ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.)
ನಾವು ಜೀವಂತವಾಗಿರಲು ಪ್ರಥಮ ಅತೀ ಅಗತ್ಯ ವಸ್ತು ಪ್ರಾಣವಾಯು ಆಮ್ಲಜನಕವಾದರೆ, ಜೀವ ಜಲ ನೀರು ದ್ವಿತೀಯ ಸ್ಥಾನದಲ್ಲಿದೆ. ನೀರು ಹಾಗೂ ಆರೋಗ್ಯಕ್ಕೆ ನೇರವಾಗಿ ಸಂಬAಧವಿದೆ. ಯಾರು ಸಾಕಷ್ಟು ನೀರನ್ನು ಕುಡಿಯುತ್ತಾರೋ, ಸರ್ವೇಸಾಮಾನ್ಯರಾಗಿ ಅವರು ಸದೃಢ ಆರೋಗ್ಯವಂತರಾಗಿರುತ್ತಾರೆ. ನಮ್ಮ ದೇಹದ ಪ್ರತಿ ಜೀವಕೋಶದ ಚೈತನ್ಯಕ್ಕೆ ನೀರು ಬಹಳ ಮುಖ್ಯವಾಗಿದೆ. ಹೃದಯದ ನಿರಂತರ ಬಡಿತಕ್ಕೆ ಈ ನೀರೇ ಆಧಾರ. ಹೀಗೆ ನಮ್ಮ ದೇಹದ ಪ್ರತಿ ಜೀವಕೋಶ, ಅಂಗಾ0ಶ ಹಾಗೂ ಅಂಗಾ0ಗಗಳು ಈ ನೀರಿನಿಂದಾಗಿಯೇ ಚೈತನ್ಯವನ್ನು ಪಡೆಯುತ್ತಿವೆ. ಪರಿಣಿತರು ಹೇಳುವ ಪ್ರಕಾರ ಬಹುತೇಕ ಹೃದಯ ಸಂಬ0ಧಿ ಖಾಯಿಲೆಗಳು ಸಾಕಷ್ಟು ನೀರನ್ನು ಸೇವಿಸದೇ ಇರುವುದರಿಂದ ಬರುತ್ತದೆ. ಕಿಡ್ನಿ ಸಮಸ್ಯೆಯಂತೂ ದೇಹಕ್ಕೆ ಅಗತ್ಯದಷ್ಟು ಬೇಕಾದ ನೀರಿನ ಕೊರತೆಯಿಂದಲೇ ಉಂಟಾಗುತ್ತದೆ. ಇನ್ನು ಮೆದುಳು ಸಂಬ0ಧಿ ರೋಗ, ಮೂಳೆ, ಗಂಟು ಸಂಬAಧಿ ರೋಗ ಹೀಗೆ ಅನೇಕ ರೋಗಗಳು ಒಬ್ಬ ವ್ಯಕ್ತಿ ತನ್ನ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸದೇ ಇದ್ದಲ್ಲಿ ಉಂಟಾಗುತ್ತದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ನಮ್ಮ ದೇಹದ ರಚನೆಯು ಶೇಕಡಾ 60 ರಿಂದ 70 ರಷ್ಟು ದ್ರವಾಂಶದಿ0ದ ಕೂಡಿರುತ್ತದೆ. ಆದ್ದರಿಂದ ನಮ್ಮ ಪ್ರತಿನಿತ್ಯದ ಒಟ್ಟು ಸೇವನೆಯಲ್ಲಿ ಶೇ. 60 ರಿಂದ 70 ರಷ್ಟು ದ್ರವಾಂಶಗಳೇ ಇರಬೇಕು. ವೈದ್ಯಲೋಕ ಹೇಳುವಂತೆ ಪ್ರತಿನಿತ್ಯ ಓರ್ವ ಪುರುಷ ದಿನಕ್ಕೆ 3.7 ಹಾಗೂ ಮಹಿಳೆಯರು 2.7 ಲೀಟರ್‌ನಷ್ಟು ದ್ರವಾಂಶ ಸೇವಿಸಬೇಕು. ನಮ್ಮ ದಿನನಿತ್ಯದ ಆಹಾರದಲ್ಲಿ ಸಾಮಾನ್ಯವಾಗಿ ಶೇ. 20 ಪ್ರಮಾಣದಷ್ಟು ದ್ರವಾಂಶ ಇರುವುದರಿಂದ ಶೇ. 80 ರಷ್ಟು ದ್ರವಾಂಶವನ್ನು ನಾವು ನೇರವಾಗಿ ನೀರನ್ನು ಕುಡಿಯುವುದರಿಂದಲೇ ಪಡೆಯಬೇಕು. ಈ ಲೆಕ್ಕಾಚಾರದಲ್ಲಿ ಪ್ರತಿದಿನ ಓರ್ವ ಪುರುಷ ಕನಿಷ್ಠ ೩ ಲೀಟರ್ ಹಾಗೂ ಮಹಿಳೆಯರು 2 ಲೀಟರ್‌ನಷ್ಟಾದರೂ ನೀರನ್ನು ಕುಡಿಯಲೇಬೇಕಾಗಿರುತ್ತದೆ.
ಆಧುನಿಕ ಜೀವನ ಶೈಲಿಯಲ್ಲಿ ನೀರಿನ ಸೇವನೆಗೆ ಯಾಕೋ ಜನರು ಆಲಸ್ಯ ತೋರುತ್ತಿದ್ದಾರೆ. ಮುಖ್ಯವಾಗಿ ಹೊರಗೆ ಹೋಗಿ ಕೆಲಸ ಮಾಡುವವರು ದಿನವಿಡೀ ಸಾಕಷ್ಟು ನೀರನ್ನು ಕುಡಿಯದೇ ಇರುತ್ತಾರೆ. ಅಲ್ಲದೇ, ದ್ರವರೂಪದ ಆಹಾರಗಳನ್ನು ಕಡಿಮೆ ಸೇವಿಸುವುದು, ತಂಪು ಪಾನೀಯಗಳಿಂದ ಸ್ವಲ್ಪ ದ್ರವಾಂಶದಲ್ಲೆಯೇ ನೀರಡಿಕೆಯನ್ನು ಹೋಗಲಾಡಿಸುವುದು, ಹೀಗೆ ಅನೇಕ ಕಾರಣಗಳಿಂದಾಗಿ ಕಛೇರಿ ಅಥವಾ ಇತರೆ ಯಾವುದೇ ಕೆಲಸ ಮಾಡುವ ಜನರು ತಮ್ಮ ದೇಹಕ್ಕೆ ದಿನನಿತ್ಯ ನೀರಿನ ಕೊರತೆಯನ್ನುಂಟು ಮಾಡುತ್ತಾರೆ. ಇದು ಪಟ್ಟಣ/ಅರೇ ಪಟ್ಟಣಗಳಲ್ಲಾಗಿರದೆ ಹಳ್ಳಿಗಳಲ್ಲಿ ಕೃಷಿ ಕೆಲಸ ಮಾಡುವವರು ತಾವು ಬುತ್ತಿ ಕೊಂಡೊಯ್ಯುವಾಗ ನೀರಿಗೆ ಮಾತ್ರ ಕೊನೆಯ ಆದ್ಯತೆಯೊಂದಿಗೆ ಸಣ್ಣ ಬಾಟಲ್‌ನಿಂದ ಕೊಂಡೊಯ್ಯುತ್ತಾರೆ. ಬೆವರಿಳಿಸಿ ದುಡಿಯುವರಿಗಂತೂ ನೀರಿನ ಕೊರತೆಯಾದರೆ ಆ ದೇಹಕ್ಕೆ ದುಪ್ಪಟ್ಟು ಅಪಾಯ. ಅದು ಅಲ್ಲದೆ ತಾವು ಸೇವಿಸುವ ಬುತ್ತಿಯ ಆಹಾರದಲ್ಲೂ ಎಲ್ಲವೂ ರೋಟಿ, ಚಪಾತಿಯಂತಹ ಗಟ್ಟಿ ಪದಾರ್ಥವೇ ಆಗಿರುತ್ತದೆ. ಎಷ್ಟೊಂದು ನೀರಿನ ಅಭಾವ ಅಂತಹ ದೇಹಕ್ಕಾಗಬಹುದು. ದೇಹಕ್ಕೆ ನೀರಡಿಕೆಯಾದಾಗ ಕನಿಷ್ಠ 20 ನಿಮಿಷದೊಳಗಾದರೂ ನೀರನ್ನು ಸೇವಿಸಲೇಬೇಕು. ಇಲ್ಲದಿದ್ದರೆ ದೇಹದಲ್ಲಿ ಸಣ್ಣ ಡ್ಯಾಮೇಜ್‌ಗಳು ಪ್ರಾರಂಭವಾಗುತ್ತವೆ. ಬಾಯಾರಿಕೆ ಎನ್ನುವುದು ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಆಗುವ ಸಹಜಕ್ರಿಯೆ. ಆದರೆ ನಿರಂತರವಾಗಿ ಬಾಯಾರಿಕೆಯನ್ನು ತಡೆದಿಟ್ಟುಕೊಳ್ಳುತ್ತಾ ಹೋದಲ್ಲಿ, ಈ ಸಹಜ ಪ್ರಕ್ರಿಯೆಯ ತೀವ್ರತೆಯು ಕಡಿಮೆಯಾಗುತ್ತದೆ. ಮುಂದೊ0ದು ದಿನ ದೇಹದಲ್ಲಿ ಸಾಮಾನ್ಯ ನೀರಿನ ಕೊರತೆ ಇದ್ದರೂ ಕೂಡ ಬಾಯಾರಿಕೆ ಅನುಭವ ಬಾರದೇ ಇರಬಹುದು. ತೀವ್ರ ನೀರಿನ ಅಭಾವವಾದಲ್ಲಿ ಮಾತ್ರ ಬಾಯಾರಿಕೆ ಅನಿಸಬಹುದು. ಆದರೆ ಇಂತಹ ಸಾಮಾನ್ಯ ನೀರಿನ ಕೊರತೆಯೂ ಕೂಡ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಶುದ್ಧ ಕುಡಿಯುವ ನೀರಿನ ಲಭ್ಯತೆ ಸಾಕಷ್ಟು ಇದ್ದರೂ ಜನರು ಆಲಸ್ಯದಿಂದಲೋ ಅಥವಾ ತಮ್ಮ ಜೀವನ ಶೈಲಿಯಿಂದ ಸಾಕಷ್ಟು ನೀರನ್ನು ಕುಡಿಯದೇ ರೋಗಿಗಳಾಗುವುದು ಅವರು ತಮ್ಮ ಕೈಯಾರೆ ಮಾಡಿಕೊಂಡ ದುರಾದೃಷ್ಟವಾಗಿದೆ.
ಇದು ಒಂದು ಕಥೆಯಾದರೆ, ಇನ್ನೊಂದು ಕಡೆ ಸಾಕಷ್ಟು ಶುದ್ಧ ನೀರಿನ ಕೊರತೆಯಿಂದಾಗಿ ಜನರು ಉತ್ತಮ ನೀರು ಸೇವನೆಯಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲದೆ ಕಲುಷಿತ ನೀರು/ಹೆಚ್ಚು ಫ್ಲೋರೈಡ್‌ನ ನೀರು ಸೇವನೆಯಿಂದ ಇನ್ನೂ ಭೀಕರ ರೋಗಗಳಿಗೆ ತುತ್ತಾಗುತ್ತಾರೆ. ಇದೊಂದು ನಿಜಕ್ಕೂ ದುರಾದೃಷ್ಟವೇ ಸರಿ. ಈ ಸಮಸ್ಯೆಯನ್ನು ಮನಗಂಡ ಪೂಜ್ಯ ಹೆಗ್ಗಡೆಯವರು ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶುದ್ಧಗಂಗಾ ಘಟಕಗಳಿಗೆ ಚಾಲನೆ ನೀಡಿದರು. ಶುದ್ಧ ನೀರಿನ ಅಭಾವವಿರುವ ಪ್ರದೇಶಗಳನ್ನು ಗುರುತಿಸಿ ಆ ಊರಿನ ಜನರ ಉತ್ತಮ ಆರೋಗ್ಯಕ್ಕಾಗಿ ಶುದ್ಧಗಂಗಾ ಘಟಕಗಳ ಮೂಲಕ ಪ್ರತೀ ಕುಟುಂಬವೊ0ದಕ್ಕೆ ದಿನಕ್ಕೆ 20 ಲೀಟರ್‌ನಷ್ಟು ವೈಜ್ಞಾನಿಕವಾಗಿ ಅತೀ ಶುದ್ಧೀಕರಿಸಿದ ಕುಡಿಯುವ ನೀರನ್ನು ನೀಡುತ್ತಿದ್ದಾರೆ. ರಾಜ್ಯಾದ್ಯಂತ 352 ಬೃಹತ್ ಶುದ್ಧಗಂಗಾ ಘಟಕಗಳು ಸೇವೆ ನೀಡುತ್ತಿದ್ದು, ಪ್ರತಿದಿನ 17 ಲಕ್ಷ ಲೀಟರ್‌ನಷ್ಟು ಶುದ್ದ ಜೀವಜಲವನ್ನು ಜನರಿಗೆ ಒದಗಿಸುತ್ತಿದೆ. ಇಂತಹ ವೈಜ್ಞಾನಿಕವಾಗಿ ಸಂಸ್ಕರಿಸಿದ ಬಿಸ್ಲೇರಿಯಂತಹ ನೀರಿನ ಮಾರುಕಟ್ಟೆ ಬೆಲೆ ಲೀಟರ್ ಗೆ ರೂ. 20 ಆಗಿದೆ. ಆದರೆ ಪೂಜ್ಯರು ಜನರ ಆರೋಗ್ಯಕ್ಕಾಗಿ ನೀಡುತ್ತಿರುವ ಈ ಶುದ್ಧ ಜಲದ ಬೆಲೆ ಲೀಟರ್ ಗೆ ಕೇವಲ 15 ಪೈಸೆ ಮಾತ್ರ. ಇದರಿಂದ ದಿನಕ್ಕೆ 20 ಲೀಟರ್ ನೀರಿನಿಂದ ಲಕ್ಷಾಂತರ ಕುಟುಂಬಗಳಿಗೆ ದಿನನಿತ್ಯ ಎಷ್ಟು ಹಣ ಉಳಿತಾಯವಾಗುತ್ತದೆ ಎಂದು ನೀವೇ ಲೆಕ್ಕ ಹಾಕಿ. ಈ ಉಳಿತಾಯ ಬದಿಗಿಡೋಣ, ಇದಕ್ಕಿಂತ ಹೆಚ್ಚಾಗಿ ಬೆಲೆ ಕಟ್ಟಲಾಗದ ಆರೋಗ್ಯ ಸಂಪತ್ತು ಇಂದು ಲಕ್ಷಾಂತರ ಈ ಶುದ್ಧಗಂಗಾ ಘಟಕಗಳಿಂದ ಸಿಗುತ್ತಾ ಇದೆ. ಇದೊಂದು ಶುದ್ದ ಆರೋಗ್ಯ ಕ್ರಾಂತಿಯೇ ಸರಿ.
“ನೀರು ಆರೋಗ್ಯದ ಬೇರು” ಎಂಬುದನ್ನು ಸದಾ ನೆನಪಿಟ್ಟುಕೊಳ್ಳೋಣ. ಸಾಕಷ್ಟು ನೀರನ್ನು ದಿನನಿತ್ಯ ಕುಡಿಯೋಣ, ನಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.