ಗ್ರಾಮೀಣ ಭಾರತ, ಅದುವೇ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ಮಹಾತ್ಮ ಗಾಂಧೀಜಿಯವರು ‘ನೈಜ ಭಾರತದ ದರ್ಶನ ಗ್ರಾಮೀಣ ಭಾರತದಲ್ಲಿ’ ಎಂದು ಸಾರಿದ್ದರು ಹಾಗೂ ಗ್ರಾಮದ ಅಭ್ಯುದಯದಿಂದ ಮಾತ್ರ ಭಾರತದ ಅಭ್ಯುದಯ ಸಾಧ್ಯ ಎಂದು ಕನಸು ಕಂಡಿದ್ದರು. ದೇಶದ ಅರ್ಥ ವ್ಯವಸ್ಥೆಯಲ್ಲಿ ನಗರಗಳ ಆರ್ಥಿಕ ಬೆಳವಣಿಗೆ ಮಿಂಚಿನ ವೇಗದಲ್ಲಿ ಬೆಳೆಯುತ್ತಿದ್ದರೂ ಕೂಡ, ಗ್ರಾಮೀಣ ಭಾರತವು ಈಗಲೂ ಆರ್ಥಿಕತೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಸ್ಥಾನವನ್ನು ಪಡೆದಿದೆ. ದೇಶದ ಒಟ್ಟು ಜನಸಂಖ್ಯೆಯಾದ 139 ಕೋಟಿಯಲ್ಲಿ ಶೇಕಡಾ 65ರಷ್ಟು ಅಂದರೆ ಸುಮಾರು 91 ಕೋಟಿ ಭಾರತೀಯರು ಗ್ರಾಮೀಣ ಭಾರತದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಶೇಕಡಾ ೪೦ರಷ್ಟು ಜನರು ಕೃಷಿ ಜೀವನವನ್ನು ಪೂರ್ಣವಾಗಿ ಅವಲಂಬಿಸಿದ್ದು, ಇನ್ನುಳಿದ ಶೇಕಡಾ 25ರಷ್ಟು ಮಂದಿ ದ್ವಿತೀಯ ಹಾಗೂ ತೃತೀಯ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ದೇಶದ ಜಿಡಿಪಿಯಲ್ಲಿಯೂ ಗ್ರಾಮೀಣ ಭಾರತದ ಕೊಡುಗೆ ಅತ್ಯಂತ ಮಹತ್ತರವಾಗಿದೆ.
ಹಿಂದೆ ನಗರಗಳಿಗೆ ಸೀಮಿತವಾಗಿದ್ದ ಎಷ್ಟೋ ಬೃಹತ್ ಆರ್ಥಿಕ ಚಟುವಟಿಕೆಗಳು ಇಂದು ಹಳ್ಳಿಗಳತ್ತ ಮುಖ ಮಾಡುತ್ತಿವೆ. ದೈತ್ಯ ಸಾಫ್ಟ್ವೇರ್ ಕಂಪನಿಗಳು ಸರದಿ ಸಾಲಿನಲ್ಲಿ ಹಳ್ಳಿಗಳತ್ತ ಸಾಗಿ ಬಂದು ಬೃಹತ್ ‘ಐಟಿ ಪಾರ್ಕ್’ಗಳನ್ನು ಸ್ಥಾಪಿಸಿವೆ ಹಾಗೂ ಸಾವಿರಾರು ಸ್ಥಳೀಯ ಹಾಗೂ ಗ್ರಾಮೀಣ ಯುವಕರಿಗೆ ಉದ್ಯೋಗಗಳನ್ನು ನೀಡುತ್ತಿವೆ. ಇನ್ನು
‘ವಿಶೇಷ ಆರ್ಥಿಕ ವಲಯ’ ಗಳು ಕೂಡ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳ ಆಸುಪಾಸಿನಲ್ಲಿಯೇ ನಿರ್ಮಾಣವಾಗುತ್ತಿವೆ. ಇಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ನಿರ್ಮಾಣಗೊಂಡು ಲಕ್ಷಾಂತರ ಗ್ರಾಮೀಣ ಭಾರತೀಯರಿಗೆ ಉದ್ಯೋಗದಾತಗಳಾಗಿವೆ. ಹೀಗೆ ಐಟಿ ಪಾರ್ಕ್ಗಳು ಹಾಗೂ ವಿಶೇಷ ಆರ್ಥಿಕ ವಲಯಗಳು ನಿರ್ಮಾಣ ಆಗುವುದರೊಂದಿಗೆ ಗ್ರಾಮೀಣ ಭಾರತದ ಮೂಲಭೂತ ಸೌಕರ್ಯಗಳಲ್ಲಿ ಆಮೂಲಾಗ್ರ ಅಭಿವೃದ್ಧಿ ಕಾಣುತ್ತಿವೆ. ಮುಖ್ಯವಾಗಿ ಉತ್ಕೃಷ್ಟವಾದ ರಸ್ತೆಗಳ ನಿರ್ಮಾಣ, ಸಂಪರ್ಕ ವ್ಯವಸ್ಥೆ, ವಿದ್ಯುತ್, ಶಿಕ್ಷಣ ಹೀಗೆ ಎಲ್ಲಾ ವಲಯಗಳಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅತೀ ಹೆಚ್ಚಿನ ಬಂಡವಾಳ ಹೂಡಿಕೆಯೊಂದಿಗೆ ಮಹತ್ತರ ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಹೆಚ್ಚಿನ ಗ್ರಾಮೀಣ ಪ್ರದೇಶಗಳು ಉತ್ತಮ ರಸ್ತೆಗಳ ಮೂಲಕ ಸುಲಭವಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ ಜೋಡಣೆಯಾಗಿ ನಗರಗಳಿಗೆ ಬಹಳ ಸುಲಭ ಹಾಗೂ ಶೀಘ್ರದ ಸಂಚಾರ ವ್ಯವಸ್ಥೆಯನ್ನು ಹೊಂದಿದೆ. ಉತ್ಪಾದಕ ಹಾಗೂ ಸೇವಾ ವಲಯದ ಬೃಹತ್ ಆರ್ಥಿಕ ಚಟುವಟಿಕೆಗಳು ಗ್ರಾಮೀಣ ಮಟ್ಟದಲ್ಲಿ ಸೃಷ್ಟಿಗೊಂಡಿದ್ದರಿ0ದ ಕೃಷಿ ವಲಯದ ಮೇಲೆ ಅವಲಂಬಿತರಾದ ಹೆಚ್ಚುವರಿ ಜನಸಂಖ್ಯೆಗೆ ಇಲ್ಲಿ ಅತ್ಯುತ್ತಮ ಅವಕಾಶ ಸಿಕ್ಕಿತ್ತು. ಇದರೊಂದಿಗೆ ಮಾನವ ಸಂಪನ್ಮೂಲದ ಪರಿಣಾಮಕಾರಿ ಸದ್ಬಳಕೆ ಸಾಧ್ಯವಾಗಿರುತ್ತದೆ. ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಿಂದ ಪರಂಪರಾಗತವಾಗಿ ಬಂದಿರುವ ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಕೂಡ ಸಾಕಷ್ಟು ಅವಕಾಶಗಳು ಲಭಿಸಿವೆ.
‘ಆತ್ಮ ನಿರ್ಭರ ಭಾರತ’ ಒಂದು ಅದ್ಭುತ ಪರಿಕಲ್ಪನೆಯಾಗಿದ್ದು, ಇದು ಒಂದು ರೀತಿಯಲ್ಲಿ ಗ್ರಾಮೀಣ ಭಾರತದ ಆರ್ಥಿಕ ಅಭಿವೃದ್ಧಿಗಾಗಿ ಇರುವ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದೆ. ಜೊತೆಗೆ ‘ವೋಕಲ್ ಫಾರ್ ಲೋಕಲ್’ ಚಿಂತನೆಯೂ ಇದಕ್ಕೆ ಇನ್ನಷ್ಟು ಶಕ್ತಿ ನೀಡಿದೆ. ೭೫ನೇ ಸ್ವಾತಂತ್ರ್ಯ ದಿನಾಚರಣೆಯಂದು ಸನ್ಮಾನ್ಯ ಪ್ರಧಾನ ಮಂತ್ರಿಯವರು ಘೋಷಿಸಿರುವ ‘ಗತಿ ಶಕ್ತಿ’ ಯೋಜನೆಯು ಬರೋಬ್ಬರಿ ರೂ.೧೦೦ ಲಕ್ಷ ಕೋಟಿಯ ಐತಿಹಾಸಿಕ ಯೋಜನೆಯಾಗಿದೆ. ದೇಶದ ಉದ್ದಗಲಕ್ಕೂ ಉತ್ಕೃಷ್ಟವಾದ ರಸ್ತೆ ಸಂಪರ್ಕಗಳ ಅಭಿವೃದ್ಧಿಗಳೊಂದಿಗೆ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಇನ್ನೊಂದು ಪ್ರಮುಖ ಉದ್ದೇಶವೂ ಆಗಿರುತ್ತದೆ. ಈ ಎಲ್ಲಾ ಯೋಜನೆಗಳು ಮುಂದಿನ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಅತ್ಯಂತ ಪೂರಕವಾಗಿರುತ್ತದೆ.
ಪೂಜ್ಯ ಖಾವಂದರು ಕಳೆದ ಮೂರು ದಶಕಗಳಿಂದ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದಲ್ಲಿ ಗ್ರಾಮಗಳ ಅಭ್ಯುದಯಕ್ಕೆ ಅವಿರತವಾಗಿ ಶ್ರಮಿಸಿ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡುತ್ತಿದ್ದಾರೆ. ಗ್ರಾಮೀಣ ಕರ್ನಾಟಕದ ಜನತೆಯ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣದೊಂದಿಗೆ ಕೃಷಿ, ಮೂಲಭೂತ ಸೌಕರ್ಯ, ಶಿಕ್ಷಣಕ್ಕೂ ವಿಶೇಷ ಒತ್ತು ನೀಡುತ್ತಾ ಗ್ರಾಮಗಳ ಸಮಗ್ರ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ನಮ್ಮ ಯೋಜನೆಯ ಮೂಲಕ 46 ಲಕ್ಷ ಕುಟುಂಬಗಳ ಪಾಲುದಾರ ಬಂಧುಗಳು ಈಗಾಗಲೇ ಉತ್ತಮವಾಗಿ ಆರ್ಥಿಕ ಜ್ಞಾನ ಹಾಗೂ ಶಿಸ್ತು ರೂಪಿಸಿಕೊಂಡಿರುವುದರಿAದ ಮುಂದಿನ ದಿನಗಳಲ್ಲಿ ಯೋಜಿಸಲಾದ ಈ ಎಲ್ಲಾ ಕ್ಷಿಪ್ರ ಗ್ರಾಮೀಣ ಆರ್ಥಿಕ ಪ್ರಗತಿಯ ಯೋಜನೆಗಳಲ್ಲಿ ಬಹಳ ಮಹತ್ತರ ಪಾತ್ರವನ್ನು ವಹಿಸಲಿರುವರು. ತನ್ಮೂಲಕ ನಾವೆಲ್ಲರೂ ಸೇರಿ ನವಭಾರತದ ಪರಿಕಲ್ಪನೆಯಲ್ಲಿ ಸದೃಢ ಗ್ರಾಮೀಣ ಕರ್ನಾಟಕವನ್ನು ಮಾದರಿಯನ್ನಾಗಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *