ಕ್ರೆಡಿಟ್ ಕಾರ್ಡ್ ನ ಸುರಕ್ಷಿತ ಬಳಕೆ ಹೇಗೆ?

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು


ನಾಗರಿಕ ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಹಣ ಚಲಾಯಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಾಡಿನಲ್ಲಿದ್ದ ಮಾನವ, ತನ್ನ ವಸಾಹತುಗಳನ್ನು ನಿರ್ಮಿಸಿಕೊಂಡ ಮೊದಲ ದಿನಗಳಲ್ಲಿ ವಸ್ತುಗಳನ್ನು ಬದಲಾಯಿಸಿಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು. ನಂತರ ಚರ್ಮದ ನಾಣ್ಯ, ಕಲ್ಲಿನ ನಾಣ್ಯ, ಬೆಳ್ಳಿ, ಚಿನ್ನದ ನಾಣ್ಯಗಳು ಆಯಾ ದೇಶ, ಪ್ರದೇಶಗಳ ಅರ್ಥ ವ್ಯವಸ್ಥೆಯ ಸಂಕೇತವಾಗಿ ರೂಪುಗೊಂಡವು. ಚಿನ್ನ, ಬೆಳ್ಳಿಯ ಬೆಲೆ ಗಗನಕ್ಕೇರಿದ ನಂತರ ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ನಾಣ್ಯಗಳು ಹೊರಬಂದುವು. ಜಗತ್ತಿನಲ್ಲಿ ಬರೆಯುವ ಕಾಗದದ ಅನ್ವೇಷಣೆ ಆದ ನಂತರ ಕಾಗದವನ್ನು ಹಣವಾಗಿ ಮುದ್ರಿಸುವ ಕೆಲಸ ಆರಂಭವಾಯಿತು. ಈ ಎಲ್ಲ ಹಣಕ್ಕೂ ಆಯಾ ದೇಶದ, ಸರಕಾರದ ಮಾನ್ಯತೆ ಇರುತ್ತದೆ. ಕಂಪ್ಯೂಟರ್‌ನ ಯುಗ ಪ್ರಾರಂಭವಾದ ಮೇಲೆ ನಾಣ್ಯ ಮತ್ತು ಕಾಗದದ ನೋಟುಗಳ ಬದಲಿಗೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳು ಪ್ರಾರಂಭಗೊAಡವು. ಈಗ ನಗದುರಹಿತ ವ್ಯವಹಾರ ಮಾಡುವ ‘ಮೊಬೈಲ್ ಬ್ಯಾಂಕಿoಗ್ ಸಿಸ್ಟಮ್’ ಬಹಳ ವೇಗವಾಗಿ ಜಾರಿಗೆ ಬರುತ್ತಿದೆ.
ಹಣ ಚಲಾವಣೆ ಏನೇ ಇದ್ದರೂ, ಮನುಷ್ಯನಿಗೆ ಕಷ್ಟ ಬಂದಾಗ ಸಾಲವೇ ನೆರವಿಗೆ ಬರುವುದು. ಹಣ ಯಾವುದೇ ರೂಪದಲ್ಲಿದ್ದರೂ ಸಾಲದ ಮಹತ್ವ ಕಡಿಮೆಯಾಗಿಲ್ಲ. ಇದನ್ನು ಮನಗಂಡ ಬ್ಯಾಂಕ್‌ಗಳು ಜನರ ಆರ್ಥಿಕ ಶಕ್ತಿಯನ್ನು ನಿರ್ಧರಿಸಿ ‘ಕ್ರೆಡಿಟ್ ಕಾರ್ಡ್’ಗಳನ್ನು ನೀಡುವ ಪರಿಪಾಠ ಪ್ರಾರಂಭವಾಗಿ ಐದು ದಶಕಗಳೇ ಕಳೆದಿವೆ. ‘ಕ್ರೆಡಿಟ್ ಕಾರ್ಡ್’ ಹೊಂದಿದ ವ್ಯಕ್ತಿ ಯಾವುದೇ ನೋಂದಾಯಿತ ವ್ಯವಹಾರ ಸ್ಥಳಕ್ಕೆ ಹೋಗಿ ತನ್ನ ‘ಕ್ರೆಡಿಟ್ ಕಾರ್ಡ್’ ಅನ್ನು ತೋರಿಸಿ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಹೀಗೆ ಪಡೆದುಕೊಂಡ ವಸ್ತುಗಳ ಮೌಲ್ಯವನ್ನು ‘ಕ್ರೆಡಿಟ್ ಕಾರ್ಡ್’ ನೀಡುವ ಬ್ಯಾಂಕ್ ಆ ವ್ಯವಹಾರ ಸ್ಥಳಕ್ಕೆ ತುಂಬುತ್ತದೆ. ಮತ್ತು ಈ ಮೊತ್ತವನ್ನು ‘ಕ್ರೆಡಿಟ್ ಕಾರ್ಡ್’ ಪಡೆದುಕೊಂಡವರಿಗೆ ಸಾಲ ಎಂದು ತೋರಿಸುತ್ತವೆ. ನಿಗದಿತ ಅವಧಿಯೊಳಗೆ ಈ ಮೊತ್ತವನ್ನು ಬ್ಯಾಂಕಿಗೆ ಪಾವತಿಸಿದರೆ ಬಡ್ಡಿ ಕಟ್ಟುವ ಅಗತ್ಯವಿರುವುದಿಲ್ಲ. ಹಾಗೆ ಮಾಡದಿದ್ದಲ್ಲಿ ಬ್ಯಾಂಕಿನವರು ವಿಧಿಸುವ ಬಡ್ಡಿ ಮೊತ್ತ ಶೇ.೩೦ರಿಂದ ಶೇ.೩೬ ಇರುತ್ತದೆ. ಇದಲ್ಲದೆ ಕಾರ್ಡಿಗೆ ವಿಧಿಸುವ ವಾರ್ಷಿಕ ಶುಲ್ಕಗಳು, ಅಂಗಡಿಯವರು ವಿಧಿಸಬಹುದಾದ ಹೆಚ್ಚುವರಿ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
‘ಕ್ರೆಡಿಟ್ ಕಾರ್ಡ್’ ಅನ್ನು ನೀಡುವ ಹೆಚ್ಚಿನ ಬ್ಯಾಂಕ್‌ಗಳು ಕಾರ್ಡ್ ಪಡೆದುಕೊಂಡವರು ಮಾಡಿರುವ ವ್ಯವಹಾರದ ಮೊತ್ತವನ್ನು ಪೂರ್ಣವಾಗಿ ಪಾವತಿಸದಿದ್ದರೆ ಬೇಸರ ಮಾಡಿಕೊಳ್ಳುವುದಿಲ್ಲ. ಬದಲಾಗಿ ಶೇ.೩೬ರಷ್ಟು ಬಡ್ಡಿ ದರ ವಿಧಿಸಬಹುದೆಂದು ಸಂತೋಷಪಡುತ್ತವೆ. ಇದಕ್ಕಾಗಿ ಅವರು ತಮ್ಮ ಸದಸ್ಯರಿಗೆ ‘ತಾವು ಮಾಡಿದ ವ್ಯವಹಾರದ ಮೊತ್ತವನ್ನು ಒಮ್ಮೆಲೆ ಕಟ್ಟಬೇಡಿ, ಕಟ್ಟುವ ಅಗತ್ಯವಿಲ್ಲ. ವ್ಯವಹಾರದ ಶೇ.೫ರಷ್ಟನ್ನು ಕಟ್ಟಿದರೆ ಸಾಕು’ ಎಂದು ತಿಳುವಳಿಕೆ ನೀಡುತ್ತಾರೆ. ಇದರ ಹಿಂದೆ ಅಧಿಕ ಬಡ್ಡಿ ಸೆಳೆಯುವ ದೊಡ್ಡ ಹುನ್ನಾರ ಅಡಗಿದೆ.
ಇತ್ತ ಈ ‘ಕ್ರೆಡಿಟ್ ಕಾರ್ಡ್’ನ ವ್ಯವಹಾರ ಮಾಡುವ ವ್ಯಕ್ತಿಗೆ ಅಂಗಡಿಯಲ್ಲಿ ಖರೀದಿ ಮಾಡುವಾಗ ಹಣ ಪಾವತಿಸಬೇಕಾಗಿಲ್ಲದಿರುವುದರಿಂದ ಅವನ ಮನಸ್ಸು ಹಗುರವಾಗಿರುತ್ತದೆ. ಅಂಗಡಿಯವರು ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೇನೋ ಎಂಬ ಭಾವನೆ ಅವನಲ್ಲಿರುತ್ತದೆ. ಅಗತ್ಯ ಇಲ್ಲದ ವಸ್ತುಗಳನ್ನೂ ಖರೀದಿಸಿ ಮನೆಗೆ ಹೊತ್ತೊಯ್ಯುತ್ತಾನೆ. ತಿಂಗಳ ಕೊನೆಯಲ್ಲಿ ಬ್ಯಾಂಕಿನಿoದ ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ, ಅವನಲ್ಲಿ ಪಾವತಿಸಲು ಹಣ ಕಡಿಮೆ ಇದ್ದಾಗ ನಿರುಪಾಯವಾಗಿ ಕಂತಿನಲ್ಲಿ ಪಾವತಿಸುವ ಅಧಿಕ ಬಡ್ಡಿಯ ಕಂತುಗಳನ್ನು ಒಪ್ಪಿಕೊಳ್ಳುತ್ತಾನೆ. ಅಲ್ಲಿಗೆ ಅವನ ಕಥೆ ಮುಗಿದಂತೆಯೇ. ಅವನು ಚಕ್ರಬಡ್ಡಿಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾನೆ. ಪ್ರಪಂಚದ ವಿವಿಧ ಬ್ಯಾಂಕುಗಳು ನೀಡುವ ಈ ‘ಕ್ರೆಡಿಟ್ ಕಾರ್ಡ್’ಗಳನ್ನು ದುರ್ಬಳಕೆ ಮಾಡಿದರೆ ಸಾಲವೆಂಬ ಶೂಲಕ್ಕೆ ಶಾಶ್ವತವಾಗಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ.
ಇದೀಗ ನಮ್ಮ ಯೋಜನೆಯ ಕಾರ್ಯಕರ್ತರಿಗೆ ಪ್ರಮುಖ ರಾಷ್ಟಿçÃಕೃತ ಬ್ಯಾಂಕ್ ‘ಕ್ರೆಡಿಟ್ ಕಾರ್ಡ್’ಗಳನ್ನು ನೀಡಿದೆ. ಇದನ್ನು ಪಡೆದ ಸಂತೋಷದಲ್ಲಿ ನಾವು ಎಗ್ಗಿಲ್ಲದೆ ವ್ಯವಹಾರ ಮಾಡಿದರೆ ಕಡೆಗೆ ಅದನ್ನು ಕಟ್ಟಲಾಗದೆ ಅಧಿಕ ಬಡ್ಡಿ ಪಾವತಿಸುವುದು ಖಾತ್ರಿಯಾಗುತ್ತದೆ. ಆದುದರಿಂದ ‘ಕ್ರೆಡಿಟ್ ಕಾರ್ಡ್’ನಲ್ಲಿ ವಸ್ತುಗಳನ್ನು ಖರೀದಿಸುವಾಗ ಎಲ್ಲರೂ ನೆನಪಿನಲ್ಲಿಡಬೇಕಾದ ಸಂಗತಿ ಎಂದರೆ ನಾವು ತಿಂಗಳಲ್ಲಿ ‘ಕ್ರೆಡಿಟ್ ಕಾರ್ಡ್’ ಮುಖೇನ ಮಾಡಿದ ವ್ಯವಹಾರವನ್ನು ಒಂದೇ ಕಂತಿನಲ್ಲಿ ಪೂರ್ಣವಾಗಿ ಮರುಪಾವತಿಸುವಂತಹ ಅಷ್ಟು ಮೊತ್ತವನ್ನು ಮಾತ್ರ ‘ಕ್ರೆಡಿಟ್ ಕಾರ್ಡ್’ ವ್ಯವಹಾರದಲ್ಲಿ ಬಳಸಿಕೊಳ್ಳಬಹುದು. ಅತಿ ಆಸೆ ಮಾಡಿ ಹೆಚ್ಚಿನ ಸಾಲ ಮಾಡಿಕೊಂಡರೆ ತೀರಿಸುವುದು ಕಷ್ಟವಾದೀತು, ಬಡ್ಡಿಯೂ ಅಧಿಕವಾದೀತು ಎಚ್ಚರ!

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *