ದಿಢೀರ್‌ ಶ್ರೀಮಂತರಾಗುವ ದುರಾಸೆಯಿಂದ ದೂರವಿರಿ

ತೀರಾ ಇತ್ತೀಚೆಗೆ ಧಾರುಣವಾದ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರನ್ನು ಹತ್ಯೆ ಮಾಡಿ ಅವರು ಪ್ರಯಾಣಿಸುತ್ತಿದ್ದ ಕಾರನ್ನೇ ಸುಡಲಾಗಿತ್ತು. ಈ ಹತ್ಯೆಯ ಜಾಡನ್ನು ಹಿಡಿದು ಹೊರಟ ಪೊಲೀಸರ ತನಿಖೆಯಿಂದ ಹೊರಬಂದ ವಿಚಾರವೆಂದರೆ, ಈ ಮೂವರು ಸುಲಭವಾಗಿ ದೊರೆಯುವ ಚಿನ್ನದ ಆಸೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಜೋಡಿಸಿಕೊಂಡು ತುಮಕೂರಿಗೆ ತೆರಳಿ, ಅಲ್ಲಿ ಚಿನ್ನವನ್ನು ಮಾರುತ್ತೇನೆಂದು ನಂಬಿಸಿದ ವ್ಯಕ್ತಿಯ ಕೈಯಲ್ಲಿ ಹಣವನ್ನಿತ್ತು, ಅವರಿಂದಲೇ ಅಮಾನುಷವಾಗಿ ಕೊಲೆಗೀಡಾಗಿದ್ದರು. ವ್ಯಕ್ತಿಯೋರ್ವ ಬೆಳ್ತಂಗಡಿಯ ವ್ಯಕ್ತಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ತನ್ನ ಕೃಷಿಭೂಮಿಯಲ್ಲಿ ಸಿಕ್ಕ ಚಿನ್ನದ ನಿಧಿಯನ್ನು ಕೂಡಲೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ, ಹಣ ಸಮೇತ ಕರೆಸಿಕೊಂಡು, ಅವರ ಕೊಲೆ ಮಾಡಿದ್ದ. ಈ ಪ್ರಕರಣವು ಸಿನಿಮೀಯದಂತೆ ಕಂಡುಬoದರೂ ಕೂಡ, ನಿಜ ಜೀವನದಲ್ಲಿ ಈ ರೀತಿ ಮೋಸ ಹೋಗುವ ಸಾವಿರಾರು ಉದಾಹರಣೆಗಳು ಪ್ರತಿ ನಿತ್ಯ ದೇಶದಲ್ಲಿ ಕಂಡುಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಬಡವರು ಜೀವನದಲ್ಲಿ ಮುಂದೆ ಬರಬೇಕೆಂಬ ಆಸೆಯನ್ನಿಟ್ಟುಕೊಂಡು ಪ್ರಯತ್ನ ಪಡುತ್ತಿರುವ ಕೆಳ ಮದ್ಯಮ ವರ್ಗದ ಸದಸ್ಯರೇ ಹೆಚ್ಚಾಗಿರುವುದು ಆತಂಕಕಾರಿಯಾದ ವಿಚಾರವಾಗಿದೆ. ಸ್ವಸಹಾಯ ಸಂಘಗಳಿಗೆ ಸೇರಿದ ನಂತರ ಕಷ್ಟಪಟ್ಟು ದುಡಿದು, ಸ್ವಲ್ಪಮಟ್ಟಿಗೆ ಪ್ರಗತಿಯನ್ನು ಸಾಧಿಸಿದ ನಂತರ ದಿಢೀರ್ ಶ್ರೀಮಂತರಾಗುವ ಆಸೆ ಬಂದರೆ ಇಂತಹ ಪ್ರಕರಣಗಳಲ್ಲಿ ಸಿಲುಕಿ ಹಾಕಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಗೊತ್ತಿಲ್ಲದ ನಂಬರ್‌ಗಳಿoದ ಚಿನ್ನ ಸಿಕ್ಕಿದೆ ಎಂದೋ, ಕಾರುಗಳು, ಮೋಟಾರ್ ಸೈಕಲ್‌ಗಳು, ಜಾನುವಾರುಗಳು ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕಿದೆ ಎಂದು ನಂಬಿಸಿ, ಹಣವನ್ನು ಪಡಕೊಂಡು ವಂಚಿಸುವoತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಹತ್ಯೆಯಂತಹ ಪ್ರಕರಣಗಳು ವಿರಳವಾಗಿದ್ದರೂ, ಮೊಬೈಲ್ ಮುಖಾಂತರವೇ ಹಣವನ್ನು ತರಿಸಿಕೊಂಡು ವಂಚಿಸುವ ಪ್ರಕರಣಗಳು ಹೇರಳವಾಗಿವೆ. ಜೊತೆಯಲ್ಲಿ ತಾನು ಪೋಲೀಸ್ ಕಡೆಯವರೆಂದೋ, ಸಿಐಡಿ ಕಡೆಯವರೆಂದೋ ಅಥವಾ ನಿಮ್ಮ ಆಧಾರ್ ನಂಬರ್‌ನಿoದ ಡ್ರಗ್ಸ್, ಗಾಂಜಾ ಮುಂತಾದ ವಸ್ತುಗಳು ಮಾರಾಟವಾಗುತ್ತಿವೆ. ಆದುದರಿಂದ ನಿಮ್ಮನ್ನು ಹಿಡಿಯಲು ನಾವು ಬರುತ್ತಿದ್ದೇವೆ ಎಂದು ಬೆದರಿಸಿ ಹಣ ಕೀಳುವಂತಹ ಉದಾಹರಣೆಗಳೂ ಇವೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ, ಈಗಾಗಲೇ ಇದೇ ಪುಟದಲ್ಲಿ ಬರೆದಂತೆ, ಆನ್‌ಲೈನ್ ಜೂಜಾಟಗಳು ಕೂಡಾ ಜನರನ್ನು ದಿಢೀರ್ ಶ್ರೀಮಂತರನ್ನಾಗಿಸುವ ಆಸೆ ಹುಟ್ಟಿಸುತ್ತಿವೆ. ಐಪಿಎಲ್ ಪಂದ್ಯಾಟ, ರಮ್ಮಿ ಮುಂತಾದ ಆಟಗಳು ಬಡವರಲ್ಲಿ ದಿಢೀರ್ ಶ್ರೀಮಂತಿಕೆಯ ಹುಚ್ಚನ್ನು ಹಬ್ಬಿಸುತ್ತವೆ. ಸುಮಾರು ಎರಡು ದಶಕಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಬಹಳ ದೊಡ್ಡ ಕಾರ್ಯಕ್ರಮವನ್ನು ಸರಕಾರವೇ ನಡೆಸುತ್ತಿದ್ದು, ಈ ಲಾಟರಿ ಟಿಕೆಟ್‌ಗಳನ್ನು ಖರೀದಿಸಿ ಜೀವ ಕಳಕೊಂಡವರ ವೇದನೆಯನ್ನು ನೋಡಲಾಗದೆ, ಕರ್ನಾಟಕ ಸರಕಾರವು ಲಾಟರಿ ಯೋಜನೆಯನ್ನೇ ರದ್ದುö ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಆದರೂ ಇನ್ನೂ ಕೂಡಾ ಹಲವಾರು ನೆರೆ ರಾಜ್ಯಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವುದು, ಆನ್‌ಲೈನ್‌ನಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವುದು, ಇವುಗಳಿಂದ ಜನರನ್ನು ಪ್ರಲೋಭನೆಗೆ ಒಡ್ಡಿ, ಅವರು ಕಷ್ಟಪಟ್ಟು ದುಡಿದ ಹಣವನ್ನು ಕಸಿದುಕೊಳ್ಳುವ ಅನೇಕ ಕಾರ್ಯಕ್ರಮಗಳು ಇವತ್ತು ನಮ್ಮ ಸುತ್ತಮುತ್ತಲೆಲ್ಲ ಇವೆ.
ಲಾಟರಿ ಟಿಕೆಟ್, ಆನ್‌ಲೈನ್ ಲಾಟರಿಯಲ್ಲಿ ಅದೃಷ್ಟವಶಾತ್ ಯಾರೋ ಒಬ್ಬನಿಗೆ ಹಣ ಬರಬಹುದಾದರೂ, ಕೋಟ್ಯಾಂತರ ಜನರು ಹಣವನ್ನು ಕಳೆದುಕೊಳ್ಳುತ್ತಾರೆ. ಆದ ಕಾರಣ ಇಂತಹ ಜೂಜಾಟಗಳಲ್ಲಾಗಲೀ, ಯಾರೋ ಒಬ್ಬರು ಫೋನ್‌ನಲ್ಲಿ ಚಿನ್ನ ಮಾರಾಟ ಮಾಡುತ್ತೇನೆಂದಾಲೀ ಅಥವಾ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತೇನೆಂದು ಕರೆಗಳು ಬಂದರೆ ಅವುಗಳನ್ನು ನಿರ್ಲಕ್ಷö್ಯ ಮಾಡಿರಿ. ಅವರ ಫೋನ್ ಕರೆಯನ್ನು ಕಟ್ ಮಾಡಿ. ಪುನಃ ಪುನಃ ಕರೆಗಳು ಬರುತ್ತಿದ್ದರೆ ಆ ನಂಬರನ್ನು ಬ್ಲಾಕ್ ಮಾಡಿಕೊಳ್ಳಿ.
ನೆನಪಿನಲ್ಲಿಡಿ, ಸಹೋದರ – ಸಹೋದರಿಯರೇ, ಜಗತ್ತಿನಲ್ಲಿ ಶ್ರೀಮಂತರಾಗಲು ಮೂರು ಮುಖ್ಯ ಅಗತ್ಯತೆಗಳಿವೆ. (1) ಕಠಿಣ ಪರಿಶ್ರಮ (2) ಬುದ್ಧಿವಂತಿಕೆಯಿoದ ಯೋಜನೆಗಳನ್ನು ಮಾಡಿಕೊಳ್ಳುವುದು (3) ನಮ್ಮ ಕುಟುಂಬದ ಸಹಕಾರ. ನಾವು ಆಸೆಗೊಳಗಾಗಿ ಕೈಗೊಳ್ಳುವ ಶಾರ್ಟ್ಕಟ್‌ಗಳಿಂದ ಆ ಮೂರನ್ನೂ ಕಳೆದುಕೊಳ್ಳುತ್ತೇವೆ. ನಮ್ಮ ಶ್ರಮದ ಬದುಕನ್ನು ಮರೆತುಬಿಡುತ್ತೇವೆ, ಯಾವುದೇ ಯೋಚನೆ ಮಾಡದೆ, ಬುದ್ಧಿವಂತಿಕೆಯನ್ನು ಬಳಸದೆ ಜೂಜಾಡುತ್ತೇವೆ ಮತ್ತು ಇದರಿಂದಾಗಿ ಕುಟುಂಬದವರೊಡನೆ ಪ್ರೀತಿಯನ್ನು ಕಳೆದುಕೊಳ್ಳುತ್ತೇವೆ. ಇಂದಿನ ಕಾಲದಲ್ಲಂತೂ ಪರಿಶ್ರಮ ಪಟ್ಟರೆ ಹಣ ಗಳಿಸುವ ಅನೇಕ ನೇರ ದಾರಿಗಳಿವೆ. ಅದೇ ರೀತಿ ದುಡಿಮೆ ಗೊತ್ತಿದ್ದವರಿಗೂ ಹಣ ಗಳಿಸುವ ಅನೇಕ ನೇರ ದಾರಿಗಳಿವೆ. ಆದುದರಿಂದ ಈ ದಾರಿಗಳನ್ನು ಬಳಸಿ, ದುಡಿದ ಹಣವನ್ನು ಜತನದಿಂದ ಬಳಸಿ, ಸಾಧ್ಯವಿದ್ದಷ್ಟು ಉಳಿಸಿ, ಬೆಳೆಯಲು ಪ್ರಯತ್ನಿಸೋಣ. ಯಾವುದೇ ಅಡ್ಡದಾರಿಗಳಿಗೆ, ಪ್ರಲೋಭನೆಗಳಗೆ ಮನಸ್ಸು ಮಾಡಿ ನಮ್ಮ ಜೀವವನ್ನೇ ಪಣಕ್ಕಿಡುವಂತಹ ಕೆಲಸವನ್ನು ಮಾಡದಿರೋಣ.
ಶ್ರಮಜೀವಿಗಳಾಗೋಣ, ಬುದ್ಧಿವಂತರಾಗೋಣ…… ಕುಟುಂಬ ಸ್ನೇಹವನ್ನು ಗಳಿಸೋಣ……

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *