ಸಿ.ಸಿ.ಖಾತೆ ವ್ಯವಸ್ಥೆಯಿಂದ ಸಿಗುವ ಪ್ರಯೋಜನಗಳು

ಹಿಂದಿನ ಸಂಚಿಕೆಯಲ್ಲಿ ಸಿ.ಸಿ.ಖಾತೆಯ ಎರಡು ಪ್ರಮುಖ ಪ್ರಯೋಜನಗಳ ಕುರಿತು ತಿಳಿಸಲಾಗಿತ್ತು. 1. ಆಂತರಿಕ ಉಳಿತಾಯವನ್ನು ಆಂತರಿಕ ವ್ಯವಹಾರಕ್ಕೆ ಅವಕಾಶ. 2. ಯಾವುದೇ ಹೆಚ್ಚು ದಾಖಲೆಗಳಿಲ್ಲದೆ ನಿರಂತರವಾಗಿ ಸಾಲ ಸೌಲಭ್ಯ ಮುಂದುವರಿದ ಪ್ರಯೋಜನಗಳು ಈ ಕೆಳಗಿನಂತಿವೆ.
3. ಸಾಮಾನ್ಯವಾಗಿ ಬ್ಯಾಂಕ್‌ಗಳು ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡುವಾಗ ಉಳಿತಾಯದ ಐದಾರು ಪಟ್ಟನ್ನು ನೀಡುವುದು ವಾಡಿಕೆಯಿದೆ. ಆದರೆ ಯೋಜನೆಯ ವ್ಯವಸ್ಥೆಯಲ್ಲಿ ಬ್ಯಾಂಕುಗಳು ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಈ ನಿಯಮ ವಿಧಿಸಿದ್ದರೆ ನಮ್ಮ ಸಂಘಗಳಿಗೆ ದೊಡ್ಡ ಪ್ರಮಾಣದ ಸಾಲ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಆಂತರಿಕ ಉಳಿತಾಯದ ಐದಾರು ಪಟ್ಟು ಸಾಲ ನೀಡುವುದಾಗಿದ್ದಲ್ಲಿ, ಉಳಿತಾಯದ ಮೊತ್ತ ರೂ. 50 ಸಾವಿರ ಇದ್ದಲ್ಲಿ ರೂ. 2.50 ಲಕ್ಷದಿಂದ ರೂ. 3 ಲಕ್ಷದವರೆಗೆ ಗರಿಷ್ಠ ಸಾಲ ಸಿಗುತ್ತಿತ್ತು. ಆದರೆ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿರುವ ಸಂಘಗಳಿಗೆ ರೂ. 50 ಸಾವಿರ ಉಳಿತಾಯ ಇದ್ದರೂ ರೂ. 25 ಲಕ್ಷದಷ್ಟು ಮೊತ್ತದ ಸಾಲ ಪ್ರಬುದ್ಧತೆಯ ಆಧಾರದ ಮೇಲೆ ಸಿಗುತ್ತದೆ. ಇದು ಆಂತರಿಕ ಉಳಿತಾಯದ 50 ಪಟ್ಟೂ ಆಗಿರಬಹುದು.
4. ಯೋಜನೆಯ ಸಿ.ಸಿ. ಖಾತೆ ಒಂದು ಆವರ್ತನ ಸಾಲದ ವ್ಯವಸ್ಥೆ ಆಗಿರುವುದರಿಂದ ಸಂಘದ ಸದಸ್ಯರಿಗೆ ಸಾಲದ ಅಗತ್ಯಾನುಸಾರ ಯಾವುದೇ ಸಮಯದಲ್ಲಿ ಬೇಕಾದರೂ ಸಾಲ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ ಸದಸ್ಯರಿಗೆ ಯಾವುದಾದರೂ ಒಮ್ಮೆಲೇ ಆದಾಯ ಬರುವಂತಹ ಸಂದರ್ಭವಿದ್ದಲ್ಲಿ, ತಮ್ಮ ಸಾಲಗಳನ್ನು ಒಮ್ಮೆಲೆ ಕಟ್ಟಿ ಮುಕ್ತಾಯ ಮಾಡಿ ಬಡ್ಡಿಯ ವೆಚ್ಚವನ್ನು ತಪ್ಪಿಸಬಹುದಾಗಿದೆ. ಮುಂದೆ ಅಗತ್ಯ ಇದ್ದಾಗ ಸಂಘದಿoದ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
5. ಸಾಲ ಪಡೆಯಲು ಎಲ್ಲಾ ಸದಸ್ಯರಿಗೆ ಅವಕಾಶ : ಸಿ.ಸಿ. ಖಾತೆಯಿಂದ ಸಂಘಗಳು ಸದಸ್ಯರಿಗೆ ಸಾಲ ನೀಡಿದಾಗ ವಾರದ ಕಂತಿನ ರೂಪದಲ್ಲಿ ಸದಸ್ಯರು ಮರುಪಾವತಿ ಮಾಡಿದಂತೆಲ್ಲ ಸಂಘಕ್ಕೆ ಹೆಚ್ಚುವರಿ ಲಿಮಿಟ್ ಲಭ್ಯವಾಗುತ್ತಾ ಹೋಗುತ್ತದೆ. ಹೀಗೆ ಸಾಲ ಪಡೆದ ಎಲ್ಲಾ ಸದಸ್ಯರು ವಾರದ ಕಂತಿನಲ್ಲಿ ಮರುಪಾವತಿ ಮಾಡಿದಾಗ ಬಹಳ ಬೇಗನೆ ಲಿಮಿಟ್‌ನ ಲಭ್ಯತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಸಾಲ ಪಡೆಯದೇ ಇರುವ ಸದಸ್ಯರು ಸಂಘದಿoದ ಸಾಲ ಪಡೆಯಬಹುದಾಗಿದೆ. 6. ಸಿ.ಸಿ.ಖಾತೆಯಲ್ಲಿ ವಾರದ ಮರುಪಾವತಿಗೆ ಸುಲಭ ಅವಕಾಶ ಹಾಗೂ ಸಾಲದ ವಾರದ ಮರುಪಾವತಿಯಿಂದಾಗುವ ಲಾಭಗಳು : ಬ್ಯಾಂಕುಗಳು ಸಂಘಗಳಿಗೆ ಸಿ.ಸಿ. ಖಾತೆಯ ವಿಶೇಷ ಸೌಲಭ್ಯ ನೀಡಿರುವುದರಿಂದ ವಾರದ ಕಂತು ಮರುಪಾವತಿಯ ಬಹಳ ದೊಡ್ಡ ಪ್ರಯೋಜನವನ್ನು ಸಂಘದ ಸದಸ್ಯರು ಇಂದು ಪಡೆಯುವಂತಾಗಿದೆ. ಒಂದು ವೇಳೆ ಬ್ಯಾಂಕ್ ಅವಧಿ ಸಾಲವನ್ನು (term loan) ನೀಡಿದ್ದಲ್ಲಿ, ಮಾಸಿಕ ಮರುಪಾವತಿಯನ್ನು ಮಾಡಬೇಕಾಗುತ್ತಿತ್ತು. ಆಗ ಸದಸ್ಯರು ಹೆಚ್ಚು ನಿವ್ವಳ ಬಡ್ಡಿಯನ್ನು ಪಾವತಿಸಬೇಕಾಗುತ್ತಿತ್ತು. ಉದಾ : ಸಂಘದ ಬ್ಯಾಂಕಿನ ಸಿ.ಸಿ. ಖಾತೆ ಸೌಲಭ್ಯದಿಂದ ಓರ್ವ ಸದಸ್ಯ ರೂ. 1ಲಕ್ಷ ಸಾಲವನ್ನು ಶೇ. 14 ಬಡ್ಡಿದರದಲ್ಲಿ ಒಂದು ವರ್ಷದ ಅವಧಿಗೆ (50 ವಾರಗಳು) ಪಡೆದಲ್ಲಿ, ಪ್ರತೀ ವಾರದ ಕಂತು ರೂ. 2140 ಆಗುತ್ತದೆ. ಆ ಸದಸ್ಯ ಒಟ್ಟು ೫೦ ವಾರಗಳಲ್ಲಿ ರೂ. 1,06,992 ಮೊತ್ತವನ್ನು ಪಾವತಿ ಮಾಡುತ್ತಾರೆ (50ವಾರಗಳು x ರೂ. 2140). ಈ ಮೊತ್ತದಿಂದ ಸಾಲದ ಅಸಲಿನ ಮೊತ್ತವಾದ ರೂ. ೧ ಲಕ್ಷ ಕಳೆದಾಗ ನಿವ್ವಳ ಬಡ್ಡಿ ಪಾವತಿ ಮಾಡಿರುವುದು ಕೇವಲ ರೂ. 6992 ಆಗಿರುತ್ತದೆ. ಇಲ್ಲಿ ವಾರ್ಷಿಕ ಶೇ. 14 ಬಡ್ಡಿದರದಂತೆ, ರೂ. 1 ಲಕ್ಷಕ್ಕೆ ರೂ. 14,000 ಬಡ್ಡಿ ಆಗಬೇಕಿತ್ತು. ಆದರೆ ಯೋಜನೆಯಲ್ಲಿ ಕಡಿತದ ಬಡ್ಡಿ ದರದ(reducing balance method) ಲೆಕ್ಕಾಚಾರದಲ್ಲಿ ವಾರದ ಕಂತುಗಳಲ್ಲಿ ಮರುಪಾವತಿ ಮಾಡಿರುವುದರಿಂದ, ನಿವ್ವಳ ಬಡ್ಡಿ ಪಾವತಿ ಮೊತ್ತ ಕೇವಲ ರೂ. 6992 ಆಗಿರುತ್ತದೆ (6.9%).
ಇದೇ ರೂ. 1 ಲಕ್ಷವನ್ನು ಶೇ. 14ರಂತೆ ತಿಂಗಳ ಕಂತುಗಳಲ್ಲಿ ಪಾವತಿಸುವುದಾದರೆ ಪ್ರತೀ ತಿಂಗಳ ಕಂತು (EMI) ರೂ. 8979 ಆಗಿರುತ್ತದೆ. 12 ತಿಂಗಳ ಒಟ್ಟು ಪಾವತಿ ರೂ. 1,07,745 ಆಗಿರುತ್ತದೆ. (12 ತಿಂಗಳು x ರೂ. 8979). ಇಲ್ಲಿ ಅಸಲಿನ ಮೊತ್ತ ರೂ. 1 ಲಕ್ಷವನ್ನು ಕಳೆದಾಗ, ನಿವ್ವಳ ಬಡ್ಡಿ ಪಾವತಿ ರೂ. 7745 ಆಗಿರುತ್ತದೆ. ಆದರೆ ವಾರದ ಕಂತಲ್ಲಿ ಇದೇ ಸಾಲ ಪಾವತಿಗೆ ನಿವ್ವಳ ಬಡ್ಡಿ ಪಾವತಿ ಕೇವಲ ರೂ. 6992 ಮಾತ್ರ ಆಗಿ ರೂ. 753 ಬಡ್ಡಿ ಸದಸ್ಯರಿಗೆ ಉಳಿಯುತ್ತದೆ. ಕೆಲವು ಸಾಲಗಳನ್ನು ವರ್ಷದ ಕೊನೆಯ ಭಾಗದಲ್ಲಿ ಏಕಕಂತಿನಲ್ಲಿ ಕೊನೆಗೆ ಕಟ್ಟಿದರೆ, ಒಟ್ಟು ಪಾವತಿ ರೂ. 1,14,000/- ಆಗಿ ನಿವ್ವಳ ಬಡ್ಡಿ ರೂ. 14.000 ಪಾವತಿಸಬೇಕಾಗುತ್ತದೆ. ಕಡಿತದ ಬಡ್ಡಿದರದ ಲೆಕ್ಕಾಚಾರದಲ್ಲಿ ಪಾವತಿಸುವ ಪ್ರತೀ ವಾರದ ಕಂತಿನಿoದ ಅಸಲು ಕಡಿಮೆಯಾಗಿ ಆ ದಿನದಿಂದಲೇ ಅಷ್ಟು ಅಸಲಿನ ಮೇಲೆ ಬಡ್ಡಿಯನ್ನು ಉಳಿಸುವ ಬಹುದೊಡ್ಡ ಲಾಭ ಸಿಗುತ್ತದೆ. ವಾರದ ಮರುಪಾವತಿಯಲ್ಲಿ ಅಸಲಿನ ಭಾಗ ವಾರವಾರಗಳಲ್ಲೇ ಕಡಿಮೆಯಾಗುವುದರಿಂದ ಅತೀ ಹೆಚ್ಚು ಬಡ್ಡಿ ಉಳಿತಾಯ ಸದಸ್ಯರಿಗೆ ಆಗುತ್ತದೆ. ಅಲ್ಲದೇ ನಮ್ಮ ಸಂಘದ ಸದಸ್ಯರು ಯಾರೂ ಕೂಡಾ ಮಾಸಿಕ ಸಂಬಳ ಪಡೆಯುವ ಉದ್ಯೋಗದಲ್ಲಿಲ್ಲ. ತಾವು ಗಳಿಸುವ ನಿತ್ಯ ಆದಾಯದಲ್ಲಿ ಸುಲಭವಾಗಿ ಸಣ್ಣ ವಾರದ ಕಂತುಗಳಲ್ಲಿ (ಮೇಲೆ ಉದಾಹರಿಸಿದಂತೆ) ಸಾಲ ಮರುಪಾವತಿ ಮಾಡುವುದು ಸದಸ್ಯರಿಗೆ ಹೊರೆಯಾಗುವುದಿಲ್ಲ. ಅಲ್ಲದೇ ವಾರದ ಸಭೆ ಸಂಘದ ಜೀವಾಳ. ಇದೇ ವಾರದ ಸಭೆಯಲ್ಲಿ ಈ ಲೆಕ್ಕಚಾರಗಳನ್ನು ಸುಲಭವಾಗಿ ನಿರ್ವಹಿಸಬಹುದು. ಬಡ್ಡಿಯ ಲಾಭವು ಗರಿಷ್ಠ. ಅದ್ದರಿಂದ ಯೋಜನೆಯಲ್ಲಿ ರಾಜ್ಯದ್ಯಾಂತ ವಾರದ ಕಂತುಗಳಲ್ಲಿ ಮರುಪಾವತಿಸಲು ಸಂಘಗಳ ಏಕರೂಪದ ನಿರ್ಣಯವಾಗಿದೆ. ಹಾಗೂ ಇವುಗಳ ಗರಿಷ್ಠ ಪ್ರಯೋಜನವನ್ನು ಯಾವುದೇ ಸಮಸ್ಯೆಗಳಿಲ್ಲದೆ ಸದಸ್ಯರು ಪಡೆಯುತ್ತಿದ್ದಾರೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates