ವಿಷಯವನ್ನು ಸಂಗ್ರಹಿಸು – ಪ್ರತಿಕ್ರಿಯೆ ನೀಡಬೇಡ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು


ಕೇಚಿತ್ ಅಜ್ಞಾನತೋ ನಷ್ಟಾಃ ಕೇಚಿತ್ ನಷ್ಟಾಃ ಪ್ರಮಾದತಃ ।
ಕೇಚಿತ್ ಜ್ಞಾನಾವಲೇಪೇನ ಕೇಚಿತ್ ನಷ್ಟೈಸ್ತು ನಾಶಿತಾಃ
।।
‘ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕಾರ್ಯಗಳನ್ನು ಮಾಡಿ. ಮತ್ತೆ ಕೆಲವರು ತಾವು ಮಹಾ ಬುದ್ಧಿವಂತರೆಂಬ ಅಹಂಕಾರದಿಂದ ಹಾಳಾಗುವರು. ಆದರೆ ಅನೇಕರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು’ ಎಂದು ಸುಭಾಷಿತ ಹೇಳುತ್ತದೆ.
ಪಾಪ, ಅಜ್ಞಾನಿಗಳಿಗೆ ತಾವು ಅಜ್ಞಾನಿಗಳೆಂದು ತಿಳಿದಿರುವುದಿಲ್ಲ. ಬೇರೆಯವರು ತಿಳಿಸಿ ಹೇಳಿದರೂ ತಿಳಿಯುವುದಿಲ್ಲ. ಆದ್ದರಿಂದ ಅವರು ತಪ್ಪು ದಾರಿ ಹಿಡಿಯುವರು. ಕೆಲವು ಸಂದರ್ಭಗಳಲ್ಲಿ ಅವರಿಗೆ ತಪ್ಪು ದಾರಿ ಹಿಡಿಯಲು ಪುಸಲಾಯಿಸುವವರೂ ಇರುತ್ತಾರೆ. ಇನ್ನು ಕೆಲವರು ಅಷ್ಟೇನೂ ಅಜ್ಞಾನಿಗಳಲ್ಲದಿದ್ದರೂ ಕೆಲವು ಪ್ರಲೋಭನೆಗಳಿಂದಾಗಿ ತಪ್ಪು ದಾರಿ ಹಿಡಿಯುವರು, ದುಷ್ಟ ಸ್ವಭಾವದಿಂದಾಗಿ ತಪ್ಪು ಕಾರ್ಯಗಳನ್ನು ಮಾಡುವವರೂ ಇದ್ದಾರೆ. ವಂಚಕರ ದಾಕ್ಷಿಣ್ಯಕ್ಕೆ ಒಳಗಾಗಿ ತಪ್ಪು ಮಾಡುತ್ತಾರೆ. ಹೀಗೆ ತಪ್ಪು ದಾರಿ ತುಳಿದವರೆಲ್ಲ ಅದರಿಂದ ಹಾಳಾಗುವರು. (ಸಂಗ್ರಹ : ವಿಚಾರ ಜ್ಯೋತಿ ಗ್ರಂಥದಿಂದ)
ಇದು ರಾಜಕಾರಣಿಗೆ, ದೊಡ್ಡ ಹುದ್ದೆ, ಅಧಿಕಾರದಲ್ಲಿ ಇರುವವರಿಗೆ ಮಾತ್ರವೇ ಸಂಬಂಧಪಟ್ಟ ವಿಷಯವಲ್ಲ. ಸಾಮಾನ್ಯವಾಗಿ ಪ್ರತಿ ಮನೆಯ ಯಜಮಾನ ಅಥವಾ ಯಜಮಾನತಿಗೆ ಅನೇಕ ಮಾಹಿತಿಗಳು ಬರುತ್ತವೆ. ಕೆಲವರು ಮಾಹಿತಿ ಕೇಳಿದಾಕ್ಷಣ ಪ್ರತಿಕ್ರಿಯೆ ಕೊಟ್ಟುಬಿಡುತ್ತಾರೆ. ‘ಹೌದು’ ಎಂದು ಒಪ್ಪಬಹುದು. ನೋವು ಪಟ್ಟುಕೊಳ್ಳಬಹುದು, ನೋವಿನಿಂದ ಅನೇಕ ಸಮಯ ಸಂಕಟ ಪಟ್ಟುಕೊಳ್ಳಬಹುದು. ಅಥವಾ ದ್ವೇಷ, ಅಸೂಯೆ ಮನಸ್ಸಿನೊಳಗೇ ಇಟ್ಟುಕೊಂಡು ಆ ವ್ಯಕ್ತಿಯನ್ನು ದೂರವಿಡಬಹುದು. ಇಂತಹ ಅನೇಕ ವಿಚಾರಗಳು ಸಂಸಾರ, ವ್ಯವಹಾರ, ಅಧಿಕಾರದಲ್ಲಿ ಇರುವವರಿಗೆಲ್ಲ ಬರುತ್ತವೆ. ಯಾವುದೇ ವಿಷಯ, ಮಾಹಿತಿ ಬಂದರೂ ಅದನ್ನು ಪರಾಮರ್ಶಿಸಿ, ಸತ್ಯಾಸತ್ಯತೆ ತಿಳಿದು, ಆಮೇಲೆ ಅದನ್ನು ಒಪ್ಪಿಕೊಳ್ಳುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಮೂರು ಮಂಗಗಳ ಸಂದೇಶ : ಗಾಂಧೀಜಿ ಬಳಿ ಎಂದೂ ಇರುತ್ತಿದ್ದ ಮೂರು ಮಂಗಗಳ ಮೂರ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಒಂದು ಮಂಗ ಬಾಯಿ ಮುಚ್ಚಿಕೊಂಡಿದೆ (ಕೆಟ್ಟದ್ದನ್ನು ಮಾತನಾಡುವುದಿಲ್ಲ) ಇನ್ನೊಂದು ಕಿವಿ ಮುಚ್ಚಿಕೊಂಡಿದೆ (ಕೆಟ್ಟದ್ದನ್ನು ಕೇಳುವುದಿಲ್ಲ) ಮತ್ತೊಂದು ಕಣ್ಣು ಮುಚ್ಚಿಕೊಂಡಿದೆ (ಕೆಟ್ಟದ್ದನ್ನು ನೋಡುವುದಿಲ್ಲ). ಎಂತಹ ಸಂದೇಶ!
ಈಗ ಮೊಬೈಲ್ ಯುಗ. ಅನೇಕ ಮಾಹಿತಿ, ವಿಷಯಗಳು ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಬರುತ್ತವೆ. ಕೆಲವೊಮ್ಮೆ ಅಷ್ಟೂ ವಿಷಯಗಳನ್ನು ಸಂಸಾರಸ್ಥರು ತಕ್ಷಣ ಒಪ್ಪಿಕೊಂಡು ಬಿಡುತ್ತಾರೆ. ಉದಾಹರಣೆಗೆ, ಕೊರೊನಾ ಸಮಯದಲ್ಲಿ ಕೋವಿಡ್ ಲಸಿಕೆ ಬಗ್ಗೆ, ಕೋವಿಡ್ ಬರದಂತೆ ತಡೆಯುವ ಆಹಾರದ ಬಗ್ಗೆ, ಅಥವಾ ಕೆಲವು ಯೋಗಾಸನಗಳ ಬಗ್ಗೆ ಅನೇಕ ಪರಿಹಾರಗಳನ್ನು ಕೆಲವು ಬುದ್ಧಿವಂತರು ಕೊಡುತ್ತಾರೆ. ಅದನ್ನು ಮನೆಯವರು ಒಂದೆರಡು ದಿವಸಗಳ ಕಾಲ ಪಾಲನೆ ಮಾಡುತ್ತಾರೆ. ಆ ಬಳಿಕ ಇದ್ದಕ್ಕಿದ್ದಂತೆ ಅದನ್ನು ಬಿಟ್ಟುಬಿಡುತ್ತಾರೆ. ಇಲ್ಲದಿದ್ದಲ್ಲಿ ಮೊಬೈಲ್ನಲ್ಲಿ ಬಂದ ಸಂದೇಶಕ್ಕೆ ವಿರೋಧವಾಗಿ ಯಾರೋ ಏನನ್ನೋ ಬರೆದಿರುತ್ತಾರೆ. ಈ ಮೊಬೈಲ್ನಲ್ಲಿ ಬಂದ ವಿಷಯ ಒಳ್ಳೆಯದೇ ಇರಬಹುದು; ಸತ್ಯ ಅಥವಾ ನಂಬಿಕಾರ್ಹವೇ ಆಗಿರಬಹುದು. ಆದರೆ ಯಾರೋ ಒಬ್ಬ ‘ಅದೇನು ಮಹಾ’ ಎಂದು ಅದರ ವಿರೋಧವಾಗಿ ಬರೆದುಬಿಡಬಹುದು. ಆಗ ಇದನ್ನು ನೋಡಿದವರು, ಸನ್ಮಾರ್ಗದಲ್ಲಿ ಹೋಗುತ್ತಿದ್ದವರೂ, ‘ಅದರ ಬಗ್ಗೆ ಏನೋ ವಿರೋಧವಾಗಿ ಬರೆದಿದ್ದಾರೆ, ಅದನ್ನು ಬಿಟ್ಟು ಬಿಡಿ’ ಎನ್ನುತ್ತಾರೆ. ಇದು ಈಗಿನ ಹೊಸ ಸಮಸ್ಯೆ, ಈ ನಂಬಿಕೆ ಮತ್ತು ಅಪನಂಬಿಕೆ, ವಿಶ್ವಾಸ ಮತ್ತು ಅವಿಶ್ವಾಸ, ಪಾಲನೆ ಮತ್ತು ಧೋರಣೆ ಇವೆಲ್ಲ ವೈಯಕ್ತಿಕವಾಗಿರುತ್ತವೆ. ಹಸು ಗಬಗಬನೆ ತಿನ್ನುತ್ತದೆ. ಹೀಗೆ ತಿಂದ ಆಹಾರವನ್ನು ಹೊಟ್ಟೆಯಿಂದ ಬಾಯಿಗೆ ತಂದು ಅನೇಕ ಬಾರಿ ಜಗಿದು ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಪೌಷ್ಟಿಕಾಂಶಗಳು ದೇಹದ ಎಲ್ಲಾ ಭಾಗಗಳಿಗೂ ದೊರೆಯುತ್ತವೆ. ಇದೇ ರೀತಿ ನಾವು ಯಾವುದೇ ವಿಚಾರವನ್ನು ತಿಳಿದುಕೊಂಡು ಅದನ್ನು ಅನೇಕ ಬಾರಿ, ಅನೇಕ ರೀತಿಯಲ್ಲಿ ವಿಮರ್ಶಿಸಬೇಕು. ಆಗ ಅದರ ಸತ್ಯಾಸತ್ಯತೆ ತಿಳಿಯಲು ಸಾಧ್ಯ.
ಇಂತಹ ಅನೇಕ ವಿಷಯಗಳು ನಮ್ಮ ಪುರಾಣದಲ್ಲಿ, ವ್ಯವಹಾರದಲ್ಲಿ ಸಿಗುತ್ತವೆ. ವ್ಯವಹಾರದಲ್ಲಿ ಯಾವುದೋ ಕಾರಣಕ್ಕೆ ವಿರೋಧವಾಗಿರಬಹುದು, ಉದಾಹರಣೆಗೆ ಯಾರಿಗೋ ಒಬ್ಬರಿಗೆ ಹಣ ಕೊಟ್ಟಿರುತ್ತೀರಿ, ಅದನ್ನು ಹಿಂದಿರುಗಿಸಲು ಹೇಳಿದಾಗ, ‘ನಾಳೆ ಕೊಡುತ್ತೇನೆ, ನಾಳಿದ್ದು ಕೊಡುತ್ತೇನೆ’ ಎಂದು ಮುಂದೂಡುತ್ತ ಹೋಗಬಹುದು. ಇಂತಹ ಸಂದರ್ಭದಲ್ಲಿ ತಕ್ಷಣ ಪ್ರತಿಕ್ರಿಯೆಯನ್ನು ಕಾಣುತ್ತೇವೆ. ಸಿಕ್ಕಾಪಟ್ಟೆ ಬೈದು ಬಿಡುತ್ತಾರೆ, ಹೊಡೆದಾಡಿಕೊಳ್ಳುತ್ತಾರೆ, ದೇವರ ಹೆಸರು ಹೇಳಿ ಶಾಪ ಕೊಟ್ಟು ಬಿಡುತ್ತಾರೆ. ಅಥವಾ ಈ ಹಣ ವಸೂಲಿ ಮಾಡೋದಕ್ಕೆ ಅಂತ ಇರುವ ಕೆಲವು ಏಜೆನ್ಸಿ ಅಥವಾ ವ್ಯಕ್ತಿಗಳಿಗೆ ಹೇಳಿ, ‘ಹೇಗಾದರೂ ಮಾಡಿ ವಸೂಲಿ ಮಾಡಿಕೊಂಡು ಬಾ, ನಿನಗೆ ಇಷ್ಟು ಕಮಿಷನ್ ಕೊಡುತ್ತೇನೆ’ ಎನ್ನುತ್ತಾರೆ. ಇದರಿಂದಾಗಿ, ಈ ವಸೂಲಿಗಾರ ಸಾಲ ಪಡೆದವರನ್ನು ಕೆಟ್ಟ ಮಾತುಗಳಿಂದ ಹೀಯಾಳಿಸಬಹುದು. ಮನಸ್ಸು ನೋಯಿಸಬಹುದು, ಹಲ್ಲೆ ಮಾಡಬಹುದು, ಆದರೆ, ಇಲ್ಲಿ ಅವರ ವ್ಯವಹಾರದ ಸತ್ಯತೆ ಅರಿಯುವುದು ಅವಶ್ಯ. ಅನೇಕ ಮಂದಿ ವ್ಯವಹಾರದಲ್ಲಿ ಸಮಸ್ಯೆಗಳನ್ನು ಉಂಟು ಮಾಡಿಕೊಂಡಿರುತ್ತಾರೆ. ಅವರು ಸಾಲಗಾರರ ಬಳಿ ಸಮಸ್ಯೆಗಳನ್ನು ವಿವರಿಸಿದಾಗ, ಸರಿಯಾದ ಉತ್ತರ ನೀಡಿದಾಗ ಸಮಸ್ಯೆ ಪರಿಹಾರವಾಗುತ್ತದೆ.
ಉಳಿತಾಯ ಮಾಡುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಂಡಾಗ ಸಾಲ ಇದ್ದರೂ ಕೂಡಾ ಅದನ್ನು ಸಕಾಲದಲ್ಲಿ ಹಿಂದಿರುಗಿಸಲು ಸಾಧ್ಯವಾಗುತ್ತದೆ. ಆದಾಯದ ಶೇ. 5ರಿಂದ 25ರಷ್ಟನ್ನು ಉಳಿಸಲು ಪ್ರಯತ್ನಿಸಬೇಕು. ಹೀಗೆ ಉಳಿತಾಯ ಮಾಡಿದ್ದು, ಆಪತ್ಕಾಲದಲ್ಲಿ ನೆರವಾಗುತ್ತದೆ, ಇದರ ಕುರಿತಾಗಿ ನಾನು ಯಾವಾಗಲೂ ಕೊಡೆಯ ಉದಾಹರಣೆ ಕೊಡುತ್ತಿರುತ್ತೇನೆ. ಮನೆಯಲ್ಲಿ ಕೊಡೆಯನ್ನು ಕವಾಟಿನ ಹಿಂಭಾಗ, ಬಾಗಿಲಿನ ಹಿಂಭಾಗ, ಒಳಗಡೆ ಕೋಣೆಯಲ್ಲಿ ಇಡುವುದು ಸಾಮಾನ್ಯ. ಯಾಕೆಂದರೆ ಮಳೆ ಬಂದಾಗ ಮಾತ್ರ ಅದರ ಅಗತ್ಯ. ಭಾರೀ ಬಿಸಿಲಿದ್ದರೆ ಒಮ್ಮೊಮ್ಮೆ ಬೇಕಾಗುತ್ತದೆ. ಹಾಗಾಗಿ ದಿನವೂ ಬಳಕೆ ಇಲ್ಲದ ಕಾರಣ ಒಳಗಡೆ ತೆಗೆದಿಡುತ್ತಾರೆ. ಆದರೆ ಆ ಛತ್ರಿ ಅಮೂಲ್ಯವಾದ, ಅಗತ್ಯವಾದ ಹಾಗೂ ಅನಿವಾರ್ಯವಾದ ರಕ್ಷೆಯಾಗಿದೆ. ಉಳಿತಾಯವೂ ಛತ್ರಿಯ ಹಾಗೆಯೇ. ಜೀವವಿಮೆ ಅಥವಾ ಆರೋಗ್ಯ ವಿಮೆ ಅವಶ್ಯವಾದಾಗ ರಕ್ಷೆಯನ್ನು ನೀಡುತ್ತವೆ. ಆರೋಗ್ಯವಾಗಿ ಇರುವಂಥ ವ್ಯಕ್ತಿ ವಿಮೆಯನ್ನು ನಗಣ್ಯ ಮಾಡುವುದುಂಟು.
ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ವಿಮಾ ಯೋಜನೆಗಳನ್ನು ಮಾಡಿದ್ದೇವೆ. ಅದರಲ್ಲಿ ಒಂದು ಕುಟುಂಬದಲ್ಲಿ ಐದು ಅಥವಾ ಏಳು ಜನರಿದ್ದರೆ ಎಲ್ಲರಿಗೂ ವಿಮೆ ಮಾಡಿಕೊಳ್ಳಬಹುದು.
ಯೋಜನೆ ಸದ್ಬಳಕೆ : ಸರ್ಕಾರದ ಅನೇಕ ಯೋಜನೆಗಳಿವೆ. ಅದನ್ನು ನಂಬದಿರುವವರೂ ಇದ್ದಾರೆ. ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ, ಅನೇಕ ರೀತಿಯ ವಿಮೆಗಳು ಇವೆ. ಅದನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವವರೂ ಇದ್ದಾರೆ. ‘ಆಡಳಿತ ಪಕ್ಷದವರು ಈ ಯೋಜನೆ ಮಾಡಿದ್ದು, ನಾನು ವಿರೋಧ ಪಕ್ಷವನ್ನು ಬೆಂಬಲಿಸುವ ಕಾರಣದಿಂದ ಈ ಯೋಜನೆ ಬೆಂಬಲಿಸುವುದಿಲ್ಲ’ ಎಂದು ಅದರ ಸೌಲಭ್ಯಗಳನ್ನು ಪಡೆಯುವುದಿಲ್ಲ. ಕೆಲವರು ತಾವೂ ಪಡೆಯುವುದಿಲ್ಲ. ಅಲ್ಲದೆ ಇತರರಿಗೂ ಪಡೆಯಲು ಬಿಡದೆ, ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಾರೆ. ಯಾರದೋ ಮಾತು ಕೇಳಿ, ಹೌದೇ ಅಲ್ಲವೇ ಎಂದು ತಿಳಿದುಕೊಳ್ಳದೆ, ಅನೇಕ ಒಳ್ಳೆಯ ಯೋಜನೆಗಳಿಂದ ಜನ ವಂಚಿತರಾಗುತ್ತಾರೆ. ಅದರ ಬದಲು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ವಿಷಯ ಸಂಗ್ರಹಿಸಿ, ಬಳಿಕ ಅದನ್ನು ವಿಮರ್ಶೆ ಮಾಡಿ. ಅದು ನನಗೆ ಸಂಬಂಧಿಸಿದ್ದೆ? ವೃತ್ತಿ ಅಥವಾ ಸಂಸಾರಕ್ಕೆ ಸಂಬಂಧಿಸಿದ್ದೆ? ಇದರಿಂದ ಪ್ರಯೋಜನವಿದೆಯೇ? ಇದು ಸತ್ಯವೇ? ಸುಳ್ಳೆ? ಎಂಬಿತ್ಯಾದಿ ವಿಚಾರಗಳನ್ನು ಅರಿತುಕೊಳ್ಳಿ. ಸರ್ಕಾರದಿಂದ ದೊರೆಯುವ ಯೋಜನೆ, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ.
ನಮಗೊಪ್ಪಿಗೆಯಾದ ಕಾರಣಕ್ಕೆ ಇನ್ಯಾರನ್ನೋ ಹೊಗಳಲು ಶುರು ಮಾಡುತ್ತೇವೆ. ಯಾವುದು ಸರಿಯೆಂದು ತಿಳಿಯುವ ಗೋಜಿಗೆ ಹೋಗದೆ ಇಂಥದ್ದನ್ನೆಲ್ಲ ಶ್ರದ್ಧೆಯಿಂದ ಮಾಡುತ್ತೇವೆ. ನಮಗಿರುವ ಬುದ್ಧಿವಂತಿಕೆಯಿಂದಲೇ ಒಮ್ಮೆ ಕುಳಿತು ವಿಚಾರ ಮಾಡಿದರೆ, ಬಹಳಷ್ಟು ನಮಗೇ ಅರಿವಾಗುತ್ತದೆ. ನಮಗೆ ಕೇಡು ಮಾಡುವ, ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ, ಅಸಹನೆಯಿಂದ ವರ್ತಿಸುವ, ನಮ್ಮ ಏಳಿಗೆ ಕಂಡು ಅಸೂಯೆಯಿಂದ ಹುಚ್ಚರಾಗುವವರನ್ನೆಲ್ಲ ಕಂಡಾಗ ಕೋಪ ಬರುತ್ತದೆ. ಆದರೆ ಅವರೇಕೆ ಹಾಗೆ ಮಾಡುತ್ತಾರೆ? ಎಂದು ತಿಳಿದಾಗ ಕೋಪದ ತೀವ್ರತೆ ಕಮ್ಮಿಯಾಗುತ್ತದೆ. ಅದಕ್ಕೆ ಕಾರಣ ಅವರ ಹುಟ್ಟುಗುಣ. ಬೆಳೆದು ಬಂದ ರೀತಿ. ಅಸೂಯೆ ಅವರನ್ನೇ ಸುಡುತ್ತದೆ ಎನ್ನುವುದು ತಿಳಿದಾಗ ಖಂಡಿತ ಕೋಪದ ಜಾಗದಲ್ಲಿ ಸ್ವಲ್ಪ ಅನುಕಂಪ ಮೂಡುತ್ತದೆ; ಎಲ್ಲ ವಿಕೃತ ಮನಸ್ಸುಗಳ ಹಿಂದೆಯೂ ಒಂದು ಕತೆಯಿರುತ್ತದೆ. ಮತ್ತು ಆ ಕತೆಗೆ ಕಾರಣ ಇರುತ್ತದೆ. ಅದರ ಅರಿವಿದ್ದರೆ ನಮ್ಮ ಕೋಪ – ತಾಪ, ದುಃಖ, ಸಂಕಟಗಳಿಗೂ ಕಡಿವಾಣ ಹಾಕಿಕೊಳ್ಳಬಹುದು. ಅವರು ಕೆಡುಕು ಮಾಡಿದಾಗ, ನಮ್ಮನ್ನು ತೆಗಳಿದಾಗ ಮನಸ್ಸು ಕೆಡಿಸಿಕೊಳ್ಳದೆ, ಹೊಗಳಿದಾಗ ಉಬ್ಬದೆ ಅಂಥದ್ದನನ್ನೆಲ್ಲ ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಅರಿತಿದ್ದರೆ ನೆಮ್ಮದಿಯ ಜೀವನವನ್ನು ನಡೆಸಬಹುದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates