ಇಂದಿನ ಮಕ್ಕಳೆ ಮುಂದಿನ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)


ರಾಯರು ಮೂರು – ನಾಲ್ಕು ವರ್ಷಗಳ ಬಳಿಕ ದೂರದ ಊರಿನಲ್ಲಿ ನೆಲೆಸಿದ್ದ ತನ್ನ ಎರಡನೆಯ ಮಗನನ್ನು ನೋಡಲು ಹೊರಟಿದ್ದರು. ಮಗನಿಗಿಂತಲೂ ಮೊಮ್ಮಗ ಆಯುರ್‍ನನ್ನು ನೋಡುವ ತವಕ ಎಲ್ಲಿಲ್ಲದಷ್ಟಿತ್ತು. 4 ವರ್ಷಗಳ ಹಿಂದೆ ನೋಡಿದ್ದಾಗ ಕೇವಲ ಮೂರು ವರ್ಷದ ಮಗುವಾಗಿದ್ದ ಆಯುರ್ ಈಗ ಎಷ್ಟು ತುಂಟನಾಗಿರಬಹುದೆಂದೆಲ್ಲಾ ಊಹಿಸುತ್ತಿದ್ದರು. ತನ್ನ ಅಂಗೈಯ ಎರಡರಷ್ಟು ಗಾತ್ರದ ದೊಡ್ಡ ಚಾಕಲೇಟನ್ನು ಆಯುರ್‍ಗೆ ಕೊಡಬೇಕೆಂದು ಹತ್ತಾರು ಅಂಗಡಿಗಳಲ್ಲಿ ಹುಡುಕಿ ಖರೀದಿಸಿದರು. ಅವನಿಗೆ ಒಳ್ಳೆಯ ಕಥೆಗಳನ್ನು ಹೇಳಬೇಕೆಂದು ಕೆಲವು ಕಥೆ ಪುಸ್ತಕಗಳನ್ನು, ಜೊತೆಗೆ ಬಟ್ಟೆ ಹಾಗೂ ಒಂದೆರಡು ಆಟಿಕೆಗಳು ಹೀಗೆ ಒಂದಿಷ್ಟು ವಸ್ತುಗಳನ್ನು ಅಂಗಡಿ ಅಂಗಡಿ ಸುತ್ತಿ ತನ್ನ ಪ್ರೀತಿಯ ಮೊಮ್ಮಗನಿಗಾಗಿ ಕೊಂಡುಕೊಂಡು ಕೊನೆಗೂ ಪತ್ನಿಯೊಂದಿಗೆ ಆ ಊರಿಗೆ ಪ್ರಯಾಣ ಬೆಳೆಸಿದರು. ಕೆಲಸದ ಒತ್ತಡ ಇದ್ದದ್ದರಿಂದ ರಾಯರನ್ನು ಮನೆಗೆ ಕರೆತರಲು ಮಗ ತನ್ನ ಡ್ರೈವರ್‍ನನ್ನು ಬಸ್‍ಸ್ಟ್ಯಾಂಡ್‍ಗೆ ಕಳುಹಿಸಿದ. ಕಾರು ಏರಿದ ರಾಯರು ಮಗನ ಮನೆ ತಲುಪುತ್ತಿದ್ದಂತೆಯೇ ಆಯುರ್ ಹೇಗೆ ಓಡಿ ಬರುತ್ತಾನೆ, ತನ್ನನ್ನು ಹೇಗೆ ಅಪ್ಪಿಕೊಳ್ಳುತ್ತಾನೆ ಅವನನ್ನು ತಾನು ಹೇಗೆ ಎತ್ತಿಕೊಳ್ಳಲಿ ಎಂದು ಮನಸ್ಸಿನಲ್ಲಿಯೇ ಸಂಭ್ರಮಿಸುತ್ತಾ ಒಳಗಿಂದಲೇ ತಯಾರಿಯನ್ನು ನಡೆಸುತ್ತಿದ್ದರು. ಕಾರು ಮನೆಯನ್ನು ಸಮೀಪಿಸುತ್ತಿದ್ದಂತೆಯೇ ಚಡಪಡಿಸುವಿಕೆ ಇನ್ನೂ ಹೆಚ್ಚಾಗುತ್ತಾ ಹೋಯಿತು. ಅಂತೂ ಕಾರು ಮನೆಯ ಗೇಟ್‍ನ ಹತ್ತಿರ ನಿಂತು ಗೇಟನ್ನು ತೆಗೆಯಲು ಡ್ರೈವರ್ ಅಣಿಯಾಗುತ್ತಿದ್ದಂತೆಯೇ ಆಗಲೇ ರಾಯರು ಕಾರ್‍ನಿಂದ ಇಳಿದು ತನ್ನ ಮೊಮ್ಮಗನನ್ನು ಅಪ್ಪಿಕೊಳ್ಳಬೇಕೆಂದು ಮನೆಯತ್ತ ಓಡಿದರು. ಮನೆಯ ಮುಂಭಾಗದಲ್ಲಿ ಯಾರೂ ಇಲ್ಲದಿದ್ದದ್ದನ್ನು ಕಂಡು ತಪ್ಪಿ ಯಾರದ್ದೋ ಮನೆಗೆ ಬಂದೆನೋ ಎಂದೆಣಿಸುತ್ತಿದ್ದಾಗಲೇ ಸೊಸೆಯು ನಿಧಾನಕ್ಕೆ ಹೊರ ಬಂದು ರಾಯರನ್ನು ಮನೆಯೊಳಗೆ ಆಹ್ವಾನಿಸಿದಳು. ಚಡಪಡಿಸುತ್ತಿರುವ ರಾಯರ ಕಣ್ಣುಗಳು ಆಯುರ್‍ನನ್ನು ಸುತ್ತ ಹುಡುಕುತ್ತಿದ್ದವು. ಪ್ರಾರಂಭದಲ್ಲಿ ಕೊಂಚ ನಿರಾಸೆಯಾದರೂ, ಮನೆ ಒಳಗಾದರೂ ನನ್ನನ್ನು ಪ್ರೀತಿಯಿಂದ ಬಂದಪ್ಪಿಕೊಳ್ಳುವನೆಂದು ದೃಢವಾಗಿ ಮನೆಯೊಳಗೆ ಹೆಜ್ಜೆ ಹಾಕಿದರು. ರಾಯರ ಆ ನಿರೀಕ್ಷೆಯೂ ಹುಸಿಯಾಯಿತು. ಕೊನೆಗೂ ತಾಳಲಾರದೆ ಮೊಮ್ಮಗ ಎಲ್ಲಿ ಎಂದು ತನ್ನ ಸೊಸೆಯಲ್ಲಿ ಕೇಳಿಯೇ ಬಿಟ್ಟರು. ಒಂದು ರೂಮ್‍ನಲ್ಲಿ ಕಂಪ್ಯೂಟರ್ ಗೇಮ್‍ನಲ್ಲೇ ಮುಳುಗಿದ್ದ ತನ್ನ ಮಗನನ್ನು ಆ ಹೆತ್ತಮ್ಮ ತೋರಿಸಿದಳು. ಪ್ರೀತಿಯಿಂದ ಧಾವಿಸಿದ ರಾಯರು ತನ್ನ ಮೊಮ್ಮಗನ ತಲೆಯನ್ನು ಸವರಿ ಭಾವುಕತೆಯಿಂದ ನೋಡುತ್ತಿದ್ದರು. ಆದರೆ ಆಯುರ್ ಗೇಮ್‍ನಲ್ಲಿ ತನ್ನ ಮಿಷನ್ ಗನ್‍ನಿಂದ ಹೆಚ್ಚು ಜನರನ್ನು ಸಾಯಿಸುತ್ತಾ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳವುದರಲ್ಲೇ ಮುಳುಗಿ ಹೋಗಿದ್ದ. ಹೀಗೆ ಮೂರ್ನಾಲ್ಕು ನಿಮಿಷವಾದರೂ ಕೂಡ ತನ್ನ ಅಜ್ಜನನ್ನು ಕತ್ತೆತ್ತಿ ಒಮ್ಮೆಯೂ ನೋಡಲಿಲ್ಲ. ರಾಯರು ಕಸಿವಿಸಿಗೊಂಡರೂ ಇನ್ನೂ ಒಂದು ನಿರೀಕ್ಷೆಯೊಂದಿಗೆ ತಾನು ತಂದ ದೊಡ್ಡ ಚಾಕಲೇಟ್ ಅನ್ನು ಮೊಮ್ಮಗನ ಕೈಗಿಡಲು ಪ್ರಯತ್ನಿಸಿದರು. ಗೇಮ್‍ನಲ್ಲೇ ತೀವ್ರ ಮಗ್ನನಾದ ಆತನಿಗೆ ಇದೊಂದು ದೊಡ್ಡ ಅಡಚಣೆ ಆಯಿತೆಂಬಂತೆ ಸಿಡಿಮಿಡಿಗೊಂಡು ಕೊಟ್ಟ ಚಾಕಲೇಟನ್ನು ಕಣ್ಣೆತ್ತಿಯೂ ನೋಡದೆ ಪಕ್ಕಕ್ಕೆ ಸರಿಸಿದನು.
ಆ ಕ್ಷಣ ರಾಯರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ರಾಯರ ಪತ್ನಿ ಮೂಕರಾದರು. ಆಯುರ್ ಗೇಮ್‍ನಲ್ಲಿ ಮತ್ತಷ್ಟು ಶೂಟ್ ಮಾಡುವುದರಲ್ಲಿ ತಲ್ಲೀನನಾದ. ಆಘಾತಗೊಂಡು ಆ ಎರಡು ಮುಪ್ಪಿನ ಜೀವಗಳು ಅನಿವಾರ್ಯವಾಗಿ ರೂಮಿನಿಂದ ಹೊರಬರಬೇಕಾಯಿತು. ಅಷ್ಟೆ ಅಲ್ಲ ಇನ್ನೂ ಎರಡು ದಿನಗಳ ಕಾಲ ರಾಯರು ಅಲ್ಲೇ ಉಳಿದುಕೊಂಡು ಮೊಮ್ಮಗನೊಂದಿಗೆ ಸನಿಹವಾಗಲು ಎಲ್ಲಿಲ್ಲದ ಕಸರತ್ತು ನಡೆಸಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಏಕೆಂದರೆ ಆಯುರ್‍ನ ಒಡನಾಟ ಕೇವಲ ಮೊಬೈಲ್, ಟಿ.ವಿ, ಕಂಪ್ಯೂಟರ್‍ನಂತಹ ಯಂತ್ರಗಳಲ್ಲಿ ಮಾತ್ರ ಇತ್ತೇ ಹೊರತು ಪ್ರೀತಿ – ಸ್ನೇಹ ಭಾವನೆಗಳಿರುವ ಮನುಷ್ಯರಲ್ಲಿ ಅಲ್ಲ. ಕನಸು ನುಚ್ಚುನೂರಾದ ನೋವಿನಿಂದ ರಾಯರು ತನ್ನೂರಿಗೆ ಹಿಂತಿರುಗಿದರು.
ರಾಯರಂತೆ ಇಂದು ಲಕ್ಷಾಂತರ ಜನರು ಈ ನೋವನ್ನು ಅನುಭವಿಸುತ್ತಿದ್ದಾರೆ. ಪೋಷಕರು ಇದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. ತನ್ನ ಮಕ್ಕಳು ಎಲ್ಲರಿಗಿಂತ ಹೆಚ್ಚು ಮಾಕ್ರ್ಸ್ ತೆಗೆದುಕೊಳ್ಳಬೇಕೆನ್ನುವುದನ್ನು ಪರಮಗುರಿಯಾಗಿಸಿಕೊಂಡು, ಉಳಿದೆಲ್ಲವನ್ನು ಕಡೆಗಣಿಸುತ್ತಾರೆ. ಪೈಪೋಟಿ, ಸ್ಪರ್ಧೆ, ಸೆಣಸಾಟ, ತಂತ್ರಗಾರಿಕೆಯಿಂದ ಇನ್ನೊಬ್ಬರನ್ನು ಸೋಲಿಸಿ ತಾನು ಗೆಲ್ಲಬೇಕು ಎನ್ನುವ ವಿಷಯಗಳಿಗೆ ಪೂರಕವಾಗುವ ವಾತಾವರಣವನ್ನು ಇಂದು ಪೋಷಕರು ಸೃಷ್ಟಿಸುವುದರಲ್ಲೇ ಮಗ್ನರಾಗಿದ್ದಾರೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಸದ್ಗುಣಗಳು, ನೈತಿಕ ಮೌಲ್ಯಗಳು ಹಾಗೂ ಒಳ್ಳೆಯ ಸಂಸ್ಕಾರಗಳು ಗೆಲುವು ಸಾಧಿಸಲು ಒಂದು ರೀತಿಯಲ್ಲಿ ಅಡೆತಡೆಗಳೆಂಬಂತೆ ಬಿಂಬಿಸಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಸೌಲಭ್ಯ ಹಾಗೂ ಸಲಕರಣೆಗಳನ್ನು ಮಕ್ಕಳಿಗೆ ಪೂರೈಸಲಾಗುತ್ತಿದೆ. ಹಸಿವು ಹಾಗೂ ಕಷ್ಟದ ಅನುಭವವೂ ಇಲ್ಲ, ಅರಿವೂ ಇಲ್ಲ. ಇಂತಹ ಮಕ್ಕಳಲ್ಲಿ ಸಂವೇದನಾಶೀಲತೆಯನ್ನು ನಿರೀಕ್ಷಿಸುವುದಾದರೂ ಹೇಗೆ?
ನಮ್ಮ ದೇಶದಲ್ಲಿ ಇಂದು 45 ಕೋಟಿಯಷ್ಟು 15 ವರ್ಷದೊಳಗಿನ ಮಕ್ಕಳಿದ್ದಾರೆ. ಭಾರತದ ಉಜ್ವಲ ಭವಿಷ್ಯವು ಇವರ ಕೈಯಲ್ಲಿದೆ. ಸಮಸ್ತ ಪೋಷಕರು ಗುರುತರ ಜವಾಬ್ದಾರಿಯೊಂದಿಗೆ ತಮ್ಮ ಮಕ್ಕಳಿಗೆ ಉತ್ತಮವಾದ ಗುಣ, ನಡತೆ, ಸಂಸ್ಕಾರಗಳನ್ನು ಮನೆಯಲ್ಲಿ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಬೆಳೆಸಬೇಕಾಗಿದೆ. ತನ್ಮೂಲಕ ಭವಿಷ್ಯದ ಭದ್ರ ಭಾರತದ ನಿರ್ಮಾಣಕ್ಕೆ ಇಂದಿನಿಂದಲೇ ಭದ್ರ ಬುನಾದಿ ಹಾಕಬೇಕಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *