ಶಹಬ್ಬಾಸ್ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)


ಭಾರತ ದೇಶದಲ್ಲಿ ಕೋವಿಡ್ನ ಎರಡನೇ ಅಲೆ ತೀವ್ರವಾಗಿ ಅಪ್ಪಳಿಸಿದಾಗ ಇಡೀ ಜಗತ್ತೇ ಭಾರತದತ್ತ ಆತಂಕದಿಂದ ನೋಡುವಂತಾಯಿತು. ಮೇ 7 ರ ಪ್ರಕಾರ ಒಂದೇ ದಿನದಲ್ಲಿ ಸುಮಾರು 4 ಲಕ್ಷ ಜನರು ಸೋಂಕಿತರಾಗಿದ್ದು, ಅದೇ ದಿನ 4,187 ಜನ ಮರಣ ಹೊಂದಿದಾಗ ಭಾರತ ದೇಶವು ಇತಿಹಾಸದಲ್ಲೇ ಕಂಡರಿಯದ ದುರಂತವನ್ನು ಕಾಣಬಹುದೆಂದು ಎಲ್ಲರೂ ಆತಂಕಪಟ್ಟಿದ್ದರು. ಆದರೆ ಕೇವಲ ಒಂದುವರೆ ತಿಂಗಳ ಅವಧಿಯಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ ಕೋವಿಡ್ನ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಿ ಪುಟಿದೆದ್ದು ನಿಲ್ಲಲು ಪ್ರಾರಂಭಿಸಿತು ಈ ಭಾರತ.
ಎರಡನೆ ಅಲೆಯಿಂದಾಗಿ ದೇಶ ಹಿಂದೆಂದೂ ಕಂಡರಿಯದಷ್ಟು ವೈದ್ಯಕೀಯ ವ್ಯವಸ್ಥೆಗಳ ಅಗತ್ಯತೆಗಳು ನಿರ್ಮಾಣಗೊಂಡವು. ಹಿಂದೆ ದೇಶದ ಒಂದು ದಿನದ ವೈದ್ಯಕೀಯ ಆಮ್ಲಜನಕದ ಸರಾಸರಿ ಬೇಡಿಕೆ 750 ಟನ್ ಇದ್ದದ್ದು, ಕೋವಿಡ್ ಎರಡನೇ ಅಲೆಯಿಂದಾಗಿ ಒಮ್ಮಿಂದೊಮ್ಮೆಲೆ 8,500 ಟನ್ ಬೇಡಿಕೆಗೆ ಏರಿತು. ಒಮ್ಮೆಯ ಈ ಬೇಡಿಕೆಯನ್ನು ಕೈಗಾರಿಕೆಗಳ ಸಹಾಯದಿಂದ ಪೂರೈಸುವಂತಾಗಿದ್ದರೂ, ಮೈನಸ್ 181 ಡಿಗ್ರಿ ಸೆಲ್ಸಿಯಸ್ ಇರುವ ಈ ದ್ರವೀಕರಿಸಿದ ಆಮ್ಲಜನಕವನ್ನು ಈಶಾನ್ಯ ಭಾರತದ ಕೈಗಾರಿಕಾ ವಲಯದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ತರುವುದು ಕನಸಿನ ಮಾತು ಆಗಿತ್ತು. ಆದರೆ ಶೀಘ್ರ ಸಮಯದಲ್ಲಿ ಆಕ್ಸಿಜನ್ ಎಕ್ಸ್ಪ್ರೆಸ್ ಎಂಬ ವಿಶೇಷ ವ್ಯವಸ್ಥೆಯನ್ನು ಕೈಗೆತ್ತಿಕೊಂಡ ಭಾರತೀಯ ರೈಲ್ವೆಯು ದೇಶದ ಮೂಲೆ ಮೂಲೆಗಳಿಗೂ ಶೀಘ್ರವಾಗಿ ಈ ಪ್ರಾಣವಾಯುವನ್ನು ತಲುಪಿಸಿತು. ಕೇವಲ 45 ದಿನಗಳಲ್ಲಿ 15 ರಾಜ್ಯಗಳಿಗೆ 27,600 ಮೆಟ್ರಿಕ್ ಟನ್ನಷ್ಟು ಪ್ರಾಣವಾಯು ಆಮ್ಲಜನಕವನ್ನು ಸರಬರಾಜು ಮಾಡಿತ್ತು. ಭಾರತ ಅತ್ಯುತ್ತಮ ರಾಜತಾಂತ್ರಿಕ ಸಂಬಂಧದಿಂದಾಗಿ ವಿದೇಶಗಳಿಂದಲೂ ಆಗಾಧ ಪ್ರಮಾಣದ ಆಮ್ಲಜನಕ, ವೆಂಟಿಲೇಟರ್ಸ್, ಕಾನ್ಸಂಟ್ರೇಟರ್ಸ್, ಸಿಲಿಂಡರ್ ಇತ್ಯಾದಿ ವೈದ್ಯಕೀಯ ಉಪಕರಣಗಳು ವಾಯು, ಜಲಮಾರ್ಗಗಳ ಮೂಲಕ ಹಾದು ಬಂದವು. ಹಿಂದೆ 47 ದೇಶಗಳಿಗೆ ಒಟ್ಟು 1.07 ಕೋಟಿ ಲಸಿಕೆಯನ್ನು ದಾನ ನೀಡುವ ಮೂಲಕ ವಿಶ್ವಕ್ಕೆ ‘ಔಷಧ ದಾನ’ ಮಾಡಿದ ಭಾರತಕ್ಕೆ ಕೋವಿಡ್ ನ ಎರಡನೇ ಅಲೆಯ ವಿಪತ್ತಿನಲ್ಲಿ ವಿಶ್ವದ ಸುಮಾರು 40 ರಾಷ್ಟ್ರಗಳು ಎಲ್ಲಾ ರೀತಿಯ ಸಹಾಯಕ್ಕೆ ಧಾವಿಸಿದವು.
ಎಷ್ಟೇ ಬಲಿಷ್ಠವಾದ ದೇಶವಾದರೂ ಕೂಡ ಒಮ್ಮಿಂದೊಮ್ಮೆಲೇ ಸಾಂಕ್ರಾಮಿಕ ರೋಗ ತೀವ್ರಗೊಂಡಾಗ ಅತ್ಯಲ್ಪ ಸಮಯದಲ್ಲೇ ತೀವ್ರ ಅಪಾಯದಿಂದ ಪಾರಾಗುವುದು ಖಂಡಿತ ಅಸಾಧ್ಯ. ಪ್ರಪಂಚದ ದೊಡ್ಡಣ್ಣನಾದ ಅಮೆರಿಕವು ಪ್ರಥಮ ಅಲೆಯ ಪಾಠದಿಂದಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಕೂಡ ತದನಂತರದ ಕೋವಿಡ್ ಅಲೆಯ ಅಪಾಯದ ತೀವ್ರತೆಯಿಂದ ಪಾರಾಗಲು ಬಹಳಷ್ಟ್ಟು ಸಮಯವನ್ನು ತೆಗೆದುಕೊಂಡಿತು. ನವೆಂಬರ್ 24, 2020 ರಂದು ಒಂದೇ ದಿನ 2209 ಮಂದಿ ಸಾವನ್ನಪ್ಪಿದ್ದು ತದನಂತರ ಸಾವಿನ ಪ್ರಮಾಣ ಹೆಚ್ಚಾಗುತ್ತಾ ಹೋಗಿ ಸುಮಾರು 4,000 ವರೆಗೆ ತಲುಪಿತ್ತು. ಮೂರು ತಿಂಗಳ ನಂತರವು ಅಂದರೆ ಫೆಬ್ರವರಿ 24, 2021ರಂದು ದಿನದ ಸಾವಿನ ಸಂಖ್ಯೆ 3210 ಆಗಿದ್ದು, ಕ್ರಮೇಣ ಕಡಿಮೆಯಾಗುತ್ತಾ ಹೋಯಿತು.
33 ಕೋಟಿ ಜನಸಂಖ್ಯೆಯ ಬಲಿಷ್ಠ ಅಮೆರಿಕ ದೇಶಕ್ಕೆ ಕೋವಿಡ್ನ ತೀವ್ರ ಅಘಾತವನ್ನು ಕಡಿಮೆ ಮಾಡಿಕೊಳ್ಳಲು ಸುಮಾರು ಮೂರ್ನಾಲ್ಕು ತಿಂಗಳು ಬೇಕಾಗಿದ್ದರೆ, 139 ಕೋಟಿ ಜನಸಂಖ್ಯೆಯ ಭಾರತವು ಕೇವಲ ಒಂದುವರೆ ತಿಂಗಳಲ್ಲಿ ವಿಪತ್ತನ್ನು ಆಗಾಧ ಪ್ರಮಾಣದಲ್ಲಿ ತಗ್ಗಿಸಿಕೊಂಡಿರುವುದು ಒಂದು ಪವಾಡಸದೃಶ ಸಾಧನೆಯಾಗಿದೆ. ಅದು ನಮ್ಮ ಭಾರತಕ್ಕೆ ಮಾತ್ರ ಸಾಧ್ಯ. ನಮ್ಮ ಪ್ರಜ್ಞಾವಂತ ಭಾರತೀಯರು ಸರ್ಕಾರದ ಸಮಯೋಚಿತ ನಿರ್ಧಾರಗಳಿಗೆ ಸಾಥ್ ನೀಡಿ ಪಾಲಿಸಿದರು. ಬೃಹತ್ ಕೈಗಾರಿಕಾ ಉದ್ಯಮಿಗಳು, ಸಮಾಜ ಸೇವಾ ಧುರೀಣರು, ಸೇವಾ ಸಂಘ ಸಂಸ್ಥೆಗಳು ಎಲ್ಲಾ ನೆರವನ್ನು ನೀಡಿದರು. ದೇಶದ ಬೃಹತ್ ಸೈನ್ಯದಿಂದ ಹಿಡಿದು ತಳಮಟ್ಟದ ಗ್ರಾಮ ಪಂಚಾಯತ್ವರೆಗಿನ ಎಲ್ಲಾ ಇಲಾಖೆಗಳ, ಕಚೇರಿಗಳ ಸಿಬ್ಬಂದಿಗಳು ಹಗಲಿರುಳು ಸೇವೆಗೈದರು. ಜೀವ ರಕ್ಷಕರಾದ ವೈದ್ಯರು, ದಾದಿಯರು, ಅಂಬುಲೆನ್ಸ್ ಚಾಲಕರು ಹಗಲಿರುಳು ಪಿಪಿಇ ಕಿಟ್ನಲ್ಲಿ ಅರೆ ಬೆಂದು ಲಕ್ಷಾಂತರ ಪ್ರಾಣಗಳನ್ನು ಉಳಿಸಿದರು. ಆಕ್ಸಿಜನ್ ಟ್ಯಾಂಕರ್ ಚಾಲಕರು, ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಸಮಸ್ತ ಕೋವಿಡ್ ಸೇನಾನಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆಗೈದರು. ಇಷ್ಟೇ ಏಕೆ, ಭಾರತ ವಿಶ್ವವೇ ಒಪ್ಪಿಕೊಂಡ ಅತ್ಯಂತ ಪರಿಣಾಮಕಾರಿಯಾದ ಸ್ವದೇಶಿ ವ್ಯಾಕ್ಸಿನ್ ಕಂಡು ಹಿಡಿದು, ಉತ್ಪಾದಿಸಿ ಈಗಾಗಲೇ ಸುಮಾರು 25 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿದ್ದು, ಜಾಗತಿಕವಾಗಿ ಅತಿ ಹೆಚ್ಚು ಲಸಿಕೆ ಕೊಟ್ಟ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ದೇಶದಲ್ಲಿ ಸಮಗ್ರ ವೈದ್ಯಕೀಯ ಸೇವೆಯ ಗುಣಮಟ್ಟ ಹಾಗೂ ವ್ಯವಸ್ಥೆಗಳು ಗಣನೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಂತಹ ವಿಪತ್ತು ಬಂದರೂ ಧೃತಿಗೆಡದೆ ಫಿನಿಕ್ಸ್ನಂತೆ ಅತ್ಯಂತ ಕಡಿಮೆ ಸಮಯದಲ್ಲಿ ಪುಟಿದೆದ್ದು ನಿಲ್ಲುವ ಬಲಿಷ್ಠ ರಾಷ್ಟ್ರ ಈ ಭಾರತ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಹೀಗೆ ಮುಂದುವರಿಯುತ್ತಾ ಶೀಘ್ರದಲ್ಲಿ ನಮ್ಮ ದೇಶವನ್ನು ಕೋವಿಡ್ ಮುಕ್ತ ದೇಶವನ್ನಾಗಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *