ಸ್ವಯಂ, ಸ್ವ್ವಸಹಾಯ ಮತ್ತು ಸಮಷ್ಠಿ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ‘ಅಂತ್ಯೋದಯ’, ‘ಸರ್ವೋದಯ’ ಹಾಗೂ ‘ಗ್ರಾಮಾಭ್ಯುದಯ’ ಎಂಬ ಮೂರು ಪರಿಕಲ್ಪನೆಗಳ ಮೂಲಕ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಕಂಡಿದ್ದರು. ‘ಅಂತ್ಯೋದಯ’ ಎನ್ನುವುದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯಾಗಿದ್ದು, ‘ಸರ್ವೋದಯ’ ಎನ್ನುವುದು ಸಮಾಜದ ಸರ್ವರ ಅಭಿವೃದ್ಧಿಯಾಗಿರುತ್ತದೆ. ಹೀಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಸರ್ವರ ಶ್ರೇಯಾಭಿವೃದ್ಧಿಯ ಮೂಲಕ ಪ್ರತಿ ಗ್ರಾಮಗಳು ಅಭ್ಯುದಯವಾಗಬೇಕೆನ್ನುವುದು ರಾಷ್ಟ್ರಪಿತರ ಕನಸಾಗಿತ್ತು.
ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಹುಟ್ಟುಹಾಕುವುದರ ಮೂಲಕ 1990ರಲ್ಲಿ ಸ್ವ-ಸಹಾಯ ಸಂಘಗಳ ಚಳುವಳಿಯನ್ನು ರಾಜ್ಯದಲ್ಲಿ ಕೈಗೊಂಡು ತನ್ಮೂಲಕ ಮಹಾತ್ಮ ಗಾಂಧೀಜಿಯವರ ಮೂರು ಪರಿಕಲ್ಪನೆಗಳ ಕನಸನ್ನು ನನಸು ಮಾಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೂ ತಲುಪಿದ ಯೋಜನೆಯು ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿ ಅವರ ಏಳಿಗೆಯ ಮೂಲಕ ಗಾಂಧೀಜಿಯವರ ‘ಅಂತ್ಯೋದಯ’ ಕನಸನ್ನು ನನಸು ಮಾಡುತ್ತಿದೆ. ಹೀಗೆ ಸಮಾಜದ ಸರ್ವ ಜನರ ಶ್ರೇಯಾಭಿವೃದ್ಧಿ ಯಾಗುವುದರೊಂದಿಗೆ ‘ಸರ್ವೋದಯ’ದ ಪರಿಕಲ್ಪನೆಯೂ ನನಸಾಗುತ್ತಿದೆ. ಯೋಜನೆಯ ಹೆಸರೇ ಸೂಚಿಸುವಂತೆ ರಾಜ್ಯಾದ್ಯಂತ ‘ಗ್ರಾಮಾಭಿವೃದ್ಧಿ’ ಸಾಧಿಸುವ ದಿಟ್ಟ ಗುರಿಯನ್ನಿಟ್ಟುಕೊಂಡ ಯೋಜನೆಯು ಹಗಲಿರುಳು ಶ್ರಮಿಸುತ್ತಾ “ಗ್ರಾಮಾಭ್ಯುದಯ’’ದ ಕನಸನ್ನು ಕೂಡಾ ನನಸು ಮಾಡುತ್ತಿದೆ. ‘ಸ್ವಯಂ’ಕ್ಕಿಂತಲೂ ‘ಸ್ವ-ಸಹಾಯ’ ಶ್ರೇಷ್ಠ, ‘ಸ್ವ-ಸಹಾಯ’ದಿಂದ ‘ಸಮಷ್ಠಿಯ ಸರ್ವೋದಯ’ ಎನ್ನುವ ಪ್ರಗತಿದಾಯಕ ಮಂತ್ರವನ್ನು ಸಾಮಾನ್ಯರಿಗೆ ನೀಡಿದ ಪೂಜ್ಯರು, ಸ್ವಸಹಾಯ ಸಂಘಗಳ ಆಂದೋಲನದ ಮೂಲಕ ಇಂದು ರಾಜ್ಯಾದ್ಯಂತ 48 ಲಕ್ಷ ಸದಸ್ಯರನ್ನು ಪ್ರಗತಿಯ ಪಾಲುದಾರ ಬಂಧುಗಳನ್ನಾಗಿಸಿದ್ದಾರೆ.
ಯೋಜನೆಯಿಂದ ನಿರ್ವಹಿಸುತ್ತಿರುವ ಸ್ವ-ಸಹಾಯ ಸಂಘಗಳು ಇಂದು ದೇಶಕ್ಕೆ ಮಾದರಿಯಾಗಿವೆ. ಇಲ್ಲಿ ಸಂಘಗಳ ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ಸಂಘವನ್ನು ಬದ್ಧತೆಯಿಂದ ಉತ್ತಮವಾಗಿ ನಿರ್ವಹಿಸಲು ಪೂರಕವಾಗುವಂತಹ ನೀತಿ – ನಿಯಮ ಹಾಗೂ ವ್ಯವಸ್ಥೆಗಳಿವೆ. ಸದಸ್ಯರ ಸಂಘ ಬದ್ಧತೆಯ ಗುಣಮಟ್ಟವು ಆ ಸಂಘದ ಅಸ್ತಿತ್ವ ಹಾಗೂ ಕ್ಷಮತೆಯ ಅಡಿಪಾಯವಾಗಿರುತ್ತದೆ. ಹಾಗೆಯೇ ಅತ್ಯುತ್ತಮವಾಗಿ ನಿರ್ವಹಣೆಯಾಗುವ ಸಂಘದಿಂದ ಖಂಡಿತವಾಗಿಯೂ
ಆ ಸಂಘದ ಪ್ರತಿಯೊಬ್ಬ ಸದಸ್ಯನ ಪ್ರಗತಿಯು ಆಗುತ್ತದೆ.
ಹೀಗೆ ಅತ್ಯುತ್ತಮ ನಿರ್ವಹಣೆಯನ್ನು ಹೊಂದಿರುವ ಸಂಘಗಳು ಯೋಜನೆಯ ನಿಯಮಾನುಸಾರ ‘ಎಸ್’ ಶ್ರೇಣಿಗೆ ಭಾಜನವಾಗುತ್ತದೆ. ಈ ‘ಎಸ್’ ಶ್ರೇಣಿ ಸಂಘಗಳ ಉತ್ತಮ ನಿರ್ವಹಣೆಯನ್ನು ಗಮನಿಸಿದಾಗ ಈ ಕೆಳಕಂಡ ಪಂಚಸೂತ್ರಗಳನ್ನು ಸಂಘದ ಸದಸ್ಯರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

1. ಪ್ರತಿವಾರವು ಎಲ್ಲಾ ಸದಸ್ಯರು ನಿಯಮಾನುಸಾರವಾಗಿ ತಪ್ಪದೇ ವಾರದ ಸಭೆಯನ್ನು ನಡೆಸಿ, ತಮ್ಮ ಉಳಿತಾಯ ಹಾಗೂ ಸಾಲದ ವಾರದ ಕಂತನ್ನು ಕಟ್ಟುವರು. ಹೀಗೆ ಸಂಗ್ರಹಣೆಯಾಗುವ ಮೊತ್ತವನ್ನು ವಾರದ ಸರದಿಯಂತೆ ಸೂಚಿತ ಸದಸ್ಯರು ಯೋಜನೆಯ ‘ಗ್ರಾಹಕ ಸೇವಾ ಕೇಂದ್ರ’ಕ್ಕೆ ಹೋಗಿ ಹಣ ಜಮೆ ಮಾಡಿ, ರಶೀದಿ ಪಡೆದುಕೊಂಡು ಮುಂದಿನ ವಾರದ ಸಭೆಯಲ್ಲಿ ಪರಿಶೀಲನೆಗೆ ಒಳಪಡಿಸುವರು. 2. ವಾರದ ಸಭೆಯಲ್ಲಿ ಸದಸ್ಯರು ಪ್ರಗತಿನಿಧಿ ಸಾಲ ಬೇಡಿಕೆ ನೀಡಿದಲ್ಲಿ, ಸಾಲದ ಉದ್ದೇಶ, ಕುಟುಂಬ ಕೈಪಿಡಿಯಲ್ಲಿರುವ ಅಂಶಗಳು, ಆದಾಯ, ಮರುಪಾವತಿ ಸಾಮಥ್ರ್ಯ ಹಾಗೂ ಇತರ ಅರ್ಹತೆಗಳನ್ನು ಪರಿಶೀಲಿಸಿ, ಸಾಲ ಪಡೆಯಲು ಅರ್ಹತೆ ಹೊಂದಿದ್ದಲ್ಲಿ ಮಾತ್ರ ಸರ್ವಾನುಮತದಿಂದ ಒಪ್ಪಿಗೆ ನೀಡುವರು. ಪ್ರಗತಿನಿಧಿ ಸಾಲವನ್ನು ಬ್ಯಾಂಕಿನಿಂದ ಪಡೆಯಲು ನಿಯಮಬದ್ಧವಾಗಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ನೀತಿ-ನಿಯಮದಂತೆಯೇ ಮಂಜೂರಾತಿ ಪಡೆದುಕೊಂಡು ಯೋಜನೆಯ ಉತ್ತಮ ತಂತ್ರಜ್ಞಾನದ ಮೂಲಕ ಮಂಜೂರಾಗಿರುವ ಸಾಲದ ಮೊತ್ತವನ್ನು ಸಾಲ ಬೇಡಿಕೆ ನೀಡಿದ ಸದಸ್ಯರಿಗೆ ನೀಡಿ ಸದ್ವಿನಿಯೋಗವಾಗುವುದನ್ನು ಖಚಿತಪಡಿಸಿಕೊಳ್ಳುವರು. ಹಾಗೂ ಸಾಲದ ಮರುಪಾವತಿ ಚೀಟಿಯನ್ನು ಉತ್ತಮವಾಗಿ ನಿರ್ವಹಿಸುವರು. 3. ಪ್ರತಿ ತಿಂಗಳು ಕಂಪ್ಯೂಟರೀಕೃತ ಮಾಸಿಕ ವರದಿಯನ್ನು ಯೋಜನೆಯಿಂದ ಪಡೆದು ತಮ್ಮ ಸಂಘದ ಹಾಗೂ ಪ್ರತಿ ಸದಸ್ಯರ ವ್ಯವಹಾರದ ಎಲ್ಲಾ ವಿವರಗಳನ್ನು ಅತ್ಯಂತ ಪಾರದರ್ಶಕವಾಗಿ ತಮ್ಮ ಸಂಘದ ದಾಖಲಾತಿಗಳೊಂದಿಗೆ ಪುನರ್‍ಪರಿಶೀಲಿಸಿ ಖಚಿತಪಡಿಸಿಕೊಳ್ಳುವರು. 4. ವರ್ಷಕೊಮ್ಮೆ ಯೋಜನೆಯ ಲೆಕ್ಕಪರಿಶೋಧಕರಿಂದ ತಮ್ಮ ಸಂಘವನ್ನು ಸಮಗ್ರ ಲೆಕ್ಕಪರಿಶೋಧನೆಗೆ ಒಳಪಡಿಸಿ ಉತ್ತಮ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಎಲ್ಲಾ ಪ್ರಯತ್ನ ಮಾಡುವರು. 5. ಒಕ್ಕೂಟದ ವ್ಯವಸ್ಥೆಯೊಂದಿಗೆ ಉತ್ತಮವಾಗಿ ಪಾಲ್ಗೊಂಡು ಒಕ್ಕೂಟದ ವ್ಯವಸ್ಥೆಯನ್ನು ಕಾಪಾಡುವರು. ಯೋಜನೆಯ ಇತರ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾ ಯೋಜನೆಯ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವರು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates