಒಮ್ಮೆ ಸಿಗುತ್ತಿತ್ತು. ಹೆಚ್ಚುವರಿ ಸಾಲ ಬೇಕಾಗಿದ್ದಲ್ಲಿ, ಪುನಃ loan documentಗಳನ್ನು ಮಾಡಿ ಅರ್ಹತೆಗಳನ್ನು ಪರಿಶೀಲಿಸಿ, ಹೊಸ ಸಾಲದ ಇನ್ನೊಂದು ಅವಧಿ ಸಾಲವನ್ನು ನೀಡಬೇಕಾಗಿತ್ತು. ಅಲ್ಲದೆ ಸಿ.ಸಿ. ಖಾತೆಯ ವ್ಯವಸ್ಥೆಯಲ್ಲಿ ಕೇವಲ ಒಂದು ಸಾಲದ ಖಾತೆಯ ಸಂಖ್ಯೆಯಿoದ ಆರಂಭದ ರೂ. 3 ಲಕ್ಷ ಮಿತಿಯಿಂದ ರೂ. 2 ಲಕ್ಷದ ಮಿತಿಯವರೆಗೂ ಸಂಘ ನಿರ್ವಹಿಸಿಕೊಂಡು ಹೋಗಬಹುದಾಗಿದೆ. ಇನ್ನುಳಿದ ಪ್ರಯೋಜನಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *